Bigg Boss: "ನನಗೆ ಅನುಕಂಪ ಬೇಕಿಲ್ಲ.. ಪ್ರೀತಿ ಕೊಟ್ಟರೆ ಸಾಕು".. ನೀತು ವನಜಾಕ್ಷಿ
ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಕರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದೆ. ಮನೆಯಿಂದ ಹೊರ ಹೋಗಬಹುದು ಅನ್ನೋ ವ್ಯಕ್ತಿ ಅಲ್ಲೇ ಉಳಿದುಕೊಳ್ಳುತ್ತಾರೆ. ಯಾರು ಹೋಗುವುದಿಲ್ಲ ಅಂದುಕೊಳ್ಳುತ್ತಾರೋ ಅವರೇ ಔಟ್ ಆಗುತ್ತಿದ್ದಾರೆ. ಈ ಕುತೂಹಲದಲ್ಲೇ ಬಿಗ್ ಬಾಸ್ ಜರ್ನಿ 50 ದಿನಗಳನ್ನು ಮುಗಿಸಿದೆ.
ಏಳನೇ ವಾರ ಬಿಗ್ ಬಾಸ್ ಮನೆಯಿಂದ ನೀತು ವನಜಾಕ್ಷಿ ಹೊರಬಿದ್ದಿದ್ದಾರೆ. ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ನೀತು ಎಲಿಮಿನೇಷನ್ ವಿಚಾರದಲ್ಲೂ ಗಮನ ಸೆಳೆದಿದ್ದಾರೆ. ಕ್ಯಾಪ್ಟನ್ ಆಗಿದ್ದವರು ಬಿಗ್ ಬಾಸ್ ಮನೆಯಿಂದ ಸೇಫ್ ಆಗಿರುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ನೀತು ವಿಚಾರದಲ್ಲಿ ಅದಾಗಲಿಲ್ಲ.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ನೀತು ವನಜಾಕ್ಷಿ ಜಿಯೋ ಸಿನಿಮಾಗೆ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ಮನೆಯಲ್ಲಾದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲ ತಮ್ಮ ಪಯಣ ಹೇಗಿತ್ತು ಅನ್ನೋದು ಹೇಳಿಕೊಂಡಿದ್ದಾರೆ. ಅದೇನು ಅನ್ನೋದನ್ನು ಕೇಳಿ.
"ಎಲಿಮಿನೇಷನ್ ನಿರೀಕ್ಷೆ ಮಾಡಿದ್ದೆ"
ನೀತು ವನಜಾಕ್ಷಿಗೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತೇನೆ ಅನ್ನೋ ನಿರೀಕ್ಷೆ ಇತ್ತು. ಈ ಮಾತನ್ನು ಸ್ವತ: ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ, ಕಳೆದ ಎರಡು ವಾರದಿಂದ ನನ್ನ ಪರ್ಪಾರ್ಫೆನ್ಸ್ ತುಂಬ ಕಡಿಮೆ ಇತ್ತು. ಆದರೆ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂ ಮಾಡಕ್ಕಾಗಲ್ಲ. ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲೆ ನಾನು ಬೇರೆ ರೀತಿ ಪ್ರೊಜೆಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಆದ್ದರಿಂದ ಹಿಂದೇಟು ಹಾಕಿದೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ." ಎಂದು ಜನಜಾಕ್ಷಿ ಹೇಳಿದ್ದಾರೆ.
"ಕಿಚ್ಚನ ಚಪ್ಪಾಳೆಯಿಂದ ಕಾನ್ಫಿಡೆನ್ಸ್"
"ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿತೋ.. ನನಗೆ ಅದು ಟ್ರೋಫಿ ತಗೊಂಡ ಹಾಗೆ. ಅಷ್ಟು ಖುಷಿಯಾಯ್ತು ನಂಗೆ. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಕಾನ್ಫಿಡೆನ್ಸ್ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ." ಎನ್ನುತ್ತಾರೆ ನೀತು ವನಜಾಕ್ಷಿ.

ಜೆನ್ಯೂನ್ ಯಾರು? ಫೇಕ್ ಯಾರು?
"ಬಿಗ್‌ಬಾಸ್ ಮನೆಯೊಳಗೆ ನನ್ನ ಪ್ರಕಾರ, ಪ್ರತಾಪ್ ತುಂಬ ಜೆನ್ಯೂನ್. ಯಾಕೆಂದ್ರೆ ಅವನ ಬಳಿ ಮಾತಾಡುವಾಗ ನಾಟಕೀಯತೆ ಇರುತ್ತಿರಲಿಲ್ಲ. ಸ್ನೇಹಿತ್ ಫೇಕ್ ಅನಿಸ್ತಾನೆ. ಯಾಕೆಂದರೆ ಟಾಸ್ಕ್ ಎಲ್ಲ ಆಯ್ತು, ಇನ್ಮೇಲಿಂದ ಶುಕ್ರವಾರ, ಶನಿವಾರ ನಾವೊಂದ್ ಸ್ವಲ್ಪ ಎಂಟರ್‌ಟೈನಿಂಗ್ ಆಗಿರಬೇಕು ಅಂತಾನೆ. ಹಾಗಾಗಿ ಅವನು ಬಹುಶಃ ಕ್ಯಾಮೆರಾಗೋಸ್ಕರ ಚಟುವಟಿಕೆ ಮಾಡ್ತಿದ್ದಾನೆ ಅನ್ಸತ್ತೆ." ಎಂದು ನೀತು ಹೇಳುತ್ತಾರೆ.
ನೀತು ಪ್ರಕಾರ ಗೆಲ್ಲೋರು ಯಾರು?
50 ದಿನ ಮನೆಯಲ್ಲಿದ್ದ ನೀತುಗೆ ಯಾರು ಬಿಗ್ ಬಾಸ್ ಗೆಲ್ಲಬಹುದು ಅನ್ನೋದು ಅಂದಾಜಿ ಸಿಕ್ಕಿದೆ. ಹೀಗಾಗಿ ಯಾರು ಗೆಲ್ಲಬಹುದು ಅನ್ನೋ ಪ್ರಶ್ನೆಗೆ ಟಾಪ್‌ನಲ್ಲಿರೋ 5 ಮಂದಿಯನ್ನು ಹೆಸರಿಸಿದ್ದಾರೆ. "ಪ್ರತಾಪ್, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಭಾರಿ ಬಿಗ್‌ಬಾಸ್ ಫೈನಲ್‌ನಲ್ಲಿ ಇರ್ತಾರೆ. ಅವರಲ್ಲಿ ಪ್ರತಾಪ್ ವಿನ್ನರ್ ಆಗ್ತಾನೆ." ಎಂದಿದ್ದಾರೆ.
ಫನ್ ಫ್ರೈಡೆ ಟಾಸ್ಕ್ ಹೇಗಿತ್ತು.
"ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳನ್ನು ತುಂಬಾನೇ ಎಂಜಾಯ್ ಮಾಡಿದೀನಿ. ಕಥೆ ಹೇಳೋದು ಖುಷಿಕೊಟ್ಟಿದೆ. ನನಗೆ ಗುರಿ ಇಡೋದು ಅಂದ್ರೆ ತುಂಬಾನೇ ಇಷ್ಟ. ಹಾಗಾಗಿ ಇರುಳ್ಳಿ ಅಂತ ಹೇಳಿದ ತಕ್ಷಣ ದೂರದಿಂದಲೇ ಗುರಿ ಇಟ್ಟು ಹಾಕಿದ್ದೆ. ಆ ಟಾಸ್ಕ್‌ಗಳನ್ನು ಫುಲ್ ಜೋಷ್‌ನಲ್ಲಿ ಖುಷಿಯಿಂದ ಆಡ್ತಿದ್ದೆ. ಲಗೋರಿ ಆಟವೂ ಮಜವಾಗಿತ್ತು. ಚಿಕ್ಕ ಮಗುವಾಗಿದ್ದಾಗ ನಾನು ಏನೆಲ್ಲ ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲವೋ ಅವೆಲ್ಲವನ್ನೂ ಬಿಗ್‌ಬಾಸ್ ಮನೆಯಲ್ಲಿ ಆಡಿ, ಎಂಜಾಯ್ ಮಾಡಿದ್ದೇನೆ." ಎಂದು ಹೇಳಿದ್ದಾರೆ.
"ನನಗೆ ಸಿಂಪತಿ ಬೇಕಾಗಿರಲಿಲ್ಲ"
"ನನಗೆ ಪ್ರೀತಿ ಬೇಕಿತ್ತು. ಸಿಂಪತಿ ಬೇಕಾಗಿರಲಿಲ್ಲ. ಅನುಕಂಪ ಇಲ್ಲದ ಪರಿಪೂರ್ಣ ಪ್ರೀತಿಯನ್ನು ಹುಡುಕಿಕೊಂಡು ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅದು ನನಗೆ ಸಿಕ್ಕಿದೆ. ನನಗೆ ಇದೊಂದು ಒಳ್ಳೆಯ ಅವಕಾಶ. ಮನೆಯಲ್ಲಿ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೀನಿ. ಈ ನೆನಪುಗಳನ್ನು ನನ್ನ ಜೀವನವಿಡೀ ಒಂದೊಂದು ಎಪಿಸೋಡ್ ನೋಡ್ತಾ ಎಂಜಾಯ್ ಮಾಡ್ತೀನಿ. ಟ್ರಾನ್ಸ್‌ಜೆಂಡರ್‌ಗಳ ಬದುಕಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ನಮಗೆ ಏನು ಬೇಕು, ನಾವು ಸಮಾಜದಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ. ನಮಗೆ ಕರುಣೆ ಬೇಡ. ಪ್ರೀತಿ ಕೊಟ್ಟರೆ ಸಾಕು. ಅದು ನನಗೆ ಬಿಗ್‌ಬಾಸ್ ಮನೆ ಕೊಟ್ಟಿದೆ." ಎಂದು ನೀತು ವನಜಾಕ್ಷಿ ಹೇಳಿದ್ದಾರೆ.


Click it and Unblock the Notifications











