ದೇಶದ ಅಧ್ಯಕ್ಷನನ್ನು ಅಣಕಿಸಿದ್ದ 24 ವರ್ಷದ ನಿರ್ದೇಶಕ ಜೈಲಿನಲ್ಲಿ ಸಾವು
ಈಜಿಪ್ಟಿನ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರನ್ನು ಅಣಕಿಸುವಂತಹ ಮ್ಯೂಸಿಕ್ ವಿಡಿಯೋ ಮಾಡಿದ್ದಕ್ಕಾಗಿ ವಿಚಾರಣೆ ಇಲ್ಲದೆಯೇ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಿರ್ದೇಶಕ ಶಾದೀ ಹಬಾಶ್ ಕಾರಾಗೃಹದಲ್ಲಿಯೇ ಮೃತಪಟ್ಟಿದ್ದಾರೆ.
Recommended Video
ಕೈರೋದ ಅತ್ಯಂತ ಕಠಿಣ ಭದ್ರತೆಯುಳ್ಳ ಟೋರಾ ಕಾರಾಗೃಹ ಸಂಕೀರ್ಣದ ಜೈಲಿನಲ್ಲಿದ್ದ ಶಾದೀ ಹಬಾಷ್ ಮೃತಪಟ್ಟಿದ್ದಾರೆ ಎಂದು ಅವರ ವಕೀಲ ಅಹ್ಮದ್ ಎಲ್ ಖ್ವಾಗಾ ಶನಿವಾರ ತಿಳಿಸಿದ್ದಾರೆ. ಶಾದೀ ಹಬಾಷ್ ಅವರ ವಯಸ್ಸು ಕೇವಲ 24. ಅವರ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶುಕ್ರವಾರ ಸಂಜೆ ಜೈಲಿಗೆ ಮರಳಿ ಕರೆತರಲಾಗಿತ್ತು. ಆ ರಾತ್ರಿಯೇ ಅವರು ಮೃತಪಟ್ಟಿದ್ದಾರೆ.

ಸರ್ಕಾರದಿಂದ ಪ್ರತಿಕ್ರಿಯೆ ಇಲ್ಲ
ಈಜಿಪ್ಟ್‌ನ ಕಾರಾಗೃಹ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಆಂತರಿಕ ಸಚಿವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶಾದೀ ಅವರ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಅವರಿಗೆ ಯಾವ ರೀತಿಯ ಅನಾರೋಗ್ಯ ಕಾಣಿಸಿಕೊಂಡಿತ್ತು, ಅವರಿಗೆ ಚಿಕಿತ್ಸೆ ನೀಡಲಿಲ್ಲವೇ ಎಂಬ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ.

2018ರ ಮಾರ್ಚ್‌ನಲ್ಲಿ ಮ್ಯೂಸಿಕ್ ವಿಡಿಯೋ
2018ರ ಮಾರ್ಚ್‌ನಲ್ಲಿ ಮ್ಯೂಸಿಕ್ ವಿಡಿಯೋವೊಂದನ್ನು ಶಾದೀ ನಿರ್ದೇಶಿಸಿದ್ದರು. ಈಜಿಪ್ಟ್‌ನಿಂದ ಸ್ವೀಡನ್‌ಗೆ ಗಡಿಪಾರಾಗಿರುವ ಈಜಿಪ್ಟಿನ ಸಂಗೀತ ನಿರ್ದೇಶಕ ರಾಮಿ ಎಸ್ಸಾಮ್ ಅವರು ಈ ಮ್ಯೂಸಿಕ್ ವಿಡಿಯೋ ರೂಪಿಸಿದ್ದರು. ಇದು ವಿವಾದ ಸೃಷ್ಟಿಸಿತ್ತು.

ಖರ್ಜೂರಕ್ಕೆ ಹೋಲಿಕೆ
ಈ ಮ್ಯೂಸಿಕ್ ವಿಡಿಯೋದಲ್ಲಿ ಸೇನೆಯ ಜನರಲ್, ದೇಶದ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ಅವರನ್ನು ಅಣಕಿಸುವ ಹಾಡು ಇತ್ತು. ಅದರಲ್ಲಿ ಅಧ್ಯಕ್ಷರನ್ನು ಖರ್ಜೂರದ ಹಣ್ಣಿಗೆ ಹೋಲಿಸಲಾಗಿತ್ತು. ಜತೆಗೆ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತು.

ಯೂಟ್ಯೂಬ್‌ನಲ್ಲಿ ವೈರಲ್
ಈಜಿಪ್ಟಿನ ಸಿನಿಮಾವೊಂದರಲ್ಲಿ ನಟೋರಿಯಸ್ ಸುಳ್ಳುಗಾರನ ಪಾತ್ರವೊಂದರ ಹೆಸರನ್ನು ಎಲ್-ಸಿಸಿ ವಿರೋಧಿಗಳ ಅವರಿಗೆ ಇರಿಸಿದ್ದಾರೆ. ಅದನ್ನೇ ಮುಂದಿರಿಸಿಕೊಂಡು 'ಬಲಹ' ಎಂಬ ಸಾಹಿತ್ಯವನ್ನು ಒಳಗೊಂಡ ಹಾಡಿನ ವಿಡಿಯೋ ಯೂಟ್ಯೂಬ್‌ನಲ್ಲಿ 5 ಮಿಲಿಯನ್ ವೀಕ್ಷಣೆ ಕಂಡಿತ್ತು. ಅದರ ಬೆನ್ನಲ್ಲೇ ಶಾದೀ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು.

ನಿಧಾನವಾಗಿ ಸಾಯುತ್ತಿದ್ದೇನೆ
ಕಳೆದ ಅಕ್ಟೋಬರ್‌ನಲ್ಲಿ ಪತ್ರ ಬರೆದಿದ್ದ ಶಾದೀ, 'ನಾನು ನಿಧಾನವಾಗಿ ಸಾಯುತ್ತಿದ್ದೇನೆ. ಎಲ್ಲದರ ಮುಂದೆ ನಾನು ಒಬ್ಬಂಟಿಯಾಗಿ ನಿಂತಿದ್ದೇನೆ. ನನ್ನನ್ನು ಪ್ರೀತಿಸುವ ಅನೇಕ ಜನರು ನನ್ನ ಬಗ್ಗೆ ಬರೆಯಲು ಹೆದರುತ್ತಿದ್ದಾರೆ ಎನ್ನುವುದು ನನಗೆ ಗೊತ್ತು. ಅವರ ಬೆಂಬಲವಿಲ್ಲದೆಯೇ ನನ್ನನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಭಾವಿಸಿದ್ದಾರೆ' ಎಂದಿದ್ದರು.


Click it and Unblock the Notifications











