ಅಪ್ಪಟ ಬೆಂಗಳೂರಿನ ಹುಡುಗನಿಗೆ ಆಸ್ಕರ್ ಗೆಲ್ಲುವ 'ಆಸೆ'; ಈ ನಟನ ಹಿನ್ನೆಲೆಯೇನು ಗೊತ್ತೇ?
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಯುವ ಅಶ್ರಿತ್ ವಿಶ್ವನಾಥ್. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಆಸೆ' ಧಾರಾವಾಹಿಯಲ್ಲಿ ರವಿ ಎನ್ನುವ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪ್ರಸ್ತುತ ರಮೇಶ್ ಅರವಿಂದ್ ನಿರ್ಮಿಸಿರುವ 'ಆಸೆ' ಧಾರಾವಾಹಿಯಲ್ಲಿ ವೀಕ್ಷಕರ ಮನಸ್ಸು ಕದ್ದಿದ್ದಾರೆ.
ಇನ್ನು ಅಶ್ರಿತ್ ವಿಶ್ವನಾಥ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದಾರೆ. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹೀಗಾಗಿ ಸೀರಿಯಲ್, ಸಿನಿಮಾ ಇಂಡಸ್ಟ್ರಿಗೆ ಕಾಲಿಡುವುದಕ್ಕೂ ಮುನ್ನ ನಾಟಕಗಳಲ್ಲಿ ಅಭಿನಯ ಕಲಿತು, ಒಂದಿಷ್ಟು ತಯಾರಿಯನ್ನು ಮಾಡಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ನಟ ಕೀರ್ತಿ ಬಾನು ಅವರ ಸಂಚಯ ಥಿಯೇಟರ್ ಗ್ರೂಸ್‌ನಲ್ಲಿ ಪಳಗಿದ ಬಳಿಕ ಸಿನಿಮಾ ಎಂಟ್ರಿ ಕೊಟ್ಟಿದ್ದಾರೆ. ಇವರ ಮೊದಲ ಧಾರಾವಾಹಿ 'ಪಾರು'. ತನ್ನ ನಟನಾ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ನಿಮ್ಮ ಹುಟ್ಟೂರು ಯಾವುದು? ನಟನೆ ನಂಟು ಹೇಗೆ ಬೆಳೀತು?
"ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಲ್ಲೇ. ನನಗೆ ಕಾಡುತ್ತಿದ್ದಿದ್ದು ಏನು ಅಂತೆ ಅಮ್ಮ ಅಪ್ಪನ ಕಡೆಯವರು ಇಬ್ಬರೂ ಬೆಂಗಳೂರಿನವರೇ. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನೋಡಿ ಹೊರ ಬರಬೇಕಾದರೆ, ಆ ಹೀರೋ ಫೀಲ್ ಇರೋದು ಅಷ್ಟೆ. ಹೈಸ್ಕೂಲ್‌ಗೆ ಬರುವ ಹೊತ್ತಿಗೆ ಹೀರೋ ಆಗಬೇಕು ಅಂತೇನು ಇರಲಿಲ್ಲ. ಡಾಕ್ಟರ್ ಆಗಬೇಕು ಅಂತ ಇದ್ದೆ. ಅಮ್ಮ ಡಾಕ್ಟರ್ ಆಗು ಅಂದರೆ, ಅಪ್ಪ ಇಂಜಿನಿಯರ್ ಆಗು ಅಂದರು. ಕೊನೆಗೂ ಇಂಜಿಯರಿಂಗ್‌ಗೆ ಎಂಟ್ರಿ ಕೊಟ್ಟು ಓದುತ್ತಿರುವಾಗ ಸ್ನೇಹಿತರು ಶಾರ್ಟ್ ಫಿಲ್ಮ್ ಮಾಡುತ್ತಿದ್ದರು. ಆಗ ಅದರಲ್ಲಿ ಆಕ್ಟ್ ಮಾಡಿದ್ದೆ. ಆಗ ನಾನೂ ನಟನೆ ಮಾಡಬಹುದಲ್ಲ ಅಂತ ಅನಿಸಿತ್ತು. ಯಾಕಂದ್ರೆ ಮನೆಯವರು ಯಾರೂ ಆಕ್ಟಿಂಗ್ ಫೀಲ್ಡ್‌ನಲ್ಲಿ ಇರಲಿಲ್ಲ.ಇಂಜಿನಿಯರಿಂಗ್ ಕೊನೆ ವರ್ಷದಲ್ಲಿರುವಾಗಿನಿಂದ ನಟನೆ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಯ್ತು."
ಸೀರಿಯಲ್‌ಗಳಿಗೆ ಅವಕಾಶ ಸಿಕ್ಕಿದ್ದೇಗೆ?
"ಇಂಜಿಯರಿಂಗ್ ಮುಗಿದಾಗ ಮುಂದೆ ಏನು ಮಾಡುತ್ತೀಯಾ ಅನ್ನೋ ಪ್ರಶ್ನೆ ಬಂತು. ಆಗ ನಾನು ಆಕ್ಟರ್ ಆಗಬೇಕು ಅಂತ ಹೇಳಿದೆ. ಆಕ್ಟರ್ ಕೀರ್ತಿ ಬಾನು ಇದ್ದಾರಲ್ಲ ಅವರು ನಮ್ಮ ಅಂಕಲ್ ಅವರ ಸ್ನೇಹಿತರು. ಅವರದ್ದು ಸಂಚಯ ಎನ್ನುವ ಥಿಯೇಟರ್ ಗ್ರೂಪ್ ಇದೆ. ನೀನು ಹೋಗಿ ಅಲ್ಲಿ ಕಲಿತುಕೋ ಎಂದು ಕಳಿಸಿದರು. ಅಲ್ಲಿ ನಾಟಕ ಎಲ್ಲಾ ಹಂತಗಳನ್ನು ನೋಡಿದಾಗ ನನಗೆ ಇಷ್ಟ ಆಗುವುದಕ್ಕೆ ಶುರುವಾಗಿತ್ತು. ಹಾಗೇ ನಾನು ಆಡಿಷನ್‌ಗಳನ್ನು ಕೊಡುವುದಕ್ಕೆ ಶುರು ಮಾಡಿದೆ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎನ್ನುವ ಗುರಿ ಇತ್ತು ಆದರೆ, ಕಲಿಯುವುದಕ್ಕಂತ ನಾಟಕಕ್ಕೆ ಹೋಗಿದ್ದೆ."

ನಿಮ್ಮ ಜರ್ನಿ ಶುರುವಾಗಿದ್ದೇಗೆ?
"ನನ್ನ ಮೊದಲ ಸೀರಿಯಲ್ ಪಾರು. ಅದಾದ್ಮೇಲೆ ಸಿನಿಮಾದಲ್ಲೂ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಹೊಂದಿಸಿ ಬರೆಯಿರಿ, ಯೆಲ್ಲೋ ಬೋರ್ಡ್ ಅಂತಹ ಸಿನಿಮಾಗಳನ್ನು ಮಾಡಿದೆ. ಆ ಸಿನಿಮಾಗಳಲ್ಲಿ ನನಗೆ ಸ್ಕ್ರೀನ್ ಸ್ಪೇಸ್ ಸಿಗಲಿಲ್ಲ. ಆಮೇಲೆ ಕುಳ್ಳನ ಹೆಂಡ್ತಿ ಅಂತ ಒಂದು ಸಿನಿಮಾದಲ್ಲಿ ಲೀಡ್ ಆಗಿ ನಟಿಸಿದೆ. ಅದಾದ್ಮೇಲೆ ಸೀರಿಯಲ್‌ಗಳನ್ನು ಮಾಡುತ್ತಿದ್ದೇನೆ."
'ಆಸೆ' ಧಾರಾವಾಹಿಯಲ್ಲಿ ನಿಮ್ಮ ಪಾತ್ರವೇನು?
"ಆಸೆ ಸೀರಿಯಲ್‌ನಲ್ಲಿ ನನ್ನ ಪಾತ್ರ ನ್ಯೂಟ್ರಲ್ ಆಗಿರುತ್ತೆ. ಅಂದರೆ, ಆ ಕಡೆ ಸೂರ್ಯ ನೋಡಿದರೆ ಪಾಸಿಟಿವ್. ಅವನು ಕಿರಿಕ್ ಮಾಡಬಹುದು. ಆದರೆ ಒಳ್ಳೆಯದಕ್ಕೆ ಮಾಡುತ್ತಾನೆ. ಇನ್ನು ಮನೋಜ ಅವನು ಮಾಡುವುದೇ ನೆಗೆಟಿವ್ ಕೆಲಸಗಳು ಜಾಸ್ತಿ. ನನ್ನದು ಬ್ಯಾಲೆನ್ಸ್ ಮಾಡುವ ಕೆಲಸ. ಒಳ್ಳೆಯದ್ದನ್ನು ಒಳ್ಳೆಯದು ಹಾಗೂ ಕೆಟ್ಟದನ್ನು ಕೆಟ್ಟದು ಅಂತ ಹೇಳೋನು. ರವಿ (ಅಶ್ರಿತ್ ಪಾತ್ರದ ಹೆಸರು) ಲಾಜಿಕ್ ಆಗಿ ಮಾತಾಡುತ್ತಾನೆ. ನನಗೆ ರವಿಯದ್ದು ಬ್ಯಾಲೆನ್ಸ್ ಇರುವ ಪಾತ್ರ ಅನಿಸುತ್ತೆ."
ಆಸೆ ಧಾರಾವಾಹಿಯ ಹೈಲೈಟ್ ಏನು?
"ಮಧ್ಯಮ ವರ್ಗದ ಜೀವನ ಹೇಗಿರುತ್ತೋ ಹಾಗೆ ಆಸೆ ಧಾರಾವಾಹಿ ಇರುತ್ತೆ. ಏನೋ ದೊಡ್ಡಾಗಿ ತೋರಿಸುತ್ತಿಲ್ಲ. ಇಲ್ಲ ಕಮ್ಮಿ ಮಾಡಿ ತೋರಿಸುತ್ತಿಲ್ಲ. ಅವರ ಜೀವನದಲ್ಲಿ ಏನು ಆಗುತ್ತಿದೆಯೋ ಅದನ್ನೇ ಹಾಗೇ ತೋರಿಸುತ್ತಿದ್ದೇವೆ. ಆಸೆ ಸೀರಿಯಲ್ ಇದು ಸಾಮಾನ್ಯ ಜನರ ಮಿರರ್ ಇದ್ದಂತೆ. ಅದಕ್ಕೆ ಆಸೆಗೆ ದೊಡ್ಡ ಸಕ್ಸಸ್ ಸಿಕ್ಕಿದೆ ಅನಿಸುತ್ತೆ."
ನಿರ್ಮಾಪಕರಾಗಿ ರಮೇಶ್ ಅರವಿಂದ್ ಹೇಗೆ?
"ರಮೇಶ್ ಅರವಿಂದ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ನಾನು ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸುಂದರಿನೂ ಅವರದ್ದೇ ಆಗಿತ್ತು. ಆಸೆನೂ ಅವರದ್ದೇ. ನಮಗೆ ಏನಕ್ಕೂ ಕಮ್ಮಿ ಮಾಡಲ್ಲ. ಪೇಮೆಂಟ್ ಆಗಿರಲಿ, ಟ್ರೀಟ್ಮೆಂಟ್ ಆಗಿರಲಿ ಎಲ್ಲವೂ ಪರ್ಫೆಕ್ಟ್ ಆಗಿರುತ್ತೆ."
ಪರಭಾಷೆಯಲ್ಲಿ ಆಫರ್ ಸಿಕ್ಕರೆ ಹೋಗ್ತೀರಾ?
"ಕಲೆಗೆ ಭಾಷೆಯ ಅಡೆತಡೆ ಇರಬಾರದು. ನನಗೆ ಆಕ್ಟಿಂಗ್ ಮಾಡುವುದಕ್ಕೆ ಇಷ್ಟ. ನನಗೆ ಕನ್ನಡದಲ್ಲಿಯೇ ಕೆಲಸ ಮಾಡುವುದಕ್ಕೆ ಇಷ್ಟವಿದೆ. ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ನನ್ನ ಮುಖ್ಯ ಗುರಿ. ನಾನೇ ಒಂದು ಸ್ಟೋರಿ ಬರೆದು ಡೈರೆಕ್ಷನ್ ಆದರೂ ಮಾಡಬಹುದು. ಹಾಗೇ ಪ್ರಮುಖ ಪಾತ್ರದಲ್ಲಿ ನಟಿಸಬೇಕು ಅಂತಾನೂ ಆಸೆಯಿದೆ."

ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ?
"ಕುಳ್ಳನ ಹೆಂಡ್ತಿ ಸಿನಿಮಾ ಮಾಡಿದಾಗ ನಾನೊಂದು ನಂಬಿಕೆಯಲ್ಲಿದ್ದೆ. ಹೆಚ್ಚೆಚ್ಚು ಅವಕಾಶಗಳು ಸಿಗಬಹುದು ಅಂತ. ಅದು ವರ್ಕ್ ಆಗಲಿಲ್ಲ. ಸಿನಿಮಾ ಇಂಡಸ್ಟ್ರಿಯನ್ನು ರೀಚ್ ಆಗುವುದು ಅಷ್ಟು ಸುಲಭ ಇರಲಿಲ್ಲ. ಪ್ರಡ್ಯೂಸರ್ ಅನ್ನು ಒಪ್ಪಿಸಿ ಸಿನಿಮಾ ಮಾಡುವುದು ಅಷ್ಟು ಸುಲಭಕ್ಕೆ ಆಗಲ್ಲ. ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಸ್ನೇಹಿತರು ಇದ್ದೀವಿ. ನಾವೆಲ್ಲ ಕೂತು ಒಂದು ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತೇವೆ. ಒಳ್ಳೆಯ ಸ್ನೇಹಿತರು ಸಿಕ್ಕರೆ ಕತೆ ಹೇಳಿ ಸಿನಿಮಾ ಮಾಡೋಣ ಅಂತ ಇದ್ದೇವೆ."
ನಿಮ್ಮ 'ಆಸೆ' ಏನು?
"ಆಸ್ಕರ್ ಗೆಲ್ಲಬೇಕು. ಅದನ್ನು ಭಾರತಕ್ಕೆ ತೆಗೆದುಕೊಂಡು ಬರಬೇಕು ಅಂತ ಆಸೆಯಿದೆ." ಎನ್ನುತ್ತಾ ಆಸೆ ಧಾರಾವಾಹಿಯ ಅಶ್ರಿತ್ ವಿಶ್ವನಾಥ್.


Click it and Unblock the Notifications











