ಎಲ್ಲಾ ಬಿಟ್ಟು RRR ನಿರ್ಮಾಪಕನ ಸಿನಿಮಾ ಬೇಗ ಮುಗಿಸುತ್ತಿರೋದೇಕೆ ಪವನ್ ಕಲ್ಯಾಣ್? ಏನಿದರ ಸೀಕ್ರೆಟ್?
ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಈಗಂತೂ ಸಿಕ್ಕಾಪಟ್ಟೆ ಬ್ಯುಸಿ. ಒಂದ್ಕಡೆ ಸಿನಿಮಾ ಅಂತ ಬ್ಯುಸಿಯಾಗಿದ್ದರೆ, ಇನ್ನೊಂದು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎರಡು ದೋಣಿ ಮೇಲೆ ಕಾಲಿಟ್ಟಿರೋ ಪವನ್ ಕಲ್ಯಾಣ್ ನಡೆ ತೆಲುಗು ಮಂದಿ ಗೊಂದಲಕ್ಕೆ ಕಾರಣವಾಗಿದೆ.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ಇದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯನ್ನು ಎದುರಿಸುವುದಕ್ಕೆ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಆದರೆ, ಪವನ್ ಕಲ್ಯಾಣ್ ಮಾತ್ರ ಸಿನಿಮಾಗಳನ್ನು ಮುಗಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಅದರಲ್ಲೂ RRR ನಿರ್ಮಾಪಕನ ಸಿನಿಮಾದ ಶೂಟಿಂಗ್ ಅನ್ನು ಬಿರುಸಿಬ ವೇಗದಲ್ಲಿ ಮುಗಿಸುವುದಕ್ಕೆ ಮುಂದಾಗಿದ್ದಾರಂತೆ. ಅಷ್ಟಕ್ಕೂ ಈ ಸಿನಿಮಾಗೂ ಹಿಂದೆ ಸೆಟ್ಟೇರಿದ ಸಿನಿಮಾಗಳನ್ನು ಬಿಟ್ಟು RRR ನಿರ್ಮಾಪಕನ ಸಿನಿಮಾವನ್ನೇ ಮುಗಿಸುತ್ತಿರೋದೇಕೆ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಟಾಲಿವುಡ್‌ನಲ್ಲೊಂದು ಸುದ್ದಿ ಓಡಾಡುತ್ತಿದೆ. ಅದೇನು? ಅಂತ ತಿಳಿಯಲು ಮುಂದೆ ಓದಿ?

ಪವನ್ ಕಲ್ಯಾಣ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳು ಇನ್ನೂ ಮೇಕಿಂಗ್ ಹಂತದಲ್ಲಿಯೇ ಇವೆ. ಕ್ರಿಶ್ ನಿರ್ದೇಶಿಸುತ್ತಿರುವ 'ಹರಿಹರ ವೀರ ಮಲ್ಲು' ಹಾಗೂ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಈ ಎರಡೂ ಸಿನಿಮಾಗಳನ್ನು ವರ್ಷಗಳ ಹಿಂದೆನೇ ಸಹಿ ಮಾಡಿದ್ದರು. ಈ ಸಿನಿಮಾಗಳು ಸೆಟ್ಟೇರುವ ಮುಂಚೆನೇ ಪವನ್ ಕಲ್ಯಾಣ್, ಸಾಯಿ ಧರಂ ತೇಜ್ ಸಿನಿಮಾ 'ಬೋ' ಶೂಟಿಂಗ್ ಮುಗಿಸಿದ್ದಾರೆ.
'ಬ್ರೋ' ಸಿನಿಮಾ ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ್ದು ಕಡೆಯಾದರೆ, ಇನ್ನೊಂದೆಡೆ RRR ಸಿನಿಮಾ ನಿರ್ಮಾಪಕ ನಿರ್ಮಿಸುತ್ತಿರುವ 'ದೆ ಕಾಲ್ ಮಿ ಓಜಿ' ಸಿನಿಮಾವನ್ನು ವೇಗವಾಗಿ ಶೂಟಿಂಗ್ ಮುಗಿಸುತ್ತಿದ್ದಾರಂತೆ. ಈ ಸಿನಿಮಾಗೆ 'ಸಾಹೋ' ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರಲ್ಲಿ ಪವನ್ ಕಲ್ಯಾಣ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುತ್ತಾರೆ.

ಈಗಾಗಲೇ ಪವನ್ ಕಲ್ಯಾಣ್ ಎರಡು ಹಂತದ ಶೂಟಿಂಗ್ ಮುಗಿಸಿದ್ದಾರಂತೆ. ಮೂರನೇಯದು ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು, ಆಗಲೇ ನಾಲ್ಕನೇ ಹಂತದ ಶೂಟಿಂಗ್‌ಗೆ ಪವನ್ ಕಲ್ಯಾಣ್ ಸೇರಿಕೊಳ್ಳಲಿದ್ದಾರಂತೆ. ಪವನ್ ಕಲ್ಯಾಣ್ ಇಷ್ಟೊಂದು ಸ್ಪೀಡ್‌ನಲ್ಲಿ ಯಾಕೆ ಶೂಟ್ ಮಾಡುತ್ತಿದ್ದಾರೆ ಅನ್ನೋ ಗೊಂದಲ ಟಾಲಿವುಡ್ ಮಂದಿಗೆ ಶುರುವಾಗಿದೆ.
ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಚುನಾವಣೆ ಸಮೀಸುತ್ತಿರುವ ಹೊತ್ತಲ್ಲಿ ಪವನ್ ಕಲ್ಯಾಣ್‌ಗೆ ನಿರ್ಮಾಪಕರು ದೊಡ್ಡ ಮೊತ್ತವನ್ನು ಕೊಟ್ಟಿದ್ದಾರಂತೆ. ಈ ಒಡಂಬಡಿಕೆ ಪ್ರಕಾರ, ಪವನ್ ಕಲ್ಯಾಣ್ ಚುನಾವಣೆಗೂ ಮುನ್ನವೇ ಶೂಟಿಂಗ್ ಮುಗಿಸಿಕೊಡಬೇಕಿದೆ. ಒಂದು ವೇಳೆ ಚುನಾವಣೆ ಅಂತ ಶೂಟಿಂಗ್ ನಿಂತರೆ, ಹೊರೆಯಾಗಬಹುದು ಅನ್ನೋ ಕಾರಣಕ್ಕೆ ದಾನಯ್ಯ ಈ ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಸುದ್ದಿ. ಸದ್ಯಕ್ಕೀಗ 'ಹರಿಹರ ವೀರ ಮಲ್ಲು' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳ ಸ್ಥಿತಿ ಹೀಗೆ ಇದೆಯಂತೆ.


Click it and Unblock the Notifications











