Michael Gambon Death: 'ಹ್ಯಾರಿ ಪಾಟರ್' ಹೆಡ್ ಮಾಸ್ಟರ್ ಮೈಕೆಲ್ ಗ್ಯಾಂಬೊನ್ ನಿಧನ.. ಹಾಲಿವುಡ್ ಸಂತಾಪ!
ಹಾಲಿವುಡ್ ದಂತಕಥೆ ಮೈಕೆಲ್ ಗ್ಯಾಂಬೊನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೈಕೆಲ್ ಗ್ಯಾಂಬೊನ್ ಜಗತ್ತೇ ಮೆಚ್ಚಿದ 'ಹ್ಯಾರಿ ಪಾಟರ್' ಪ್ರೊಫೆಸರ್ ಆಲ್ಬಸ್ ಡಂಬಲ್ಡೋರ್ ಪಾತ್ರದಲ್ಲಿ ಮಿಂಚಿದ್ದರು. ಇತ್ತೀಚೆಗೆ ನ್ಯೂಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೈಕೆಲ್ ಗ್ಯಾಂಬೊನ್ ನಿಧನಕ್ಕೆ ಹಾಲಿವುಡ್ ಮಂದಿ ಹಾಗೂ ಸಿನಿಮಾ ಪ್ರಿಯರು ಸಂತಾಪ ಸೂಚಿಸಿದ್ದಾರೆ. ಮೈಕಲ್ ಗ್ಯಾಂಬೊನ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಹ್ಯಾರಿ ಪಾಟರ್ ಸೀರಿಸ್‌ನಲ್ಲಿ ಪ್ರೊಫೆಸರ್ ಆಲ್ಬಸ್ ಡಂಬಲ್ಡೋರ್ ಪಾತ್ರದ ಬಳಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಾಯ್ತು. ಅದರಲ್ಲೂ ಮಕ್ಕಳಿಗೆ ಪ್ರೊಫೆಸರ್ ಆಲ್ಬಸ್ ಡಂಬಲ್ಡೋರ್ ಅಚ್ಚುಮೆಚ್ಚಿನ ನಟನಾಗಿದ್ದಾರೆ.

ಮೈಕೆಲ್ ಗ್ಯಾಂಬೊನ್ 1940ಯಲ್ಲಿ ಜನಿಸಿದ್ದರು. ತನ್ನ 22ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ರಂಗಭೂಮಿಯಿಂದ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಮೈಕೆಲ್ ಗ್ಯಾಂಬೊನ್ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಹಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದರು. 1965ರಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಬರೆದ 'ಓಥೆಲೋ' ನಾಟವನ್ನು ಅದೇ ಹೆಸರಿನಲ್ಲೇ ಸಿನಿಮಾ ಮಾಡಲಾಗಿತ್ತು.
'ಹ್ಯಾರಿ ಪಾಟರ್' ಜೊತೆಗೆ 'ಗೋಸ್ಫೋರ್ಡ್ ಪಾರ್ಕ್', 'ಓಪನ್ ರೇಂಜ್', 'ದಿ ಓಮೆನ್', 'ಲೇಯರ್ ಕೇಕ್', 'ಅಮೇಜಿಂಗ್ ಗ್ರೇಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಕೊನೆಯದಾಗಿ 'ಕಾರ್ಡೇಲಿಯಾ'ದಲ್ಲಿ ನಟಿಸಿದ್ದರು.
ಮೈಕೆಲ್ ಗ್ಯಾಂಬೊನ್ ಹಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. 82 ವರ್ಷ ವಯಸ್ಸಿನವರಾಗಿದ್ದ ಮೈಕಲ್ ಕಳೆದ ಕೆಲವು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವಾಷಿಂಗ್‌ಟನ್‌ನ ಪ್ರಸಿದ್ಧ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಸೆಪ್ಟೆಂಬರ್ 28) ಮೈಕಲ್ ಗ್ಯಾಂಬೊನ್ ಕೊನೆಯುಸಿರೆಳೆದಿದ್ದಾರೆ.
ಮೈಕಲ್ ಗ್ಯಾಂಬೊನ್ ನಿಧನದ ವಿಷಯವನ್ನು ಅವರ ಪತ್ನಿ ಮತ್ತು ಪುತ್ರ ಖಚಿತಪಡಿಸಿದ್ದಾರೆ. ಮೈಕೆಲ್ ಗ್ಯಾಂಬೊನ್ ಚೇತರಿಸಿಕೊಳ್ಳಲು ಪ್ರಾರ್ಥಿಸಿ ವಿಶ್ವದಲ್ಲಿರುವ ಅಸಂಖ್ಯಾತ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಮೈಕಲ್ ಗ್ಯಾಂಬೊನ್ ನಿಧನಕ್ಕೆ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದು ಹಾಲಿವುಡ್ ಸ್ಟಾರ್‌ಗಳು ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.


Click it and Unblock the Notifications











