'ರಾಮಾಯಣ'ದಲ್ಲಿ ರಾವಣನಾಗಲು ಸಂಭಾವನೆ ಬೇಡ ಅಂದ್ರಾ ಯಶ್? ರಾಕಿ ಭಾಯ್ ಲೆಕ್ಕಾಚಾರವೇನು?
ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ರಾಮಾಯಣ' ಕೊನೆಗೂ ಟೇಕಾಫ್ ಆಗಿದೆ. ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ಈ ಪೌರಾಣಿಕ ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆಯಿದೆ. ಅದರಲ್ಲೂ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಶ್ರೀರಾಮ, ರಾವಣ, ಸೀತೆ ಪಾತ್ರದಲ್ಲಿ ನಟಿಸುವ ಸ್ಟಾರ್‌ಗಳ ಬಗ್ಗೆನೇ ಚರ್ಚೆಯಾಗುತ್ತಿತ್ತು.
ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ, ನಿರ್ಮಾಣ ಸಂಸ್ಥೆ ಹಾಗೂ ಯಶ್, ಸಾಯಿ ಪಲ್ಲವಿ ಇದೂವರೆಗೂ ತಮ್ಮ ಪಾತ್ರದ ಬಗ್ಗೆ ಬಾಯಿ ಬಿಟ್ಟಿಲ್ಲ. ಅಷ್ಟರೊಳಗೆ ಅವರ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

'ರಾಮಾಯಣ' ಬಾಲಿವುಡ್ ಮಂದಿಯ ಪ್ರತಿಷ್ಠೆಯ ಪ್ರಾಜೆಕ್ಟ್ ಆಗಿಬಿಟ್ಟಿದೆ. 'ಆದಿಪುರುಷ್' ಸೋಲಿನ ಬಳಿಕ ಮತ್ತೆ ರಾಮಾಯಣವನ್ನು ತೆರೆಮೇಲೆ ತೋರಿಸಿ ಗೆಲ್ಲಲೇ ಬೇಕು ಎಂದು ಪಣತೊಟ್ಟು ನಿಂತಿದ್ದಾರೆ. ಸದ್ಯ ಸಿನಿಮಾ ಸೆಟ್ಟೇರಿದ ಹಿನ್ನೆಲೆಯಲ್ಲಿಯೇ ಪಾತ್ರಧಾರಿಗಳ ಸಂಭಾವನೆ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಯಾರ್‍ಯಾರಿಗೆ? ಎಷ್ಟೆಷ್ಟು ಸಂಭಾವನೆ ಕೊಟ್ಟಿದ್ದಾರೆ ಅಂತಾನೂ ಗುಲ್ಲೆದ್ದಿದೆ.
'ರಾಮಾಯಣ' ಸಿನಿಮಾ ಯಶ್ ನಟಿಸುತ್ತಿದ್ದಾರೋ ಇಲ್ಲವೋ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಯಶ್ ಸುತ್ತಮುತ್ತ ದಿನಕ್ಕೆ ಒಂದೊಂದು ಸುದ್ದಿ ಹರಿದಾಡುತ್ತಲೇ ಇದೆ. ಬಾಲಿವುಡ್ ಅಂಗಳದಲ್ಲೀಗ ಯಶ್ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. 'ಕೆಜಿಎಫ್ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರಾಕಿ ಭಾಯ್‌ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಯಶ್ ಸಂಭಾವನೆ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಯಶ್ 'ರಾಮಾಯಣ' ಸಿನಿಮಾ ರಾವಣನಾಗಿ ನಟಿಸುವುದಕ್ಕೆ ಮೊದಲು ಸುಮಾರು 80 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು. ಬಳಿಕ ತನಗೆ ಸಂಭಾವನೆ ಬೇಡ ಎಂದು ಹೇಳಿದ್ದಾರೆ. ಅದೇ 80 ಕೋಟಿ ರೂಪಾಯಿಯನ್ನು 'ರಾಮಾಯಣ' ಸಿನಿಮಾಗೆ ಹೂಡಿಕೆ ಮಾಡಿದ್ದಾರೆ ಅಂತ ಬಾಲಿವುಡ್ ಮಂದಿ ಚರ್ಚೆ ಮಾಡುತ್ತಿದ್ದಾರೆಂದು ಕೆಲವು ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.

'ಕೆಜಿಎಫ್' ಬಳಿಕ ಯಶ್ ಸಂಭಾವನೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. 'ಕೆಜಿಎಫ್ 2'ಗೂ ಯಶ್ ಸಂಭಾವನೆ ಪಡೆದಿಲ್ಲ. ಸಿನಿಮಾದಿಂದ ಬಂದ ಲಾಭದಲ್ಲಿ ಪರ್ಸಂಟೇಜ್ ಪಡೆದಿದ್ದಾರೆ ಎಂದು ಗುಲ್ಲೆದ್ದಿತ್ತು. ಅದೇ ರೀತಿ 'ಟಾಕ್ಸಿಕ್' ಸಿನಿಮಾಗೂ ಯಶ್ ಹಣ ಹೂಡಿಕೆ ಮಾಡಿದ್ದಾರೆ ಎಂಬ ಸುದ್ದಿಯಿದೆ.
ಹೀಗಾಗಿ ಯಶ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ರಾಮಾಯಣ'ದಲ್ಲಿ ಹೂಡಿಕೆ ಮಾಡಿರಬಹುದು ಎಂದು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ. ಇನ್ನೊಂದು ಕಡೆ ರಣ್‌ಬೀರ್ ಕಪೂರ್ ಪ್ರತಿ ಚಿತ್ರಕ್ಕೆ 30-35 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ, 'ರಾಮಾಯಣ' ಸಿನಿಮಾಗಾಗಿ 70 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಗುಲ್ಲೆದ್ದಿದೆ.
ಇನ್ನೊಂದು ಕಡೆ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಕೂಡ ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಾಯಿ ಪಲ್ಲವಿಗೆ ಚಿತ್ರತಂಡ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಉಳಿದ ಪಾತ್ರಗಳಲ್ಲಿ ನಟಿಸುತ್ತಿರುವ ಕಲಾವಿದರು ಎಷ್ಟೆಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.


Click it and Unblock the Notifications











