Oscar nominations 2025: ಆಸ್ಕರ್ ನಾಮಿನೇಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ 'ಅನುಜಾ'
2025ರ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಕಿರುಚಿತ್ರ 'ಅನುಜಾ' ಸ್ಥಾನ ಪಡೆದಿದೆ. ಈ ಸಿನಿಮಾ ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಈ ಕಿರು ಸಿನಿಮಾದ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗುನೀತ್ ಮೊಂಗಾ ಅಂತಹ ದೊಡ್ಡ ಹೆಸರು ಸೇರಿಕೊಂಡಿದೆ.
97ನೇ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಲಿಸ್ಟ್ ಅನ್ನು ಬೋವೆನ್ ಯಾಂಗ್ ಹಾಗೂ ರಾಚೆಲ್ ಸೆನ್ನೋಟ್ ರಿವೀಲ್ ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಸುಮಾರು 180 ಸಿನಿಮಾಗಳು ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದ ನಾಮಿನೇಷನ್ ರೇಸ್‌ನಲ್ಲಿ ಇದ್ದವು. ಅದರಲ್ಲಿ ಐದು ಸಿನಿಮಾಗಳು ನಾಮಿನೇಟ್ ಆಗಿವೆ. ಅದರಲ್ಲಿ ಭಾರತದ 'ಅನುಜಾ' ಕೂಡ ಒಂದು.

'ಅನುಜಾ' ನಾಮಿನೇಷನ್ ಭಾರತದ ಈ ವರ್ಷದ ಆಸ್ಕರ್ ಪ್ರಶಸ್ತಿ ಕನಸನ್ನು ಜೀವಂತವಾಗಿಸಿದೆ. 'ಅನುಜಾ' ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ, ಗುನೀತ್ ಮೊಂಗಾ ಹಾಗೂ ಮಿಂಡಿ ಕಲಿಂಗ್ ಇದ್ದಾರೆ. ಅಂದ್ಹಾಗೆ 'ಅನುಜಾ' ಆಸ್ಕರ್‌ಗೆ ನಾಮಿನೇಟ್ ಆಗುತ್ತಿರುವ ಗುನೀತ್ ಮೊಂಗಾ ಅವರ ಮೂರನೇ ಸಿನಿಮಾ. ಈ ಹಿಂದೆ 'ದಿ ಎಲಿಫೆಂಟ್ ವಿಸ್ಪರೆರ್ಸ್' ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಇದರ ಜೊತೆಗೆ ಇವರದ್ದೇ ಕಿರುಚಿತ್ರ 'ಪ್ರಿರಿಯಡ್: ಎಂಡ್ ಆಫ್ ಸೆನ್ಟೆನ್ಸ್' ನಾಮಿನೇಟ್ ಆಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿತ್ತು.
'ಅನುಜಾ' ಕಿರುಚಿತ್ರವನ್ನು ಆಡಮ್ ಜೆ. ಗ್ರೇವ್ಸ್ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರ ಆಸ್ಕರ್‌ಗೆ ನಾಮಿನೇಟ್ ಆಗುತ್ತಿದ್ದಂತೆ ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕಿರುಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದು, ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಸಿನಿಮಾ ವಿಭಾಗಕ್ಕೆ ಆಯ್ಕೆ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು 'ಅನುಜಾ' ಜೊತೆಗೆ ಇನ್ನೂ ನಾಲ್ಕು ಕಿರು ಚಿತ್ರಗಳು ಪೈಪೋಟಿಗೆ ಇಳಿದಿವೆ. ಏಲಿಯನ್, ಐ'ಮ್ ನಾಟ್ ಎ ರೋಬೊಟ್, ದಿ ಲಾಸ್ ರೇಂಜರ್ ಮತ್ತು ಎ ಮ್ಯಾನ್ ಹು ವುಡ್ ನಾಟ್ ರಿಮೈನ್ ಸೈಲೆಂಟ್ ಸಿನಿಮಾಗಳು ಆಸ್ಕರ್ ಪ್ರಶಸ್ತಿಗೆ ನಾಮಿನೇಷನ್ ಆಗಿವೆ. ಹೀಗಾಗಿ 'ಅನುಜಾ'ಗೆ ಭಾರೀ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿವೆ. 180 ಸಿನಿಮಾಗಳಲ್ಲಿ 15 ಶಾರ್ಟ್ ಲಿಸ್ಟ್ ಆಗಿತ್ತು. ಅದರಲ್ಲಿ ಐದು ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.
ಇನ್ನು ಮಾರ್ಚ್ 2 ರಂದು ಆಸ್ಕರ್ ಪ್ರಶಸ್ತಿ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. 97ನೇ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಕಾನನ್ ಒ'ಬ್ರೇನ್ ನಿರೂಪಣೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾನನ್ ಒ'ಬ್ರೇನ್ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ನಡೆಸಿಕೊಡುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ 'ಅನುಜಾ' ಆಸ್ಕರ್ ಪ್ರಶಸ್ತಿ ಗೆಲ್ಲುತ್ತಾ ಇಲ್ಲವಾ? ಅನ್ನೋದು ತಿಳಿಯಲಿದೆ.
ಇನ್ನು ಕಿರುಚಿತ್ರದ ಕಥೆಯ ಕಡೆಗೆ ಬರೋದಾರೆ, ಅನುಜಾ 9 ವರ್ಷದ ಬಾಲಕಿಯ ಕಥೆ. ಗಾರ್ಮೆಂಟ್ ಫಾಕ್ಟರಿಯಲ್ಲಿ ತನ್ನ ಅಕ್ಕ ಪಾಲಕ್ ಜೊತೆ ಕೆಲಸ ಮಾಡುತ್ತಾಳೆ. ಒಂದು ಸಂದರ್ಭದಲ್ಲಿ ಈಕೆ ತೆಗೆದುಕೊಳ್ಳುವ ನಿರ್ಧಾರ ಆಕೆಯ ಹಾಗೂ ಆಕೆಯ ಕುಟುಂಬದ ಬದುಕನ್ನೇ ಬದಲಿಸಿಬಿಡುತ್ತೆ. ಈ ಕಿರುಚಿತ್ರ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ. ಈ ಕಿರುಚಿತ್ರವನ್ನು ಆಡಂಸ್ ಪತ್ನಿ ಸುಚಿತ್ರಾ ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ , ಮಿಂಡಿ ಕಲಿಂಗ್ ಹಾಗೂ ಗುನೀತ್ ಮೊಂಗಾ ಸಾಥ್ ನೀಡಿದ್ದಾರೆ.


Click it and Unblock the Notifications











