Hollywood Strike: 63 ವರ್ಷಗಳ ಬಳಿಕ ಹಾಲಿವುಡ್‌ನಲ್ಲಿ ಪ್ರತಿಭಟನೆ.. ರಾತ್ರೋ ರಾತ್ರಿ ಕೆಲಸ ನಿಲ್ಲಿಸಿದ 1,60,000 ಮಂದಿ!
ಜಗತ್ತಿನ ಅತ್ಯಂತ ಶ್ರೀಮಂತ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆ (ಜುಲೈ 13) ರಾತ್ರಿಯಿಂದ ಹಾಲಿವುಡ್ ಮಂದಿ ಪ್ರತಿಭಟನೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಹಾಲಿವುಡ್‌ನ ಲೇಖಕರು ಆರಂಭಿಸಿದ ಪ್ರತಿಭಟನೆಗೆ ನಟರು ಕೂಡ ಜೊತೆಯಾಗಿದ್ದು, ಕೆಲಸವನ್ನು ನಿಲ್ಲಿಸಿದ್ದಾರೆ.
ಸುಮಾರು 63 ವರ್ಷಗಳ ಬಳಿಕ ಹಾಲಿವುಡ್‌ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಾಲಿವುಡ್ ಹಾಗೂ ಟಿವಿ ಶೋಗಳಿಗೆ ಕೆಲಸ ಮಾಡುವ ಲೇಖಕರು, ನಟರು ಅತ್ಯುತ್ತಮ ಸೌಲಭ್ಯಗಳು ಹಾಗೂ ವೇತನ ನೀಡುವಂತೆ ಪ್ರತಿಭಟನೆಯನ್ನು ಮಾಡುತ್ತಿವೆ. ಹಲವು ದಿನಗಳಿಂದ ನಡೆಯುತ್ತಿದ್ದ ಮಾತು ಫಲಪ್ರದವಾಗದೇ ನಿನ್ನೆ (ಜುಲೈ 13) ಮಧ್ಯರಾತ್ರಿಯಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ಹಾಲಿವುಡ್‌ನ ಎ ಲಿಸ್ಟ್ ಸ್ಟಾರ್‌ಗಳು ಸೇರಿದಂತೆ ಸುಮಾರು 1 ಲಕ್ಷದ 60 ಸಾವಿರ ಕಲಾವಿದರನ್ನು ಹೊಂದಿರುವ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ (SAG-AFTRA) ಪ್ರೊಡಕ್ಷನ್ ಕಂಪನಿಗಳ ಜೊತೆ ಮಾತುಕತೆ ನಡೆಸಿತ್ತು. ಉತ್ತಮ ವೇತನ ನೀಡುವುದು ಹಾಗೂ ಪ್ರೊಡಕ್ಷನ್ ಕಂಪನಿಗಳು ಬಳಸುತ್ತಿರುವ AI ತಂತ್ರಜ್ಞಾನದಿಂದ ಕೆಲಸ ಕಳೆದುಕೊಳ್ಳುವ ಭೀತಿಯ ವಿರುದ್ಧ ಕೆಲವು ಬೇಡಿಕೆಗಳನ್ನು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮುಂದಿಟ್ಟಿತ್ತು. ಆ ಮಾತುಕತೆ ಫಲಪ್ರದವಾಗದ ಬೆನ್ನಲ್ಲೇ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
ಹಾಲಿವುಡ್‌ನ ಲೇಖಕರು ಕಳೆದ 11 ವಾರಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಉತ್ತಮ ವೇತನ ಹಾಗೂ AI ತಂತ್ರಜ್ಞಾನದಿಂದ ಬಳಿಕೆಯಾಗುತ್ತಿರೋದ್ರಿಂದ ಭವಿಷ್ಯದ ಭರವಸೆ ನೀಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದರು. ಈ ಬೆನ್ನಲ್ಲೇ ನಿನ್ನೆ (ಜುಲೈ 13) ಮಧ್ಯರಾತ್ರಿಯಿಂದ ಹಾಲಿವುಡ್ ಹಾಗೂ ಟಿವಿ ನಟರು ಕೆಲಸ ನಿಲ್ಲಿಸಿದ್ದು, ಲೇಖಕರೊಂದಿಗೆ ಕೈ ಜೋಡಿಸಿದ್ದಾರೆ.
1960ರಲ್ಲಿ ಹೀಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಆ ಬಳಿಕ, ಅಂದರೆ, ಸುಮಾರು 63 ವರ್ಷಗಳಾದ್ಮೇಲೆ ಹಾಲಿವುಡ್‌ನಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ. ಲೇಖಕರು ಹಾಗೂ ನಟರ ಪ್ರತಿಭಟನೆಯಿಂದ ಬಿಗ್ ಬಜೆಟ್ ಸಿನಿಮಾಗಳು ಹಾಗೂ ಟಿವಿ ಶೋಗಳು ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ ಹಳೆಯ ಜನಪ್ರಿಯರ ಶೋಗಳು ಪುನಾರಾವರ್ತನೆಯಾಗುವ ಸಾಧ್ಯತೆನೂ ಇದೆ.
" ಸ್ಟ್ರೀಮಿಂಗ್ ಎಕೋ ಸಿಸ್ಟಂನಿಂದ ನಮಗೆ ಕೊಡುತ್ತಿರುವ ಪರಿಹಾರ ಕಡಿಮೆಯಾಗುತ್ತಿದೆ. ಈ ಕ್ರಿಯೇಟಿವ್ ಕ್ಷೇತ್ರಕ್ಕೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮಾರಕವಾಗಿದೆ. ಹೀಗಾಗಿ ನಮ್ಮ ಭದ್ರತೆಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ" ಎಂದು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಹೇಳಿಕೊಂಡಿದೆ.
ದೊಡ್ಡ ದೊಡ್ಡ ಸ್ಟುಡಿಯೋಗಳನ್ನು ಪ್ರತಿನಿಧಿಸುತ್ತಿರುವ ಮೋಷನ್ ಪಿಕ್ಚರ್ಸ್ ಒಕ್ಕೂಟ ಹಾಗೂ ಟಿವಿ ನಿರ್ಮಾಪಕರು ಪ್ರತಿಭಟನೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. "ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮಾತುಕತೆ ಮಧ್ಯೆನೇ ಎದ್ದು ಹೋಗುವ ನಿರ್ಧಾರ ಮಾಡಿದ್ದು ಬೇಸರ ತರಿಸಿದೆ" ಎಂದು ಕೇಳಿದೆ. ಅಲ್ಲದೆ " ಇದು ನಮ್ಮ ಆಯ್ಕೆ ಅಲ್ಲ. ಇದು ಯೂನಿಯನ್‌ನ ಆಯ್ಕೆ ಆಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
" ಸಿನಿಮಾ ನಟರು ಹಾಗೂ ಲೇಖಕರ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಪ್ರತಿಭಟನೆಗೆ ಕರೆದಿರುವುದು ತುಂಬಾನೇ ಡಿಸ್ಟರ್ಬಿಂಗ್ ಆಗಿದೆ" ಎಂದು ಹಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಡಿಸ್ನಿಯ ಸಿಇಓ ಬಾಬ್ ಇಗರ್ ಅಮೆರಿಕ ನ್ಯೂಸ್ ಚಾನೆಲ್ ಸಿಎನ್‌ಬಿಸಿಗೆ ತಿಳಿಸಿದ್ದಾರೆ.
ಹಾಲಿವುಡ್ ನಟರು ಹಾಗೂ ಲೇಖಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಬಿಗ್ ಪ್ರಾಜೆಕ್ಟ್‌ಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಅಲ್ಲದೆ ಓಟಿಟಿ ಸಂಸ್ಥೆಗಳಾದ, ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ ಅಂತಹ ಸಂಸ್ಥೆಗಳ ಹೊಸ ಪ್ರಾಜೆಕ್ಟ್‌ಗಳ ಮೇಲೆ ಏಟು ಬೀಳುವ ಸಾಧ್ಯತೆಯಿದೆ.


Click it and Unblock the Notifications











