ಕಾರಿನ ಮೇಲೆ ಕಾರು ಹತ್ತಿಸಿದ ಹಾಲಿವುಡ್ ಸ್ಟಾರ್: ಮಹಿಳೆ ಗಂಭೀರ
'ಟರ್ಮಿನೇಟರ್', 'ಕಮ್ಯಾಂಡೊ', 'ಟ್ರೂ ಲೈಸ್', 'ಎಸ್ಕೇಪ್ ಪ್ಲಾನ್' ಅಮಥಹಾ ಸೂಪರ್ ಹಿಟ್ ಸಿನಿಮಾಗಳ ನಾಯಕ ನಟ, ವಿಶ್ವದ ಅತ್ಯುತ್ತಮ ದೇಹಧಾರ್ಡ್ಯ ಪಟುಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಅರ್ನಾಲ್ಡ್ ಶ್ವಾರ್ಹ್ಸನೆಗರ್ ಕಾರು ಅಪಘಾತಕ್ಕೆ ಈಡಾಗಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ.
ಕಾರು ಅಪಘಾತಕ್ಕೆ ಅರ್ನಾಲ್ಡ್ ಶ್ವಾರ್ಹ್ಸನೆಗರ್ ಅವರ ತಪ್ಪಾದ ಚಾಲನೆಯೇ ಕಾರಣ ಎನ್ನಲಾಗುತ್ತಿದ್ದು, ಅರ್ನಾಲ್ಡ್ ಚಲಾಯಿಸುತ್ತಿದ್ದ ಭಾರಿ ಗಾತ್ರದ ಜಿಎಂಸಿ ಯೂಕೋನ್ ಕಾರು, ಟೊಯೊಟಾ ಪ್ರಿಯೂಸ್ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ಹತ್ತಿದೆ. ಅಪಘಾತದಲ್ಲಿ ಈ ಎರಡು ಕಾರು ಮಾತ್ರವೇ ಅಲ್ಲದೆ ಮತ್ತೆರಡು ಕಾರು ಸಹ ಜಖಂ ಆಗಿದೆ.
ಲಾಸ್ ಏಂಜಲ್ಸ್‌ನ ರಿವರ್ ಸಿಟಿ ಕ್ಲಬ್ ಬಳಿ ಸನ್‌ಸೆಟ್ ಬುಲೆವಾರ್ಡೊ ಹಾಗೂ ಅಲ್ಲೆನ್‌ಫೋರ್ಡ್ ಅವೆನ್ಯೂ ರಸ್ತೆಗಳು ಸಂಧಿಸುವ ಜಾಗದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯ ಅರ್ನಾಲ್ಡ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರು ಗುದ್ದಿದ ಟೊಯೊಟಾ ಪ್ರಿಯೂಸ್ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಲಾವಣೆ ಮಾಡುತ್ತಿದ್ದ ಅರ್ನಾಲ್ಡ್ ಮದ್ಯವನ್ನಾಗಲಿ ಇನ್ನಿತರೆ ಮಾದಕ ವಸ್ತುಗಳನ್ನು ಸೇವಿಸಿರಲಿಲ್ಲ ಎಂದು ಪೊಲೀಸರು ಖಾತ್ರಿ ಪಡಿಸಿದ್ದಾರೆ. ಕೆಲವು ಹಾಲಿವುಡ್ ವೆಬ್‌ಸೈಟ್‌ಗಳಲ್ಲಿ ಅಪಘಾತಕ್ಕೆ ಈಡಾದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ. ಕೆಲವುಗಳಲ್ಲಿ ಮಹಿಳೆಗೆ ಗಾಯವಷ್ಟೆ ಆಗಿರುವ ವರದಿ ಮಾಡಲಾಗಿದೆ.
ಅರ್ನಾಲ್ಡ್ ಚಲಾಯಿಸುತ್ತಿದ್ದ ಜಿಎಂಸಿ ಯೂಕೋನ್ ಕಾರು ಭಾರಿ ಗಾತ್ರದ್ದಾಗಿದ್ದು, ಟೊಯೊಟೊ ಕಾರಿನ ಮೇಲೆ ಹತ್ತಿದೆ. ಅಪಘಾತದ ರಭಸಕ್ಕೆ ಟೊಯೊಟಾ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಅಪಘಾತದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪಘಾತವಾದ ಸ್ಥಳದಲ್ಲಿ ನಟ ಅರ್ನಾಲ್ಡ್ ಸಹ ಇರುವ ಚಿತ್ರಗಳು ಸಹ ಹರಿದಾಡುತ್ತಿವೆ.

ಅರ್ನಾಲ್ಡ್ ಹೆಸರು ಈ ಹಿಂದೆ ಹಲವು ವಿವಾದಗಳಲ್ಲಿ ಕೇಳಿ ಬಂದಿವೆ. ತಮ್ಮನ್ನು ಸಂದರ್ಶನ ಮಾಡಲು ಬಂದಿದ್ದ ಮಹಿಳೆಯರ ಬಳಿ ಅರ್ನಾಲ್ಡ್ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಸಂದರ್ಶಕಿಯರು ದೂರಿದ್ದರು. ಅದನ್ನು ಅರ್ನಾಲ್ಡ್ ಒಪ್ಪಿಕೊಂಡಿದ್ದರು ಸಹ. ಅರ್ನಾಲ್ಡ್ ಚುನಾವಣೆಗೆ ಸ್ಪರ್ಧಿಸಿದಾಗ, ನಟಿಯೊಬ್ಬರು, 'ಅರ್ನಾಲ್ಡ್ ನನ್ನ ಉಡುಗೆಯ ಒಳಗೆ ಕೈ ಹಾಕಿದ್ದ'' ಎಂದಿದ್ದರು. ಸಿನಿಮಾ ನಟ ಮಾತ್ರವೇ ಅಲ್ಲದ ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಗೌರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.


Click it and Unblock the Notifications











