ಕ್ವಾಟ್ಲೆ ಕಿಚನ್ ಮುಗಿದ ಮೇಲೂ ಅಡುಗೆ ಮಾಡ್ತಾರಾ ದಿಲೀಪ್? ನೀನಾದೆ ನಾ ನಟನ ಕುಕಿಂಗ್ ಪ್ಲಾನ್ ಏನು?
ಕನ್ನಡದಲ್ಲಿ ಇದೂವರೆಗೂ ಅಪರೂಪ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. ಕಾಮಿಡಿ ಹಾಗೂ ಕುಕ್ಕಿಂಗ್ ಎರಡೂ ಮಿಕ್ಸ್ ಮಾಡಿ ವೀಕ್ಷಕರ ಮುಂದಿಟ್ಟಿದ್ದ 'ಕ್ವಾಟ್ಲೆ ಕಿಚನ್'ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಈ ಶೋ ಈಗ ಫಿನಾಲೆ ಹಂತಕ್ಕೆ ತಲುಪಿದ್ದು, ನಾಳೆ (ಸೆಪ್ಟೆಂಬರ್ 27) ಸಂಜೆ 6 ಗಂಟೆಯಿಂದ ನಾಲ್ಕು ಗಂಟೆಗಳ ಕಾಲ ಫಿನಾಲೆ ನಡೆಯಲಿದೆ. ಈಗಾಗಲೇ ಆರು ಮಂದಿ ಫಿನಾಲೆಗೆ ತಲುಪಿದ್ದಾರೆ. ಅದರಲ್ಲಿ 'ನೀನಾದೆ ನಾ' ಧಾರಾವಾಹಿಯ ಹೀರೋ ದಿಲೀಪ್ ಶೆಟ್ಟಿ ಕೂಡ ಒಬ್ಬರು.
ಅಪರೂಪಕ್ಕೆ ಅಡುಗೆ ಮಾಡುತ್ತಿದ್ದ ದಿಲೀಪ್ ಶೆಟ್ಟಿ ಕ್ವಾಟ್ಲೆ ಕಿಚನ್ ಬಳಿಕ ಅಡುಗೆ ಮಾಡುವುದರಲ್ಲಿ ನಿಪುಣರಾಗಿದ್ದಾರೆ. ಹೀಗಾಗಿ 'ಕ್ವಾಟ್ಲೆ ಕಿಚನ್' ಬಳಿಕ ಅವರ ಪ್ಲ್ಯಾನ್ ಏನು? ಅಡುಗೆ ಕಲಿತನ್ನು ಮುಂದುವರೆಸಿಕೊಂಡು ಹೋಗುತ್ತಾರಾ? ಇಲ್ಲಿಗೆ ನಿಲ್ಲಿಸುತ್ತಾರಾ? ಗ್ಯಾಪ್‌ನಲ್ಲಿ ಬಿಗ್ ಬಾಸ್‌ಗೆ ಹೋಗುತ್ತಾರೆ ಅನ್ನೋ ಸುದ್ದಿ ಬೇರೆ ಹಬ್ಬಿದೆ. ಅದು ನಿಜನಾ? ಇದೆಲ್ಲವನ್ನೂ ಫಿಲ್ಮಿಬೀಟ್ ಕನ್ನಡದ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

'ಕ್ವಾಟ್ಲೆ ಕಿಚನ್' ಜರ್ನಿ ಹೇಗಿತ್ತು?
"ಬೇರೆ ರಿಯಾಲಿಟಿ ಶೋಗೆ ಹೋಲಿಕೆ ಮಾಡಿದರೆ, ಇದು ಕಂಪ್ಲೀಟ್ ಡಿಫ್ರೆಂಟ್ ಶೋ. ಅಡಿಗೆ ಮಾಡೋದು ಬೇರೆ ವಿಷಯ. ಅದರಲ್ಲೂ ಕ್ವಾಟ್ಲೆಗಳ ಜೊತೆ ಮಾಡೋದು ತುಂಬಾನೇ ಕಷ್ಟ. ನಾವು ಬೇಸಿಕ್ ಅಡುಗೆ ಕಲಿತಿದ್ವಿ. ಎಗ್ ಬುರ್ಜಿ, ಕಾಫಿ, ಟೀ ಈ ರೀತಿ ಸಣ್ಣ ಪುಟ್ಟ ಅಡುಗೆ ಮಾಡೋದು ಕಲಿತಿದ್ವಿ. ಅಲ್ಲಿಗೆ ಹೋದ್ಮೇಲೆ ಗೊತ್ತಾಯ್ತು. ಇದು ನೆಕ್ಸ್ಟ್ ಲೆವೆಲ್ ಕಾಂಪಿಟೇಷನ್ ಅಂತ. ಅಲ್ಲಿಗೆ ಹೋದಾಗ ಚಂದನ್, ರಘು ಅವರನ್ನೆಲ್ಲ ನೋಡಿದಾಗ ಗಾಬರಿ ಶುರುವಾಯ್ತು. ಅವರು ಅನುಭವ ಇರೋರು. ಈಗಾಗಲೇ ಫೀಲ್ಡ್‌ನಲ್ಲಿ ಇರೋರು. ಅವರು ಪ್ರತಿ ದಿನ ಅಡುಗೆ ಮಾಡುತ್ತಾರೆ. ನಾವು ನಾಲ್ಕು ತಿಂಗಳಿಗೊಮ್ಮೆ ಅಡುಗೆ ಮಾಡೋರು. ಹೀಗಾಗಿ ಆರಂಭದಲ್ಲಿ ಕಷ್ಟ ಅನಿಸಿತ್ತು. ಹೋಗ್ತಾ ಹೋಗ್ತಾ ಒಂದು ಲೆವೆಲ್‌ಗೆ ಬಂತು. ಈಗ ನಾವು ಕೂಡ ಅಡುಗೆ ಮಾಡಬಹುದು ಅನ್ನೋ ಆತ್ಮವಿಶ್ವಾಸ ಬಂದಿದೆ"
ಕ್ವಾಟ್ಲೆ ಕಿಚನ್‌ನಲ್ಲಿ ಯಾವ ಅಡುಗೆ ಕಷ್ಟ ಆಯ್ತು?
"ನನಗೆ ಸಿಕ್ಕಾಪಟ್ಟೆ ಕಷ್ಟ ಅನಿಸಿದ್ದು ಚೈನೀಸ್ ಫುಡ್. ನನಗೆ ಚೈನೀಸ್ ಫುಡ್ ಅಂದರೆ ಇಷ್ಟ ಆಗೋದಿಲ್ಲ. ಫುಡ್‌ನಲ್ಲಿ ಸಾಸ್ ಹಾಕಿ ಸಿಹಿಯಾಗಿ ಮಾಡೋದು ಇಷ್ಟ ಆಗಲ್ಲ. ದಕ್ಷಿಣ ಭಾರತದವರಾಗಿದ್ದರಿಂದ ಖಾರ ಇರುವ ಫುಡ್ ಇಷ್ಟ. ಚೈನೀಸ್ ಫುಡ್ ಅಂತ ಬಂದಾಗ ನನಗೆ ಹೇಗೆ ಮಾಡೋದು ಅಂತ ಗೊತ್ತಾಗಲಿಲ್ಲ. ಕೊನೆವರೆಗೂ ಅದು ಬರಲೇ ಇಲ್ಲ. ಆ ಟಾಸ್ಕ್ ಸಿಕ್ಕಾಪಟ್ಟೆ ಎಡವಟ್ಟಾಯ್ತು"
ನಿಮಗೆ ಸಿಕ್ಕಿದ ಹೊಗಳಿಕೆ ಏನು?
"ನನ್ನ ಫ್ಯಾಮಿಲಿ ಫೋನ್ ಮಾಡಿ ನೀನ್ಯಾವಾಗ ಅಡುಗೆ ಮಾಡೋದು ಕಲಿತೆ ಅಂದರು. ಇದನ್ನು ನೋಡಿರಲೇ ಇಲ್ಲ ಅಂತ ಶಾಕ್ ಆಗಿದ್ದರು. ಎಷ್ಟೋ ಜನ ನನ್ನ ಸ್ನೇಹಿತರು ಮನೆಗೆ ಬರುತ್ತಿದ್ದರು. ಆಗ ಅಡುಗೆ ಮಾಡಿದ್ದಷ್ಟೇ. ನಾನು ಇಲ್ಲಿ ಮಾಡುತ್ತಿದ್ದ ಅಡುಗೆ ಕಷ್ಟಕರವಾಗಿರುತ್ತಿತ್ತು. ನನಗೆ ಏನೇ ಮಾಡಿದರೂ ಬೆಸ್ಟ್ ಕೊಡಬೇಕು ಅಂತಿತ್ತು. ಅದಕ್ಕೆ ಶ್ರುತಿಯವರು ಹಾಗೂ ಶೆಫ್ ಇಬ್ಬರೂ ನೀವು ಯಾವಾಗಲೂ ಔಟ್ ಆಫ್ ದಿ ಬಾಕ್ಸ್ ರೆಸಿಪಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರ ಅಂತ ಹೇಳುತ್ತಿದ್ದರು. ತುಂಬಾನೇ ಚೆನ್ನಾಗಿ ಮಾಡುತ್ತೀಯಾ. ಆ ಸ್ಪಿರೀಟ್ ಹಾಗೆ ಉಳಿಸಿಕೋ ಎಂದು ಹೇಳುತ್ತಿದ್ದರು. ಇದೂವರೆಗೂ ನಾನು ಮಾಡಿದ ಅಡುಗೆಯನ್ನು ಯಾರೂ ಟ್ರೈ ಮಾಡಿಲ್ಲ. ಅದಕ್ಕೆ ಅವರಿಗೆ ಇಷ್ಟ ಆಗುತ್ತಿತ್ತು."

ಕ್ವಾಟ್ಲೆ ಕಿಚನ್ ಮುಗಿದ ಬಳಿಕ ಪ್ಲ್ಯಾನ್ ಏನು?
"ಮಂಗಳೂರಿನಲ್ಲಿ ಈಗಾಗಲೇ ರೆಸ್ಟೋರೆಂಟ್ ಇದೆ. ಅಲ್ಲಿ ಏನಾದರೂ ಪ್ಲಾನ್ ಮಾಡುತ್ತೇನೆ. ಅದು ಬಿಟ್ಟು ಬೆಂಗಳೂರಿನಲ್ಲಿ ಒಂದು ರೆಸ್ಟೋರೆಂಟ್ ಮಾಡಬೇಕು ಅಂತಿದ್ದೇನೆ. ಹಾಗೆ ತುಂಬಾ ಜನ ಹುಡುಗರು ಮನೆಯಲ್ಲಿ ಅಡುಗೆ ಮಾಡೋದಿಲ್ಲ. ಈಗ ನನ್ನನ್ನೇ ನೋಡಿದರೆ ಅಡುಗೆ ಮಾಡುತ್ತಾನೆ ಅಂ ಯಾರೂ ಹೇಳೋದಿಲ್ಲ. ಹೀಗಾಗಿ ಕುಕಿಂಗ್ ಯೂಟ್ಯೂಬ್ ಚಾನೆಲ್ ಮಾಡಿ ನಾನು ಏನು ಕಲಿತಿದ್ದೇನೋ ಅದನ್ನು ಬೇರೆಯವರಿಗೆ ಹೇಳಿಕೊಟ್ಟರೆ, ಅವರು ಬಳಸಿಕೊಳ್ಳಬಹುದು ಅನ್ನೋ ಪ್ಲಾನ್ ಕೂಡ ಇದೆ."
ಕ್ವಾಟ್ಲೆ ಕಿಚನ್ ಫಿನಾಲೆ.. ಹೇಗಿದೆ ಮೈಂಡ್ ಸೆಟ್?
"ನಾನು ಏನೇ ಮಾಡಿದರೂ ಬೆಸ್ಟ್ ಕೊಡುವುದಕ್ಕೆ ಟ್ರೈ ಮಾಡುತ್ತೇನೆ. ನಾನು ಡ್ಯಾನ್ಸರ್ ಆಗಿದ್ದೆ. ನಾನು ಎಷ್ಟು ಅದ್ಭುತ ಡ್ಯಾನ್ಸ್ ಮಾಡಿದರೂ ಹಿಂದೆ ಮುಂದೆ ಆಗುತ್ತಿತ್ತು. ಹೀಗಾಗಿ ನಾವು ಒಳ್ಳೆಯ ಪರ್ಫಾಮೆನ್ಸ್ ಕೊಡಬೇಕು. ನಮಗೆ ತೃಪ್ತಿಯಾಗಿ ಅಲ್ಲಿಂದ ಹೊರಗೆ ಬರಬೇಕು. ಆ ಮೈಂಡ್ ಸೈಟ್‌ನಲ್ಲಿ ಇದ್ದೀನಿ. ನಾನು ನನ್ನ ಲೆವೆಲ್‌ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಡುತ್ತೇನೆ."

ಸಿನಿಮಾ ಮಾಡೋ ಪ್ಲ್ಯಾನ್ ಇದೆಯಾ?
"ಕ್ವಾಟ್ಲೆ ಕಿಚನ್ ಬಳಿಕ ಒಂದು ಸಿನಿಮಾದ ಚರ್ಚೆಯಾಗುತ್ತಿದೆ. ನಿಮಗೆ ಗೊತ್ತಿದೆ. ಹೊಸಬರು ಅಂದರೆ, ನಿರ್ಮಾಪಕರು ಅಷ್ಟು ಮುಂದೆ ಬರೋದಿಲ್ಲ. ಹೀರೋ ಆಗಿ ಲಾಂಚ್ ಆಗಬೇಕು ಅಂತ ಒಂದೂವರೆ ವರ್ಷದಿಂದ ಒಂದೇ ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡುತ್ತಿದ್ದೇನೆ. ನೆಗೆಟಿವ್ ಪಾತ್ರಗಳನ್ನಂತೂ ಮಾಡುತ್ತಲೇ ಇದ್ದೇನೆ. ಹೀರೋ ಆಗಿ ನೀಟ್ ಆಗಿ ಲಾಂಚ್ ಆಗಬೇಕು ಅಂತಿದ್ದೇನೆ. ಮೂವಿ ಶುರುವಾದರೆ, ಅದು ಮುಗಿದ ಮೇಲೆ ಸೀರಿಯಲ್ ಒಪ್ಪಿಕೊಳ್ಳುತ್ತೇನೆ."
ಕೊನೆಯದಾಗಿ ಬಿಗ್ ಬಾಸ್‌ಗೆ ಹೋಗ್ತೀರಾ?
"ಇಂತಹದ್ದೊಂದು ಸುದ್ದಿ ಓಡಾಡುವುದನ್ನು ಕೇಳಿದ್ದೇನೆ. ಬಿಗ್ ಬಾಸ್‌ಗೆ ಹೋಗುವ ಪ್ಲಾನ್ ಇಲ್ಲ. ನನ್ನ ಕೈಯಲ್ಲಿ ಸಿನಿಮಾ ಇದ್ದು ಬಿಗ್‌ಬಾಸ್‌ಗೆ ಹೋದರೆ ಅದಕ್ಕೊಂದು ಅರ್ಥ ಇರುತ್ತೆ. ಹಾಗೇ ಕಮಿಟ್ಮೆಂಟ್ ಇದ್ದಾಗ ಅರ್ಧದಲ್ಲಿಯೇ ಬಿಟ್ಟು ಹೋಗುವುದಕ್ಕೆ ಆಗಲ್ಲ. ಈ ಕಾರಣಕ್ಕೆ ಬಿಗ್ ಬಾಸ್‌ಗೆ ಹೋಗುತ್ತಿಲ್ಲ." ಎಂದು ಕ್ವಾಟ್ಲೆ ಕಿಚನ್ ಫಿನಾಲೆ ತಲುಪಿರುವ ಸಂದರ್ಭದಲ್ಲಿ ನಟ ದಿಲೀಪ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











