'ನಿಕ್ ಜೋನಸ್ ಪತ್ನಿ' ಎಂದು ವರದಿ ಮಾಡಿದ್ದಕ್ಕೆ ಪತ್ರಿಕೆ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಚೋಪ್ರಾ!
ಪ್ರಿಯಾಂಕಾ ಚೋಪ್ರಾಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆ ಇದೆಯಾ? ಪ್ರಿಯಾಂಕಾ ಚೋಪ್ರಾ ಅನ್ನುವ ಹೆಸರು ಬಹುತೇಕ ಜನರಿಗೆ ಚಿರಪರಿಚಿತ. ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಹೆಸರು ಮಾಡಿರುವ ಪ್ರಿಯಾಂಕಾ ಈಗಾಗಲೇ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಗ್ಲೋಬಲ್ ಐಕಾನ್ ಆಗಿ ಪಿಗ್ಗಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಕೇವಲ ಸಿನಿಮಾ ಅಷ್ಟೇ ಅಲ್ಲ ಸಮಾಜ ಮುಖಿ ಕೆಲಸಗಳಲ್ಲಿಯೂ ಪ್ರಿಯಾಂಕಾ ಭಾಗಿಯಾಗಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅನ್ನುವ ಹೆಸರೇ ಒಂದು ಬ್ರ್ಯಾಂಡ್ ಆಗಿದೆ. ಸಿನಿಮಾಗಳ ಜೊತೆ ನಿರ್ಮಾಪಕಿಯಾಗಿ, ಲೇಖಕಿಯಾಗಿ, ಉದ್ಯಮಿಯಾಗಿ, ಯುನಿಸೆಫ್‌ನ ರಾಯಬಾರಿಯಾಗಿ ಪ್ರಿಯಾಂಕಾ ಚೋಪ್ರಾ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ, ಅಮೆರಿಕದ ಪತ್ರಿಕೆಯೊಂದು 'ದಿ ವೈಫ್ ಆಫ್ ನಿಕ್ ಜೋನಸ್' ಎಂದು ತನ್ನ ವರದಿಯಲ್ಲಿ ಬರೆದಿದೆ. ಈ ವರದಿಯನ್ನು ಓದುತ್ತಿದ್ದಂತೆ ಪ್ರಿಯಾಂಕಾ ಕೆಂಡಾಮಂಡಲವಾಗಿದ್ದಾರೆ. ಇದರಲ್ಲಿ ತಪ್ಪೇನಿದೆ? ಪ್ರಿಯಾಂಕಾ ನಿಕ್ ಜೋನಸ್ ಪತ್ನಿಯೇ ಅಲ್ಲವೆ? ಇದರಲ್ಲಿ ಕೋಪ ಬರುವಂತೆ ವಿಷಯವೇನಿದೆ? ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅಸಲಿಗೆ ಪ್ರಿಯಾಂಕಾಗೆ ಕೋಪ ತರಿಸಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ನಿಕ್ ಜೋನಸ್ ಪತ್ನಿ ಎಂದಿದ್ದಕ್ಕೆ ಪ್ರಿಯಾಂಕಾ ಕೋಪ
ಪ್ರಿಯಾಂಕಾ ಚೋಪ್ರಾ ಅಮೆರಿಕದ ಪ್ರತಿಷ್ಟಿತ ಪತ್ರಿಕೆ ಡೈಲಿ ಮೇಲ್ ಪ್ರಕಟಿಸಿದ ವರದಿಯೊಂದನ್ನು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವರದಿಯಲ್ಲಿ ಪ್ರಿಯಾಂಕಾ ಚೋಪ್ರಾರನ್ನು ನಿಕ್ ಜೋನಸ್ ಪತ್ನಿ ಎಂದು ಬರೆಯಲಾಗಿದೆ. ಇದು ಪ್ರಿಯಾಂಕಾ ಚೋಪ್ರಾಗೆ ಇರಿಸು ಮುರಿಸು ತರುವಂತೆ ಮಾಡಿದೆ. ಬಾಲಿವುಡ್‌ನ ದೊಡ್ಡ ನಟಿಯಾಗಿ, ಹಾಲಿವುಡ್‌ನಲ್ಲೂ ಹೆಸರು ಮಾಡಿರುವ ಪ್ರಿಯಾಂಕಾ ತನ್ನದೇ ಐಡೆಂಟಿಟಿಯನ್ನು ಹೊಂದಿದ್ದಾರೆ. ಹೀಗಿದ್ದರೂ ಪ್ರಿಯಾಂಕಾ ಚೋಪ್ರಾ ಎಂದು ನಮೂದಿಸದೆ, ನಿಕ್ ಜೋನಸ್ ಪತ್ನಿಯೆಂದು ವರದಿ ಮಾಡಿದ್ದಕ್ಕೆ ಪ್ರಿಯಾಂಕಾ ಕೋಪಗೊಂಡಿದ್ದಾರೆ.

ಪಿಗ್ಗಿ ವೃತ್ತಿ ಬದುಕಿಗೆ ಇದು ಅವಮಾನ
ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾ 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಮ್ಯಾಟ್ರಿಕ್ಸ್ ಅಂತಹ ಸಿನಿಮಾದಲ್ಲಿ ನಟಿಸಿದ್ದರೂ ಪ್ರಿಯಾಂಕಾ ಚೋಪ್ರಾ ಹೆಸರನ್ನು ಬಳಸುವ ಬದಲು ನಿಕ್ ಜೋನಸ್ ಪತ್ನಿ ಎಂದು ವರದಿಯಲ್ಲಿ ಬರೆದಿದ್ದಕ್ಕೆ ಪ್ರಿಯಾಂಕಾ ತನಗಾದ ಅವಮಾನವೆಂದು ಭಾವಿಸಿದ್ದಾರೆ. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವ ಪ್ರಿಯಾಂಕಾಗೆ ಇದು ಪತ್ರಿಕೆಯೊಂದು ಮಾಡಿರುವ ಅವಮಾನವೆಂದು ಭಾವಿಸಲಾಗಿದೆ. ಹೀಗಾಗಿ ಪ್ರಿಯಾಂಕಾ ಪತ್ರಿಕೆ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.

ಜೀವನ ಚರಿತ್ರೆಯಲ್ಲಿ IMDb ಲಿಂಕ್ ಹಂಚಿಕೊಳ್ಳಬೇಕಾ?
" ನಾನು ಸಾರ್ವಕಾಲಿಕ ಸಿನಿಮಾಗಳಲ್ಲಿ ಒಂದಾದ ಫ್ರಾಂಚೈಸಿಯನ್ನು ಪ್ರಚಾರ ಮಾಡುತ್ತಿದ್ದೇನೆ. ಅದರೂ ನನ್ನನ್ನು ನಿಕ್ ಜೋನಸ್ ಪತ್ನಿಯೆಂದು ಕರೆಯುತ್ತಿದ್ದಾರೆ. ಮಹಿಳೆಯರ ವಿರುದ್ಧ ಇಂತಹ ಘಟನೆ ಹೇಗೆ ನಡೆಯಲು ಸಾಧ್ಯ ವಿವರಿಸಿ? ನಾನು ನನ್ನ ಜೀವನ ಚರಿತ್ರೆಯಲ್ಲಿ IMDb ಲಿಂಕ್ ಅನ್ನು ಸೇರಿಸಿಕೊಳ್ಳಬೇಕಾ?" ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ. ಈ ವಿಷಯವೀಗ ವಿಶ್ವದೆಲ್ಲಡೆ ಸಾಕಷ್ಟು ಚರ್ಚೆಯಾಗುತ್ತಿದೆ.

ಜೋನಸ್ ಹೆಸರು ಮಂಗಮಾಯ
ಪತಿ ನಿಕ್ ಜೋನಸ್ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಕೂಡ ಸುದ್ದಿಯಲ್ಲಿ ಇದ್ದರು. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಹೆಸರಿಗೆ ಸೇರಿಸಿಕೊಂಡಿದ್ದ ಜೋನಸ್ ಅನ್ನು ತೆಗೆದು ಹಾಕಿದ್ದರು. ಆ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಈಗ ಮತ್ತೆ ನಿಕ್ ಜೋನಸ್ ಪತ್ನಿ ಎಂದು ವರದಿಯಲ್ಲಿ ಬರೆದಿದ್ದಕ್ಕೆ ಪ್ರಿಯಾಂಕಾ ಕಿಡಿಕಾರಿದ್ದಾರೆ. ಇದು ಪ್ರಿಯಾಂಕಾ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸುವಂತೆ ಮಾಡಿದೆ.


Click it and Unblock the Notifications











