ಅಣ್ಣನ ಒತ್ತಾಯಕ್ಕೆ ಆಡಿಷನ್ ಕೊಟ್ಟು ಸೀರಿಯಲ್‌ಗೆ ಆಯ್ಕೆಯಾದ ಈ ನಟಿ ಯಾರು ಗೊತ್ತೇ? ಇವರ ಹಿನ್ನೆಲೆಯೇನು?
ಇವರು ಕನ್ನಡ ಕಿರುತೆರೆಯ ಜನಪ್ರಿಯ ನಟಿ. 2013ರಲ್ಲಿ ಕನ್ನಡ ಕಿರುತೆರೆಗೆ ಜನಪ್ರಿಯ ಧಾರಾವಾಹಿಯ ಮೂಲಕ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ನಾನ್ ಸ್ಟಾರ್ ನಟಿಸುತ್ತಲೇ ಇದ್ದಾರೆ. ಒಂದರ ಹಿಂದೊಂದು ಮೆಗಾ ಸೀರಿಯಲ್‌ಗಳಲ್ಲಿ ನಟಿ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಇದೂವರೆಗೂ ಇವರು ಸುಮಾರು ಐದು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದನ್ನು ಬಿಟ್ಟರೆ, ಉಳಿದಿದ್ದೆಲ್ಲವೂ ಮೆಗಾ ಸೀರಿಯಲ್‌ಗಳೇ.
ಅಂದ್ಹಾಗೆ ಈ ಕಿರುತೆರೆ ನಟಿಯ ಹೆಸರು ಕಾವ್ಯಾ ಮಹಾದೇವ್. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಪಲ್ಲವಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿಗ್ ಸ್ಟಾರ್‌ಕಾಸ್ಟ್ ಇರುವ ಈ ಸೀರಿಯಲ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾವ್ಯಾ ಮಹಾದೇವ್ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮೊದಲ ಸೀರಿಯಲ್ 'ಚರಣದಾಸಿ'ಯಿಂದ ಹಿಡಿದು 'ಸ್ನೇಹದ ಕಡಲಲ್ಲಿ' ಧಾರಾವಾಹಿವರೆಗೂ ತಮ್ಮ ನಟನಾ ಜರ್ನಿಯನ್ನು ಮೆಲುಕು ಹಾಕಿದ್ದಾರೆ.

ನಿಮ್ಮ ಹಿನ್ನೆಲೆ ಏನು? ನಟನೆ ಕಡೆ ಮುಖ ಮಾಡಿದ್ದೇಗೆ?
"ನಾನು ಬೆಂಗಳೂರಿನವಳೇ.. ಅಪ್ಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಟ್ರಾನ್ಸ್‌ಫರ್ ಆಗಿದ್ದರಿಂದ ನಾನು ಮಂಡ್ಯದಲ್ಲಿ ಆರಂಭಿಕ ಶಿಕ್ಷಣ ಪಡೆದೆ. ಆಮೇಲೆ ಅಪ್ಪ ತೀರಿಕೊಂಡ ಮೇಲೆ ಮತ್ತೆ ಬೆಂಗಳೂರಿಗೆ ಬಂದ್ವಿ. ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿಕೊಂಡೆ. ನಾನು ಕಾಲೇಜಿಗೆ ಹೋಗುವಾಗಲೇ ನಾಟಕದ ಕಡೆಗೆ ಆಸಕ್ತಿ ಇತ್ತು. ಪಿಯುನಲ್ಲಿ ಇರಬೇಕಾದರೇ ಥಿಯೇಟರ್‌ಗೆ ಸೇರಿಕೊಳ್ಳಬೇಕು ಅಂತಿದ್ದೆ. ಆದರೆ, ಮನೆಯಲ್ಲಿ ಓದಿನ ಕಡೆಗೆ ಗಮನ ಕೊಡು ಎಂದರು. ಡಿಗ್ರಿಗೆ ಬಂದ್ಮೇಲೆ ನಾನು ಅಭಿನಯ ತರಂಗಕ್ಕೆ ಸೇರಿಕೊಂಡೆ."
ಮೊದಲ ಸೀರಿಯಲ್ ಸಿಕ್ಕಿದ್ದೇಗೆ?
"ಅಭಿನಯ ತರಂಗ ಮುಗಿಯುತ್ತಿದ್ದಂತೆ ಒಂದು ಕಡೆ ಆಡಿಷನ್ ನಡೆಯುತ್ತಿದೆ ಹೋಗುತ್ತೀಯ ಅಂತ ಅಣ್ಣ ಹೇಳಿದ. ನಾನು ಕಾಲೇಜಿನಲ್ಲಿ ಇರಬೇಕಾದರೆ, ಸೀರಿಯಲ್ ಸಿನಿಮಾ ಮಾಡಬೇಕು ಅಂತೇನು ಇರಲಿಲ್ಲ. ಶಿಕ್ಷಣವನ್ನು ಮುಂದುವರೆಸಬೇಕು, ಕೆಲಸ ಮಾಡಬೇಕು ಅಂತಾನೇ ಇತ್ತು. ಅದರ ಜೊತೆ ನಾಟಕ ಮಾಡಬೇಕು ಅಂತಿತ್ತು ಅಷ್ಟೇ. ಅವತ್ತು ಕಾಲೇಜಿನ ಸೆಮಿಸ್ಟರ್ ಫಸ್ಟ್. ಬೇಗ ಕಾಲೇಜು ಮುಗಿದರೆ ನೋಡುತ್ತೇನೆ ಅಂತ ಅಂದೆ. ಬೇಗ ಮನೆಗೆ ಬಂದಿದ್ದಕ್ಕೆ ಹೋಗೋಣ್ವಾ ಅಂತ ಹೇಳಿ ಕರೆದುಕೊಂಡು ಹೋದೆ. ಹೋದ್ಮೇಲೆ ನಾನು ಆಡಿಷನ್‌ಗೆ ಆಯ್ಕೆ ಕೂಡ ಆಗ್ಬಿಟ್ಟೆ. ಅದೇ ಚರಣದಾಸಿ ಧಾರಾವಾಹಿ."

ಧಾರಾವಾಹಿಗೆ ಬಾರದೆ ಹೋಗಿದ್ರೆ, ಏನಾಗುತ್ತಿದ್ರಿ?
"ನಾನು ಫ್ಯಾಷನ್ ಡಿಸೈನಿಂಗ್ ಓದುತ್ತಿದ್ದೆ. ಅದರಲ್ಲೇ ಜಾಬ್ ಮಾಡಬೇಕು. ಕಾಸ್ಟ್ಯೂಮ್ ಡಿಸೈನರ್ ಆಗಬೇಕು ಎನ್ನುವ ಆಸೆಯಿತ್ತು. ಆದರೆ, ನಟನೆಯನ್ನು ಪ್ರೊಫೆಷನ್ ಆಗಿ ತೆಗೆದುಕೊಳ್ಳಬೇಕು ಎಂದೂ ಅಂದುಕೊಂಡಿರಲಿಲ್ಲ."
12 ವರ್ಷದ ನಿಮ್ಮ ಜರ್ನಿ ಹೇಗಿತ್ತು?
"ನಾನು ಅಂತಹ ಸನ್ನಿವೇಶವನ್ನು ಫೇಸ್ ಮಾಡಿಯೇ ಇಲ್ಲ. ನಾನು 2013ರಲ್ಲಿ ನಟನೆಯನ್ನು ಶುರು ಮಾಡಿದ್ದು. ನಾನು ಇಂಡಸ್ಟ್ರಿಗೆ ಬಂದು 12 ವರ್ಷ ಆಯ್ತು. ಯಾವತ್ತೂ ಕೆಲಸ ಇಲ್ವಲ್ಲ ಎನ್ನುವ ಸನ್ನಿವೇಶವನ್ನು ಎಂದೂ ಫೇಸ್ ಮಾಡಿಯೇ ಇಲ್ಲ. ಚರಣದಾಸಿಯಿಂದ ಸ್ನೇಹದ ಕಡಲಲ್ಲಿವರೆಗೂ ಜರ್ನಿ ಮುಂದುವರೆದಿದೆ. ಚರಣದಾಸಿ ಮೂರು ವರ್ಷ ಮಾಡಿದೆ. ನಾ ನಿನ್ನ ಬಿಡಲಾರೆ ಸೀರಿಯಲ್ ಎರಡು ವರ್ಷ ಮಾಡಿದೆ. ಆಮೇಲೆ ಆರು ತಿಂಗಳು ಗ್ಯಾಪ್ ಇತ್ತು. ಪೌರಾಣಿಕ ಸೀರಿಯಲ್ ಮಾಡಿದೆ. ಶ್ರೀವಿಷ್ಣು ದಶಾವತಾರ ಅಂತ ಜೀ ಕನ್ನಡಗೆ ಮಾಡಿದೆ. ತಕ್ಷಣಕ್ಕೆ ನಮ್ಮನೆ ಯುವರಾಣಿ ಸಿಕ್ಕಿತು. ಅದು ನಾಲ್ಕು ವರ್ಷ ನಡೀತು. ನನ್ನ ವೃತ್ತಿ ಜೀವನದಲ್ಲಿ ಸುಮಾರು ಜನರನ್ನು ನೋಡಿದ್ದೀನಿ. ಒಂದು ಸೀರಿಯಲ್ ಸಿಗುತ್ತಿದ್ದಂತೆ ಇನ್ನೊಂದು ಸಿಗುವುದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ. ನಾನು ವೃತ್ತಿ ಜೀವನದಲ್ಲಿ ಅಂತಹ ಸನ್ನಿವೇಶವನ್ನು ಫೇಸ್ ಮಾಡಿಲ್ಲ. ಅದಕ್ಕೆ ನಾನು ಲಕ್ಕಿ ಎಂದುಕೊಳ್ಳುತ್ತೇನೆ."
ಮೊದಲ ಮೂರು ಸೀರಿಯಲ್ ಬಗ್ಗೆ ಹೇಳಿ
"ಮೊದಲನೇ ಸೀರಿಯಲ್ ಚರಣದಾಸಿನೇ ನನಗೆ ಬ್ರೇಕ್ ಕೊಟ್ಟಿತ್ತು. ಕತೆ ತುಂಬಾ ಎಮೋಷನಲ್ ಆಗಿತ್ತು. ಈಗಲೂ ಅಷ್ಟೇ ಹೊರಗಡೆ ಹೋದಾಗ ತುಂಬಾ ಜನರು ಚರಣದಾಸಿಯಿಂದಲೇ ಗುರುತಿಸುತ್ತಾರೆ. ಅದಾದ್ಮೇಲೆ ನಾ ನಿನ್ನ ಬಿಡಲಾರೆ ಬಂತು. ಅದು ಕಲರ್ಸ್ ಸೂಪರ್‌ಗೆ ಬಂತು. ಅದು ಅಷ್ಟೇ ದೆವ್ವದ ಪಾತ್ರ. ಅದು ಕೂಡ ತುಂಬಾ ಜನಕ್ಕೆ ಗೊತ್ತಿದೆ."

ಸ್ನೇಹದ ಕಡಲಲ್ಲಿ ಒಪ್ಪಿಕೊಳ್ಳುವುದಕ್ಕೆ ಕಾರಣವೇನು?
"ಸ್ನೇಹದ ಕಡಲಲ್ಲಿ ಸೀರಿಯಲ್ ಇದು ಮಲಯಾಳಂ ರಿಮೇಕ್. ನನಗೆ ಶಾರದೆ ಧಾರಾವಾಹಿ ಲುಕ್ ಟೆಸ್ಟ್‌ಗೆ ಕರೆದಿದ್ದರು. ಚಾನೆಲ್‌ನವರು ಫೋನ್ ಮಾಡಿ, ನಿಮಗೆ ಶಾರದೆ ಬೇಡ. ಬೇರೊಂದು ಪ್ರಾಜೆಕ್ಟ್ ಕೊಡುತ್ತೇವೆ ಎಂದು ಹೇಳಿದ್ದರು. ಆಮೇಲೆ ಪ್ರೊಡಕ್ಷನ್ ಹೌಸ್‌ನಿಂದ ಸ್ನೇಹದ ಕಡಲಲ್ಲಿ ಧಾರಾವಾಹಿಗೆ ಕರೆ ಬಂತು. ಸ್ಟೋರಿಯನ್ನು ನೋಡಿದೆ. ಅದನ್ನು ಇಷ್ಟ ಪಟ್ಟು ನಾನು ಒಪ್ಪಿಕೊಂಡ ಸೀರಿಯಲ್ ಇದೆ. ಇಲ್ಲಿ ತುಂಬಾ ಜನ ಕಲಾವಿದರು ಇದ್ದಾರೆ. ತುಂಬಾ ಟ್ರ್ಯಾಕ್ಸ್ ಇವೆ. ಕೌಟುಂಬಿಕ ಸನ್ನಿವೇಶಗಳನ್ನು ಹೈಲೈಟ್ ಮಾಡುವಂತಹ ಸೀರಿಯಲ್. ಅದಕ್ಕೆ ಇಷ್ಟ ಆಯ್ತು."
ನಿಮ್ಮ ಪಾತ್ರ ಯಾಕೆ ಇಷ್ಟ ಆಯ್ತು?
"ನಾನು ಮಾಡುತ್ತಿರುವುದು ಪಲ್ಲವಿ ಎನ್ನುವ ಪಾತ್ರ. ನಾನು ಒಬ್ಬ ಕಾಲೇಜ್ ಉಪನ್ಯಾಸಕಿ. ಮೊದಲನೇ ಎಪಿಸೋಡ್‌ನಲ್ಲಿಯೇ ಮದುವೆ ಆಗುತ್ತೆ. ಹೆಣ್ಣು ಮಕ್ಕಳು ಇರುವ ಮಧ್ಯಮ ವರ್ಗದ ಕುಟುಂಬ. ಅವರನ್ನು ಮದುವೆ ಮಾಡಬೇಕು ಎನ್ನುವ ಆಸೆಯಿರುತ್ತೆ. ಮಕ್ಕಳ ಮದುವೆನೇ ಪೋಷಕರ ಕನಸು. ಬ್ರೋಕರ್ ಮಿಸ್ ಕಮ್ಯೂನಿಕೇಷನ್‌ನಿಂದಾಗಿ ಗಂಡ ಅಷ್ಟು ಸರಿ ಇರೋದಿಲ್ಲ. ಮದುವೆಯಾದ ಮೊದಲ ದಿನವೇ ನಾನು ಗಂಡನ ಮನೆ ಬಿಟ್ಟು ಬರುತ್ತೇನೆ. ಇಂತಹ ಸನ್ನಿವೇಶ ಎಷ್ಟೋ ಮಹಿಳೆಯ ಜೀವನದಲ್ಲಿ ಆಗಿರಬಹುದು. ಆ ವೇಳೆ ಅವರು ಧ್ವನಿ ಎತ್ತುವುದಕ್ಕೆ ಸಾಧ್ಯವಾಗದೇ ಇರುಬಹುದು. ಇದರಲ್ಲಿ ಪಲ್ಲವಿ ಬೋಲ್ಡ್ ಇದ್ದಾಳೆ. ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ. ಇದು ಹೆಣ್ಣು ಮಕ್ಕಳಿಗೆ ತುಂಬಾನೇ ಕನೆಕ್ಟ್ ಆಗುತ್ತೆ. ಅನ್ಯಾಯದ ವಿರುದ್ಧ ಹೋರಾಡಿ ಹೊರ ಬಂದಿದ್ದಾಳೆ. ಇದರಲ್ಲಿ ಕಥಾ ನಾಯಕ ಏನಿದ್ದಾನೆ. ಅವನ ಜೊತೆ ಫ್ರೆಂಡ್‌ಶಿಪ್ ಆಗುತ್ತೆ. ಅವರ ಜೀವನದಲ್ಲೂ ಸಾಕಷ್ಟು ನೋವುಗಳನ್ನು ಫೇಸ್ ಮಾಡಿದ್ದಾರೆ. ಇಬ್ಬರಲ್ಲೂ ನೋವಿನ ಘಟನೆಗಳು ನಡೆದಿದೆ. ಇಬ್ಬರೂ ಹೇಗೆ ಫೇಸ್ ಮಾಡುತ್ತಾರೆ ಅನ್ನೋದು ಕಥೆ."
ದೊಡ್ಡ ಸ್ಟಾರ್‌ಕಾಸ್ಟ್ ಬಗ್ಗೆ ಏನಂತೀರಾ?
"ನನಗೆ ಹೆಮ್ಮೆ ಎನಿಸುತ್ತಿದೆ. 800 ಸಿನಿಮಾ ಮಾಡಿರುವ ಸುಮನ್ ಸರ್ ಜೊತೆ ಕೆಲಸ ಮಾಡುವುದಕ್ಕೆ ಸಿಕ್ಕಿತು. ಅಂಥಾ ಕಲಾವಿದರ ಜೊತೆ ಕೆಲಸ ಮಾಡುವುದು ತುಂಬಾನೇ ಖುಷಿ ಅನಿಸುತ್ತೆ. ನಾನು ಲಕ್ಕಿ ಅಂತ ಅಂದುಕೊಳ್ಳುತ್ತೇನೆ. ಅನನ್ಯಾ ಕಾಸರವಳ್ಳಿ, ರೋಹಿಣಿ ರಘುನಂದನ್, ಪ್ರಶಾಂತ್ ಅವರು ನಟಿಸಿದ್ದಾರೆ. ಎಲ್ಲಾ ಥಿಯೇಟರ್ ಹಿನ್ನೆಲೆ ಇರುವವರೊಂದಿಗೆ ನಟನೆ ಮಾಡುವುದು ತುಂಬಾನೇ ಖುಷಿಯಾಗುತ್ತೆ. ಕಲಿಯುವುದಕ್ಕೂ ಸಿಗುತ್ತೆ. ತಾರಾಬಳಗ ತುಂಬಾನೇ ಚೆನ್ನಾಗಿದೆ. ಅವರೆಲ್ಲರೊಂದಿಗೆ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದು ತುಂಬಾನೇ ಖುಷಿಯಿದೆ. ಅಷ್ಟು ದೊಡ್ಡ ನಟರು ಅವರ ಪರ್ಸನಲ್ ಎಕ್ಸ್‌ಪೀರಿಯನ್ಸ್ ಹಂಚಿಕೊಳ್ಳುತ್ತಾರೆ. ಆ ಜಾಗದಲ್ಲಿ ನಾನು ಇದ್ದೆನಲ್ಲಾ ಎಂಬುವುದೇ ದೊಡ್ಡ ಖುಷಿ."
ಸಿನಿಮಾದಲ್ಲಿ ನಟಿಸುವ ಪ್ರಯತ್ನ ಮಾಡಿಲ್ಲವೇ?
"ನನಗೆ ಸಿನಿಮಾ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೆ. ಅದೇನೋ ಗೊತ್ತಿಲ್ಲ. ಚರಣದಾಸಿ ಮಾಡುವಾಗ ತುಂಬಾನೇ ಆಫರ್ ಬರುತ್ತಿತ್ತು. ಆಗ ಸಿನಿಮಾ ಮಾಡುವುದಿಲ್ಲ ಎಂದುಕೊಳ್ಳುತ್ತಿದ್ದೆ. ಈಗ ಆ ಅಭಿಪ್ರಾಯ ಬದಲಾಗಿದೆ. ಈಗ ಅವಕಾಶ ಬಂದರೆ ನಟಿಸುತ್ತೇನೆ. " ಎನ್ನುತ್ತಾರೆ ಕಾವ್ಯಾ ಮಹಾದೇವ್.


Click it and Unblock the Notifications











