'ಹಿಟ್ಲರ್ ಕಲ್ಯಾಣ'ದ ನಟಿ ರಜನಿ 'ನೀ ಇರಲು ಜೊತೆಯಲಿ' ಧಾರಾವಾಹಿ ಒಪ್ಪಿದ್ದೇಕೆ? ಮತ್ತೆ ನೆಗೆಟಿವ್ ರೋಲ್ ಯಾಕೆ?
ಕನ್ನಡ ಕಿರುತೆರೆಯಲ್ಲಿ ದಾಖಲೆ ಸೃಷ್ಟಿಸಿದ ಧಾರಾವಾಹಿಗಳು ಒಂದೆರಡಲ್ಲ. ಒಂದೊಂದು ಧಾರಾವಾಹಿಗಳು ಐದಾರು ವರ್ಷ ನಿರಂತರವಾಗಿ ಪ್ರಸಾರ ಕಂಡಿವೆ. ನಿರಂತರವಾಗಿ ಪ್ರೇಕ್ಷಕರನ್ನು ಸೆಳೆದಿವೆ. ಇಂತಹ ಧಾರಾವಾಹಿಗಳಲ್ಲೊಂದು 'ಅಮೃತವರ್ಷಿಣಿ'. ಸ್ಟಾರ್ ಸುವರ್ಣದಲ್ಲಿ ನಿರಂತರವಾಗಿ ಆರು ವರ್ಷಗಳ ಕಾಲ ಪ್ರಸಾರ ಕಂಡಿದ್ದ ಈ ಧಾರಾವಾಹಿ ಮೂಲಕ ನಟಿ ರಜನಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಅತೀ ಹೆಚ್ಚು ವರ್ಷಗಳ ಕಾಲ ತೆರೆಮೇಲೆ ಒಂದೇ ಸೀರಿಯಲ್‌ನಲ್ಲಿ ನಾಯಕಿಯಾಗಿ ಕಂಡ ನಟಿ ಇವರೇ.
ಇತ್ತೀಚೆಗೆ 'ಹಿಟ್ಲರ್ ಕಲ್ಯಾಣ'ದ ಮೂಲಕ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡು ಮತ್ತೆ ವೀಕ್ಷಕರ ಗಮನ ಸೆಳೆದಿದ್ದರು. ಆ ಧಾರಾವಾಹಿ ಕೂಡ ಅಂತ್ಯ ಕಂಡ ಬಳಿಕ ಮತ್ತೆ ಸ್ಟಾರ್ ಸುವರ್ಣಗೆ ಕಮ್‌ಬ್ಯಾಕ್ ಮಾಡಿದ್ದಾರೆ. 'ನೀ ಇರಲು ಜೊತೆಯಲಿ' ಈ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಪಾತ್ರ ಹಾಗೂ ಕಿರುತೆರೆಯ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಮೆಲುಕು ಹಾಕಿದ್ದಾರೆ. 'ಅಮೃತವರ್ಷಿಣಿ' ಯಂತಹ ಮೆಗಾ ಸೀರಿಯಲ್ ಕೊಟ್ಟ ಬಳಿಕ ಗ್ಯಾಪ್ ಕೊಟ್ಟಿದ್ದೇಕೆ? ಅನ್ನೋದನ್ನೂ ರಿವೀಲ್ ಮಾಡಿದ್ದಾರೆ.

'ನೀ ಇರಲು ಜೊತೆಯಲಿ' ಒಪ್ಪಿದ್ದೇಕೆ?
"ನನಗೆ ಈ ಪಾತ್ರ ತುಂಬಾನೇ ಇಷ್ಟ ಆಗಿಯೇ ಒಪ್ಪಿಕೊಂಡಿದ್ದೇನೆ. ತುಂಬಾ ರಗಡ್ ಹಾಗೂ ಸ್ಟ್ರಾಂಗ್ ಆಗಿರುವ ಪಾತ್ರ ಅಂತಲೇ ಹೇಳಬಹುದು. ನನಗೆ ಹೊರಗಡೆಯಿಂದ ಬರುತ್ತಿರುವ ಕಮೆಂಟ್‌ಗಳು ಏನು ಅಂದರೆ, ತುಂಬಾನೇ ಕೊಬ್ಬು ಇದೆ. ಸ್ಟ್ರಿಕ್ಟ್ ಆಗಿದ್ದಾರೆ ಅಂತ ಹೇಳುತ್ತಿದ್ದಾರೆ. ಹಾಗೇ ಇನ್ನು ಕೆಲವರು ನಿಮಗೆ ತೊಂದರೆ ಆಗಿರುವುದರಿಂದ ಹಾಗೆ ರಿಯಾಕ್ಟ್ ಮಾಡುತ್ತಿದ್ದೀರ ಅಂತಲೂ ಹೇಳುತ್ತಿದ್ದಾರೆ. ಹೀಗಾಗಿ ಇಷ್ಟ ಪಟ್ಟ ಪಾತ್ರವನ್ನು ವೀಕ್ಷಕರು ಒಪ್ಪಿಕೊಳ್ಳುತ್ತಿದ್ದಾರೆ."
ಮುಂದೆ ನಿಮ್ಮ ಪಾತ್ರದಲ್ಲಿ ಬದಲಾವಣೆ ಆಗಬಹುದೇ?
"ಪಾತ್ರದಲ್ಲಿ ಏರಿಳಿತಗಳು ಇದ್ದೇ ಇರುತ್ತೆ. ಅವಳಿಗೆ ಏನಾದರೂ ಆಗಬೇಕು ಅಂದರೆ, ಹೇಗೆ ಬೇಕಾದರೂ ಬದಲಾಗುತ್ತಾಳೆ. ಆತರ ಏನಾದರೂ ಬದಲಾವಣೆಗಳನ್ನು ನೋಡಬಹುದು. ವೀಕ್ಷಕರ ದೃಷ್ಟಿಯಿಂದ ತುಂಬಾನೇ ದೊಡ್ಡ ಬದಲಾವಣೆ ಅಂತೇನು ಆಗುವುದಿಲ್ಲ. ಈ ಪಾತ್ರ ಹೀಗೆ ಮುಂದಕ್ಕೆ ಸಾಗುತ್ತೆ."
ನೆಗೆಟಿವ್ ಶೇಡ್ ಪಾತ್ರಗಳೇ ಯಾಕೆ?
"ನೆಗೆಟಿವ್ ಶೇಡ್ ಅಂದ ಕೂಡಲೇ ಎಲ್ಲರ ತಲೆಯಲ್ಲಿ ಬರೋದು ಇವಳು ಏನೋ ಮಾಡುತ್ತಾಳೆ. ಅವಳು ಏನೋ ಮಾಡುತ್ತಾಳೆ ಅಂತ ಜನರು ಮೊದಲೇ ಹೇಳುವುದಕ್ಕೆ ಶುರು ಮಾಡುತ್ತಾರೆ. ಇಲ್ಲಿ ಏನಾಗಿದೆ ಅಂದರೆ, ನನಗೂ ಕೃಷ್ಣ ಪಾತ್ರಕ್ಕೂ ಇಲ್ಲಿ ಟಗ್ ಆಫ್ ವಾರ್ ಇರುತ್ತೆ. ಆ ಟಾಮ್ ಅಂಡ್ ಜೆರ್ರಿ ತರಹದ ಕಿತ್ತಾಟಗಳು ನೋಡುಗರಿಗೆ ಖುಷಿ ಕೊಡುತ್ತೆ. ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ತೋರಿಸುತ್ತಾರೆ."
ನಿಮ್ಮನ್ನು ಸ್ಟಾರ್ ಮಾಡಿದ 'ಅಮೃತವರ್ಷಿಣಿ' ಬಗ್ಗೆ ಏನಂತೀರಾ?
"ಅಮೃತಾ ವರ್ಷಿಣಿ ನನ್ನ ಲೈಫ್‌ನಲ್ಲೇ ಒಂದು ಮೈಲಿಗಲ್ಲು. ಅದು ನೆನಪುಗಳನ್ನು ಮೆಲುಕು ಹಾಕೋದಲ್ಲ. ಅದೇ ನನ್ನ ಜೀವನದ ಒಂದು ಭಾಗ. ಯಾಕಂದ್ರೆ ಆರು ವರ್ಷಗಳ ಕಾಲ 1700 ಎಪಿಸೋಡ್‌ಗಳು ಬಂದಿದೆ ಅಂದರೆ ನಂಬುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಒಂದೇ ಪಾತ್ರದಲ್ಲಿ ಅಷ್ಟು ವರ್ಷ ನಿಭಾಯಿಸೋದು, ಬೆಳಗ್ಗೆಯಿಂದ ರಾತ್ರಿವರೆಗೂ ಅದೇ ಪಾತ್ರದಲ್ಲಿ ಇರಬೇಕು. ಜನರ ಪ್ರೀತಿ ಇನ್ನೊಂದು ಕಡೆ. ಎಲ್ಲಿಗೆ ಹೋದರೂ ಇಂತಹ ಒಬ್ಬ ಮಗಳು ಇರಬೇಕು, ಇಂತಹ ಒಬ್ಬ ಹೆಂಡ್ತಿ ಇರಬೇಕು ಅಂತ ಹೇಳುತ್ತಿದ್ದರು. ಇಂದಿಗೂ ಕೂಡ ಸಾಕಷ್ಟು ಮಂದಿ ಯೂಟ್ಯೂಬ್‌ನಲ್ಲಿ ಹಾಕಿಕೊಂಡು ನೋಡುತ್ತೇವೆ ಎಂದು ಹೇಳುತ್ತಾರೆ. ಹೀಗಾಗಿ ಮತ್ತೆ ಸುವರ್ಣಗೆ ಕಮ್‌ಬ್ಯಾಕ್ ಮಾಡಿದ್ದು ಖುಷಿಯಿದೆ."

ಸೀರಿಯಲ್ ಲೋಕಕ್ಕೆ ಬಂದಿದ್ದೇಗೆ?
"ಪಡುವಾರಹಳ್ಳಿ ಪಡ್ಡೆಗಳು ಅಂತ ಒಂದು ಸೀರಿಯಲ್ ಬರುತ್ತಿತ್ತು. ಅದರಲ್ಲಿ ಒಂದೊಂದು ಎಪಿಸೋಡ್ ಒಬ್ಬೊಬ್ಬರು ಆರ್ಟಿಸ್ಟ್‌ಗಳು ಬರುವಂತಹ ಎಪಿಸೋಡ್‌ಗಳು ಇರುತ್ತಿತ್ತು. ಅದರಲ್ಲಿ ಮೊದಲು ಒಂದು ಎಪಿಸೋಡ್‌ನಲ್ಲಿ ಆಕ್ಟ್ ಮಾಡಿದ್ದೆ. ಫಾರಿನ್ ರಿಟರ್ನ್ ಪಾತ್ರದಲ್ಲಿ ನಟಿಸಿದ್ದೆ. ಅದೇ ನಾನು ಕ್ಯಾಮರಾ ಫೇಸ್ ಮಾಡಿದ ಮೊದಲ ಧಾರಾವಾಹಿ. ಅದಾದ್ಮೇಲೆ ನಾನು ಸ್ವಲ್ಪ ದಿನ ಆಕ್ಟ್ ಮಾಡಲಿಲ್ಲ. ಆದರೆ, ಅಲ್ಲಿಂದ ನಟಿಸಬೇಕು ಅನ್ನೋ ಒಂದು ಹುಚ್ಚು ಶುರುವಾಯ್ತು. ಒಂದು ಲೋಕಲ್ ಕೂಲ್ ಡ್ರಿಂಕ್ಸ್ ಜಾಹೀರಾತು ಮಾಡುವುದಕ್ಕೆ ಹೋದಾಗ ಅಲ್ಲಿ ಒಬ್ಬರು ನನಗೆ ಅಮೃತವರ್ಷಿಣಿಗೆ ಲೀಡ್ ಕೊಟ್ಟರು. ಅಲ್ಲಿಂದ ನನ್ನ ಜರ್ನಿ ಶುರುವಾಯ್ತು."
ಅಮೃತವರ್ಷಿಣಿ ಅಷ್ಟೊಂದು ಸಕ್ಸಸ್ ಆಗಿದ್ದೇಗೆ?
"ಅಮೃತವರ್ಷಿಣಿ ಟ್ರೆಂಡ್ ಹುಟ್ಟಾಕಿದ ಸೀರಿಯಲ್ ಅಂದರೆ ತಪ್ಪಾಗಲ್ಲ. ಏಕೆ ಅಂತ ನೀವು ನೋಟೀಸ್ ಮಾಡುವುದಾರೇ, ಹೀರೋ ಎತ್ತರವಿದ್ದರು. ನಾನು ಕುಳ್ಳಗಿದ್ದೆ. ಅದೇ ಕಾರಣಕ್ಕೆ ನಾನು ರಿಜೆಕ್ಟ್ ಆಗಿದ್ದೆ. ಆಮೇಲೆ ಡೈರೆಕ್ಟರ್ ರವಿ ಗರಣಿ ಸರ್ ಇಲ್ಲ ಈ ಪಾತ್ರಕ್ಕೆ ಅವರು ಸರಿಯಾಗಿದ್ದಾರೆ. ಇವರೇ ಮಾಡಬೇಕು ಅಂತ ಹೇಳಿದ್ದಕ್ಕೆ ಧಾರಾವಾಹಿಯಲ್ಲಿ ಮುಂದುವರೆದೆ. ಕೊನೆಗೆ ಅದೇ ಟ್ರೆಂಡ್ ಆಗುವುದಕ್ಕೆ ಶುರುವಾಯ್ತು. ನಮ್ಮ ಸೀರಿಯಲ್ ಆದ್ಮೇಲೆ ಅಗ್ನಿಸಾಕ್ಷಿ ಬಂತು. ಆ ಪೇರ್ ಕೂಡ ಹಾಗೇ ಇತ್ತು. ಅಂದಿನಿಂದ ಅದೇ ಫಾಲೋ ಆಗುತ್ತಿದೆ."
ನೆಗೆಟಿವ್ ಪಾತ್ರಗಳಲ್ಲಿ ಯಾಕೆ ನಟಿಸುತ್ತೀರಿ?
"ಅಮೃತವರ್ಷಿಣಿ ಆದ್ಮೇಲೆ ನಾನು ಮಾಡಿದ್ದು ಆತ್ಮಬಂಧನ. ಅದು ಕೂಡ ಪಾಸಿಟಿವ್ ಪಾತ್ರವೇ ಇತ್ತು. ಅಮೃತಾ ಪಾತ್ರಕ್ಕೆ ಹೋಲಿಕೆ ಆಗುತ್ತಿತ್ತು. ಅದಾದ್ಮೇಲೆ ಏನಾದರೂ ಬದಲಾವಣೆ ಬೇಕು ಅಂದಾಗ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಮಾಡಿದ್ದೇ ಹಿಟ್ಲರ್ ಕಲ್ಯಾಣ. ಅಲ್ಲೂ ಕೂಡ ಪಾಸಿಟಿವ್ ಪಾತ್ರವೇ ಇತ್ತು. ಆಮೇಲೆ ಕಥೆಯನ್ನು ಬದಲಾವಣೆ ಮಾಡಿಕೊಂಡು ಜನರು ನನ್ನನ್ನು ನೆಗೆಟಿವ್ ಶೇಡ್‌ನಲ್ಲಿ ಇಷ್ಟ ಪಡುತ್ತಾರಾ ಇಲ್ವಾ ಅಂತ ಟ್ರಯಲ್ ನೋಡಿದರು. ಆ ಟ್ರಯಲ್‌ನಲ್ಲಿ ಸಕ್ಸಸ್ ಆಯ್ತು. ರೇಟಿಂಗ್ ಚೆನ್ನಾಗಿ ಬಂತು. ಪಾತ್ರ ಹಾಗೇ ಮುಂದುವರೆಯಿತು. ಅಲ್ಲಿ ಪರ್ಫಾಮೆನ್ಸ್ ನೋಡಿದ್ದರು. ಆ ಕ್ಯಾರೆಕ್ಟರ್‌ಗೂ ಈ ಕ್ಯಾರೆಕ್ಟರ್‌ಗೂ ಸ್ವಲ್ಪ ಹೋಲಿಕೆಯಿದೆ. ಹಿಟ್ಲರ್ ಕಲ್ಯಾಣದಲ್ಲಿ ಬೋಲ್ಡ್ ಆಗಿ ಹಿಟ್ ಮಾಡುತ್ತಾಳೆ. ಇದರಲ್ಲಿ ಸ್ವಲ್ಪ ಕಂಟ್ರೋಲ್ ಮಾಡಿಕೊಂಡು ಹಿಟ್ ಮಾಡುವಂತಹ ಪಾತ್ರ. ನನಗೆ ಈಗಲೂ ಸಾಕಷ್ಟು ಮಂದಿ ಯಾಕೆ ನೆಗೆಟಿವ್ ಪಾತ್ರ ಮಾಡುತ್ತೀರಿ ಎಂದು ಕೇಳುತ್ತಾರೆ. ಒಬ್ಬ ನಟಿಯಾಗಿ ಬದಲಾವಣೆ ಬೇಕು ಅಂತ ಅನಿಸುತ್ತೆ."
ನಟನೆಗೆ ಲಾಂಗ್ ಗ್ಯಾಪ್ ಕೊಟ್ಟಿದ್ದು ಯಾಕೆ?
"ನಾನು ಆರು ವರ್ಷ ಒಂದು ಸೀರಿಯಲ್ ಮಾಡಿದ್ದೆ. ನಾನು ಗ್ಯಾಪ್ ತೆಗೆದುಕೊಂಡಿದಕ್ಕೆ ಅದೇ ಪ್ರಮುಖ ಕಾರಣ. ಇವಳು ತುಂಬಾ ವರ್ಷ ಮಾಡಿದ್ದಾಳೆ. ಫೇಸ್ ಬಹಳ ಆಗಿಬಿಟ್ಟಿದೆ ಎಂಬ ಕಾರಣಕ್ಕೆ ನನಗೆ ಅವಕಾಶಗಳು ಬರಲಿಲ್ಲ. ನನಗೆ ಹೇಳಿಕೊಳ್ಳುವುದಕ್ಕೆ ಮುಜುಗರನೂ ಇಲ್ಲ. ಬೇಜಾರು ಕೂಡ ಇಲ್ಲ. ಇದೇ ಲೈಫ್. ಎಲ್ಲರ ಜೀವನದ್ಲೂ ಏರಿತಗಳು ಇದ್ದೇ ಇರುತ್ತೆ. ಒಳ್ಳೆ ಸಕ್ಸಸ್ ಕೊಟ್ಟಿದ್ದೀವಿ. ಅದನ್ನು ಅಷ್ಟೇ ಜವಾಬ್ದಾರಿಯಿಂದ ತೆಗೆದುಕೊಂಡು ಹೋಗಿದ್ದೀವಿ. ಆಮೇಲೆ ಅವಕಾಶ ಬರಲಿಲ್ಲ ಅಂದಾಗ ದೂಷಿಸಿಕೊಂಡು ಇರೋದಕ್ಕೆ ಆಗಲಿಲ್ಲ. ಅದನ್ನು ಬ್ಯಾಲೆನ್ಸ್ ಮಾಡಬೇಕಷ್ಟೇ. ಆದರೆ, ನನಗೇನು ಬೇಜಾರಿಲ್ಲ."
'ನೀ ಇರಲು ಜೊತೆಯಲಿ'ಯಿಂದ ನಿಮ್ಮ ನಿರೀಕ್ಷೆಯೇನು?
"ನೀ ಇರಲು ಜೊತೆಯಲಿ ಸೀರಿಯಲ್ ಸ್ವಲ್ಪ ವಿಭಿನ್ನವಾಗಿದೆ. ಜನರು ಕೂತು ನೋಡಿದಾಗ, ಎಲ್ಲಾ ಪಾತ್ರಗಳು ಮನೆಯಲ್ಲಿ ಇರುವಂತಹ ಜನರಂತೆಯೇ ತೋರಿಸಿದ್ದಾರೆ. ಹಾಗಾಗಿ ಜನರಿಗೆ ಇಷ್ಟ ಆಗುತ್ತೆ. ಹೀಗಾಗಿ ಜನರು ಕೂತು ನೋಡಬೇಕು. ಆಗಲೇ ಕಥೆ ಏನಾಗುತ್ತೆ? ಪಾತ್ರಗಳು ಏನಾಗುತ್ತವೆ? ಅಂತ ಗೊತ್ತಾಗುತ್ತೆ. ಒಂದು ವೇಳೆ ಜನರು ಕೂತು ನೋಡಿದರೆ, ಈ ಸೀರಿಯಲ್ ತುಂಬಾ ದಿನ ಹೋಗುತ್ತೆ. ನನ್ನ ಆಸೆ ಕೂಡ ಅದೇನೆ." ಎನ್ನುತ್ತಾರೆ ರಜನಿ.


Click it and Unblock the Notifications











