ಉಪೇಂದ್ರ ನಿರ್ದೇಶನದ 'ಯುಐ' ವಿತರಣೆ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್? ಆಲ್ ಟೈಮ್ ರೆಕಾರ್ಡ್?
ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ ಸಿನಿಮಾಗಳಿಗೆ ಕ್ರೇಜ್ ಇರುತ್ತೋ ಇಲ್ಲವೋ. ಆದರೆ, ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದಾರೆ ಅಂದರೆ ಇಡೀ ಇಂಡಸ್ಟ್ರಿ ಆ ಸಿನಿಮಾಗಾಗಿ ಎದುರು ನೋಡುತ್ತಿರುತ್ತೆ. ಸಿನಿ ಪ್ರೇಮಿಗಳಂತೂ ಆ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಸದ್ಯ ಉಪ್ಪಿ 'ಯುಐ' ಸಿನಿಮಾ ನೋಡುವುದಕ್ಕೂ ಇದೇ ಕ್ರೇಜ್ ಇದೆ.
ಕಳೆದ ಕೆಲವು ತಿಂಗಳಿನಿಂದ ಉಪೇಂದ್ರ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾರೆ ಕಾದೂ ಕಾದು ಸುಸ್ತಾಗಿದ್ದರು. ಆಗಾಗ ಪ್ರೇಕ್ಷಕರಿಗೆ ಚಮಕ್ ಕೊಟ್ಟು ಉಪ್ಪಿ ನಿರಾಸೆಯನ್ನೂ ಮಾಡಿದ್ದರು. ಆದರೆ, ಈ ಬಾರಿ ಸಿನಿಮಾ ರಿಲೀಸ್ ಆಗೋದು ಪಕ್ಕಾ ಆಗಿದೆ. ಡಿಸೆಂಬರ್ 20ಕ್ಕೆ ಉಪೇಂದ್ರ ಸಿನಿಮಾ 'ಯುಐ' ರಿಲೀಸ್ ಆಗೋದು ಪಕ್ಕಾ. ಹೀಗಾಗಿ ತೆರೆಮರೆಯಲ್ಲಿ ಸಿನಿಮಾದ ವ್ಯವಹಾರ ಮಾತುಕತೆ ನಡೆಯುತ್ತಿದೆ ಅನ್ನೋದು ಸುದ್ದಿ.

ಇನ್ನೇನು ಸಿನಿಮಾ ರಿಲೀಸ್‌ಗೆ ಹೆಚ್ಚು ಕಡಿಮೆ ಒಂದು ತಿಂಗಳು ಇದೆ ಅನ್ನುವಾಗ ಹಕ್ಕುಗಳ ಖರೀದಿ ಹಾಗೂ ಮಾರಾಟ ಜೋರಾಗಿ ನಡೆಯುತ್ತಿದೆ ಅನ್ನೋದು ಸುದ್ದಿ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಓಡಾಡುತ್ತಿದೆ. ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾವನ್ನು ಬೃಹತ್ ಮೊತ್ತಕ್ಕೆ ವಿತರಣೆ ಹಕ್ಕುಗಳು ಸಂಸ್ಥೆಯೊಂದು ಖರೀದಿ ಮಾಡಿದೆ ಎನ್ನಲಾಗಿದೆ. ಅಷ್ಟಕ್ಕೂ ಆ ಸಂಸ್ಥೆ ಯಾವುದು? ಎಷ್ಟು ಮೊತ್ತ? ಆಲ್ ಟೈಮ್ ರೆಕಾರ್ಡ್ ಅಂತಿರೋದು ಯಾಕೆ? ತಿಳಿಯಲು ಮುಂದೆ ಓದಿ.
ರಿಯಲ್ ಸ್ಟಾರ್ ಉಪ್ಪಿ ಆಕ್ಷನ್ ಕಟ್ ಹೇಳಿದರೆ, ಆ ಕ್ರೇಜ್ ಎಂದಿಗೂ ಕಡಿಮೆ ಆಗುವುದಿಲ್ಲ. ಅದರಲ್ಲೂ ಈ ಬಾರಿ ಟೆಕ್ನಾಲಜಿಗಳನ್ನು ಬಳಸಿಕೊಂಡು ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಕಲ್ಕಿಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಸುದ್ದಿ ಬೇರೆ ಓಡಾಡುತ್ತಿದೆ. ಹೀಗಾಗಿ ಉಪೇಂದ್ರ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದೇನೋ ಮಾಡುತ್ತೆ ಅನ್ನೋದನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಇನ್ನೇನು ಸಿನಿಮಾ ಬಿಡುಗಡೆಗೆ ಹತ್ತಿರವಿದೆ ಅನ್ನುವಾಗಲೇ 'ಯುಐ' ಸಿನಿಮಾದ ಬ್ಯುಸಿನೆಸ್‌ಗೆ ಇಳಿದಿದೆ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಲ್ಲಿದೆ. 'ಯುಐ' ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾ ತಂಡ ಹಾಗೂ ಕೆವಿಎನ್ ಜೊತೆ ಡೀಲ್ ಕೂಡ ಆಗಿದೆ ಅಂತ ನಿರ್ಮಾಪಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದು ಕನ್ನಡ ಚಿತ್ರರಂಗದಲ್ಲೇ ದೊಡ್ಡ ಬ್ಯುಸಿನೆಸ್ ಅನ್ನೋದು ಸುದ್ದಿ.

ಕೆವಿಎನ್ ಪ್ರೊಡಕ್ಷನ್ ಸಾಮಾನ್ಯವಾಗಿ ತನ್ನ ಬ್ಯುಸಿನೆಸ್ ಬಗ್ಗೆ ಹೇಳಿಕೊಳ್ಳುವುದಿಲ್ಲ. ಇದೂವರೆಗೂ ವಿತರಣೆ ಮಾಡಿದ ಸಿನಿಮಾಗಳ ವ್ಯವಹಾರವನ್ನು ಅಧಿಕೃತವಾಗಿ ಎಲ್ಲೂ ಬಹಿರಂಗ ಪಡಿಸಿಲ್ಲ. ಆದರೆ, ನಿರ್ಮಾಪಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, ಕೆವಿಎನ್ ಸಂಸ್ಥೆ 'ಯುಐ' ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವುದಕ್ಕೆ ಬರೊಬ್ಬರಿ 25 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಇದು ಕನ್ನಡ ಚಿತ್ರರಂಗದಲ್ಲೇ ಬಿಗ್ ಬ್ಯುಸಿನೆಸ್ ಎನ್ನುವ ಸುದ್ದಿ ಓಡಾಡುತ್ತಿದೆ.
ಇನ್ನೊಂದು ಕಡೆ ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ವ್ಯವಹಾರ ಕೂಡ ಮುಗಿದಿದೆ ಎನ್ನಲಾಗಿದೆ. ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಈ ಸಿನಿಮಾವನ್ನು 3.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರೆ, ಕೇರಳದಲ್ಲಿ ಇ ಫಾರ್ ಎಂಟರ್‌ಟೈನ್ಮೆಂಟ್ 1.5 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ಸ್ಯಾಂಡಲ್‌ವುಡ್‌ನಲ್ಲಿ ಆಗುತ್ತಿರುವ ಚರ್ಚೆ. ಆದರೆ, ಈ ವ್ಯವಹಾರಗಳ ಬಗ್ಗೆ ಉಪೇಂದ್ರ ಆಗಲಿ, ಯುಐ ತಂಡ ಆಗಲಿ ಅಥವಾ ವಿತರಣಾ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್, ಗೀತಾ ಆರ್ಟ್ಸ್ ಹಾಗೂ ಇ ಫಾರ್ ಎಂಟರ್‌ಟೈನೆಂಟ್ ಆಗಲಿ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಇದು ಕೇವಲ ಕನ್ನಡ ಚಿತ್ರರಂಗದ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿರುವ ಅಂಕಿ ಅಂಶಗಳಾಗಿವೆ.


Click it and Unblock the Notifications











