Interview: ನ್ಯೂಸ್ ಚಾನೆಲ್ ನಿರೂಪಣೆಯಿಂದ 'ನೀನಾದೆ ನಾ' ಧಾರಾವಾಹಿವರೆಗೆ.. ಸಿಂಚನಾ ಇಂಟ್ರೆಸ್ಟಿಂಗ್ ಜರ್ನಿ?
ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ದೇವಕಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಸಿಂಚನಾ ಪ್ರೀತಂ ಶೆಟ್ಟಿ. ಪತ್ರಕರ್ತೆಯಾಗಿ ಜರ್ನಿ ಆರಂಭಿಸಿದ ಸಿಂಚನಾ ನಂತರ ನ್ಯೂಸ್ ಚಾನೆಲ್‌ನಲ್ಲಿ ನಿರೂಪಕಿಯಾಗಿ ಮಿಂಚಿದ್ದರು. ಬಳಿಕ 'ನೀನಾದೆ ನಾ' ಹಾಗೂ 'ಕಾವೇರಿ ಕನ್ನಡ ಮೀಡಿಯಂ' ಎರಡು ಧಾರಾವಾಹಿಗಳ ನಿರ್ಮಾಪಕಿ.
ಕೊಡಗಿನವರಾಗಿರುವ ಸಿಂಚನಾ ಪ್ರೀತಂ ಶೆಟ್ಟಿ ಜರ್ನಿ ಸಖತ್ ಇಂಟ್ರೆಸ್ಟಿಂಗ್. 12ನೇ ವಯಸ್ಸಿನಲ್ಲಿಯೇ ದುಡಿಯುವುದಕ್ಕೆ ಆರಂಭಿಸಿದ್ದ ಸಿಂಚನಾ ಈಗ ಎರಡೆರಡು ಧಾರಾವಾಹಿಗಳ ನಿರ್ಮಾಪಕಿ. ಜೊತೆಗೆ ನಟನೆಯನ್ನೂ ಮುಂದುವರೆಸಿರುವ ಈ ನಟಿ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಇಂಟ್ರೆಸ್ಟಿಂಗ್ ಜರ್ನಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಹಿನ್ನೆಲೆ ಏನು?
"ನಾನು ಮೂಲತ: ಕೊಪ್ಪ ಅಂತ ಕೊಡಗಿನವಳು. ನನ್ನ ತಂದೆ ಎಂ ಎನ್ ಚಂದ್ರ ಮೋಹನ್ ಅವರು ಪತ್ರಕರ್ತರು. ನನ್ನ ಅಮ್ಮ ವನಿತಾ ಚಂದ್ರ ಮೋಹನ್ ಪತ್ರಕರ್ತೆ ಜೊತೆಗೆ ಅವರದ್ದೇ ಒಂದು ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಾರೆ. ನಾನು ಓದಿದ್ದೆಲ್ಲ ಊರಿನಲ್ಲಿಯೇ. ಡಿಗ್ರಿ ಜೆಎಸ್‌ಎಸ್ ಕಾಲೇಜಿನಲ್ಲಿ ಮಾಡಿದ್ದೇನೆ. ನಾನು 12 ವರ್ಷ ಇದ್ದಾಗ ನಾನು ದುಡಿಯುವುದಕ್ಕೆ ಅಂತ ಶುರು ಮಾಡಿದೆ. ಕೊಡಗಿನಲ್ಲಿ ಒಂದು ನ್ಯೂಸ್ ಇತ್ತು ಶಕ್ತಿ ಅಂತ. ಅದನ್ನು ಮನೆ ಮನೆಗೆ ಹಾಕುತ್ತಿದೆ. ಆಗ ನನಗೆ ತಿಂಗಳಿಗೆ 150 ರೂ.ಸಿಗುತ್ತೆ"
ಜರ್ನಲಿಸಂ ಕಡೆಗೆ ಒಲವು ಮೂಡಿದ್ದೇಗೆ?
"ನಮ್ಮ ತಂದೆಯದ್ದೇ ಒಂದು ಕಾವೇರಿ ಚಾನೆಲ್ ಅಂತ ಇದೆ. ನಾನು 10ನೇ ತರಗತಿ ಇರುವಾಗ ವಾರ್ತಾ ವಾಚಕಿಯಾಗಿ ಮಾಡುತ್ತಿದ್ದೆ. ಅಲ್ಲಿಂದ ನನಗೆ ಜರ್ನಲಿಸಂ ಕಡೆಗೆ ಒಲವು ಮೂಡಿತು. ನಾನು ಡಿಗ್ರಿ ಮಾಡುತ್ತಿರುವಾಗ ವಿಶ್ವವಾಣಿಯಲ್ಲಿ ನ್ಯೂಸ್ ರೈಟರ್ ಆಗಿ ಕೆಲಸ ಸಿಕ್ಕಿತು. ಆನಂತರ ಕಸ್ತೂರಿಯಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸ ಸಿಕ್ಕಿತ್ತು. ಆಮೇಲೆ ಪ್ರಜಾ ಟಿವಿಯಲ್ಲಿ ಕೆಲಸ ಮಾಡಿದೆ."

ನಿರೂಪಕಿಯಾಗಿದ್ದವರು ನಟನೆ ಕಡೆಗೆ ವಾಲಿದ್ದೇಗೆ?
"ನಾನು ಟಿವಿಯಲ್ಲಿ ನಿರೂಪಕಿಯಾಗಿದ್ದಾಗ ನಮ್ಮ ಅಮ್ಮ ಸೀರಿಯಲ್‌ನಲ್ಲಿ ಬರುವ ಹುಡುಗಿಯರ ತಂದೆ ತಾಯಿ ಎಷ್ಟು ಹೆಮ್ಮೆ ಪಡಬಹುದಲ್ವಾ ಎಂದರು. ನಾನೂ ಟಿವಿಯಲ್ಲಿ ಬರ್ತಿನಲ್ಲ ಅಂದೆ. ನೀವು ಬೇರೆ. ಅವರ ಹಾಗೆ ಸೆಲೆಬ್ರಿಟಿಗಳಲ್ವಲ್ಲ ಎಂದು ಹೇಳಿದ್ದರು. ಅದು ನನ್ನನ್ನು ಕಾಡುವುದಕ್ಕೆ ಶುರುವಾಗಿತ್ತು. ಆ ವೇಳೆ ನನಗೆ ಸೀರಿಯಲ್‌ನಿಂದ ಆಫರ್ ಬರುತ್ತಿತ್ತು. ಆಗ ಯಾಕೆ ಕೊಡಬಾರದು ಅಂತ ಆಡಿಷನ್ ಕೊಟ್ಟೆ. ಸೆಲೆಕ್ಟ್ ಆಯ್ತು. ಆ ಸೀರಿಯಲ್ 'ಕಣ್ಮಣಿ'. ಉದಯ ಟಿವಿಯಲ್ಲಿ ಪ್ರಸಾರ ಆಗಿತ್ತು."
ನಿರ್ಮಾಪಕಿಯಾಗೋದು ನಿಮ್ಮ ಕನಸೇ?
"ಈ ಮಧ್ಯೆ ನನಗೊಂದು ಪ್ರಶ್ನೆ ಕಾಡುತ್ತಿತ್ತು. ನನ್ನ ಅಪ್ಪನ ಕನಸು ಪತ್ರಕರ್ತೆ ಆಗಬೇಕು ಅಂತಿತ್ತು ಆದೆ. ಅಮ್ಮನ ಕನಸು ನಟಿಯಾಗಬೇಕು ಅಂತ. ಅದೂ ಆಯ್ತು. ನನ್ನ ಕನಸೇನು? ಅಂತ ಕಾಡಿತ್ತು. ಮೂರು ನಾಲ್ಕು ಸೀರಿಯಲ್ ಮಾಡಿದೆ. ಒಂದು ಸಿನಿಮಾನೂ ಮಾಡಿದೆ. ಕಣ್ಮಣಿ ಸೀರಿಯಲ್ ನಿರ್ದೇಶಕರು ಪ್ರೀತಂ ಶೆಟ್ಟಿ ಇದ್ದಾರಲ್ಲ ಅವರೇ ನನ್ನ ಪತಿ. ಹಾಗಂತ ಧಾರಾವಾಹಿ ಮಾಡುವಾಗ ಲವ್ ಅಂತ ಏನೂ ಇರಲಿಲ್ಲ. ಮದುವೆ ಆದ್ಮೇಲೆ ನಟನೆ ಬಿಟ್ಟು ಬಿಟ್ಟಿದೆ. ನಮ್ಮದೇ ಪ್ರೊಡಕ್ಷನ್ ಹೌಸ್‌ನಲ್ಲಿ 'ಕಾವೇರಿ ಕನ್ನಡ ಮೀಡಿಯಂ ಹಾಗೂ ನೀನಾದೆ ನಾ ಅಂತ ಶೋ ಬರುತ್ತಿದೆ. ಅದರಲ್ಲಿ ನಾನು ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ."

'ದೇವಕಿ' ಪಾತ್ರ ಸಿಕ್ಕಿದ್ದು ಹೇಗೆ?
"ದೇವಕಿ ಅನ್ನುವ ಪಾತ್ರಕ್ಕೆ ಹುಡುಕಾಟ ಮಾಡಿದ್ವಿ. ಒಬ್ಬರು ಅದ್ಭುತ ಕಲಾವಿದರು ಸಿಕ್ಕಿದ್ದರು. ನೀನಾದೆ ನಾ ಶೂಟ್ ಮಾಡುವುದಕ್ಕೆ 10 ದಿನ ಸಮಯ ಅಷ್ಟೇ ಇತ್ತು. ಅಷ್ಟರಲ್ಲೇ ಅವರು ಯಾವುದೋ ಕಾರಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಅಂತ ಗೊತ್ತಾಯ್ತು. ಆಗ ನಮ್ಮ ಸುವರ್ಣದಲ್ಲಿ ಫಿಕ್ಷನ್ ಹೆಡ್ ಶಿಲ್ಪ ಮೇಡಂ ಅಂತ ಇದ್ದಾರೆ ಅವರು ಮೊದಲ ದಿನವೇ ಹೇಳಿದ್ದರು. ದೇವಕಿ ಪಾತ್ರ ಮಾಡುವುದಕ್ಕೆ ಆಗಲ್ಲ ಎಂದಿದ್ದೆ. ಈಗ ಟೈಟಲ್ ಇಲ್ಲ ಲುಕ್ ಟೆಸ್ಟ್ ಮಾಡಿ ಕಳಿಸು ಅಂದರು. ಅದು ಓಕೆ ಆಯ್ತು. ತಕ್ಷಣ ಫ್ಲೈಟ್ ಹತ್ತಿಕೊಂಡು ಬಾ ಅಂದರು"
ನಿಮ್ಮ ಆಸೆ ಏನು?
"ನನಗೆ ನಿರ್ದೇಶನ ಅನ್ನೋದು ತುಂಬಾನೇ ಇಷ್ಟ. ಹಾಗಂತ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದು ಇಷ್ಟ ಇಲ್ಲ ಅಂತಲ್ಲ. ಕಂಟೆಂಟ್ ಇರುವ ಸಿನಿಮಾಗಳನ್ನು ನಿರ್ದೇಶನ ಮಾಡಬೇಕು ಅನ್ನುವ ಆಸೆಯಿದೆ. ಅದಕ್ಕೆ ಇನ್ನೂ ಪಕ್ವತೆ ಬೇಕು. ಅವರ ಎರಡು ಮೂರು ಸಿನಿಮಾಗೆ ಸಹಾಯಕಿಯಾಗಿ ಕೆಲಸವನ್ನು ಮಾಡಿದ್ದೀನಿ. ಇನ್ನೊಂದು ಐದು ವರ್ಷ ಬಿಟ್ಟು ಸಿನಿಮಾ ನಿರ್ದೇಶನ ಮಾಡಬೇಕು ಅನ್ನೋ ಆಸೆಯಿದೆ."
ಮಲ್ಟಿಟಾಸ್ಕಿಂಗ್ ಮಾಡ್ತಿದ್ದೀರಿ ಹೇಗನಿಸುತ್ತೆ?
"ನಾನು ಒಂದು ಕಡೆ ಕಾವೇರಿ ಕನ್ನಡ ಮೀಡಿಯಂ ನೋಡಿಕೊಳ್ಳಬೇಕು. ಇನ್ನೊಂದು ಕಡೆ ನೀನಾದೆ ನಾ ನೋಡಿಕೊಳ್ಳಬೇಕು. ಇನ್ನೊಂದು ನನ್ನ ಪಾತ್ರಕ್ಕೆ ಮೋಸ ಮಾಡದೇ ನ್ಯಾಯವದಗಿಸಬೇಕು. ಮತ್ತೊಂದು ಕಡೆ ಹೆಂಡತಿಯಾಗಿಯೂ ಇರಬೇಕು. ಎಲ್ಲವೂ ಒಟ್ಟಿಗೆ ನಡೆಯುತ್ತಿರುತ್ತೆ. ನಾನು ಮೊದಲ ಆಕ್ಟಿಂಗ್ ಒಪ್ಪಿಕೊಂಡು ತಪ್ಪು ಮಾಡಿದೆ ಅಂತ ಅನಿಸಿತ್ತು. ಆದರೆ, ಈಗ ತಾಳ್ಮೆ ಬೇಕು. ನನ್ನಲ್ಲಿ ಎಲ್ಲದನ್ನೂ ಹ್ಯಾಂಡಲ್ ಮಾಡುವುದಕ್ಕೆ ತಾಕತ್ತು ಇದೆ ಅಂತ ಅರ್ಥ ಆಯ್ತು."
ದೇವಕಿ ಪಾತ್ರಕ್ಕೆ ಹೇಗಿದೆ ಪ್ರತಿಕ್ರಿಯೆ?
"ದೇವಕಿ ಪಾತ್ರ ಮಾಡುವಾಗ ಕಾನ್ಫಿಡೆನ್ಸ್ ಇರಲಿಲ್ಲ. ಆಮೇಲೆ ಜನರು ಪ್ರತಿಕ್ರಿಯೆ ನೀಡದ ಮೇಲೆ ಸ್ವಲ್ಪ ಧೈರ್ಯ ಬಂದಿದೆ. ಇದೊಂದು ಕಾಮಿಡಿ ವಿಲನ್ ಆಗಿದ್ದರಿಂದ ಸೆಟ್‌ನಲ್ಲಿ ನಗುತ್ತಿರುತ್ತಾರೆ. ಎಲ್ಲಾ ಸೀರಿಯಲ್‌ಗಳಲ್ಲೂ ವಿಲನ್‌ಗಳು ಇದ್ದಾರೆ. ದೇವಕಿ ತರ ವಿಲನ್ ಇಲ್ಲ. ಎಲ್ಲ ಸೀರಿಯಲ್‌ನಲ್ಲಿ ಕಾಮಿಡಿಯನ್ ಇದ್ದಾರೆ. ಆದರೆ, ದೇವಕಿ ತರ ಇಲ್ಲ."
ಕೊನೆಯಲ್ಲಿ ಮರೆಯಲಾಗದ ಘಟನೆ ಏನು?
"ವಿಶ್ವವಾಣಿಗೆ ಬಂದು ಸೇರಿಕೊಂಡೆ ಆಗ ನನ್ನನ್ನು ಒಂದು ಪಿಜಿಗೆ ಸೇರಿಸಿ ಹೋದರು. ನಾನು ಸೆಕೆಂಡ್ ಪ್ಲೋರ್‌ನಲ್ಲಿದ್ದೆ. ಮಾರನೇ ದಿನ ಪೊಲೀಸರು ಬಂದು ಇಲ್ಲಿ ನಡೆಯಬಾರದ್ದೆಲ್ಲ ನಡೀತಿದೆ. ತಕ್ಷಣವೇ ಖಾಲಿ ಮಾಡಬೇಕು ಅಂತ ಹೇಳಿದರು. ಆಗ ಒಂದು ಸಾವಿರ ಕೈಯಲ್ಲಿ ಇತ್ತು. ಅಮ್ಮನಿಗೆ ಹೇಳುವ ಹಾಗಿಲ್ಲ. ಹೀಗೆ ನಡೀತಿತ್ತು ಅಂದರೆ ಗಾಬರಿ ಆಗುತ್ತಾರೆ. ಊರೆಲ್ಲ ಸುತ್ತಿ ಹಣ ಖಾಲಿ ಆಗಿತ್ತು. ಆಗ ಅಮ್ಮನಿಗೆ ಫೋನ್ ಮಾಡಿದೆ. ತಕ್ಷಣ ಅಮ್ಮ ಒಬ್ಬರು ಪತ್ರಕರ್ತರಿಗೆ ಫೋನ್ ಮಾಡಿದ್ದರು. ಅವರು ಕರೆದುಕೊಂಡು ಹೋದರು. ಇವತ್ತೂ ಅದನ್ನು ನೆನಪಿಸಿಕೊಂಡರೆ ಬೇಜಾರು ಆಗುತ್ತೆ." ಎನ್ನುತ್ತಾರೆ ಸಿಂಚನಾ.


Click it and Unblock the Notifications











