Oscars 2026: 'ಕಾಂತಾರ ಚಾಪ್ಟರ್ 1', 'ಮಹಾವತಾರ್ ನರಸಿಂಹ', 'ಹೋಮ್‌ಬೌಂಡ್' ಆಸ್ಕರ್ ಮಿಸ್ ಮಾಡ್ಕೊಂಡಿದ್ದೇಕೆ?
ಸಿನಿಮಾ ಕ್ಷೇತ್ರಕ್ಕೆ ನೀಡಲಾಗುವ ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಭಾರತಕ್ಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ವಿಶ್ವದಲ್ಲಿ ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವ ಚಿತ್ರರಂಗಕ್ಕೆ ಆಸ್ಕರ್ ಇನ್ನೂ ದೂರದ ಮಾತಾಗಿದೆ. ವಿಶ್ವದ ಬೇರೆ ಬೇರೆ ದೇಶದ ಸಿನಿಮಾಗಳಿಗೆ ಪೈಪೋಟಿ ಕೊಡುವುದಕ್ಕೆ ಪರದಾಡುತ್ತಿದೆ. ಪ್ರತಿವರ್ಷ ಒಂದೇ ಒಂದು ಸಿನಿಮಾ ಆಯ್ಕೆ ಆಗುವುದಕ್ಕೆ ವಿಫಲವಾಗುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಆಸ್ಕರ್ ಪ್ರಶಸ್ತಿಗೆ ಭಾರತದ ಸಿನಿಮಾಗಳು ಎಂಟ್ರಿ ಕೊಟ್ಟಿದ್ದವು. ಅದರಲ್ಲಿ 'ಹೋಮ್‌ಬೌಂಡ್' ಸಿನಿಮಾ ಭಾರತದಿಂದ ಆಸ್ಕರ್ ಅಂಗಳಕ್ಕೆ ಹೋಗಿದ್ದ ಅಧಿಕೃತ ಸಿನಿಮಾ ಆಗಿತ್ತು. ನೀರಾಜ್ ಘೈವಾನ್ ನಿರ್ದೇಶನದ ಈ ಸಿನಿಮಾ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಹೀಗಾಗಿ ಈ ಸಿನಿಮಾ ಮೇಲೆ ಭಾರತೀಯ ಚಿತ್ರರಂಗಕ್ಕೆ ನಂಬಿಕೆ ಇತ್ತು.

ಇನ್ನು 'ಹೋಮ್‌ಬೌಂಡ್' ಸಿನಿಮಾ ಜೊತೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್ 1', 'ಮಹಾವತಾರ್ ನರಸಿಂಹ' ಹಾಗೂ 'ತನ್ವಿ ದಿ ಗ್ರೇಟ್' ಸಿನಿಮಾಗಳು ಕೂಡ ಆಸ್ಕರ್ ಪ್ರಶಸ್ತಿ ಕನಸು ಹೊತ್ತು ನಾಮಿನೇಷನ್‌ಗೆ ಅರ್ಜಿಯನ್ನು ಹಾಕಿದ್ದವು. ಆದರೆ, ಈ ಎಲ್ಲಾ ಸಿನಿಮಾಗಳು ಕೂಡ ಆಸ್ಕರ್ ನಾಮಿನೇಷನ್‌ಗೆ ಆಯ್ಕೆ ಆಗುವಲ್ಲಿ ವಿಫಲವಾಗಿವೆ.
ಆಸ್ಕರ್‌ಗೆ ಒಂದೇ ಒಂದು ಸಿನಿಮಾ ಆಯ್ಕೆ ಆಗದೇ ಇರುವುದು ವಿಶ್ವ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ ಆದಂತಾಗಿದೆ. ಈ ಬಾರಿ ಕೂಡ ಭಾರತದ ಪ್ರಾದೇಶಿಕ ಸಿನಿಮಾಗಳು ಆಸ್ಕರ್‌ಗೆ ಲಗ್ಗೆ ಇಟ್ಟಿದ್ದವು. ಒಂದು ವೇಳೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಇವುಗಳಲ್ಲಿ ಒಂದು ಸಿನಿಮಾ ಆಯ್ಕೆಯಾಗಿದ್ದರೂ ಭಾರತದ ಫಿಲ್ಮ್ ಮೇಕರ್ಸ್‌ಗೆ ಸಮಾಧಾನ ಆಗುತ್ತಿತ್ತು. ಆದ್ರೀಗ ಒಂದು ಸಿನಿಮಾನೂ ಪಟ್ಟಿಯಲ್ಲಿ ಇಲ್ಲದೇ ಇರೋದು ನಿರಾಸೆ ತಂದಿದೆ.
ಈ ಬಾರಿ ಆಸ್ಕರ್‌ನಲ್ಲಿ ರಾಯನ್ ಕೂಗ್ಲರ್ ನಿರ್ದೇಶಿಸಿದ 'ಸಿನ್ನರ್ಸ್' ಸಿನಿಮಾ ಅತೀ ಹೆಚ್ಚು ವಿಭಾಗಗಳಲ್ಲಿ ಕಾಂಪಿಟೇಷನ್ ಮಾಡುತ್ತಿದೆ. ಸುಮಾರು 16 ಕ್ಯಾಟಗರಿಯಲ್ಲಿ ಈ ಸಿನಿಮಾ ಪೈಪೋಟಿ ಮಾಡುತ್ತಿದೆ. ಈ ಬಾರಿ ಅತೀ ಹೆಚ್ಚು ಚರ್ಚೆಯಲ್ಲಿ ಇರುವ ಸಿನಿಮಾವಿದು. ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಬೆಂಬಲಿಸಿದ 'ಹೋಮ್‌ಬೌಂಡ್'ಗೆ ಉತ್ತಮ ವಿಮರ್ಶೆ ವ್ಯಕ್ತವಾಗಿತ್ತು. ಇಶಾನ್ ಕಟ್ಟರ್, ವಿಶಾಲ್ ಜೇತ್ವಾ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಅಷ್ಟಕ್ಕೂ ಭಾರತದ ನಾಲ್ಕು ಸಿನಿಮಾಗಳೂ ಆಸ್ಕರ್ ಅನ್ನು ಮಿಸ್ ಮಾಡಿಕೊಂಡಿದ್ದು ಯಾಕೆ? ವಿಶ್ಲೇಷಕರು ಹಲವು ಕಾರಣಗಳಲ್ಲಿ ಪಟ್ಟಿ ಮಾಡುತ್ತಾರೆ. ಅದರಲ್ಲಿ ಪ್ರಮುಖವಾದದ್ದು ವಿಶ್ವದಲ್ಲಿ ಆಸ್ಕರ್ ಪ್ರಶಸ್ತಿಗೆ ಕಾಂಪಿಟೇಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸುಮಾರು 80ಕ್ಕೂ ಅಧಿಕ ದೇಶಗಳು ಆಸ್ಕರ್ ಪ್ರಶಸ್ತಿಗೆ ಪೈಪೋಟಿ ನಡೆಸುತ್ತವೆ. ಇದರಲ್ಲಿ ಭಾರತೀಯ ಸಿನಿಮಾಗಳು ಕಾದಾಟಕ್ಕೆ ಇಳಿಯಬೇಕಿದೆ. ಭಾರತದ ಸಿನಿಮಾ 'ಹೋಮ್‌ಬೌಂಡ್' ಆಸ್ಕರ್ ಪ್ರಶಸ್ತಿಯ ಟಾಪ್ 15 ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೊನೆಯ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಹಿಂದೆ ಬಿದ್ದಿದೆ.

ಇನ್ನೊಂದು ಪ್ರಮುಖ ಕಾರಣ ಅಮೆರಿಕದಲ್ಲಿ ಭಾರತದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಿಲ್ಲ. ಹಾಲಿವುಡ್ ಸಿನಿಮಾಗಳು ಸದ್ದು ಮಾಡುವಷ್ಟು ಗದ್ದಲ ಎಬ್ಬಿಸಿದರೆ, ಆಸ್ಕರ್ ಜ್ಯೂರಿಗಳ ಗಮನ ಸೆಳೆಯುತ್ತೆ ಅನ್ನೋದು ಇನ್ನೊಂದು ವಾದ. ಸಿನಿಮಾ ಚೆನ್ನಾಗಿದ್ದರೂ ಪಬ್ಲಿಸಿಟಿ, ಹಾಲಿವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡುವಲ್ಲಿ ಭಾರತದ ಸಿನಿಮಾಗಳು ಹಿಂದೆ ಬೀಳುತ್ತವೆ. ಹೀಗಾಗಿ ನಾಮಿನೇಷನ್‌ವರೆಗೂ ಬರಲು ಸಾಧ್ಯವಾಗುತ್ತಿಲ್ಲ.
ಮೂರನೇ ಪ್ರಮುಖ ಕಾರಣವೆಂದರೆ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಹಾಗೂ ಸೈನ್ಸ್‌ನ ಸದಸ್ಯರ ಗಮನ ಸೆಳೆಯುವುದಕ್ಕೆ ಸಾಕಷ್ಟು ಖರ್ಚು ಮಾಡಬೇಕು. ಹಾಲಿವುಡ್‌ನಲ್ಲಿ ಕೋಟಿ ಲೆಕ್ಕದಲ್ಲಿ ಹಣವನ್ನು ಸುರಿದು ಸಿನಿಮಾ ಬಗ್ಗೆ ಪ್ರಚಾರವನ್ನು ಮಾಡಬೇಕು. ಸದಸ್ಯರ ಗಮನವನ್ನು ಸೆಳೆಯಬೇಕು. ವಿಶ್ವದ ದೊಡ್ಡ ನಿರ್ಮಾಣ ಸಂಸ್ಥೆಗಳು ಹಣ ಖರ್ಚು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಭಾರತ ನಿರ್ಮಾಣ ಸಂಸ್ಥೆಗಳು ಇಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಇಂತಹ ಇನ್ನೂ ಹಲವು ಕಾರಣಗಳಿಂದ ಭಾರತಕ್ಕೆ ಆಸ್ಕರ್ ಮಿಸ್ ಆಗುತ್ತಿದೆ ಎಂದು ಸಿನಿಮಾ ಮಂದಿ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











