Gene Hackman Death: 2 ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೀನ್ ಹ್ಯಾಕ್ಮನ್ ಹಾಗೂ ಪತ್ನಿ ನಿಗೂಢ ಸಾವು!
ಹಾಲಿವುಡ್‌ನ ಜನಪ್ರಿಯ ನಟ ಜೀನ್ ಹಾಕ್ಮನ್ ಹಾಗೂ ಅವರ ಪತ್ನಿ ಬೆಟ್ಸಿ ಅರಕವಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ಸುದ್ದಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಹಾಗೂ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಜೀನ್ ಹಾಕ್ಮನ್ ಎರಡು ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದರು. ಇವರ ಈ ನಿಗೂಢ ಸಾವಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.
ಜೀನ್ ಹಾಕ್ಮನ್ ಹಾಗೂ ಅವರ ಪತ್ನಿಯ ನ್ಯೂ ಮೆಕ್ಸಿಕೋದ ಅವರ ಅಪಾರ್ಟ್‌ಮೆಂಟ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಹಾಲಿವುಡ್ ನಟನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇವರ ಸಾವಿಗೆ ಜಗತ್ತಿನಾದ್ಯಂತ ಇವರು ಇವರ ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿವೆ.

ಹಾಲಿವುಡ್ ನಟ ಜೀನ್ ಹಾಕ್ಮನ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ವಿಚಿತ್ರ ಅಂದರೆ, ಜೀನ್ ಹಾಕ್ಮನ್, ಪತ್ನಿ ಹಾಗೂ ಇವರು ಸಾಕಿದ್ದ ನಾಯಿ ಕೂಡ ಸಾವನ್ನಪ್ಪಿದೆ. ಹೀಗಾಗಿ ಇವರ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಸದ್ಯ ನ್ಯೂ ಮೆಕ್ಸಿಕೋ ಪೊಲೀಸರಿಂದ ಹೆಚ್ಚಿನ ಮಾಹಿತಿ ಇನ್ನೂ ಹೊರ ಬೀಳಬೇಕಿದೆ.
ಜೀನ್ ಹಾಕ್ಮನ್ ಅವರಿಗೆ ಹಾಲಿವುಡ್‌ನಲ್ಲಿ ತನ್ನದೇ ವಿಶಿಷ್ಟ ಸ್ಥಾನವಿತ್ತು. ತಮ್ಮ ವಿಶಿಷ್ಟ ನಟನೆಯಿಂದ ಜನಮನ ಗೆದ್ದಿದ್ದರು. 'ಎನಿಮಿ ಆಫ್ ದಿ ಸ್ಟೇಟ್', 'ದಿ ಕ್ವಿಕ್ ಅಂಡ್ ದಿ ಡೆಡ್', 'ಸೂಪರ್‌ಮ್ಯಾನ್' ಅಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 1971ರಲ್ಲಿ ತೆರೆಕಂಡಿದ್ದ 'ದಿ ಫ್ರೆಂಚ್ ಕನೆಕ್ಷನ್' ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಗೆದ್ದಿದ್ದರು. ಹಾಗೇ 1992 ರಲ್ಲಿ ತೆರೆಕಂಡಿದ್ದ 'ಅನ್ ಫೊರ್ಗೀವನ್' ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಆಸ್ಕರ್ ಜೊತೆಗೆ ಇವರಿಗೆ 4 ಗೋಲ್ಡನ್ ಗ್ಲೋಬ್ ಪ್ರಶಸ್ತಿ, 2 ಬ್ರಿಟಿಷ್ ಅಕಾಡೆಮಿ ಪ್ರಶಸ್ತಿಗಳು ಕೂಡ ಲಭಿಸಿದೆ.
ಹಾಲಿವುಡ್ ನಟ ಜೀನ್ ಹಾಕ್ಮನ್ ಎರಡು ಬಾರಿ ಆಸ್ಕರ್ ಗೆದ್ದರೆ, ಮೂರು ಸಿನಿಮಾಗಳಿಗೆ ಆಸ್ಕರ್ ನಾಮಿನೇಷನ್ ಆಗಿತ್ತು. 1967ರಲ್ಲಿ ತೆರೆಕಂಡಿದ್ದ 'ಬೋನಿ ಅಂಡ್ ಕ್ಲೈಡ್', 1970ರಲ್ಲಿ ತೆರೆಕಂಡ 'ಐ ನೆವರ್ ಸಂಗ್ ಫಾರ್ ಮೈ ಫಾದರ್', 1988ರಲ್ಲಿ ತೆರೆಕಂಡಿದ್ದ 'ಮಿಸ್ಸಿಪ್ಪಿ ಬರ್ನಿಂಗ್' ಸಿನಿಮಾದ ಪಾತ್ರಕ್ಕಾಗಿ ಆಸ್ಕರ್ ನಾಮಿನೇಷನ್ ಆಗಿತ್ತು. ಆದರೆ, ಈ ಪಾತ್ರಗಳು ಅಂತಿಮ ಹಂತದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದವು.
ಜೀನ್ ಹಾಕ್ಮನ್ ಅವರನ್ನು ವಿಶ್ವದಾದ್ಯಂತ ಜನಪ್ರಿಯ ನಟನನ್ನಾಗಿ ಮಾಡಿದ್ದು 'ಸೂಪರ್‌ಮ್ಯಾನ್' ಸೀರಿಸ್. 1978ರಲ್ಲಿ ತೆರೆಕಂಡಿದ್ದ 'ಸೂಪರ್‌ಮ್ಯಾನ್' ಹಾಗೂ 1980ರಲ್ಲಿ ರಿಲೀಸ್ ಆಗಿದ್ದ 'ಸೂಪರ್‌ಮ್ಯಾನ್ 2' ಸಿನಿಮಾಗಳಲ್ಲಿ ನಟಿಸಿದ ವಿಶ್ವದ ಮೂಲೆ ಮೂಲೆಯಲ್ಲಿರುವ ಹಾಲಿವುಡ್ ಅಭಿಮಾನಿಗಳ ಮನಗೆದ್ದಿದ್ದರು. 2004ರಲ್ಲಿ 'ವೆಲ್‌ಕಮ್ ಟು ಮೂಸೆಪೊರ್ಟ್' ಇವರು ನಟಿಸಿದ ಕೊನೆಯ ಸಿನಿಮಾ. ಆದರೆ, ಟಿವಿ ಶೋಗಳಲ್ಲಿ, ವಾಯ್ಸ್ ಡಾಕ್ಯೂಮೆಂಟರಿಯಲ್ಲಿ 2017ರವರೆಗೂ ಕೆಲಸ ಮಾಡಿದ್ದರು.
95 ವರ್ಷ ವಯಸ್ಸಾಗಿದ್ದ ಜೀನ್ ಹಾಕ್ಮನ್ ಅವರ ಪತ್ನಿ ಬೆಟ್ವಿ ಅರಕಾವಾ ಹಾಗೂ ಸಾಕು ನಾಯಿ ಮೂವರೂ ಸಾವು ಆಘಾತವನ್ನುಂಟು ಮಾಡಿದೆ. ನೆರೆಹೊರೆಯವರಿಗೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸಾಂತಾ ಬೇ ಕೌಂಟಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಆದರೆ, ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ.


Click it and Unblock the Notifications











