ಕೆವಿ ಸುಬ್ಬಣ್ಣ, ಗಿರೀಶ್ ಕಾರ್ನಾಡ್‌ ಅಂತಹ ದಿಗ್ಗಜರೊಂದಿಗೆ ಪಳಗಿದ ಪ್ರವೀಣ ರಬಕವಿ ಎಂಬ ಬಹುಮುಖ ಪ್ರತಿಭೆ

ಇಂತಹ ಬಹುಮುಖ ಪ್ರತಿಭೆ ಸಿಗೋದು ತೀರಾ ಅಪರೂಪ!! ಕಿರುತೆರೆ, ಸಿನಿಮಾ, ರಂಗಭೂಮಿ; ಹೀಗೇ ಇವರು ಕಾಣಿಸಿಕೊಳ್ಳದ ಕ್ಷೇತ್ರವಿಲ್ಲ. ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕಲಾತ್ಮಕ ಸಿನಿಮಾಗಳೇ ಆಗಿವೆ. ಇವರು 45'ಕ್ಕೂ ಹೆಚ್ಚೂ ಧಾರಾವಾಹಿಗಳಲ್ಲಿ ನಾಯಕ ನಟರಾಗಿ, ಖಳನಾಯಕರಾಗಿ ನಟಿಸಿದ್ದಾರೆ. ಜಾಹೀರಾತು ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ; ರಣ್‌ಬೀರ್ ಕಪೂರ್ ಅಭಿನಯದ ಕೋಕಾ ಕೋಲಾ ಅಂತಹ ಬ್ರ್ಯಾಂಡ್‌ನ ಜಾಹೀರಾತು ನಿರ್ಮಾಣದಲ್ಲೂ ಕೆಲಸ ಮಾಡಿದ್ದಾರೆ. ಅಲ್ಲದೇ; ಪತ್ರಿಕೋದ್ಯಮ, ಸಾಹಿತ್ಯ, ಸಾಂಕೇತಿಕ ಚಿತ್ರ ಬರವಣಿಗೆ, ಅಭಿನಯ ಹೇಳಿಕೊಡುವುದರಲ್ಲೂ ಇವರು ನಿಪುಣರು. ಇವರೇ ಆ ಬಹುಮುಖ ಪ್ರತಿಭೆ "ಪ್ರವೀಣ ರಬಕವಿ"

ಪ್ರವೀಣ ರಬಕವಿಯವರು ಕೇವಲ ನಟರಾಗಿ ಅಷ್ಟೇ ಅಲ್ಲದೇ; ಕಲಾ ನಿರ್ದೇಶಕರಾಗಿ, ಬರಹಗಾರರಾಗಿ, ಚಿಂತಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ "ಸ್ಟಾರ್ ಸುವರ್ಣ" ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಹಲವಾರು ವರ್ಷಗಳಿಂದ ಕಿರುತೆರೆಯ ವೀಕ್ಷಕರ ಮೆಚ್ಚಿನ ನಟರಾಗಿಯೂ ಬೆಳಗಿದ್ದಾರೆ. ಜೊತೆಗೆ ಮನೆಮನೆ ಮಾತಾಗಿದ್ದಾರೆ. ಪ್ರವೀಣ್ ರಬಕವಿ'ಯವರ ಸಾಧನೆ ಸಾಮಾನ್ಯವಾದುದ್ದಲ್ಲ. ಅವರ ಮೂಲ, ಪ್ರಗತಿ, ವೃತ್ತಿ-ಬದುಕು, ಜೀವನ, ಆಸೆ-ಆಕಾಂಕ್ಷೆಗಳನ್ನ ನಮ್ಮ "ಫಿಲ್ಮಿಬೀಟ್" ಕನ್ನಡದ ಈ ಸುಂದರ-ಲೋಕದಲ್ಲಿ ಹಂಚಿಕೊಂಡಿದ್ದಾರೆ..."

Actor Theatre personality Praveen Rabakavi charming in Ninna Jothe Nanna Kathe serial


ಪ್ರವೀಣ ರಬಕವಿಯವರ ಹಿನ್ನೆಲೆ ಏನು?

"ಮೂಲತಃ ನಾನು ರಂಗಭೂಮಿ ಕಲಾವಿದ, ನಟ, ಚಿತ್ರ-ಕಲಾವಿದ. "ನೀನಾಸಂ" ರಂಗಶಾಲೆಯ ಹಿನ್ನೆಲೆಯಿಂದ ಬಂದವನು. 1996-97ರಲ್ಲಿ ತೇರ್ಗಡೆಯಾದವನು. ರಂಗಭೂಮಿ ಕೆಲಸಗಳೊಟ್ಟಿಗೆ ಕಲಾ ನಿರ್ದೇಶನ, ಸಹನಿರ್ದೇಶಕನಾಗಿಯೂ ಹಲವಾರು ಚಿತ್ರಗಳಿಗೆ ಕೆಲಸ ಮಾಡುತ್ತ ಬಂದಿದ್ದೇನೆ. ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರಗಳಿಗೂ, ಪ್ರದರ್ಶನಗಳಿಗೂ ಕೆಲಸ ಮಾಡಿದ್ದೇನೆ. ಶೀರ್ಷಿಕೆ ವಿನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನಾಟಕ ರಂಗದಲ್ಲಿ; ರಂಗ ಸಜ್ಜಿಕೆ, ವಸ್ತ್ರವಿನ್ಯಾಸ ಇತ್ಯಾದಿ ಕಲಾ ಪ್ರಾಕಾರಗಳಲ್ಲಿ - ಕೇವಲ ನಟನಾಗಿ ಮಾತ್ರವಲ್ಲದೇ ಬೇರೆಬೇರೆ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಮೂಲತಃ ಉತ್ತರ ಕರ್ನಾಟಕದವನಾದರೂ ಈಗ ಕಲಾವಿದನಾಗಿ ಈ ಮಹಾನಗರಿಯಲ್ಲಿ ಮುಂದೊರೆಯುತ್ತಿದ್ದೇನೆ"


ತಮಗೆ ರಂಗಭೂಮಿಯಲ್ಲಿ ಆಸಕ್ತಿ ಹೇಗೆ?

"ನಾನು ಹತ್ತನೇ ತರಗತಿ ಮುಗಿಸಿದ ಕೂಡಲೇ "ನೀನಾಸಂ"ಗೆ ತೆರಳ್ತೇನೆ. ಅದೂ ಕಲೆಯ ಸೆಳೆತದಲ್ಲಿ. ಅದು ನನ್ನ ಸ್ವ-ಆಸಕ್ತಿ ಹಾಗೂ ಸ್ವ-ನಿರ್ಣಯದ್ದಾಗಿತ್ತು. ನನ್ನ ಭವಿಷ್ಯದ ದೃಷ್ಠಿಕೋನ ನಾನು ಆಗಲೇ ಕಂಡುಕೊಂಡಿದ್ದೆನೇನೋ ಎನ್ನುವಂತೆ! ಗೊತ್ತಿಲ್ಲ- ಈಗ ಈ ಮಾಧ್ಯಮದಲ್ಲಿ ನೆಲೆಯೂರಿದ್ದೇನೆ. ಆಗ ನಾನು ನೀನಾಸಂನಲ್ಲಿ ಇದ್ದ ರೀತಿ-ನೀತಿ-ಕ್ರಮಗಳೇ ಬೇರೆ ಇತ್ತು. ಜಂಗಮವಾಣಿ ಇರಲಿಲ್ಲ, ಹೊರ-ಒಳ ವಿಷಯಗಳಾಗಲಿ, ಏನೂ ತಿಳಿಯುತ್ತಿರಲಿಲ್ಲ. ಅದೊಂದು ರೀತಿ ಕಣ್ಣುಕಟ್ಟಿ ದಟ್ಟಾರಣ್ಯದಲ್ಲಿ ಬಿಟ್ಟಂತಿತ್ತು - ಅಲ್ಲಿಯೇ ನನ್ನ ಜ್ಞಾನೋದಯವಾದಂತೆ ಅದ್ಭುತ ರಂಗಭೂಮಿಯ ಶಿಕ್ಷಣ ದೊರಕಿತು. ದೊಡ್ಡದೊಡ್ಡ ಮಹನೀಯರ ಪರಿಚಯವಾಯ್ತು. ಬೆಳಕು ವಿನ್ಯಾಸ, ವಸ್ತ್ರ ವಿನ್ಯಾಸ, ಪರಿಕರ ವಿಭಾಗದಲ್ಲೂ ಕೆಲಸ ಮಾಡುತ್ತ ಬಂದೆ. ಹೇಳಬೇಕೆಂದರೆ; ನಟನೆಗಿಂತ ಹೆಚ್ಚು ನನಗೆ ನೇಪಥ್ಯದಲ್ಲೇ ಆಸಕ್ತಿ ಇತ್ತು.."

Actor Theatre personality Praveen Rabakavi charming in Ninna Jothe Nanna Kathe serial


ಕೆವಿ ಸುಬ್ಬಣ್ಣ, ಗಿರೀಶ್ ಕಾರ್ನಾಡ್‌, ಕಾಸರವಳ್ಳಿಯವರಂತಹ ದಿಗ್ಗಜರ ನಂಟು ಹೇಗಾಯ್ತು?

"ನಾನು ನೀನಾಸಂಗೆ ಹೋದಾಗ ನನಗೆ ಕೇವಲ ಹದಿನೆಂಟು ವರ್ಷ ಇರ್ಬಹುದೇನೋ. ಆಗಲೇ ನಾನು ರಾಷ್ಟ್ರದ ಹೆಸರಾಂತ ನಿರ್ದೇಕರಾದ "ಬಿ.ವಿ. ಕಾರಂತರ" ನಿರ್ದೇಶನದಲ್ಲಿ 'ಅಹಲ್ಯ' ಎನ್ನುವ ನಾಟಕದಲ್ಲಿ 'ಮನ್ಮಥ'ನ ಪಾತ್ರದಲ್ಲಿ ಮಿಂಚಿದ್ದೆ. ಅದು ತುಂಬಾನೇ ಜನಪ್ರಿಯತೆ ಪಡೆದ ನಾಟಕವಾಯ್ತು. ಆ ನಾಟಕದಲ್ಲಿ ನನ್ನ ಜೊತೆ ನಟಿಸಿದವರು ಇಂದಿನ ನಟ "ಅಚ್ಯುತ್ ಕುಮಾರ್" ಈಗ ಅವರು ಬೆಳೆದು ನಿಂತ ಮರ. ಸಂತೋಷವಾಗುತ್ತೆ. ಹಾಗೇ ಇನ್ನೂ ಸುಮಾರು ನಟ/ನಟಿಯರು ನನ್ನ ಜೊತೆಗಿದ್ದರು. ಅಲ್ಲಿಯ ಶಿಸ್ತು, ಶ್ರದ್ಧೆ, ಜೀವನ ಸಾಗುವಿಕೆಯ ಕಲೆ; ಕಲಾವಿದನಾಗಿ ಇಲ್ಲಿಯವರೆಗೂ ನಡೆಸಿಕೊಂಡು ಬಂತು. ಹಾಗೇ "ಕೆ.ವಿ. ಸುಬ್ಬಣ್ಣ, ಗಿರೀಶ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಕೀ.ರಂ. ನಾಗರಾಜ್, ಚಂದ್ರಶೇಖರ್ ಕಂಬಾರಂತಹ ದಿಗ್ಗಜರೊಂದಿಗೆ ಕೆಲಸ ಮಾಡಲು ಸಹಾಯವಾಯ್ತು."

Actor Theatre personality Praveen Rabakavi charming in Ninna Jothe Nanna Kathe serial


'ಮೂಡಲ ಮನೆ'ಯ ಅನುಭವ ಹೇಳಿ

"ನೀನಾಸಂನಿಂದ ಬೆಂಗ್ಳೂರಿಗೆ ಬಂದು ಕೂಡಲೇ ಯಥಾ ಮತ್ತೆ ನಾನು ರಂಗಭೂಮಿ ಕೆಲಸದಲ್ಲಿ ತೊಡಗಿದೆ. ಆಗ ನನ್ನ ಕೆಲಸದ ವೈಖರಿ, ಪ್ರತಿಭೆಯನ್ನು ಗುರತಿಸಿ "ನಮ್ಮ ಜೊತೆ ನೀವು ಕೆಲಸ ಮಾಡಬಹುದಲ್ಲ!" ಎಂದು ಹೇಳಿದವರಲ್ಲಿ ಪ್ರಮುಖರು ಶ್ರೀ. ಗಿರೀಶ್ ಕಾಸರವಳ್ಳಿಯವರು. ಹೆಚ್ಚಿನ ಪಾಲು ನಾನು ಅವರೊಂದಿಗೆಯೇ ಕೆಲಸ ಮಾಡಿದ್ದೇನೆ. ಅದೂ ಕೇವಲ ಕಲಾತ್ಮಕ ಸಿನೆಮಾಗಳಿಗೆ, ಧಾರಾವಾಹಿಗಳಿಗೆ ಮತ್ತು ಕಲಾತ್ಮಕ ವಿಷಯಗಳಿಗೆ ಮಾತ್ರ!! ನಂತರ ವೈಶಾಲಿ ಕಾಸರವಳ್ಳಿಯವರ ಮೂಕರಾಗ. ಇದು ಮುಗಿಯುತ್ತಿದ್ದಂತೆ "ಮೂಡಲ ಮನೆ" ಧಾರಾವಾಹಿಗೆ ಒಬ್ಬ ಪ್ರಮುಖನಾಗಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದೆ. ಅಲ್ಲಿ ನನ್ನ ಕೆಲಸ; ಕಲಾವಿದರಿಗೆ ಅಭಿನಯ ಹೇಳಿಕೊಡುವುದು, ಸಂಭಾಷಣೆ, ಉಚ್ಛಾರಣೆ, ಉತ್ತರಕರ್ನಾಟಕದ ಭಾಷೆಯ ವೈಖರಿ/ಶೈಲಿ ಹೇಳಿಕೊಡುವುದು ಆಗಿತ್ತು. ಏಕಂದರೆ; ಆ ಭಾಗದಲ್ಲಿ ಒಂದೊಂದು ಪ್ರಾಂತ್ಯದ ಭಾಷೆ; ಒಂದೊಂದು ರೀತಿಯದ್ದಿರುತ್ತೆ. ಅದನ್ನು ನಾನು ಗಮನದಲ್ಲಿಟ್ಟುಕೊಂಡು, ಸ್ವತಃ ಮೊದಲು ನಾನೇ ಆಳವಾಗಿ ಅಭ್ಯಸಿಸಿಕೊಂಡು ನಟರಿಗೆ ಹೇಳಿಕೊಡುತ್ತಿದ್ದೆ."


'ಶ್ರೀ ಮಂಜುನಾಥ' ಸಿನಿಮಾದ ನೆನಪು ಹಂಚಿಕೊಳ್ಳುತ್ತೀರಾ?

"ಭಾರತದ ಶ್ರೇಷ್ಠ ನಿರ್ದೇಶಕರಾದ ಶ್ರೀ ಕೆ. ರಾಘವೇಂದ್ರ ರಾವ್ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ಶ್ರೇಷ್ಠ! ಅಂಬರೀಶವರ ಅಭಿನಯದ ವಂದೇ ಮಾತರಂ ಮೂಲಕ "ಶ್ರೀ ಮಂಜುನಾಥ" ಚಲನಚಿತ್ರಕ್ಕೆ ಪ್ರವೇಶ ಪಡೆದೆ. ಪ್ರಧಾನ ಸಹ-ಕಲಾ-ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದೆ. ಅಲ್ಲಿ ನಮ್ಮ ಕನ್ನಡದ ದಿಗ್ಗಜ ನಟ/ನಟಿಯರಾದ ಸೌಂದರ್ಯ, ಅಂಬರೀಶ್, ಚಿರಂಜೀವಿ, ಅರ್ಜುನ್ ಸರ್ಜಾ ಇವರೊಟ್ಟಿಗೂ ಒಳ್ಳೆಯ ಒಡನಾಟ ಬೆಳೆಸಿಕೊಂಡೆ. ಅದೊಂದು, ಒಟ್ಟಿಗೇ ಹತ್ತು ಸಿನಿಮಾಗಳಿಗೆ ಕೆಲಸ ಮಾಡಿದ ಬೃಹತ್ ಅನುಭೂತಿ ಆಗಿತ್ತು.."


ನಿಮ್ಮ ಕಿರುತೆರೆ ಜರ್ನಿ ಬಗ್ಗೆ ಹೇಳುವಿರಾ?

"ಹ್ಹಹಹ.. ಅದೂ ಒಂದು ಸುಂದರ ಪ್ರವೇಶ; 'ನೋಡೊದಕ್ಕೆ ತೆಳ್ಳಗೆ, ಬೆಳ್ಳಗೆ, ಒಳ್ಳೇ ಕೋರಿಯನ್ ಬಾಯ್" ಥರ ಇದ್ದೀರಾ, ಅಭಿನಯ ಕೂಡ ಮಾಡಿಯಲಾ' ಅಂತ ಬಹಳ ಜನ ಹೇಳ್ತಿದ್ರು. ನನಗೋ ತಾಂತ್ರಿಕ ವರ್ಗದಲ್ಲಿ ವಿಪರೀತ ಆಸಕ್ತಿ. ಅದಾಗ್ಯೂ 20-ವರ್ಷಗಳ ಕಾಲ ನಿರಂತರ ತಾಂತ್ರಿಕ-ವರ್ಗದಲ್ಲೇ ಕೆಲಸ ಮಾಡುತ್ತ ಬಂದೆ. ನಂತರ 'ಮೂಕರಾಗ, ಅಗ್ನಿಶಿಖೆ, ರಂಗೋಲಿ, ಮಾಂಗಲ್ಯ, ಬದುಕು, ಜೋಕಾಲಿ' ಅಂತಹ ಧಾರಾವಾಹಿಗಳಲ್ಲಿ ನಟಿಸುತ್ತ ನಡೆದೆ. ಅಲ್ಲಿ ನನಗೆ ಬಹಳಷ್ಟು ಹೆಸರು ತಂದುಕೊಟ್ಟ ಧಾರಾವಾಹಿಗಳಲ್ಲೊಂದಾದ; "ಜೋಕಾಲಿ"ಯೂ ಒಂದು. ಇದರಲ್ಲಿ ನಾನು "ಮ್ಯಾಡಿ" ಎನ್ನುವ ಪಾತ್ರವನ್ನು ನಿಭಾಯಿಸಿದ್ದೆ. ಜನ, ಮಾಧ್ಯಮದವರು 'ಪ್ರವೀಣ್ ರಬಕವಿ ಓರ್ವ ಸುಂದರ, ಸ್ಪುರದ್ರೂಪಿ ಹುಡುಗ ಮಾತ್ರವಲ್ಲ - ಅದ್ಭುತ ನಟರು ಕೂಡ" ಅಂತ ಪ್ರಶಂಸೆ ಮಾಡ್ತಿದ್ರು. ಅದಾದ ಮೇಲೆ ಮತ್ತೆ ಖಳನಾಯಕ, ನಾಯಕ ನಟನಾಗಿ ಪ್ರಯಾಣ ಬೆಳೆಸಿಕೊಂಡು ನಡೆದೆ.."


ಜಾಹೀರಾತು ಕ್ಷೇತ್ರದ ಅನುಭವ ಹೇಗಿತ್ತು?

"ಅದೊಂದು ಅತ್ಯದ್ಭುತ ಅನುಭವ! ಒಂದಿಷ್ಟೂ ವರ್ಷ ಧಾರಾವಾಹಿಗಳಲ್ಲಿ ಅಭಿನಯಿಸೋದು ಬೇಡವೆಂದು; ಮತ್ತೆ ತಾಂತ್ರಿಕ ವರ್ಗದತ್ತ ಹೊರಳಿದೆ. ಮುಂಬೈಯಲ್ಲಿ ಕೆಲವು ಜಾಹೀರಾತು ಸಂಸ್ಥೆಗಳಿಗೆ ವಿನ್ಯಾಸಕನಾಗಿ ಕೆಲಸ ಮಾಡಿದೆ. ರಣ್‌ಬೀರ್ ಕಪೂರ್ ಅವರ ಕೋಕಾ ಕೋಲಾ ಅಂತಹ ಜಾಹೀರಾತು ಸೇರಿ ಇನ್ನಿತರೇ. ಆಮೇಲೆ ಹಕ್ಕೊತ್ತಾಯ ಎಂಬಂತೆ "ಪ್ರೀತಿ ಇಲ್ಲದ ಮೇಲೆ" ಎನ್ನುವ ಧಾರಾವಾಹಿಗೆ ಕರೆಬಂತು. ಅದು ಅನಂತ್‌ನಾಗ್ ಅವರು ನಟಿಸುತ್ತಿದ್ದ ಧಾರಾವಾಹಿ. ಹೋದೆ; ಆದರೆ, ಆಯ್ಕೆ ಸಮಿತಿಯಲ್ಲಿ ಪ್ರಾತ್ರಗಳ ಬದಲಾವಣೆ ಆಗಿ - ನನ್ನ ಪಾತ್ರಕ್ಕೆ ಇನ್ನೊರ್ವ-ಈಗಿನ ದೊಡ್ಡ ನಟ ಬಂದರು. ಅದಾದ ಮೇಲೆ ಬೇರೆ ಬೇರೆ ಕೆಲಸಗಳೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿ; ಓದು, ವಿಮರ್ಶೆ, ಮುನ್ನುಡಿ ಬರಹ, ಬೆನ್ನುಡಿ ಬರಹ, ಲೇಖನಗಳನ್ನ 'ಸಪ್ನ ಬುಕ್ಸ್' ಸೇರಿ ಹಲವಾರು ಪುಸ್ತಕಾಲಯಕ್ಕೆ ಮತ್ತು ಪುಸ್ತಕಗಳಿಗೆ ಬರೆದು ಕೊಟ್ಟೆ."


'ನೀನಾದೆ ನಾ' ಮೂಲಕ ಕಮ್‌ಬ್ಯಾಕ್ ಮಾಡಿದ್ದು ಹೇಗಿತ್ತು?

"ಇದು ನಟ ರಮೇಶ್ ಅರವಿಂದ್ ಅವರ ನಿರ್ಮಾಣ ಧಾರಾವಾಹಿ - ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿತ್ತು! ನಾನು ಇಲ್ಲಿವರೆಗೂ ಯಾವುದೇ ಪೋಷಕ ಪಾತ್ರಗಳಲ್ಲಿ ನಟನೆ ಮಾಡಿರಲಿಲ್ಲ. ಅದು ನಾಯಕನ ಅಣ್ಣನ ಪಾತ್ರವಾಗಿತ್ತು. "ಪಾತ್ರಕ್ಕೆ ನೀವೇ ಸೂಕ್ತ, ನೀವೇ ಮಾಡಬೇಕು" ಎಂದು ಪ್ರೀತಿಯಿಂದ ಕೇಳಿಕೊಂಡಾಗ ತತಕ್ಷಣ ಒಪ್ಪಿಕೊಂಡೆ!! ಆಶ್ಚರ್ಯವೆಂದೆರೆ ಒಂದೂವರೆ ವರ್ಷಗಳ ಕಾಲ ಇಡೀ - ಕೇವಲ ಒಂದೇ ಲುಂಗಿ-ಅಂಗಿಯ ವಸ್ತ್ರವಿನ್ಯಾಸದಲ್ಲಿ ಪಾತ್ರ ನಿಭಾಯಿಸಿದೆ. ಆ ಪಾತ್ರ ಬಹಳಷ್ಟು ಜನರಿಗೆ ಇನ್ನಿಲ್ಲದಂತೆ ಇಷ್ಟವಾಯಿತು, ಮೆಚ್ಚುಗೆಗೂ ಪಾತ್ರವಾಯ್ತು."


'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಪಾತ್ರ ಹೇಗಿದೆ?

"ಪ್ರಸ್ತುತ ಇದೀಗ ಸುವರ್ಣ ವಾಹಿನಿಲಿ ದಿನ ರಾತ್ರಿ ಎಂಟಕ್ಕೆ ಪ್ರಸಾರ ಆಗ್ತಿದೆ. 'ನೀನಾದೆ ನಾ' ಆದ ಕೂಡಲೇ ಮತ್ತೆ ವಾಹಿನಿಯಿಂದ ಕರೆ ಬಂತು. 'ಸತ್ಯ' ಎನ್ನುವ ಒಂದು ಪಾತ್ರವಿದೆ.. ಮೂಲಭೂತವಾಗಿ ಈತ ವಕೀಲ... ನಾಯಕನ ಗೆಳೆಯ ಮತ್ತು ಅಣ್ಣ' ಎಂದು ಹೇಳಿದ್ರು. ಆ ಪಾತ್ರ ಮಾಡಬಹುದೇ ಎಂದೂ ಕೇಳಿದ್ರು? ಪಾತ್ರ ಇಷ್ಟವಾಯ್ತು. ಅವರ ಪ್ರೀತಿಗೆ [ವಾಹಿನಿಯ/ತಂಡದ] ತಂತ್ರಜ್ಞರಿಗೆ, ನಿರ್ಮಾಪಕರಿಗೆ ತಲೆಬಾಗಿ ಈಗ ಸತ್ಯ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಪಾತ್ರ ಬಹಳ ಚೆನ್ನಾಗಿದೆ. ಎಲ್ಲರಿಗೂ ಇಷ್ಟವಾಗಿದೆ. ಇದೊಂದು ಹಾಸ್ಯಮಯ ಮತ್ತು ಗಾಂಭೀರ್ಯದಿಂದ ಕೂಡಿರುವ ಪಾತ್ರ. ನಿಭಾವಣೆ ಸೂಕ್ಷ್ಮವಾಗಿದೆ. ಎಚ್ಚರಿಕೆಯಿಂದ ಎಳೆದುಕೊಂಡು ಹೋಗುತ್ತಿದ್ದೇನೆ.."

Actor Theatre personality Praveen Rabakavi charming in Ninna Jothe Nanna Kathe serial


ನಿರ್ದೇಶನದ ಬಗ್ಗೆ ಒಲವಿದೆಯಾ?

"ಖಂಡಿತ ಇದೆ - ಆದರೆ ಈಗ ಕಷ್ಟಸಾಧ್ಯ. ಈಗಿನ ಸ್ಥಿತಿಗತ್ಯದಲ್ಲಿ ನಿರ್ದೇಶನ ಮಾಡುವುದೆಂದೆರೆ ಅಸಾಧ್ಯ! ಅಂದರೆ ನನಗೆ. ಈಗಿನ ನಟ/ನಟಿಯರನ್ನ, ತರಾತುರಿ ಸಂಚಿಕೆಗಳನ್ನ, ಕಥೆಯನ್ನ, ಅಭಿನಯವನ್ನ ಎಳೆದುಕೊಂಡು ಹೋಗುವುದೆಂದೆರೆ ಆಗದ ಮಾತದು. ನನಗೋ ಒಂದು ಸಂಚಿಕೆಯನ್ನು ಮಾಡಬೇಕೆಂದರೆ; ಅಭಿನಯ, ಹಾವಭಾವ, ಕಣ್ಣು, ಸೂಕ್ಷ್ಮತೆಗಳನ್ನ ಚೆಂದ ತೆಗೆಯಬೇಕು. ಇದಕ್ಕೆ ತಕ್ಕ ಸಮಯಬೇಕು. ಆದರೆ, ಈಗ ಅಷ್ಟು ಸಮಯವಿಲ್ಲ! ತುರ್ತಾಗಿ ಸಂಚಿಕೆಗಳು ಪ್ರಸಾರಕ್ಕೆ ಹೋಗಬೇಕು. ದಿನಾಂಕಗಳ ಸಮಸ್ಯೆ ಇರುತ್ತೆ, ಕಥೆಯ ಹಸಿತನವಿರುತ್ತೆ, ಆರ್ಥಿಕತೆ- ಇವೆಲ್ಲವನ್ನೂ ನೋಡಿಕೊಳ್ಳಬೇಕಾಗುತ್ತೆ. ಹೀಗಾಗಿ ಕಥೆಗಳನ್ನು ಸಾಯಿಸುವುದಕ್ಕೆ ನನಗೆ ಇಷ್ಟವಿಲ್ಲ. ನ್ಯಾಯ ಒದಗಿಸಲೂ ನನ್ನಿಂದ ಆಗುವುದಿಲ್ಲ! ಆದರೆ ನನಗೊಂದ 'ಬೃಹತ್ ಗ್ರಂಥಾಲಯವನ್ನು' ತೆರೆಯಬೇಕೆಂಬ ಆಸ್ಥೆ ಇದೆ. ಕನ್ನಡ ಪುಸ್ತಕಗಳನ್ನು ಇನ್ನೂ ಮೇರು ಮಟ್ಟಕ್ಕೆ ಒಯ್ಯುವ ಹಂಬಲ ಇದೆ.. ನೋಡೋಣ.."


ನಿಮ್ಮ ಪ್ರತಿಭೆಯನ್ನು ಗುರುತಿಸಿಲ್ಲ ಎನಿಸುತ್ತಿದೆಯೇ?

"ಬಹಳಷ್ಟು ವಿಷಾದವಿದೆ!! ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿಭಾಯಿಸಬಲ್ಲೆ ಅನ್ನೋ ನಂಬಿಕೆ ನನಗಿದೆ. ಆದರೆ; ಅದನ್ನು ಗುರುತಿಸುವವರ ಸಂಖ್ಯೆ ಮಾಧ್ಯಮದಲ್ಲಿ ಬಹಳ ಕಡಿಮೆ ಇದೆ! ಆಳವಾದ ಪ್ರತಿಭೆಗಳನ್ನು ಗಮನಿಸುವುದೇ ಇಲ್ಲ. ಈಗಿನ ಪ್ರಸ್ತುತ ಜಗತ್ತೇ ಬೇರೆ ಆಗಿದೆ. ಅಭಿನಯ ಕಲೆ ಅನ್ನೋದೇ ಸತ್ತು-ಹೋಗಿದೆ. ಶಿಷ್ಟಾಚಾರ, ಸಂಯಮ, ಶ್ರದ್ಧೆ, ಏಕಾಗ್ರತೆ, ತಾಲೀಮು, ತಯಾರಿ ಇವೆಲ್ಲವೂ ಬಿಲ್ಕುಲ್ ಇಲ್ಲವಾಗಿದೆ. ಎಷ್ಟೋ ಪಾತ್ರಗಳು ನನ್ನ ಕಣ್ಣ ಮುಂದೆಯೇ ಸಾಯುತ್ತಿವೆ. ಅದನ್ನು ನಾನೂ ನೋಡುತ್ತಿದ್ದೇನೆ. ಧಾರಾವಾಹಿ ನನಗೆ ಒಂದು ಜೀವನ ಕಲೆಯಾದ್ದರಿಂದ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಅಷ್ಟೇ. ಹಾಗೆಂದು ನನ್ನನ್ನು ನಾನು ಎಲ್ಲೂ ಮಾರಿಕೊಂಡಿಲ್ಲ!! ಅದಾಗ್ಯೂ; 'ಇಂತಹ ಪಾತ್ರ ನಾನು ಮಾಡಬಹುದಿತ್ತಲ್ಲ - ಯಾಕೆ ಆ ಪಾತ್ರ ಆತ ಅಷ್ಟು ಚೆನ್ನಾಗಿ ಮಾಡುತ್ತಿಲ್ಲ' ಅನ್ಸಿದೆಲ್ಲ ಉಂಟು!. ಟಿ.ಆರ್‌.ಪಿಗೇ ಸವಾಲು ಹಾಕಬಹುದಿತ್ತಲ್ಲ ಅನ್ನುವಷ್ಟು ತೀವ್ರ! ಆದರೂ ಒಳ್ಳೆ-ಒಳ್ಳೆಯ ಪ್ರತಿಭರಿಗೆ ಅವಕಾಶ ಸಿಗಬೇಕು - ಆಗಲೇ ಕಲೆಯ ಜೀವನಕ್ಕೆ, ಕಲಾವಿದನ ಜೀವನಕ್ಕೆ ಒಂದು ಸಾರ್ಥಕ್ಯ ದಕ್ಕುವುದು" ಎನ್ನುತ್ತ ತಮ್ಮ ಮಾತುಗಳಿಗೆ ವಿರಾಮ ನೀಡುತ್ತಾರೆ 'ಶ್ರೀ ಪ್ರವೀಣ ರಬಕವಿ' ಅವರು..

More from Filmibeat

English summary
Actor, Theatre personality Praveen Rabakavi charming in Ninna Jothe Nanna Kathe serial;
Read more about: actor tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X