ಸ್ಟಾರ್ಸ್ ಬೇಡ.. ಸೆಟ್ ಬೇಡ.. ಕಥೆ ಇದ್ದರೆ ಸಾಕು: 'AI' ಸೃಷ್ಟಿಸಿದ ಮೊದಲ ಸಿನಿಮಾದ ಟ್ರೈಲರ್ ಹೇಗಿದೆ ನೋಡಿ!
Artificial Intelligence ಅಥವಾ ಕೃತಕ ಬುದ್ದಿಮತ್ತೆ ಚಿಕ್ಕದಾಗಿ 'AI' ಅಂತ ಹೇಳುವ ಈ ತಂತ್ರಜ್ಞಾನ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನ್ಯೂಸ್ ಚಾನೆಲ್‌ಗಳು ಇದೇ ತಂತ್ರಜ್ಞಾನವನ್ನು ಬಳಸಿ ಕೃತಕ ನಿರೂಪಕಿಯನ್ನು ಸೃಷ್ಟಿಸಿ ನಿರೂಪಣೆಯನ್ನು ಮಾಡಿಸಿದ್ದರು.
'AI' ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ವೇಗವಾಗಿ ಕಾಲಿಡುತ್ತಿದೆ. ಈಗಾಗಲೇ ಈ ತಂತ್ರಜ್ಞಾನ ಹಲವರ ಉದೋಗ್ಯಕ್ಕೆ ಕುತ್ತು ತರಬಹುದು ಎಂದು ಅಂದಾಜು ಹಾಕಲಾಗಿದೆ. ಈ ಮೂಲಕ ನಿರುದ್ಯೋಗ ಸಮಸ್ಯೆ ಹೆಚ್ಚಾಗಬಹುದೆಂಬ ಆತಂಕವೂ ಎಲ್ಲ ಕಡೆ ಹೆಚ್ಚಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ, ಐಟಿ ಬಿಟಿಗಳಲ್ಲಿ, ಮಾಧ್ಯಮ ಲೋಕದಲ್ಲಿ 'AI' ಅಲ್ಲೋಲ ಕಲ್ಲೋಕ ಸೃಷ್ಟಿಸಬಹುದು ಎಂದು ಅಂದಾಜಿಸಲಾಗಿದೆ.

ಆದರೆ, ಕ್ರಿಯೇಟಿವ್ ಫೀಲ್ಡ್‌ನಲ್ಲಿ 'AI' ಚಮತ್ಕಾರ ನಡೆಯೋದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಹಾಗಂದುಕೊಂಡಿದ್ದೆಲ್ಲ ಸುಳ್ಳು ಎಂದು ಸಾಬೀತಾಗಿದೆ. ಇದೇ ತಂತ್ರಜ್ಞಾನವನ್ನು ಬಳಸಿ ಸಿನಿಮಾವನ್ನು ಮಾಡಬಹುದು ಎಂಬುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಅಂದರೆ, 'AI' ಬಳಸಿಕೊಂಡು ಸಿನಿಮಾವೊಂದರ ಟ್ರೈಲರ್ ಸೃಷ್ಟಿಸಲಾಗಿದೆ. ಅದುವೇ 'ಜೆನೆಸಿಸ್'.. ಈ ಸಿನಿಮಾದ ಟ್ರೈಲರ್ ನೋಡಿ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.
'AI' ಸೃಷ್ಟಿಸಿದ ಮೊದಲ ಸಿನಿಮಾ 'ಜೆನೆಸಿಸ್'
ಕೆಲವೇ ದಿನಗಳಲ್ಲಿ 'AI' ವಿಶ್ವದ ಮೂಲೆ ಮೂಲೆಯನ್ನೂ ಆವರಿಸಿಕೊಳ್ಳಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹಸ್ತಕ್ಷೇಪ ಮಾಡುತ್ತೆ. ಮನುಷ್ಯರಿಗಿಂತ ವೇಗವಾಗಿ ಕೆಲಸ ಮಾಡುತ್ತೆ. ಪ್ರತಿಯೊಂದು ಹಂತದಲ್ಲೂ ಮಾನವನ್ನು ಸೋಲಿಸುತ್ತಾ ಮುಂದೆ ಸಾಗುತ್ತೆ. ಅದರಲ್ಲೂ ತಂತ್ರಜ್ಞಾನ ಅವಲಂಬಿತ ಕ್ಷೇತ್ರದಲ್ಲಿ 'AI' ಅಧಿಪತ್ಯ ಸಾಧಿಸಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಇದು ಸಾಧ್ಯವೇ? ಎಂಬ ಪ್ರಶ್ನೆ ಎದ್ದಿತ್ತು. ಈಗ ಅಲ್ಲಿಗೂ ಲಗ್ಗೆ ಇಟ್ಟಿದೆ. ಜರ್ಮನಿಯ ಟೆಕ್ಕಿಯೊಬ್ಬ 'AI' ಬಳಸಿ 'ಜೆನೆಸಿಸ್' ಅನ್ನೋ ಸಿನಿಮಾದ ಟ್ರೈಲರ್ ಅನ್ನು ನಿರ್ಮಿಸಿದ್ದಾನೆ. ಇದು ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸುತ್ತಿದೆ.
ಸಿನಿಮಾ ನಿರ್ಮಿಸಿದವರು ಯಾರು?
'ಜೆನೆಸಿಸ್' ವಿಶ್ವದ ಮೊಟ್ಟ ಮೊದಲ 'AI' ಜೆನೆರೇಟೆಡ್ ಸಿನಿಮಾದ ಟ್ರೈಲರ್ ಎಂದು ಹೇಳಲಾಗುತ್ತಿದೆ. ನಿಕೊಲಸ್ ನ್ಯೂಬರ್ಟ್ ಎಂಬ ಜರ್ಮನಿಯ ಟೆಕ್ಕಿ ಈ ಟ್ರೈಲರ್ ಅನ್ನು ನಿರ್ಮಾಣ ಹೊರತಂದಿದ್ದಾರೆ. ಈತ ಜರ್ಮಿನಿಯ ಪೋಕ್ಸ್‌ವೇಗನ್ ಕಾರು ಕಂಪನಿ ಒಡೆತನದ ಎಲಿ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡೆಕ್ಟ್ ಡಿಸೈನರ್. 'AI' ಟೂಲ್ ಅನ್ನು ಬಳಿಸಿ 'ಜೆನೆಸಿಸ್' ಅನ್ನೋ ಸಿನಿಮಾದ ಟ್ರೈಲರ್ ಅನ್ನು ಹೊರತಂದಿದ್ದಾರೆ. ಇದು ವಿಶ್ವದೆಲ್ಲಡೆ ಚರ್ಚೆಯಾಗುತ್ತಿದೆ.
ಸ್ಟಾರ್ಸ್‌ಗೆ, ತಂತ್ರಜ್ಞರಿಗೆ ಹೆಚ್ಚಿತು ಆತಂಕ
'ಜೆನೆಸಿಸ್' ಟ್ರೈಲರ್ ಯಾವುದೇ ಹಾಲಿವುಡ್ ಸಿನಿಮಾಗೂ ಕಮ್ಮಿಯಿಲ್ಲ. 48 ಸೆಕೆಂಡುಗಳ ಈ 'ಜೆನೆಸಿಸ್' ಟ್ರೈಲರ್ ಸಿನಿಮಾ ಮಂದಿಯ ನಿದ್ದೆ ಕೆಡಿಸಿದೆ. ಕೆಲವೇ ಗಂಟೆಗಳಲ್ಲಿ ಹೀಗೆ ಅದ್ಭುತವಾಗಿ ಟ್ರೈಲರ್ ಮಾಡಬಹುದು ಎಂದಾದರೆ, ಇಡೀ ಸಿನಿಮಾ ಮಾಡುವುದಕ್ಕೆ ಹೆಚ್ಚು ಸಮಯವೇನು ಹಿಡಿಯುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಲಾವಿದರು ಬೇಕಿಲ್ಲ. ದುಬಾರಿ ಸಂಭಾವನೆ ಕೊಡಬೇಕಿಲ್ಲ. ತಂತ್ರಜ್ಞರ ಅಗತ್ಯವಿಲ್ಲ. ಸೆಟ್ ಬೇಕಿಲ್ಲ. ಹೀಗಾಗಿ 'AI' ಸಿನಿಮಾ ರಂಗದಲ್ಲೂ ಹಲವರ ಉದ್ಯೋಗ ಕಿತ್ತುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಹಾಲಿವುಡ್‌ನಲ್ಲಿ ನಡೆದಿತ್ತು ಪ್ರತಿಭಟನೆ
ಕೆಲವೇ ದಿನಗಳ ಹಿಂದಷ್ಟೇ ಹಾಲಿವುಡ್ ಹಾಗೂ ಟಿವಿ ಶೋಗಳ ಲೇಖಕರು ಪ್ರತಿಭಟನೆ ನಡೆಸಿದ್ದರು. ಸಂಭಾವನೆಯ ಬೇಡಿಕೆ ಜೊತೆಗೆ 'AI' ತಂತ್ರಜ್ಞನವನ್ನು ಬಳಸದಂತೆ ವಿರೋಧ ಮಾಡಿದ್ದರು. ಈಗ 'ಜೆನೆಸಿಸ್' ಸಿನಿಮಾ ಕೇವಲ ಲೇಖಕರಿಗಷ್ಟೇ ಅಲ್ಲ, ಕಲಾವಿದರು, ತಂತ್ರಜ್ಞನರ ಎದೆ ಬಡಿತವನ್ನೂ ಹೆಚ್ಚಿಸಿದೆ. ಸದ್ಯ ಇದು ಹಾಲಿವುಡ್ ಲೆವೆಲ್‌ನಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟರೂ ಇಡಬಹುದು.


Click it and Unblock the Notifications











