46 ವರ್ಷಗಳ ನಂತರ ಅಪೂರ್ವ ಸಂಗಮ, ಒಂದೇ ಚಿತ್ರದಲ್ಲಿ ರಜಿನಿ-ಕಮಲ್ ? ನಿರ್ದೇಶಕ ಯಾರು ?
''ಜೈಲರ್'' ಮೂಲಕ ಮತ್ತೆ ಮೊದಲಿನ ಲಯಕ್ಕೆ ಮರಳಿದ ತಲೈವಾ ಸದ್ಯ ''ಕೂಲಿ'' ಮೂಲಕ ಅಬ್ಬರಿಸುತ್ತಿದ್ದಾರೆ. ಆದರೆ ಈ ''ಕೂಲಿ'' ಬೇರೆ ಚಿತ್ರಗಳನ್ನೆಲ್ಲಾ ಬಲಿ ಪಡೆಯುತ್ತೆ ಎನ್ನುವ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಬದಲಿಗೆ ಈ ''ಕೂಲಿ'' ಮಾಮೂಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೂ ಕೂಡ.. ಮೆರವಣಿಗೆ ಸಾಂಗವಾಗಿ ನಡೆದಿದೆ. ಹೀಗಿರುವಾಗ ಇದೀಗ ಭಾರತದ ದಿಗ್ಗಜರಾದ ಕಮಲ್ ಹಾಸನ್ ಮತ್ತು ರಜಿನಿಕಾಂತ್...
ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ಸುದ್ದಿಯೊಂದು ಪಕ್ಕದ ತಮಿಳುನಾಡಿನಿಂದ ತೇಲಿಕೊಂಡು ಬಂದಿದೆ. ಸಹಜವಾಗಿಯೇ ಈ ಸುದ್ದಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಯಾಕೆಂದರೆ ರಜಿನಿ ಮತ್ತು ಕಮಲ್ ಒಂದೇ ಚಿತ್ರದಲ್ಲಿ ಮುಖಾಮುಖಿಯಾಗಿ 46 ವರ್ಷಗಳೇ ಆಗಿವೆ.

ಇನ್ನು ಚಿತ್ರರಂಗದಲ್ಲಿ ರಜಿನಿಕಾಂತ್ ಅವರಿಗಿಂತ ಕಮಲ್ ಸೀನಿಯರ್. ರಜಿನಿ ಬರುವ ಮೊದಲೇ ಕಮಲ್ ಚಿತ್ರರಂಗಕ್ಕೆ ಬಂದಿದ್ದರು. ರಜಿನಿಯ ಅಭಿನಯದ ಮೊದಲ ಚಿತ್ರ ''ಅಪೂರ್ವ ರಾಗಂಗಳ್'' ಚಿತ್ರದ ನಾಯಕನಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ಇದೇ ಕಮಲ್ ಹಾಸನ್.
1975ರಲ್ಲಿ ಬಿಡುಗಡೆಯಾದ ''ಅಪೂರ್ವ ರಾಗಂಗಳ್'' ಚಿತ್ರದಲ್ಲಿ ಕಮಲಹಾಸನ್, ರಜಿನಿಕಾಂತ್, ಮೇಜರ್ ಸುಂದರರಾಜನ್, ಶ್ರೀವಿದ್ಯಾ, ಜಯಸುಧಾ ಮತ್ತು ನಾಗೇಶ್ ಅಭಿನಯಿಸಿದ್ದರು. ಎಲ್ಲಾ ರೀತಿಯಲ್ಲಿಯೂ ವಿಭಿನ್ನವಾಗಿದ್ದ ಈ ಚಿತ್ರ ಆ ಕಾಲದಲ್ಲಿ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.
ಇಲ್ಲಿಂದಾಚೆ ''ಮೂಂಡ್ರು ಮುಡಿಚು''.. ''ಅವರಗಲ್''.. ''16 ವಯತಿನಿಲೆ''..''ಅವಳ ಅಪ್ಪಡಿತಾನ್''.. ''ನಿನೈತಲೆ ಇನಿಕ್ಕುಮ್'' ಹೀಗೆ ಒಂದಾದ ಮೇಲೊಂದರಂತೆ 21 ಚಿತ್ರಗಳಲ್ಲಿ ರಜಿನಿಕಾಂತ್ ಮತ್ತು ಕಮಲ್ ಹಾಸನ್ ಜೊತೆಯಲ್ಲಿ ಅಭಿನಯಿಸಿದ್ದರು. ಇಷ್ಟೇ ಅಲ್ಲದೇ ಅಮಿತಾಬ್ ಬಚ್ಚನ್ ಅವರ ''ಗಿರಫ್ತಾರ್''ಚಿತ್ರದಲ್ಲಿ ಕೂಡ ಕಮಲ್ ಮತ್ತು ರಜಿನಿ ಒಟ್ಟಿಗೆ ಅಭಿನಯಿಸಿದ್ದರು. ಭಾರತೀಯ ಚಿತ್ರರಂಗದ ಮೂವರು ದಿಗ್ಗಜರು ಒಟ್ಟಿಗೆ ಅಭಿನಯಸಿದ ಸಿನಿಮಾ ಇದು.
ಆದರೆ ಆ ನಂತರ ಬದಲಾದ ಮನಸ್ಥಿತಿಯಾ ? ಅಥವಾ ಪರಿಸ್ಥಿತಿಯಾ ? ಗೊತ್ತಿಲ್ಲ. ಕಮಲ್ ಮತ್ತು ರಜಿನಿ ವಿರುದ್ಧ ದಿಕ್ಕಿನತ್ತ ಸಾಗಿದರು. ಇಬ್ಬರು ಸೇರಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಜೊತೆಯಲ್ಲಿ ಅಭಿನಯಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ನೆಪದಲ್ಲಿ ಕಡಿಮೆ ಸಂಭಾವನೆ ನೀಡಿ ಸಿನಿಮಾ ಮಾಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಅದೇ ಕಾರಣಕ್ಕೆ ಆ ರೀತಿ ಆಗುವುದು ಬೇಡ ಎಂದು ಈ ನಿರ್ಧಾರಕ್ಕೆ ಬಂದಿದ್ದಾಗಿ ಕಮಲ್ ಹಾಸನ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರಾದರೂ ಅಭಿಮಾನಿಗಳ ದೃಷ್ಟಿಯಲ್ಲಿ ಇಬ್ಬರು ದೂರವಾಗಲು ಇಬ್ಬರ ನಡುವೆ ಇದ್ದ ಶೀತಲ ಸಮರ್ ಮತ್ತು ಇಬ್ಬರ ಈಗೋನೇ ಕಾರಣ.

1979 ರಲ್ಲಿ ಬಿಡುಗಡೆ ಆದ ''ಅಲ್ಲಾವುದ್ದೀನಮ್ ಅದ್ಭುತ ವಿಲಕ್ಕುಮ್'' ಚಿತ್ರವೇ ಕೊನೆ. ಆ ನಂತರ ಇಬ್ಬರು ಮತ್ತೆ ತೆರೆಯ ಮೇಲೆ ಎದುರು ಬದುರಾಗಲೇ ಇಲ್ಲ. ಆದರೆ ಈಗ ರಜಿನಿ ಮತ್ತು ಕಮಲ್ ಹಾಸನ್ ಮತ್ತೆ ತೆರೆ ಹಂಚಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಕಮಲ್ ಹಾಸನ್‌ಗೆ ''ವಿಕ್ರಂ'' ಮತ್ತು ರಜಿನಿಗೆ '' ಕೂಲಿ'' ಚಿತ್ರವನ್ನು ನಿರ್ದೇಶಿಸಿರುವ ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು ಈ ಚಿತ್ರ ಭಾರತದ ಬಹುದೊಡ್ಡ ಗ್ಯಾಂಗಸ್ಟರ್ ಡ್ರಾಮಾ ಚಿತ್ರವಾಗಲಿದೆ ಎಂದು ಸದ್ಯ ವರದಿಯಾಗಿದೆ. ಇನ್ನೂ ಈ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿರುವ ಲೋಕೇಶ್ ಕನಕರಾಜ್ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಲಿದೆ ಎಂದು ಕೂಡ ಸದ್ಯ ಸುದ್ದಿ ಚಾಲ್ತಿಯಲ್ಲಿದೆ. ''ಜೈಲರ್ 2'' ಚಿತ್ರದಲ್ಲಿ ಬ್ಯುಸಿಯಾಗಿರುವ ರಜಿನಿ ಸದ್ಯಕ್ಕೆ ಈ ವಿಚಾರವನ್ನು ಗೌಪ್ಯವಾಗಿ ಇಡಲು ಬಯಸಿದ್ಧಾರೆ ''ಜೈಲರ್ 2'' ಬಿಡುಗಡೆಯ ನಂತರ ಈ ಚಿತ್ರದ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ರಜಿನಿ ಮತ್ತು ಕಮಲ್ ಅವರನ್ನು ನಿಜಕ್ಕೂ ಲೋಕೇಶ್ ಕನಕರಾಜ್ ಒಟ್ಟುಗೂಡಿಸುತ್ತಾರಾ ? ಚಿತ್ರವನ್ನು ಮಾಡುತ್ತಾರಾ ? ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆಯಾದರೂ ಒಂದು ವೇಳೆ ಇಬ್ಬರು ಮಹಾನಾಯಕರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳ ಪಾಲಿಗೆ ಅದು ಹಬ್ಬದೂಟವೇ ಸರಿ.


Click it and Unblock the Notifications











