ಪ್ರಶಾಂತ್ ನೀಲ್ ಕಥೆ ಓಪ್ಪಿಕೊಂಡ್ರಾ ದೀಪಿಕಾ ಪಡುಕೋಣೆ? ಕೆಜಿಎಫ್ ನಿರ್ದೇಶಕನ ಸಹೋದರನೇ ಹೀರೊ
'KGF' ಸಿನಿಮಾ ಬಳಿಕ ಪ್ರಶಾಂತ್ ನೀಲ್ ಹಿಡಿಯೋಕೆ ಆಗುತ್ತಿಲ್ಲ. 'ಕೆಜಿಎಫ್ ಚಾಪ್ಟರ್ 2' ಬಳಿಕ ಮತ್ತೊಂದು ಕನ್ನಡ ಸಿನಿಮಾವನ್ನು ಯಾವಾಗ ಮಾಡುತ್ತಾರೋ ಅಂತ ಕಾದು ಕೂರುವ ಸ್ಥಿತಿ ಬಂದಿದೆ. ಈ ಮಧ್ಯೆ ಪ್ರಶಾಂತ್ ಹೊಸ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆರಂಭ ಆಗಿದೆ.
'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಂತೆ ಕನ್ನಡದ ನಿರ್ದೇಶಕನಿಗೆ ಬೇಡಿಕೆ ಹೆಚ್ಚಾಗಿದೆ. ಈ ನಿರ್ದೇಶಕನ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಎಲ್ಲಾ ಭಾಷೆಯ ಸ್ಟಾರ್ ಹೀರೊ ಹಾಗೂ ಹೀರೊಯಿನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇವರಲ್ಲಿ ದೀಪಿಕಾ ಪಡುಕೋಣೆನೂ ಇದ್ದಾರಾ? ಇಲ್ವಾ ಅನ್ನೋ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.

ಅಷ್ಟಕ್ಕೂ ಪ್ರಶಾಂತ್ ನೀಲ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರ ಬಗ್ಗೆ ಈ ಮಟ್ಟಿಗೆ ಚರ್ಚೆಯಾಗ್ತಿರೋದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್. ತೆಲುಗಿನಲ್ಲಿ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾಗೆ ದೀಪಿಕಾ ಪಡುಕೋಣೆಗೆ ಆಫರ್ ನೀಡಲಾಗಿದೆ ಅನ್ನೋ ಸುದ್ದಿ ಟಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಪಿಸುಗುಡುತ್ತಿದೆ.
ಮಹಿಳಾ ಪ್ರಧಾನ ಚಿತ್ರಕ್ಕೆ ನೀಲ್ ಕಥೆ
ಇದೂವರೆಗೂ ಮಾಸ್, ರಗಡ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಪ್ರಶಾಂತ್ ನೀಲ್ ಹೊಸ ಸಿನಿಮಾ ಕೈ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದ ಕಥೆ ಹಾಗೂ ಚಿತ್ರಕಥೆಯನ್ನು ರೆಡಿ ಮಾಡಿದ್ದಾರೆ. ಆ ಸಿನಿಮಾವನ್ನೇ 'ಕೆಜಿಎಫ್', 'ಕಾಂತಾರ' ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ ಅನ್ನೋ ಮಾತು ಹರಿದಾಡುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಕ್ಕೆ ದೀಪಿಕಾ ಪಡುಕೋಣೆಯನ್ನು ಅಪ್ರೋಚ್ ಮಾಡಲಾಗಿದ್ಯಂತೆ.
ಈ ಸಿನಿಮಾದಲ್ಲೊಂದು ಟ್ವಿಸ್ಟ್ ಇದೆ. ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿಲ್ಲ. ಕೇವಲ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ. 'ಸಲಾರ್', ಎನ್‌ಟಿಆರ್ ಸಿನಿಮಾದಲ್ಲಿ ಬ್ಯುಸಿಯಾಗಿರೋದ್ರಿಂದ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ಈ ಸಿನಿಮಾವನ್ನು ಪ್ರಶಾಂತ್ ನೀಲ್ ಶಿಷ್ಯ ನಿರ್ದೇಶನ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆಯಿಂದ ಗ್ರೀನ್ ಸಿಗ್ನಲ್ ಸಿಕ್ತಾ?
ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿರುವುದರಿಂದ ದೀಪಿಕಾ ಪಡುಕೋಣೆಯೇ ಸೂಕ್ತ ಎಂದು ಪ್ರಶಾಂತ್ ನೀಲ್ ಬಯಸಿದ್ದಾರಂತೆ. ಅದಕ್ಕೆ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ದೀಪಿಕಾ ಪಡುಕೋಣೆಯನ್ನು ಅಪ್ರೋಚ್ ಮಾಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಸದ್ಯಕ್ಕೆ ದೀಪಿಕಾ ಪಡುಕೋಣೆ ಇನ್ನೂ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಈ ಕಥೆಯನ್ನು ಒಪ್ಪಿಕೊಳ್ಳುತ್ತಾರಾ ಇಲ್ವಾ? ಅನ್ನೋ ಕುತೂಹಲ ಅಂತೂ ಇದೆ. ದೀಪಿಕಾ ಸದ್ಯ 'ಪಠಾಣ್' ಯಶಸ್ಸಿನ ಗುಂಗಿನಲ್ಲಿದ್ದಾರೆ. ಅಲ್ಲದೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಈ ನಟಿಗೆ ಸಕ್ಸಸ್ ಸಿಕ್ಕಿಲ್ಲ. ಹೀಗಾಗಿ ಒಪ್ಪುತ್ತಾರಾ? ಅನ್ನೋ ಪ್ರಶ್ನೆನೂ ಇದೆ. ಆದರೆ, ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ನೀಲ್, ದೀಪಿಕಾ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಪ್ರಶಾಂತ್ ನೀಲ್ ಸಹೋದರನೇ ಹೀರೊ
ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ, ಹೀರೊಗೂ ಅಷ್ಟೇ ಪ್ರಮುಖ ಪಾತ್ರವಿದೆ. ಈ ಪಾತ್ರದಲ್ಲಿ ಆದರ್ಶ ಬಾಲಕೃಷ್ಣ ನಟಿಸುತ್ತಿದ್ದಾರೆ. ಅಷ್ಟಕ್ಕೂ ಈ ಪಾತ್ರದಕ್ಕೆ ಈ ನಟನೇ ಯಾಕೆ? ಅನ್ನೋ ಪ್ರಶ್ನೆಗೆ ಉತ್ತರವಿದೆ. ಆದರ್ಶ ಬಾಲಕೃಷ್ಣ ಸ್ವತ: ಪ್ರಶಾಂತ್ ನೀಲ್ ಚಿಕ್ಕಪ್ಪನ ಮಗ. ಆತನಿಗಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸಿನಿಮಾ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಆರಂಭಿಸಲಿದೆ. ದೀಪಿಕಾ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ತಂಡ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಬಿಟ್ಟುಕೊಡಬಹುದು. ಇತ್ತ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಎನ್‌ಟಿಆರ್ ಸಿನಿಮಾ ವಿಳಂಬ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











