Oscars 2023: ಅಕಾಡೆಮಿ ಪ್ರಶಸ್ತಿಯನ್ನು 'ಆಸ್ಕರ್' ಅಂತ ಕರೆಯೋದೇಕೆ? ಇದರ ಎತ್ತರ, ತೂಕ.. ಇದೂವರೆಗೂ ಪ್ರಶಸ್ತಿ ಪಡೆದವರೆಷ್ಟು?
'ಆಸ್ಕರ್' ಪ್ರಶಸ್ತಿಯನ್ನು ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬ ಫಿಲ್ಮ್‌ಮೇಕರ್ ಕನಸು. ಈ ಪ್ರಶಸ್ತಿಗಾಗಿ ವಿಶ್ವದ ಮೂಲೆ ಮೂಲೆಯಲ್ಲಿರೋ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಪ್ರತಿವರ್ಷ ಪ್ರಯತ್ನ ಪಡುತ್ತಲೇ ಇರುತ್ತಾರೆ. ಎಂದಿನಂತೆ 2023ರ ಆಸ್ಕರ್ ಪ್ರಶಸ್ತಿ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಪ್ರತಿಷ್ಠಿತ ಪ್ರಶಸ್ತಿ ಈ ಬಾರಿ ಯಾರ ಮುಡಿಗೆ ಸೇರುತ್ತೆ ಅನ್ನೋದನ್ನು ಎದುರು ನೋಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ 'ಆಸ್ಕರ್' ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿಶ್ವದ ಅತ್ಯುತ್ತಮ ಸಿನಿಮಾಗಳು ಈ ಪ್ರಶಸ್ತಿ ಗೆದ್ದುಕೊಂಡಿವೆ. ಈ ಬಾರಿ ಕೂಡ ಪೈಪೋಟಿ ಜೋರಾಗಿಯೇ ಇದೆ. ಇದರಲ್ಲಿ ಭಾರತದ 'RRR' ಸಿನಿಮಾ ಕೂಡ ಒಂದು ಕೆಟಗರಿಯಲ್ಲಿ ಸ್ಪರ್ಧೆಗಿಳಿದೆ. ಹಾಗೇ ಡಾಕ್ಯೂಮೆಂಟರಿ ಸೇರಿ ಇನ್ನು ಕೆಲವು ವಿಭಾಗಗಳಲ್ಲಿ ಸ್ಪರ್ಧೆಗಿಳಿದಿದೆ.

ಈ ಮಟ್ಟಿಗೆ ಜನಪ್ರಿಯವಾಗಿರೋ ಆಸ್ಕರ್ ಪ್ರಶಸ್ತಿ ಹಿನ್ನೆಲೆಯೇನು? ಈ ಪ್ರಶಸ್ತಿಗೆ ಆಸ್ಕರ್ ಅನ್ನೋ ಹೆಸರು ಬಂದಿದ್ದೇಗೆ? ಆಸ್ಕರ್ ಪ್ರಶಸ್ತಿಯ ಉದ್ದ, ತೂಕವೆಷ್ಟು? ಪ್ರಶಸ್ತಿಯನ್ನು ಡಿಸೈನ್ ಮಾಡುವುದು ಯಾರು? ಇದೂವರೆಗೂ ಎಷ್ಟು ಮಂದಿಗೆ ಆಸ್ಕರ್ ಪ್ರಶಸ್ತಿಯನ್ನು ನೀಡಲಾಗಿದೆ? ಇಂತಹ ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿಯಲು ಮುಂದೆ ಓದಿ.
ಅಕಾಡೆಮಿ ಪ್ರಶಸ್ತಿ 'ಆಸ್ಕರ್' ಅಂತ ಫೇಮಸ್ ಆಗಿದ್ದೇಗೆ?
1939ರವರೆಗೂ ಈ ಪ್ರಶಸ್ತಿಯ ಅಧಿಕೃತ ಹೆಸರು 'ಅಕಾಡೆಮಿ ಆವಾರ್ಡ್ ಆಫ್ ಮೆರಿಟ್' ಎಂದಾಗಿತ್ತು. ಆದರೆ, ವಿಶ್ವದಲ್ಲಿ ಈ ಪ್ರಶಸ್ತಿ 'ಆಸ್ಕರ್' ಪ್ರಶಸ್ತಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಆಗಿನ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸ್‌ನ ಲೈಬ್ರೆರಿಯನ್ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿದ್ದ ಮಾರ್ಗರೆಟ್ ಹೆರ್ರಿಕ್ ಕೊಟ್ಟ ಒಂದು ಹೇಳಿಕೆ 'ಆಸ್ಕರ್' ಎಂದು ಎಲ್ಲೆಡೆ ಫೇಮಸ್ ಆಯ್ತು. "ಅಕಾಡೆಮಿ ಪ್ರಶಸ್ತಿ ಪುತ್ಥಳಿ ನನ್ನ ಆಸ್ಕರ್ ಅಂಕಲ್ ಅನ್ನು ಹೋಲುತ್ತಿದೆ" ಎಂದು ಹೇಳಿಕೆ ನೀಡಿದ್ದರು.
1927ರಲ್ಲಿ 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸ್' ಸ್ಥಾಪನೆ ಮಾಡಲಾಗಿತ್ತು. ಆಗ ಅದ್ಭುತ ಟ್ರೋಫಿ ಕೊಡಬೇಕು ಎಂದು ನಿರ್ಧಾರಿಸಲಾಗಿತ್ತು. ಆಗ ಎಂಜಿಎಂ ಆರ್ಟ್ ಡೈರೆಕ್ಟರ್ ಸೆಡ್ರಿಕ್ ಗಿಬ್ಬನ್ಸ್ ಫಿಲ್ಮ್ ರೀಲ್‌ನಲ್ಲಿ ಕತ್ತಿ ಹಿಡಿದು ನಿಂತಂತೆ ವಿನ್ಯಾಸಗೊಳಿಸಲಾಗಿತ್ತು. ಬಳಿಕ ಲಾಸ್ ಎಂಜಲೀಸ್‌ನ ಶಿಲ್ಪಿ ಜಾರ್ಜ್ ಸ್ಟ್ಯಾನ್ಲಿ ಈ ಟ್ರೋಫಿಯ 3ಡಿ ವರ್ಷನ್ ವಿನ್ಯಾಸಗೊಳಿಸಿದ ಬಳಿಕ ಆಸ್ಕರ್ ಪ್ರಶಸ್ತಿ ಹೆಚ್ಚು ಜನಪ್ರಿಯವಾಯಿತು ಎಂದು 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸ್' ಹೇಳುತ್ತಿದೆ.

ಆಸ್ಕರ್ ಪ್ರಶಸ್ತಿ ಎತ್ತರ, ತೂಕವೆಷ್ಟು?
ಪ್ರತಿ ವರ್ಷ ಆಸ್ಕರ್ ಪ್ರಶಸ್ತಿಯ ವಿನ್ಯಾಸದಲ್ಲಿ ಸ್ವಲ್ಪ ಏನಾದರೂ ಬದಲಾವಣೆ ಮಾಡಿಕೊಳ್ಳಲಾಗುತ್ತೆ. ಅಮೆರಿಕದ ನ್ಯೂಯಾರ್ಕ್‌ನ ಹಡ್ಸನ್ ವ್ಯಾಲಿಯಲ್ಲಿರೋ ಪೋಲಿಚ್ ಟಾಲಿಕ್ಸ್ ಪ್ರತಿ ವರ್ಷ ಆಸ್ಕರ್ ಪ್ರಶಸ್ತಿಯನ್ನು ವಿನ್ಯಾಸಗೊಳಿಸುತ್ತೆ. ಮೂಲ ಪ್ರಶಸ್ತಿಯಷ್ಟೇ ಎತ್ತರ, ತೂಕವನ್ನು ಈ ಪ್ರಶಸ್ತಿ ಹೊಂದಿರುತ್ತೆ. ಅಂದ್ಹಾಗೆ ಆಸ್ಕರ್ ಪ್ರಶಸ್ತಿಯ ಎತ್ತರ 13½ ಇಂಚು ಇದ್ದು, ತೂಕ 8½ ಪೌಂಡ್‌ಗಳಷ್ಟು ಇದೆ.
ಇದೂವರೆಗೂ ಆಸ್ಕರ್ ಗೆದ್ದವರೆಷ್ಟು ಮಂದಿ?
ಆಸ್ಕರ್ ಪ್ರಶಸ್ತಿಯ ಕಂಚಿನ ಪ್ರತಿಮೆಯನ್ನು ಹೊಂದಿದ್ದು, ಅದಕ್ಕೆ 24 ಕ್ಯಾರೆಟ್‌ನ ಬಂಗಾರದ ಹೊದಿಕೆಯನ್ನು ಹೊದಿಸಲಾಗಿದೆ. ಹಲವು ವರ್ಷಗಳಿಂದ ಈ ಪ್ರಶಸ್ತಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ. ಇದೂವರೆಗೂ ಸುಮಾರು 3000ಕ್ಕೂ ಅಧಿಕ ಪ್ರತಿಭೆಗಳು ಹಾಗೂ ನಿರ್ಮಾಣ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
2023ರಲ್ಲೂ ಆಸ್ಕರ್ ಪ್ರಶಸ್ತಿಗೆ ಪೈಪೋಟಿ ಜೋರಾಗಿದೆ. ವಿಶೇಷ ಅಂದ್ರೆ, ಈ ಬಾರಿ ಭಾರತದಿಂದ ಒರಿಜಿನಲ್ ಸಾಂಗ್ ವಿಭಾಗದಲ್ಲಿ ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾದ "ನಾಟು ನಾಟು.." ಸಾಂಗ್ ಸ್ಪರ್ಧೆಯ ರೇಸ್‌ನಲ್ಲಿದೆ. ಹಾಗೇ 'ಆಲ್ ದೆಟ್ ಬ್ರೀಥ್ಸ್' ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್' ಡಾಕ್ಯೂಮೆಂಟರಿಗಳು ರೇಸ್‌ನಲ್ಲಿವೆ. ಮಾರ್ಚ್ 12ರಂದು ನಡೆಯಲಿರೋ ಪ್ರಶಸ್ತಿ ಸಮಾರಂಭದಲ್ಲಿ ಆಸ್ಕರ್ ಯಾರ ಮುಡಿಗೇರುತ್ತೆ? ಅನ್ನೋ ಕುತೂಹಲವಿದೆ.


Click it and Unblock the Notifications











