ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?
'ಅಭಿನೇತ್ರಿ' ಚಿತ್ರದಲ್ಲಿ ಮಿನುಗುತಾರೆ ಕಲ್ಪನಾ ಮತ್ತು ಪುಟ್ಟಣ್ಣ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಅಂತ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅದಕ್ಕೆ ತಕ್ಕಂತೆ ಕೆಲ ಫೋಟೋಗಳನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಹಾಗಾದ್ರೆ, ಅಭಿನೇತ್ರಿದಲ್ಲಿ ಚಿತ್ರಬ್ರಹ್ಮ ಮತ್ತು ಮಿನುಗುತಾರೆಯನ್ನ ಅವಮಾನಿಸಲಾಗಿದ್ಯಾ..? 'ಫಿಲ್ಮಿಬೀಟ್ ಕನ್ನಡ'ಗೆ ನೀಡಿರುವ ಸಂರ್ದಶನದಲ್ಲಿ ಪೂಜಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನ ಮೊದಲನೆಯ ಪುಟದಿಂದ ಮುಂದುವರಿದ ಭಾಗ......
* ಹಾಗಾದ್ರೆ ಕಲ್ಪನಾ ಬಗ್ಗೆ ಪೂಜಾಗೆ ಎಷ್ಟು ಗೊತ್ತು..? ಅವರ ಯಾವ್ಯಾವ ಚಿತ್ರಗಳನ್ನ ನೀವು ನೋಡಿದ್ದೀರಾ..?
- ಕಲ್ಪನಾ ಅಭಿನಯದ ಅನೇಕ ಚಿತ್ರಗಳನ್ನ ನೋಡಿದ್ದೀನಿ. ಅದ್ರಲ್ಲಿ ನನಗೆ ಫೇವರೇಟ್ ಅಂದ್ರೆ ಶರಪಂಜರ, ಎರಡು ಕನಸು, ಕಪ್ಪು ಬಿಳುಪು, ಬಯಲುದಾರಿ....

* ಕಲ್ಪನಾ ಸಿನಿಮಾ ಕಥೆಯನ್ನ ಚಿತ್ರದಲ್ಲಿ ತೋರಿಸುತ್ತೀರಾ...ಅದು ಸರಿ...ಆದ್ರೆ ಅವರ ನಿಜ ಜೀವನದ ದುರಂತ ಕಥೆಯನ್ನ ವೈಭವೀಕರಿಸುವುದು ಎಷ್ಟು ಸರಿ..?
- ಕಲ್ಪನಾ ಕಥೆ ಮಾತ್ರವಲ್ಲ. ಇಡೀ ಸಿನಿಮಾ ಅವರ ಬಗ್ಗೆ ಮಾತ್ರ ಮಾಡಿಲ್ಲ. ಕಾಲ್ಪನಿಕ ಕಥೆ ಮಾದರಿಯಲ್ಲೇ ಕೆಲ ತುಣುಕುಗಳು ಇಲ್ಲಿ ಬಂದು ಹೋಗಿವೆ. ಕಲ್ಪನಾ ಬಗ್ಗೆ ನನಗೆ ತುಂಬಾ ಗೌರವ ಇದೆ. ಕಲ್ಪನಾಗೆ ಹ್ಯಾಟ್ಸ್ ಆಫ್ ಹೇಳಬೇಕು. ಕಷ್ಟಪಟ್ಟು ದೊಡ್ಡ ನಟಿಯಾಗಿ ಬೆಳದವರು ಅವರು. ಅವರ ಪರ್ಫಾಮೆನ್ಸ್ ಅಷ್ಟನ್ನ ಮಾತ್ರ ನಾವು ಚಿತ್ರದಲ್ಲಿ ತೋರಿಸಿದ್ದೇವೆ. ಯಾರಿಗೂ ಇಲ್ಲಿ ಅವಮಾನ ಮಾಡಿಲ್ಲ.
* ಹಾಗಾದ್ರೆ ಈಗಾಗಲೇ ರಿಲೀಸ್ ಆಗಿರೋ ಫೋಟೋಗಳಲ್ಲಿ ಪುಟ್ಟಣ್ಣ ಹಾಗೂ ಕಲ್ಪನಾರನ್ನ ಅಸಭ್ಯವಾಗಿ ತೋರಿಸಿದ್ದೀರಲ್ಲಾ..?
- ಅದ್ರ ಬಗ್ಗೆ ನಾನೀಗ ಏನೂ ಹೇಳಲ್ಲ. ಸಿನಿಮಾ ನೋಡಿದ್ರೆ ನಿಮಗದು ಗೊತ್ತಾಗುತ್ತೆ. ಯಾರನ್ನೂ ಕೆಟ್ಡದಾಗಿ ತೋರಿಸೋ ಉದ್ದೇಶ ನಮಗಿಲ್ಲ. ನಾನೂ ಕೂಡ ಒಬ್ಬ ನಟಿ ಹೀಗಾಗಿ ಮತ್ತೊಬ್ಬರ ಬಗ್ಗೆ ನಾನು ಅಗೌರವ ತೋರುವ ರೀತಿ ನಡೆದುಕೊಳ್ಳೋಕೆ ಸಾಧ್ಯಾನಾ...? ಒಂದು ಫೋಟೋ ಅಥವಾ ಟ್ರೇಲರ್ ನೋಡಿ ಇಡೀ ಸಿನಿಮಾನ ಜಡ್ಜ್ ಮಾಡೋದು ತಪ್ಪು. [ಶಯನಗೃಹದಲ್ಲಿ ಪೂಜಾಗಾಂಧಿ ಹಾಟ್ ದೃಶ್ಯಗಳು]

* ರಿಲೀಸ್ ಗೂ ಮುನ್ನ ಈ ಚಿತ್ರವನ್ನ ಪುಟ್ಟಣ್ಣ ಕುಟುಂಬಕ್ಕೆ ತೋರಿಸ್ತಿರಾ...?
- ಈ ಬಗ್ಗೆ ಫಿಲ್ಮಂ ಛೇಂಬರ್ ನಲ್ಲಿ ಮಾತುಕತೆ ಆಗಿದೆ. ವಾಣಿಜ್ಯ ಮಂಡಳಿ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ.
* ನಿಮ್ಮ ಮಾತಿನ ಪ್ರಕಾರವೇ ಕೇಳುವುದಾದರೆ 'ಅಭಿನೇತ್ರಿ' ಸಿನಿಮಾದಲ್ಲಿ ಒಬ್ಬ ನಟಿಯಾಗಿ ನಿಮ್ಮನ್ನ ನೀವು ಕಂಡುಕೊಂಡಿದ್ದೀರಾ..? ನಿಮ್ಮ ಜೀವನಕ್ಕೆ ಕಥೆ ಹತ್ತಿರವಾಗಿದಿಯಾ..?
- ಖಂಡಿತ ಹೌದು. ಅಭಿನೇತ್ರಿ ಎಲ್ಲಾ ನಟಿಯರ ದನಿಯಾಗಿದೆ. ಚಿತ್ರ ನೋಡಿದ ಅನೇಕ ಕಲಾವಿದರು ಇದು ನಮ್ಮದೇ ಜೀವನದಲ್ಲಿ ನಡೆದ ಘಟನೆ ಅಂತ ಭಾವಿಸುತ್ತಾರೆ. ಕೆಲ ದೃಶ್ಯಗಳನ್ನ ಕಂಡು ಇದು ನನ್ನ ಕಥೆ ಅಂತಲೂ ನನಗೆ ಅನಿಸಿದೆ.

* ಪಾತ್ರಕ್ಕೋಸ್ಕರ ಏನೇನು ತಯಾರಿ ಮಾಡಿಕೊಂಡಿದ್ರಿ..?
- ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೀನಿ. ಪಾತ್ರಕ್ಕೋಸ್ಕರ ದಪ್ಪಗಾಗ ಬೇಕಾಯ್ತು. ನನಗೆ ಇಲ್ಲಿಯವರೆಗೆ ಸಿಕ್ಕಿರೋ ಚಾಲೆಂಜಿಂಗ್ ರೋಲ್ ಇದು. ಹೀಗಾಗಿ ಫಿಸಿಕಲಿ ಮತ್ತು ಮೆಂಟಲಿ ನಾನು ಪ್ರಿಪೇರ್ ಆಗ ಬೇಕಿತ್ತು. ನಿರ್ದೇಶಕರು ನನಗೆ ತುಂಬಾ ಗೈಡ್ ಮಾಡಿದ್ರು.
* ಒಬ್ಬ ನಟಿಯ ಕುರಿತು ಸಿನಿಮಾ ಮಾಡ್ತಿದ್ದೀರಾ. ಇಂಥ ಜವಾಬ್ದಾರಿಯುತ ಕಥೆಯನ್ನ ಹೊಸ ನಿರ್ದೇಶಕರಿಗೆ ನೀಡೋಕೆ ಕಾರಣ.? ಈ ಪ್ರಯೋಗ ರಿಸ್ಕ್ ಅನಿಸ್ಲಿಲ್ವಾ..?
- ಪ್ರತಿಭಾವಂತ ಹೊಸ ನಿರ್ದೇಶಕರು ಇದೇ ಕಾರಣಕ್ಕೆ ಚಿತ್ರರಂಗಕ್ಕೆ ಬರೋಕೆ ಸಾಧ್ಯವಾಗ್ತಿಲ್ಲ. ರಿಸ್ಕ್ ಅಂತ ಹೊಸಬರಿಗೆ ಛಾನ್ಸ್ ಕೊಡಲಿಲ್ಲ ಅಂದ್ರೆ ಇಂಡಸ್ಟ್ರಿ ಬೆಳೆಯೋದು ಹೇಗೆ..? ನಾನು ಕೂಡ ಮುಂಗಾರು ಮಳೆ ಚಿತ್ರದಲ್ಲಿ ಹೊಸಬಳಾಗೇ ಪರಿಚಯವಾದೆ. ನನಗೆ ಅಂದು ಅವಕಾಶ ಸಿಗದೆ ಹೋಗಿದಿದ್ರೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಈಗ ನನ್ನ ಬ್ಯಾನರ್ ನಲ್ಲಿ ಪ್ರತಿಭಾವಂತ ನಿರ್ದೇಶಕರನ್ನ ಕನ್ನಡಕ್ಕೆ ಕೊಡುತ್ತಿರುವ ಹೆಮ್ಮೆ ನನಗಿದೆ. ['ಅಭಿನೇತ್ರಿ' ಪೂಜಾಗಾಂಧಿ ಮೇಲೆ ಕಥೆ ಕದ್ದ ಆರೋಪ]

* ಸೂಪರ ಹಿಟ್ ಸಾಂಗ್ ತನಂ...ತನಂ...ಹಾಡನ್ನ ಚಿತ್ರದಲ್ಲಿ ಬಳಸಿರೋದಕ್ಕೆ ಕಾರಣ..? ಪಬ್ಲಿಸಿಟಿ ಗಿಮಿಕ್ ಅಂದುಕೊಳ್ಳಬಹುದಾ..?
- ಅದು ತುಂಬಾ ಒಳ್ಳೇ ಹಾಡು. ನಾನದನ್ನ ಮೊದಲೇ ಕೇಳಿದ್ದೆ. ನನಗದು ಇಷ್ಟವಾಗಿತ್ತು. ಈವಾಗ ಅದನ್ನ ರೀಅರೇಂಜ್ ಮಾಡಿ ಸಿನಿಮಾದಲ್ಲಿ ಬಳಸಿಕೊಂಡಿದ್ದೇನೆ. ಚಿತ್ರಕ್ಕದು ಅನಿವಾರ್ಯವಿತ್ತು. ಬರೀ ಪಬ್ಲಿಸಿಟಿಗೋಸ್ಕರ ಮಾಡಿದ್ದಲ್ಲ. ಮನೋಮೂರ್ತಿ ಮ್ಯೂಸಿಕ್ ಮಾಡಿದ್ದಾರೆ. ಮುಂಗಾರು ಮಳೆಗೂ ಅವರು ಒಳ್ಳೊಳ್ಳೆ ಹಾಡುಗಳನ್ನ ನೀಡಿದ್ರು. ಇಲ್ಲೂ ಅಷ್ಟೇ ಚೆನ್ನಾಗಿರೋ ಸಂಗೀತ ನೀಡಿದ್ದಾರೆ.
* 'ಅಭಿನೇತ್ರಿ' ತೆರೆ ಮೇಲೆ ಮಿಂಚೋದು ಯಾವಾಗ?
- ಕಳೆದ ವಾರವಷ್ಟೇ ಸೆನ್ಸಾರ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. 'ಅಂಬರೀಶ' ಸೇರಿದಂತೆ ದೊಡ್ಡದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿವೆ. ಥಿಯೇಟರ್ ಗಾಗಿ ಕಾಯ್ತಾ ಇದ್ದೇವೆ. ಡಿಸೆಂಬರ್ ಮೊದಲವಾರ ರಿಲೀಸ್ ಮಾಡೋ ಪ್ಲಾನ್ ಇದೆ. [ಅರೆಬರೆ ಬೆತ್ತಲಾದ 'ಅಭಿನೇತ್ರಿ' ಪೂಜಾಗಾಂಧಿ]

* ಅಭಿನೇತ್ರಿ ಚಿತ್ರವನ್ನ ಕನ್ನಡ ಪ್ರೇಕ್ಷಕ ಯಾಕೆ ನೋಡಬೇಕು...?
- ಅಭಿನೇತ್ರಿ ಎಲ್ಲರಿಗೂ ಲೈಫ್ ಟೈಂ ಎಕ್ಸ್ ಪೀರಿಯನ್ಸ್ ಸಿನಿಮಾ. ಚಿತ್ರದಲ್ಲಿ ತುಂಬಾ ಫ್ರೆಶ್ ನೆಸ್ ಇದೆ. ಸಿನಿಮಾ ಮೇಕಿಂಗ್ ಚೆನ್ನಾಗಿದೆ. ಎಲ್ಲರಿಗೂ ಇಷ್ಟವಾಗೋ ಒಳ್ಳೇ ಎಂಟರ್ಟೇನರ್.
ಸಂದರ್ಶನ - ಹರ್ಷಿತಾ.ಎನ್.


Click it and Unblock the Notifications











