The Devil Wears Prada 2: 20 ವರ್ಷಗಳ ಬಳಿಕ ಸೀಕ್ವೆಲ್; 'ದಿ ಡೆವಿಲ್ ವೇರ್ಸ್ ಪ್ರಾಡಾ 2'ಗೆ ಪ್ರತಿಕ್ರಿಯೆ ಹೇಗಿದೆ?
ಕೆಲವು ಸೀಕ್ವೆಲ್‌ಗಳೇ ಹಾಗೇ ಪ್ರೇಕ್ಷಕರಿಗೆ ಇಷ್ಟ ಆಗಿಬಿಟ್ಟರೆ ಮುಗಿದೇ ಹೋಯ್ತು. ಆ ಸಿನಿಮಾದ ಸೀಕ್ವೆಲ್ ಬರುವವರೆಗೂ ಜನರಿಗೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇಂತಹ ಕ್ರೇಜ್ ಅನ್ನು ಹುಟ್ಟಾಕುವಲ್ಲಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಎತ್ತಿದ ಕೈ. ಹೀಗೆ ಭಾರೀ ನಿರೀಕ್ಷೆಗಳನ್ನು ಹುಟ್ಟಾಕಿರುವ ಸಿನಿಮಾಗಳಲ್ಲಿ 'ದಿ ಡೆವಿಲ್ ವೇರ್ಸ್ ಪ್ರಾಡಾ 2' ಕೂಡ ಒಂದು. ಈ ಸಿನಿಮಾ ವಿಶ್ವದಾದ್ಯಂತ ಇಂದು (ಏಪ್ರಿಲ್ 30)ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.
2006ರಲ್ಲಿ ತೆರೆಕಂಡಿದ್ದ 'ದಿ ಡೆವಿಲ್ ವೇರ್ಸ್ ಪ್ರಾಡಾ' ವಿಶ್ವದಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಡೇವಿಕ್ ಫ್ರಾಂಕೆಲ್ ನಿರ್ದೇಶಿಸಿದ್ದ ಈ ಸಿನಿಮಾ ಭಾರತದಲ್ಲಿಯೂ ಯುವ ಸಮುದಾಯದ ಮನಸ್ಸು ಗೆದ್ದಿತ್ತು. ಈಗ ಅದೇ ಸಿನಿಮಾದ ಸೀಕ್ವೆಲ್ ಸುಮಾರು 20 ವರ್ಷಗಳ ಬಳಿಕ ರಿಲೀಸ್ ಆಗಿದೆ. ಎರಡು ದಶಕಗಳ ಬಳಿಕ ಮತ್ತೆ ಅದೇ ತಂಡ ಒಂದಾಗಿರುವುದರಿಂದ 'ದಿ ಡೆವಿಲ್ ವೇರ್ಸ್ ಪ್ರಾಡಾ 2' ಹಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಮೊದಲ ಭಾಗ ರಿಲೀಸ್ ಆಗಿ 20 ವರ್ಷಗಳ ಬಳಿಕ ಸೀಕ್ವೆಲ್ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆಗಳು ಸಹಜವಾಗಿ ಗರಿಗೆದರಿದ್ದವು. ಮತ್ತೆ ಫ್ಯಾಷನ್ ಲೋಕಕ್ಕೆ ಮರಳುತ್ತಿರುವ 'ದಿ ಡೆವಿಲ್ ವೇರ್ಸ್ ಪ್ರಾಡಾ 2' ಸಾಕಷ್ಟು ಬದಲಾವಣೆಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಕಾಲಕ್ಕೆ ತಕ್ಕಂತೆ ಬದಲಾಗಿದ್ದು, ಡಿಜಿಟಲ್ ಯುಗದಲ್ಲಿ ತಮ್ಮ 'ರನ್ ವೇ' ಮ್ಯಾಗಜೀನ್ ಹೇಗೆ ಬದಲಾಗಿದೆ ಅನ್ನೋದನ್ನು ಎಳೆಯಾಗಿಟ್ಟು ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರೆಡ್ಡಿಟ್‌ನಲ್ಲಿ ಪ್ರತಿಕ್ರಿಯೆಗಳನ್ನು ನೀಡುವುದಕ್ಕೆ ಶುರು ಮಾಡಿದ್ದಾರೆ.
'ದಿ ಡೆವಿಲ್ ವೇರ್ಸ್ ಪ್ರಾಡಾ 2'ದಲ್ಲಿ 'ರನ್‌ವೇ' ಪತ್ರಿಕಾ ಕಚೇರಿಯಲ್ಲಿ ಹೋರಾಟ ನಡೆಯುತ್ತಿದೆ. ಪ್ರಸ್ತುತ ಡಿಜಿಟಲ್ ಲೋಕದಲ್ಲಿ ತಮ್ಮ ಪತ್ರಿಕೆಯನ್ನು ಕಾಯ್ದುಕೊಳ್ಳಲು ಮಿರಾಂಡಾ ಪ್ರಿಸ್ಟ್ಲಿ ಹೋರಾಡುತ್ತಿದ್ದರೆ, ಆಂಡಿ ಸ್ಯಾಚ್ಸ್ ಮತ್ತೆ ಕಣಕ್ಕಿಳಿದಿದ್ದಾರೆ. ಈ ಬಾರಿ ಕಥೆಯಲ್ಲಿ ಸಾಕಷ್ಟು ತಿರುವುಗಳಿದ್ದು, ಸಾಕಷ್ಟು ಬದಲಾವಣೆಗಳಾಗಿವೆ. ವಿರಾಂಡಾ ಸಹಾಯಕಿಯಾಗಿದ್ದ ಎಮಿಲಿ ಈಗ ಹೊಸ ಫೀಚರ್‌ನ ಎಡಿಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ರನ್ ವೇ'ಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಎಮಿಲಿ ಪಾತ್ರ ಪ್ರಮುಖ ಪಾತ್ರವನ್ನು ವಹಿಸಲಿದೆ.
'ದಿ ಡೆವಿಲ್ ವೇರ್ಸ್ ಪ್ರಾಡಾ 2' ಪ್ರಮುಖ ಪಾತ್ರದಲ್ಲಿ ಮೆರಿಲ್ ಸ್ಟ್ರೀಪ್, ಆನ್ ಹ್ಯಾಥ್‌ವೇ, ಎಮಿಲಿ ಬ್ಲಂಟ್ ಮತ್ತು ಸ್ಟಾನ್ಲಿ ಟುಚಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಸ್ಟ್ರೀಪ್, ಹ್ಯಾಥ್‌ವೇ, ಬ್ಲಂಟ್ ಮತ್ತು ಟುಚಿ ಜೊತೆ ಕೆನೆತ್ ಬ್ರಾನಾ, ಸಿಮೋನಾ ಆಶ್ಲೆ, ಜಸ್ಟಿನ್ ಥೆರೊಕ್ಸ್, ಲೂಸಿ ಲಿಯು, ಪ್ಯಾಟ್ರಿಕ್ ಬ್ರಾಮಲ್, ಕೇಲೆಬ್ ಹೀರಾನ್, ಹೆಲೆನ್ ಜೆ. ಶೆನ್, ಪೌಲಿನ್ ಚಾಲಮೆಟ್, ಬಿ. ಜೆ. ನೊವಾಕ್ ಮತ್ತು ಕಾನ್ರಾಡ್ ರಿಕಾಮೋರಾ ಸೇರಿದಂತೆ ಹೊಸ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಡೇವಿಡ್ ಫ್ರಾಂಕೆಲ್ ನಿರ್ದೇಶನವಿದ್ದರೆ, ಅಲೀನ್ ಬ್ರೋಷ್ ಮೆಕೆನ್ನಾ ಹಳೆಯ ನೆನಪುಗಳ ಜೊತೆಗೆ ಹೊಸ ಸಂಘರ್ಷಗಳನ್ನು ಸೇರಿಸಿ ಕಥೆಯನ್ನು ಹೆಣೆದಿದ್ದಾರೆ.
ಇನ್ನು ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಶುರುವಾಗಿವೆ. ಅದರಲ್ಲೂ ರೆಡ್ಡಿಟ್‌ನಲ್ಲಿ ಪ್ರೇಕ್ಷಕರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 2006ರಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಈ ಸಿನಿಮಾದ ಸೀಕ್ವೆಲ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ರಿಲೀಸ್ ಬಳಿಕ ನಕರಾತ್ಮಕವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ." ನಾನು ಮೊದಲ ಪಾರ್ಟ್ ಅನ್ನು ನೋಡಿದ್ದೇನೆ. ಆದರೆ, ಸೀಕ್ವೆಲ್ ನಿಜವಾಗಿಯೂ ಚೆನ್ನಾಗಿಲ್ಲ. ಆದರೆ, ಮನರಂಜನೆಯನ್ನು ನೀಡುತ್ತದೆ. ಪಾತ್ರಗಳೆಲ್ಲವೂ ಗಮನ ಸೆಳೆಯುತ್ತವೆ. ಫ್ಯಾಷನ್ ಅದ್ಭುತವಾಗಿದೆ. ಸಿನಿಮಾದ ಕೆಲವು ಭಾಗಗಳಲ್ಲಿ ಕಥೆಯನ್ನು ಎಳೆದಿದ್ದಾರೆ ಎನಿಸುತ್ತಿದೆ" ಎಂದು ಹೇಳುತ್ತಿದ್ದಾರೆ.
ಮತ್ತೊಬ್ಬರು "ಇದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿನಿಮಾ. ಆದರೆ ಮೂಲ ಸಿನಿಮಾದಷ್ಟು ಚೆನ್ನಾಗಿಲ್ಲ. ಒಂದೇ ಸಿನಿಮಾದಲ್ಲಿ ಹಲವು ಅಂಶಗಳನ್ನು ತುರುಕುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಆಂಡಿ ಹಾಗೂ ಮಿರಾಂಡಾ ಪಾತ್ರಗಳನ್ನು ಇನ್ನೂ ಚೆನ್ನಾಗಿ ಡೆವಲಪ್‌ಮೆಂಟ್ ಮಾಡಬಹುದಾಗಿತ್ತು. ಕಥೆಯಲ್ಲಿ ಒತ್ತಾಯಪೂರ್ವಕವಾಗಿ ತಿರುವುಗಳನ್ನು ನೀಡಲಾಗಿದೆ. ಈ ಸಿನಿಮಾದಿಂದ ನನಗೆ ನಿರಾಶೆಯಾಗಿದೆ" ಎಂದು ಹೇಳಿದ್ದಾರೆ.


Click it and Unblock the Notifications