ಜಾನಿ ಡೆಪ್‌ಗೆ ₹2355 ಕೋಟಿ ನೀಡಿ ಕ್ಷೇಮ ಕೇಳಿದ ಡಿಸ್ನಿ? ಜಾಕ್ ಸ್ಪಾರೋ ಮುಂದಿನ ನಡೆಯೇನು?
ಕಳೆದ ಹಲವು ವರ್ಷಗಳಿಂದ ಹಾಲಿವುಡ್ ನಟ ಜಾನಿ ಡೆಪ್ ಹಾಗೂ ಮಾಜಿ ಪತ್ನಿ ಅಂಬರ್ ಹರ್ಡ್ ನಡುವೆ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ನ್ಯಾಯಾಲಯದಲ್ಲಿ ಅಂಬರ್ ಹರ್ಡ್ ವಿರುದ್ಧ ಜಾನಿ ಡೆಪ್ ಮಾನನಷ್ಟ ಮೊಕದ್ದಮೆ ಕೇಸ್ ಅನ್ನು ಗೆದ್ದಿದ್ದಾರೆ. ಈ ಬೆನ್ನಲೇ ಹಾಲಿವುಡ್‌ನಲ್ಲಿ ಹಲವು ಬೆಳವಣಿಗೆಗಳು ನಡೆದಿವೆ.
ಜಾನಿ ಡೆಪ್‌ಗೆ ಈಗ ಹಾಲಿವುಡ್‌ನಲ್ಲಿ ಅವಕಾಶಗಳ ಹರಿದು ಬರುತ್ತಿವೆ ಎಂದು ವರದಿಯಾಗಿದೆ. ಅಂಬರ್ ಹರ್ಡ್ ಆರೋಪ ಮಾಡಿದ ಬಳಿಕ ಜಾನಿ ಡೆಪ್‌ಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಜಾನಿ ಡೆಪ್ ಅನ್ನು ತಮ್ಮ ಸಿನಿಮಾಗಳಿಂದ ಕೈ ಬಿಟ್ಟಿದ್ದವು. ಈಗ ಅದೇ ಸಂಸ್ಥೆಗಳು ಜಾನಿ ಹಿಂದೆ ಬಿದ್ದಿವೆ.
ಹಾಲಿವುಡ್‌ನ ಜನಪ್ರಿಯ ಸರಣಿ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ನಿರ್ಮಿಸಿದ್ದ ಡಿಸ್ನಿ ಸಂಸ್ಥೆ ಜಾನಿ ಡೆಪ್ ಅನ್ನು ಮತ್ತೆ ಈ ಸಿರೀಸ್‌ಗೆ ಮರಳುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. ದುಬಾರಿ ಕ್ಷಮಾಪಣ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಡಿಸ್ನಿಯಿಂದ ಜಾನಿಗೆ ₹2355 ಕೋಟಿ ಆಫರ್
ಆಸ್ಟ್ರೇಲಿಯಾದ ಪಾಪ್ ಕಲ್ಚರ್ ಗಾಸಿಪ್ ವೆಬ್‌ಸೈಟ್ ಪಾಪ್‌ಟಾಪಿಕ್.ಕಾಮ್‌ನಲ್ಲಿ ಇಂತಹದ್ದೊಂದು ಸುದ್ದಿ ಪ್ರಕಟವಾಗಿದೆ. ಜಾನಿ ಡೆಪ್ ಆರೋಪ ಮುಕ್ತರಾದ ಬಳಿಕ ಡಿಸ್ನಿ ಸಂಸ್ಥೆ ಜಾನಿ ಡೆಪ್‌ಗೆ ಮತ್ತೆ ತನ್ನ ಪಾತ್ರಕ್ಕೆ ಮರಳುವಂತೆ ಕೇಳಿಕೊಂಡಿದೆ. ಕ್ಷಮಾಪಣಾ ಪತ್ರ ಬರೆದು, ₹2355 ಕೋಟಿ ಆಫರ್ ಕೂಡ ನೀಡಿ, ಪೈರೆಟ್ಸ್ ಆಫ್ ದಿ ಕೆರಿಬಿಯನ್ ಸಿನಿಮಾದ ಜಾಕ್ ಸ್ಪಾರೋ ಪಾತ್ರದಲ್ಲಿ ನಟಿಸುವಂತೆ ಮನವಿ ಮಾಡಿದೆ ಎಂದು ವರದಿ ಮಾಡಿದೆ.

ಏನಂತಿವೆ ಹಾಲಿವುಡ್ ಮೂಲಗಳು?
ಹಾಲಿವುಡ್ ಮೂಲಗಳ ಪ್ರಕಾರ, ಡಿಸ್ನಿ ಸಂಸ್ಥೆ ದುಬಾರಿ ಆಫರ್ ನೀಡಿ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಸಿನಿಮಾಗೆ ಮರಳುವಂತೆ ಕೇಳಿಕೊಂಡಿದ್ದರೂ, ಜಾನಿ ಡೆಪ್ ಒಪ್ಪಿಕೊಳ್ಳುವುದು ಅನುಮಾನ. ಈ ಹಿಂದೆನೇ ಜಾನಿ ಡೆಪ್ ಮತ್ತೆ ಪೈರೆಟ್ಸ್ ಆಫ್ ದಿ ಕೆರಿಬಿಯನ್ ಸಿನಿಮಾ ನಟಿಸುವುದಿಲ್ಲವೆಂದು ಹೇಳಿದ್ದರು. ಈ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ಆಫರ್ ಅನ್ನು ಕೈ ಬಿಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಜಾನಿಯನ್ನು ಹೊರದಬ್ಬಿದ್ದ ಡಿಸ್ನಿ
ಅಂಬರ್ ಹರ್ಡ್ ಆರೋಪ ಮಾಡಿದ ಬಳಿಕ ಡಿಸ್ನಿ ಸಂಸ್ಥೆ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಸಿನಿಮಾದಿಂದ ಜಾನಿ ಡೆಪ್ ಅನ್ನು ಹೊರ ಹಾಕಿತ್ತು. ವೃತ್ತಿಪರತೆ ಇಲ್ಲ ಎನ್ನುವ ಕಾರಣ ಕೊಟ್ಟು ಸಿನಿಮಾದಿಂದ ಕೈ ಬಿಡಲಾಗಿತ್ತು. ಇದರ ಜೊತೆನೇ 'ಫೆಂಟಾಸ್ಟಿಕ್ ಬೀಸ್ಸ್ಟ್ 3' ಸಿನಿಮಾದ ಆಫರ್ ಕೂಡ ಕೈ ಬಿಟ್ಟು ಹೋಗಿತ್ತು. ಹೀಗಾಗಿ ಅಂದು ಆದ ಅವಮಾನದಿಂದ ಜಾನಿ ಡೆಪ್ ಮತ್ತೆ ಈ ಎರಡು ಸಿನಿಮಾಗಳಿಗೆ ಮರಳುವುದು ಅನುಮಾನ ಎನ್ನಲಾಗಿದೆ.

ಇದು ಬರೀ ಗಾಳಿ ಸುದ್ದಿನಾ?
ಈ ಸುದ್ದಿ ಹರಿದಾಡುತ್ತಿದ್ದಂತೆ ಹಾಲಿವುಡ್‌ನ ಮತ್ತೊಂದು ಮೂಲ ಇದು ಗಾಳಿಸುದ್ದಿಯಷ್ಟೇ ಎಂದು ಹೇಳಿದೆ. ಡಿಸ್ನಿ ಇಂತಹದ್ದೊಂದು ಆಫರ್ ಅನ್ನು ಜಾನಿ ಡೆಪ್‌ಗೆ ನೀಡಿಲ್ಲ ಎನ್ನುತ್ತಿದೆ. ಡಿಸ್ನಿಗೂ ಕೂಡ ಜಾನಿಯನ್ನು ಮತ್ತೆ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಸಿನಿಮಾಗೆ ಕರೆತರುವ ಆಲೋಚನೆಗಳಿಲ್ಲ ಎಂದು ಹೇಳುತ್ತಿದೆ. ಅಲ್ಲದೆ ಜಾನಿಡೆಪ್ ಆಗಲಿ. ಡಿಸ್ನಿ ಆಗಲಿ ಈ ಸುದ್ದಿ ಬಗ್ಗೆ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











