'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸ್ಬೇಕಿತ್ತು ನಟ ಸ್ಕಂದ ಅಶೋಕ್ ; ಆ ಪಾತ್ರ ಯಶ್ ಪಾಲಾಗಿದ್ದೇಗೆ?
ಸ್ಕಂದ ಅಶೋಕ್ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಚಿಕ್ಕಮಗಳೂರಿನ ಅಪ್ಪಟ ಕನ್ನಡದ ಪ್ರತಿಭೆ. ಚಿತ್ರರಂಗದ ಹಿನ್ನೆಲೆಯೇ ಇಲ್ಲದೆ ಬಂದ ಇವರನ್ನು ಮಲಯಾಳಂ ಚಿತ್ರರಂಗ ಮೊದಲು ಗುರುತಿಸಿತ್ತು. ಅದೇ ಸಿನಿಮಾವೇ 'ನೋಟ್ ಬುಕ್. ಸ್ಕಂದ ಇಟ್ಟ ಮೊದಲ ಹೆಜ್ಜೆಯೇ ಯಶಸ್ಸು ಕಂಡಿತ್ತು.
ಸ್ಕಂದ ಅಶೋಕ್ ಅವರ ನಟನಾ ಜರ್ನಿ ಒಂದು ರೋಚಕ ಕಥೆ. ಮಲಯಾಳಂನ 'ನೋಟ್ ಬುಕ್' ಸಿನಿಮಾದಲ್ಲಿ ನಟಿಸಿದ ಬಳಿಕ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಬೇಕಿತ್ತು. ಕೊನೆಯ ಕ್ಷಣದಲ್ಲಿ ಆ ಪಾತ್ರದಲ್ಲಿ ಯಶ್ ನಟಿಸಿದ್ದರು. ಅಷ್ಟಕ್ಕೂ ಈ ಪಾತ್ರ ಮಿಸ್ ಆಗಿದ್ದೇಗೆ? ಚಿತ್ರರಂಗಕ್ಕೆ ಬಂದಿದ್ದೇಗೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡ ಜೊತೆ ಸ್ಕಂದ ಅಶೋಕ್ ವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
'ನೋಟ್‌ಬುಕ್' ಸಿನಿಮಾ ಸಿಕ್ಕಿದ್ದು ಹೇಗೆ?
"ನನ್ನದು ರೈತಾಪಿ ಕುಟುಂಬ. ಕಾಫಿ ತೋಟ, ಮೆಣಸು ತೋಟವಿತ್ತು. ಸುಮಾರು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬರುತ್ತಿದ್ದರು. ಅಲ್ಲಿಗೆ ಹೋಗಬೇಕು ಅಂತ ಇತ್ತು. ಆದರೆ, ಅದನ್ನು ಬಿಟ್ಟು ಬೇರೆ ಏನಾದರೂ ಮಾಡಬೇಕು ಅಂತ ಇತ್ತು ತಲೆಯಲ್ಲಿ. ಹಾಗಾಗಿ 17 ವರ್ಷವಿರುವಾಗ ನನ್ನ ಫ್ರೆಂಡ್ ಫೋಟೊಗಳನ್ನು ತೆಗೆದಿದ್ದ. ಅವರು ಚಿಕ್ಕಮಗಳೂರಿನವರೇ. ಚೆನ್ನೈನಲ್ಲಿ ಇದ್ದರು. ಅವರ ತಾಯಿ ತ್ರಿಶಾ ಅವರನ್ನೆಲ್ಲ ಚಿತ್ರರಂಗ ಪರಿಚಯಿಸಿದ್ದರು. ಅವರ ಆಫೀಸ್‌ಗೆ ಮಲಯಾಳಂನ ನೋಟ್ ಬುಕ್ ಡೈರೆಕ್ಟರ್ ಬಂದಿದ್ದರು. ಆಗ ನನ್ನ ಫೋಟೊಗಳನ್ನು ನೋಡಿ ಇವನೇ ಬೇಕು ಅಂತ ನಮ್ಮ ಮನೆಯವರನ್ನು ಒಪ್ಪಿ ಮೊದಲ ಸಿನಿಮಾ ಶುರುವಾಯ್ತು."

'ಮೊಗ್ಗಿನ ಮನಸ್ಸು' ಮಿಸ್ ಆಗಿದ್ದೇಗೆ?
"ಮೊಗ್ಗಿನ ಮನಸ್ಸು ಸಿನಿಮಾ ಕೂಡ ಅದೇ ಬ್ಯಾಕ್‌ಗ್ರೌಂಡ್‌ನಲ್ಲಿ ಇತ್ತು ಅಂತ ಯಶ್ ಮಾಡಬೇಕಿದ್ದ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಆ ವೇಳೆ ನನಗೆ ಆಕ್ಸಿಡೆಂಟ್ ಆಗಿ ಕಾಲು ಐದು ಕಡೆ ಮುರೀತು. ಆ ಸಿನಿಮಾವನ್ನು ಮಾಡುವುದಕ್ಕೆ ಆಗಿರಲಿಲ್ಲ."
ಮಲಯಾಳಂ ಭಾಷೆ ಕಷ್ಟ ಅನಿಸಲಿಲ್ಲವೇ?
"ನನಗೆ ಕನ್ನಡ ಬಿಟ್ಟರೆ, ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದಿದ್ದರಿಂದ ಇಂಗ್ಲಿಷ್ ಅಷ್ಟೇ ಬರುತ್ತಿತ್ತು. ಇವೆರಡು ಬಿಟ್ಟರೆ ನನಗೆ ಬೇರೆ ಭಾಷೆ ಯಾಕೆ ಕಲಿಯಬೇಕು ಅಂತಿತ್ತು. ಈಗ ಹೊಸ ಭಾಷೆಯನ್ನು ಕಲಿತುಕೊಳ್ಳಬೇಕು. ಹೊಸ ಜನರು ಬೇರೆ. ಇವತ್ತೂ ಅಷ್ಟೇ ಕೇರಳಕ್ಕೆ ಹೋದಾಗ ಅದೊಂದು ಅನುಭವ ಚೆನ್ನಾಗಿತ್ತು. ಆದರೂ ಭಾಷೆ ಕಲಿಯಬೇಕು ಅಂತಿತ್ತು."

ನಿಮ್ಮ ತಾತ ಶಿಕ್ಷಣ ಮಂತ್ರಿಗಳಾಗಿದ್ದರಲ್ಲವೇ?
"ನಮ್ಮ ತಾತ ಶಿಕ್ಷಣ ಮಂತ್ರಿಯಾಗಿದ್ದರು. ಅವರು ಎಚ್‌ಜಿ ಗೋವಿಂದೇ ಗೌಡ. ಅವರು ಸಚಿವ ಸ್ಥಾನದ ಅವಧಿ ಮುಗಿದ ಬಳಿಕ ಸರ್ಕಾರಿ ಬಸ್ ಹತ್ತಿಕೊಂಡು ಬಂದಿದ್ದರು. ಆಗ ನಮ್ಮ ಮನೆಯವರಿಗೆ ತುಂಬಾ ಬೇಜಾರಾಗಿತ್ತು. ನಾವೇ ಕಾರಲ್ಲಿ ಕರೆದುಕೊಂಡು ಬರುತ್ತಿದ್ವಿ. ಬಸ್‌ನಲ್ಲಿ ಬಂದಿದ್ದಾರಲ್ಲ ಅಂತ. ಆ ಮಟ್ಟಿಗೆ ಸರಳ ಸ್ವಭಾವ. ಕಾಫಿಡೇ ಸಿದ್ಧಾರ್ಥ್ ಅವರು ನಮ್ಮ ಚಿಕ್ಕಪ್ಪ. ಅವರನ್ನೆಲ್ಲ ನೋಡಿ ಅವರೇ ಹಾಕಿರುವಾಗ ನಾವು ವಿನಯತೆಯಿಂದ ಇರಬೇಕು ಅಂತ ಕಲಿತುಕೊಂಡಿದ್ವಿ. ಆದರೆ, ಯಂಗ್ ಏಜ್‌ನಲ್ಲಿ ನಾವು ಚಿಕ್ಕ ಪುಟ್ಟ ತಪ್ಪು ಮಾಡಿದವರೇ.."
ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದೇಗೆ?
"ಅದೊಂದು ದೊಡ್ಡ ಮೋಸದ ಕಥೆ. ನನ್ನ ಸ್ನೇಹಿತ ಸಚಿನ್ ಹೆಗ್ಗಾರ್ ಅಂತ ಇದ್ದಾರೆ. ಅವರೊಂದಿಗೆ ಒಂದು ಮ್ಯೂಸಿಕ್ ಅಲ್ಬಮ್ ಮಾಡಿದ್ದೆ. ಆ ವಿಡಿಯೋ ನೋಡಿ ಪರಮೇಶ್ವರ್ ಗುಂಡ್ಕಲ್ 'ರಾಧಾ ರಮಣ'ಕ್ಕೆ ಇವರೇ ಬೇಕು ಅಂತಿದ್ದರು. ಆದರೆ, ಅವರಿಗೆ ಗೊತ್ತಿತ್ತು. ಸಿನಿಮಾ ಮಾಡುತ್ತಾನೆ. ವರ್ಕ್‌ಔಟ್ ಆಗಿಲ್ಲ ಅಂದರೆ ವಾಪಸ್ ಹೋಗುತ್ತಾನೆ ಅಂತ. ಅದಕ್ಕೆ ಒಂದು ಕಾರ್ಯಕ್ರಮಕ್ಕೆ ಹೋಸ್ಟ್ ಮಾಡಬೇಕು ಅಂತ ಸುಳ್ಳು ಹೇಳಿ ಕರೆಸಿಕೊಂಡರು. ಅದೇ ಟೈಮ್‌ನಲ್ಲಿ ಬಿ ಆರ್ ಪಂತಲು ಅವರ ಪುತ್ರಿ ಕ್ಯಾಮರಾ ಮ್ಯಾನ್ ಆಗಿದ್ದರು. ಅವರು ತಮಿಳಿನಲ್ಲಿ ಸಿನಿಮಾ ಮಾಡೋಣ ಅಂತ ಕರೆದಿದ್ದರು. ಇವೆರಡೂ ಒಂದೇ ಟೈಮ್‌ಗೆ ಬಂದಿತ್ತು. ದೇವರನ್ನು ಕೇಳಿಕೊಂಡೆ. ಆ ಸಿನಿಮಾ ಕ್ಯಾನ್ಸಲ್ ಆಗಿ 'ರಾಧಾ ರಮಣ' ಧಾರಾವಾಹಿಯನ್ನು ಒಪ್ಪಿಕೊಂಡೆ"

'ಅವನು ಮತ್ತೆ ಶ್ರಾವಣಿ' ಒಪ್ಪಿದ್ದೇಕೆ?
"ರಾಧಾ ರಮಣ ಹಿಟ್ ಆಗಿದ್ದ ಫಾರ್ಮೂಲ ಇತ್ತು. ಹೆಚ್ಚು ಕಡಿಮೆ ಅದೇ ಟೀಮ್ ಅವನು ಮತ್ತೆ ಶ್ರಾವಣಿಗೂ ಇತ್ತು. ಎಲ್ಲರೂ ಸೇರಿ ನೀನೇ ಮಾಡು. ಮಾರ್ಕೆಟ್ ಪ್ರೈಸ್ ಏನಿದೆ ಅದನ್ನೇ ಕೊಡುತ್ತೇವೆ ಅಂದಾಗ ಖುಷಿ ಆಯ್ತು. ವಿಶಾಲ್ ಅವರ ಬರವಣಿಗೆ ಬಗ್ಗೆ ಗೌರವವಿದೆ. ನನ್ನನ್ನು ಸೂಕ್ಷ್ಮತೆಗಳ ರಾಜ ಅಂತಾನೇ ಕರೆಯುತ್ತಾರೆ. ಆ ಕಾರಣಕ್ಕೆ ಈ ಪ್ರಾಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡೆ."
ಈ ಟೀಮ್ ಬಗ್ಗೆ ಏನಂತೀರಾ?
"ಇಲ್ಲಿವರೆಗೂ ಎಲ್ಲವೂ ಚೆನ್ನಾಗಿದೆ. ಈ ಹಿಂದೆ ಶ್ರಾವಣಿಯಾಗಿದ್ದವರು ಮದುವೆ ಆಗಬೇಕು ಅಂತ ಬ್ರೇಕ್ ತೆಗೆದುಕೊಂಡರು. ಹೊಸ ಶ್ರಾವಣಿ ಬಂದರು. ನಾನು ಚಿಕೂ ಅಂತ ನಾಯಿ ಪಾತ್ರವಿದೆ. ಅದನ್ನೂ ಹಾಗೇ ಇಟ್ಟುಕೊಂಡಿದ್ದಾರೆ. ನಾಯಿಯ ಪಾತ್ರ ಕೇವಲ ಪಬ್ಲಿಸಿಟಿಗಾಗಿ ಅಷ್ಟೇ ಅಲ್ಲ. ಇದು ಕತೆಯಲ್ಲೇ ಮುಂದುವರೆಯುತ್ತೆ ಅಂತ ಸ್ಟಾರ್ ಸುವರ್ಣ ಹೇಳಿತ್ತು. ಅದರಂತೆ ಅವರೂ ಮುಂದುವರೆಸಿಕೊಂಡು ಹೋಗಿದ್ದಾರೆ."
ಮುಂದೆ ಸಾಗುತ್ತೆ ಸೀರಿಯಲ್?
"ಇತ್ತೀಚೆಗೆ ಕಾಲೇಜ್ ಗೆಟಪ್ ಅಂತ ಒಂದು ಮಾಡಿದ್ದರು. ಐದು ವರ್ಷದ ಹಿಂದೆ ನಾವು ಹೇಳಿದ್ವಿ. ನಮ್ಮ ಲುಕ್ ಬೇರೆಯಿತ್ತು. ಊಟಿಗೆ ಹೋಗಿ ಶೂಟಿಂಗ್ ಮಾಡಿಸಿದರು. ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವುದಾದರೆ ಅದರ ಲೆಕ್ಕ ಬೇರೆ ಇರುತ್ತೆ. ಊಟಿಯಲ್ಲಿ ಶೂಟಿಂಗ್ ಅಂದಾಗ ಬೇರೆನೇ ಇರುತ್ತೆ. ಈಗ ಐದು ವರ್ಷದ ಹಿಂದೆ ಏನಾಗಿತ್ತು ಅನ್ನೋದನ್ನು ರಿವೀಲ್ ಮಾಡಿಲ್ಲ. ಇವರಿಬ್ಬರು ಯಾಕೆ ಬೇರೆಯಾದರು? ಅನ್ನೋದನ್ನು ಇನ್ನೂ ಹೇಳಿಲ್ಲ. ಕೇವಲ ಟಚ್ ಮಾಡಿ ಬಂದಿದ್ದಾರೆ. ಆಗ ಏನಾಯ್ತು ಅಂತ ನೋಡುವುದಕ್ಕೆ ಪ್ರೇಕ್ಷಕರು ಕಾಯುತ್ತಾರೆ."
ಸಿನಿಮಾ ಮಿಸ್ ಮಾಡಿಕೊಂಡೆ ಅನಿಸುತ್ತಿದೆಯೇ?
"ಸಿನಿಮಾ ಮಾಡುವ ಸಮಯದಲ್ಲಿ ಮಾಡಲಿಲ್ಲ. ಎಲ್ಲಾ ಅವಕಾಶವೂ ಇತ್ತು. ಯೋಗರಾಜ್ ಭಟ್ ಅವರೊಂದಿಗೂ ಸಿನಿಮಾ ಇತ್ತು. ಅದನ್ನೂ ಕಳೆದುಕೊಂಡೆ. ಮೊಗ್ಗಿನ ಮನಸ್ಸು ಹೋಯ್ತು. ನನ್ನ ತಪ್ಪುಗಳಿಂದ ಒಳ್ಳೊಳ್ಳೆ ಸಿನಿಮಾ ಕಳೆದುಕೊಂಡೆ. ಸೀರಿಯಲ್‌ನಲ್ಲಿ ಇರುವಾಗ ಐದು ವರ್ಷದ ಹಿಂದೆ ಮಾಡಿದ್ದ ಬೈರಾದೇವಿ ಸಿನಿಮಾ ರಿಲೀಸ್ ಆಗುತ್ತೆ. ಅದೊಂದು ಅಡ್ವಾಂಟೆಜ್ ಅಷ್ಟೇ ಅಂದುಕೊಳ್ಳುತ್ತೇನೆ."
ಮುಂದಿನ ಪ್ಲ್ಯಾನ್ ಏನು?
"ನನ್ನ ಗೆಳೆಯರೆಲ್ಲ ನಿರ್ಮಾಣಕ್ಕೆ ಇಳಿಯುವುದನ್ನು ನೋಡುತ್ತಿದ್ದೇನೆ. ಆದರೆ, ನನಗೆ ಡೈರೆಕ್ಷನ್ ಮಾಡಬೇಕು ಅನ್ನೋ ಆಸೆಯಿದೆ. ನಾನು ಖುದ್ದಾಗಿ ಏನೂ ಬರೆದಿಲ್ಲ. ಬಹುಶ: ಆ ಕ್ಷೇತ್ರಕ್ಕೆ ಹೋಗಬೇಕು ಅಂತಿದೆ. ಸದ್ಯ ಏನೂ ಬರೆಯುತ್ತಿಲ್ಲ. ಒಂದು ಲೈನರ್ ಅಂತ ಇದೆ. ಅದನ್ನು ಡೆವಲಪ್ ಮಾಡಿಲ್ಲ" ಎಂದು ನಟ ಸ್ಕಂದ ಅಶೋಕ್ ಹೇಳಿದ್ದಾರೆ.


Click it and Unblock the Notifications











