Toxic Business: ಯಶ್ 'ಟಾಕ್ಸಿಕ್' ಬ್ಯುಸಿನೆಸ್ ಶುರು: ಯಾವ್ಯಾವ ಭಾಷೆಯಲ್ಲಿ ಏನಾಗ್ತಿದೆ?
'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ರಿಲೀಸ್‌ಗೆ ವೇದಿಕೆ ಸಜ್ಜಾಗುತ್ತಿದೆ. ಸುಮಾರು ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ನಿರೀಕ್ಷೆಗಳು ಮೂರು ಪಟ್ಟು ಹೆಚ್ಚಾಗಿವೆ. 'ಟಾಕ್ಸಿಕ್' ರಿಲೀಸ್‌ಗೆ ಇನ್ನು 38 ದಿನಗಳು ಬಾಕಿ ಉಳಿದಿವೆ. ಆದರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಪ್ರಮೋಷನ್ ಅನ್ನು ಶುರು ಮಾಡಿಲ್ಲ. ಈ ಬಗ್ಗೆ ಸ್ವತ: ಅವರ ಅಭಿಮಾನಿಗಳಲ್ಲೂ ಗೊಂದಲವಿದೆ.
ಹೀಗಿರುವಾಗಲೇ 'ಟಾಕ್ಸಿಕ್' ಅಡ್ಡಾದಲ್ಲಿ ಕೆಲವು ಬೆಳೆವಣಿಗೆಗಳು ನಡೆದಿವೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ವೇಳೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಬ್ಯುಸಿನೆಸ್ ಹಾಗೂ ಸ್ಟ್ರಾಟಜಿ ಮಾಡಿದ್ದ ಕಾರ್ತಿಕ್ ಗೌಡ ಈಗ 'ಟಾಕ್ಸಿಕ್'ಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹದ್ದೊಂದು ಸುದ್ದಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ 'ಟಾಕ್ಸಿಕ್' ಸಿನಿಮಾದ ಬ್ಯುಸಿನೆಸ್ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಓಡಾಡುತ್ತಿವೆ. ಒಂದೊಂದೇ ಭಾಷೆಯ ಥಿಯೇಟ್ರಿಕಲ್ ಹಕ್ಕುಗಳನ್ನು ಸೇಲ್ ಮಾಡಲಾಗುತ್ತಿದೆ ಎಂದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಯಾವ್ಯಾವ ಭಾಷೆಯ ಹಕ್ಕುಗಳನ್ನು ಯಾರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಅನ್ನೋದು ಚರ್ಚೆಯಾಗುತ್ತಿದೆ. ಅದರ ಡಿಟೈಲ್ಸ್ ಇಲ್ಲಿದೆ.
ತೆಲುಗು ಹಕ್ಕುಗಳು ಸೋಲ್ಡ್
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಟಾಕ್ಸಿಕ್' ಸಿನಿಮಾದ ಥಿಯೇಟ್ರಿಕಲ್ ಹಕ್ಕುಗಳ ಬ್ಯುಸಿನೆಸ್ ನಡೆಯುತ್ತಿದೆ. ಈಗಾಗಲೇ ತೆಲುಗು ರಾಜ್ಯಗಳ ವಿತರಣೆಯ ಹಕ್ಕುಗಳನ್ನು ಸೇಲ್ ಮಾಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಎರಡೂ ರಾಜ್ಯಗಳ 'ಟಾಕ್ಸಿಕ್' ಸಿನಿಮಾದ ಹಕ್ಕುಗಳನ್ನು ಅಲ್ಲಿನ ನಿರ್ಮಾಪಕ ದಿಲ್ ರಾಜ್ ಖರೀದಿ ಮಾಡಿದ್ದಾರೆ. ಸುಮಾರು ₹120 ಕೋಟಿಗೆ ಈ ಹಕ್ಕುಗಳು ಸೇಲ್ ಆಗಿವೆ ಎಂದು ವರದಿಯಾಗಿದೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಮೊತ್ತಕ್ಕೆ ತೆಲುಗು ರಾಜ್ಯಗಳಲ್ಲಿ ಸೇಲ್ ಆದ ಸಿನಿಮಾ ಎನ್ನಲಾಗಿದೆ
ತಮಿಳು ಹಕ್ಕುಗಳು ಯಾರಿಗೆ?
'ಟಾಕ್ಸಿಕ್' ತಮಿಳು ಥಿಯೇಟ್ರಿಕಲ್ ರೈಟ್ಸ್‌ನ ಬ್ಯುಸಿನೆಸ್ ಟಾಕ್ ಶುರು ಆಗಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈಗಾಗಲೇ ತಮಿಳಿನ ಜನಪ್ರಿಯ ವಿತರಣಾ ಸಂಸ್ಥೆಗಳಾದ, ಸ್ಟುಡಿಯೋ ಗ್ರೀನ್, ಡ್ರೀಮ್ ವಾರಿಯರ್, ಎಜಿಎಸ್ ಹಾಗೂ ಉದಯನಿಧಿ ಸ್ಟ್ಯಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬಿದೆ. ಇವುಗಳಲ್ಲಿ ಯಾವ ವಿತರಣಾ ಸಂಸ್ಥೆಗೆ ಹೇಗೆ ಬ್ಯುಸಿನೆಸ್ ಆಗುತ್ತೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮಲಯಾಳಂ ಹಕ್ಕುಗಳು ಯಾರಿಗೆ?
ತೆಲುಗು, ತಮಿಳು ಬಳಿಕ ಕೇರಳದಲ್ಲಿ 'ಟಾಕ್ಸಿಕ್' ಸಿನಿಮಾವನ್ನು ಯಾರು ರಿಲೀಸ್ ಮಾಡಬಹುದೆಂಬ ಕುತೂಹಲ ಮೂಡಿದೆ. ಕನ್ನಡ ಚಿತ್ರರಂಗದೊಂದಿಗೆ ಗುರುತಿಸಿಕೊಂಡವರಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್. ಇವರ ನಿರ್ಮಾಣ ಸಂಸ್ಥೆಯಲ್ಲಿ ಕನ್ನಡ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಿವೆ. ಹೀಗಾಗಿ ಗಾಂಧಿನಗರದ ಮಂದಿಯಿಂದ ಸಿಕ್ಕಿರೋ ಮಾಹಿತಿ ಪ್ರಕಾರ, ಪೃಥ್ವಿರಾಜ್ ಸುಕುಮಾರನ್ ಸಂಸ್ಥೆಗೆ ಇಲ್ಲವೇ E4 ಸಂಸ್ಥೆ ವಿತರಣೆ ಹಕ್ಕನ್ನು ಬಾಚಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹಿಂದಿ ಹಕ್ಕುಗಳು ಯಾರಿಗೆ?
ಇನ್ನು 'ಟಾಕ್ಸಿಕ್' ಸಿನಿಮಾಗೆ ಅತೀ ಹೆಚ್ಚು ಕಲೆಕ್ಷನ್ ಮಾಡಿಕೊಡುವ ಹಿಂದಿ ಏರಿಯಾದ ಹಕ್ಕುಗಳು ಯಾರ ಪಾಲಾಗಳಬಹುದು? ಈ ಪ್ರಶ್ನೆಗೆ ಮೊದಲು ಕೇಳಿ ಬರುತ್ತಿರೋದು ಅನಿಲ್ ತಡಾನಿ. ಈ ಹಿಂದೆ ನಟಿಸಿದ 'ಕೆಜಿಎಫ್ 2' ಸಿನಿಮಾವನ್ನು ಇವರೇ ವಿತರಣೆ ಮಾಡಿದ್ದರು. ಅಲ್ಲದೆ ಕಾರ್ತಿಕ್ ಗೌಡ ಕೂಡ ಅನಿಲ್ ತಡಾನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಉತ್ತರ ಭಾರತಕ್ಕೆ ಅನಿಲ್ ತಡಾನಿಯ AA ಫಿಲ್ಮ್ಸ್ ವಿತರಣೆ ಮಾಡುವ ಸಾಧ್ಯತೆಯಿದೆ. ಇದೇ ದಿನದಂದು ರಿಲೀಸ್ ಆಗುತ್ತಿರುವ 'ಧುರಂಧರ್ 2' ಸಿನಿಮಾವನ್ನು ಜಿಯೋ ಸಂಸ್ಥೆಯೇ ವಿತರಣೆ ಮಾಡುತ್ತಿದೆ. ಹೀಗಾಗಿ ಸರಿಯಾಗಿ ಟಕ್ಕರ್ ಕೊಡುವುದಕ್ಕೆ ಅನಿಲ್ ತಡಾನಿಗೆ ವಿತರಣೆ ಹಕ್ಕುಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಒಟ್ನಲ್ಲಿ ಇದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ಈ ಬಗ್ಗೆ ಅಧಿಕೃತವಾಗಿ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇದು ಗಾಂಧಿನಗರದ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ.


Click it and Unblock the Notifications











