'ಸೈನೈಡ್' ಬಿಡುಗಡೆಗೂ ಮುನ್ನ ಪ್ರಭಾಕರನ್ ಕೈ ಸೇರಿದ್ದಿದ್ದೇಗೆ? ಸೆನ್ಸಾರ್ ಬೋರ್ಡ್ 'ಯು' ಸರ್ಟಿಫಿಕೇಟ್ ಕೊಟ್ಟಿದ್ಯಾಕೆ?
2006 ಕನ್ನಡ ಚಿತ್ರರಂಗಕ್ಕೆ ಚಿನ್ನದ ವರ್ಷ. ಕನ್ನಡ ಸಿನಿಮಾಗಳು ನೆಲಕ್ಕಚ್ಚಿದ್ದವು. ಸಾಲು ಸಾಲು ಚಿತ್ರರಂಗ ಕಂಗೆಟ್ಟು ಹೋಗಿತ್ತು. ಆದರೆ, ಇನ್ನೇನು ವರ್ಷ ಮುಗೀತು. ಸ್ಯಾಂಡಲ್‌ವುಡ್‌ನ ಕಥೆನೂ ಮುಗೀತು ಎನ್ನುವಾಗಲೇ ಮೂರು ಸಿನಿಮಾಗಳು ಮತ್ತೆ ಚಿತ್ರರಂಗಕ್ಕೆ ಹೊರ ಲವಲವಿಕೆಯನ್ನು ಕೊಟ್ಟಿದ್ದವು. ಅದುವೇ ಮುಂಗಾರು ಮಳೆ, ದುನಿಯಾ ಹಾಗೂ 'ಸೈನೈಡ್'. ಇದರಲ್ಲಿ ಎಎಂಆರ್ ರಮೇಶ್ ನಿರ್ದೇಶಿಸಿದ 'ಸೈನೈಡ್' ವಿಶೇಷವಾಗಿ ನಿಲ್ಲುತ್ತೆ.
ನಾಳೆ (ಮೇ 23) ಮರು ಬಿಡುಗಡೆಯಾಗುತ್ತಿರುವ 'ಸೈನೈಡ್' ಸುಮಾರು 19 ವರ್ಷಗಳ ಹಿಂದೆ ವಿಶ್ವದ ಗಮನ ಸೆಳೆದಿತ್ತು. ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆಯನ್ನು ಇಟ್ಕೊಂಡು ಎಎಂಆರ್ ರಮೇಶ್ ಸಿನಿಮಾ ಮಾಡಿದ್ದರು. ಆಗ ಕನ್ನಡ ಚಿತ್ರರಂಗದಲ್ಲಿ ಲವ್ ಸ್ಟೋರಿ, ಆಕ್ಷನ್ ಸಿನಿಮಾಗಳದ್ದೇ ಪರ್ವ. ಅಂತಹ ಸಮಯದಲ್ಲಿ 'ಸೈನೈಡ್' ಈ ಎಲ್ಲಾ ಸಿನಿಮಾಗಳ ಮಧ್ಯೆ ವಿಶೇಷವಾಗಿ ನಿಂತಿತ್ತು.

ರಾಜ್ಯ ಪ್ರಶಸ್ತಿಗಳನ್ನು ಗೆದ್ದಿತ್ತು. ವಿಶ್ವದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಸುಮಾರು 70 ಚಿತ್ರಮಂದಿರಗಳಲ್ಲಿ 'ಸೈನೈಡ್' ರಿ-ರಿಲೀಸ್ ಆಗುತ್ತಿದೆ. ಈ ಸಿನಿಮಾ ಮತ್ತೆ ಥಿಯೇಟರ್‌ನಲ್ಲಿ ನೋಡಬೇಕು ಅಂತ ಯಾರೆಲ್ಲ ಅಂದುಕೊಂಡಿದ್ರೋ? ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಅಷ್ಟಕ್ಕೂ ಈ ಸಿನಿಮಾವನ್ನು ಯಾಕೆ ನೋಡಬೇಕು? ನಿರ್ದೇಶಕ ಎಎಂಆರ್ ರಮೇಶ್ ಫಿಲ್ಮಿಬೀಟ್ ಕನ್ನಡ ಜೊತೆ ಸೈನೈಡ್ ಮೇಕಿಂಗ್‌ನ ಇಂಟ್ರೆಸ್ಟಿಂಗ್ ಕಥೆಗಳನ್ನು ಹಂಚಿಕೊಂಡಿದ್ದಾರೆ.
ನಿಮಗೆ 'ಸೈನೈಡ್' ಸ್ಟೋರಿ ಹೊಳೆದಿದ್ದು ಯಾವಾಗ?
"ಶಿವರಸನ್, ರಾಜೀವ್ ಗಾಂಧಿಯನ್ನು ಕೊಂದ ಮೇಲೆ ಆ ಗ್ಯಾಂಗ್ ಬೆಂಗಳೂರಿಗೆ ಬರುತ್ತೆ. ಆ ಗ್ಯಾಂಗ್ ಬರುವುದಕ್ಕೆ ಮುನ್ನ 1991ನಲ್ಲಿ ನಾನು ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿರುತ್ತೇನೆ. ರಾಜೀವ್ ಗಾಂಧಿಯವರ ಹತ್ಯೆ ಮಾಡಿದಾಗ ನಾನು ಮದ್ರಾಸ್‌ನಲ್ಲಿದ್ದೆ. ಈಗ ಅದು ಚೆನ್ನೈ ಅಂತ ಆಗಿದೆ. ಆಗ ನಾನು ಬೈಕ್‌ನಲ್ಲಿ ಮದ್ರಾಸ್‌ನ ಎಲ್ಲಾ ಕಡೆಗೂ ಹೋಗುತ್ತೇನೆ. ಆಗ ರಾಜೀವ್ ಗಾಂಧಿ ಸೇರಿದಂತೆ ಆ ಘಟನೆಯಲ್ಲಿ ಮೃತರಾದವರ ದೇಹಗಳನ್ನು ಚೆನ್ನೈನ ಜನರಲ್ ಆಸ್ಪತ್ರೆಗೆ ಸಾಗಿಸಿದ್ದರು. ನನಗೆ ಬೆಂಗಳೂರಿನಲ್ಲಿ ಸ್ಮಾರ್ಟ್ ಕಾರ್ಡ್ ಕೊಟ್ಟಿರುತ್ತಾರೆ. ಅದನ್ನು ನಾನು ಪ್ರೆಸ್ ಅಂತ ಹೇಳಿ ಬಾಡಿಗಳನ್ನು ನೋಡುವುದಕ್ಕೆ ಒಳಗಡೆ ಹೋಗುತ್ತೇನೆ. ನಾನು ಹೇಗೆ ಪ್ರೆಸ್ ಅಂತ ಸುಳ್ಳು ಹೇಳಿ ಒಳಗಡೆ ಹೋಗಿದ್ದೆ. ಹಾಗೇ ಶಿವರಸನ್ ಕೂಡ ಹೀಗೆ ಸುಳ್ಳು ಹೇಳಿ ಒಳಗೆ ಹೋಗಿದ್ದ. ಇದು ನಾಲ್ಕು ದಿನ ಆದ್ಮೇಲೆ ಗೊತ್ತಾಗುತ್ತೆ. ಅಲ್ಲಿಂದ ನನಗೆ ಸೈನೈಡ್ ಸಿನಿಮಾ ಮಾಡುವುದಕ್ಕೆ ಕುತೂಹಲ ಶುರುವಾಯ್ತು."

ನಿಮಗೆ ಸೈನೈಡ್ ಕಂಟೆಂಟ್ ಸಿಕ್ಕಿದ್ದೇಗೆ?
"ಬೆಂಗಳೂರಿನಲ್ಲಿ ಅವರೆಲ್ಲರೂ ಸಿಕ್ಕಿಕೊಂಡಾಗ ನಮ್ಮ ಕೆಂಪಯ್ಯನವರೇ ಡಿಸಿಪಿ ಆಗಿದ್ದರು. ಅವರು ಬಂದು ರಂಗನಾಥ್ ಮತ್ತು ಮೃಧುಲಾ ಮನೆಯಲ್ಲಿ ಇದ್ದರಲ್ಲ ಅವರೆಲ್ಲ ನನಗೆ ಕ್ಲೋಸ್ ಫ್ರೆಂಡ್ಸ್. ನನಗೆ ಚಿಕ್ಕ ವಯಸ್ಸಿನಿಂದ ಪರಿಚಯ. ನನ್ನ ಸುತ್ತ ಇರುವ ಪೊಲೀಸ್ ಆಫೀಸರ್, ರಾಜ್‌ಕುಮಾರ್ ಸಂಘದಲ್ಲಿ ಇಬ್ಬರು ಬುಸ್ ನಾಗ ಅಂತಿದ್ದರು. ಅವರ ಅಣ್ಣನೇ ನರಸಿಂಹಮೂರ್ತಿ ಅಂತ ಇನ್ಸ್‌ಪೆಕ್ಟರ್. ಅದರಿಂದ ರಾಜೀವ್ ಗಾಂಧಿಯ ಪ್ರತಿಯೊಂದು ಘಟನೆ ನನಗೆ ಗೊತ್ತಿತ್ತು. ಅದಾದ್ಮೇಲೆ ನಾನು ಕಥೆಯನ್ನೆಲ್ಲ ಬರೆದಿಟ್ಟುಕೊಂಡು ಶೂಟಿಂಗ್‌ಗೆ ಹೋದೆ."
'ಸೈನೈಡ್' ಎಲ್‌ಟಿಟಿಇ ಪ್ರಭಾಕರ್ ಕೈ ಸೇರಿದ್ದೇಗೆ?
"ರಾಜ್‌ಕುಮಾರ್ ಕಿಡ್ನಾಪ್ ಆಗಿ ಕಾಡಿಗೆ ಹೋದಾಗಲೇ ನಾನು ಈ ಕಥೆಯನ್ನು ಬರೆಯುವುದಕ್ಕೆ ಶುರು ಮಾಡಿದ್ದೆ. ಆಗ ಎಲ್‌ಟಿಟಿಇಯವರು ನನ್ನ ಜೊತೆಯಲ್ಲೇ ಇದ್ದರಲ್ಲ. ಆಗ ಕ್ಲೋಸ್ ಆಗಿದ್ವಿ. ಆಗ ಕೆಂಪಯ್ಯ ಅವರು ನೀನು ಕಾಡಿಗೆ ಹೋಗುವುದು ಬೇಡ ಅಂದರು. ಆಗ ನಕ್ಕೀರನ್ ಹೋದರು. ಹೀಗಾಗಿ ನಾನು ಸ್ಕ್ರಿಪ್ಟ್ ಮಾಡುವುದಕ್ಕೆ ಶುರು ಮಾಡಿದ್ದೆ. ಆಗ ನನಗೆ ಗೊತ್ತಿಲ್ಲದ ಹಾಗೇ ನನ್ನ ಸಿನಿಮಾದ ಕಾಪಿ ಎಲ್‌ಟಿಟಿಇ ಪ್ರಭಾಕರನ್‌ಗೆ ಹೋಗಿತ್ತು. ಯಾವ ಸ್ಟುಡಿಯೋದಿಂದ ಹೋಯ್ತು ಅನ್ನೋದು ಇದೂವರೆಗೂ ನನಗೆ ಗೊತ್ತಿಲ್ಲ."
ಪ್ರಭಾಕರನ್ ನಿಮ್ಮ ಬಳಿ ಕೇಳಿದ್ದೇನು?
"ಪ್ರಭಾಕರನ್ ಕಡೆಯವರು ಫೋನ್ ಮಾಡಿದ್ದರು. ಇದರಲ್ಲಿ ರಾಜೀವ್ ಗಾಂಧಿಯನ್ನು ಕೊಂದಿದ್ದು ತಪ್ಪು ಅಂತ ಶಿವರಸನ್ ಹೇಳಿದ್ದಾನೆ ಅಂತಿದೆ. ಅವನು ಹೇಳಿದ್ನಾ? ನಾನು ಆಗ ನನಗೆ ರಂಗನಾಥ್ ಹೇಳಿದ್ದು. ಅವನು ಜೀವಂತವಾಗಿಯೇ ಇದ್ದಾನೆ. ಅವನನ್ನು ಬೇಕಿದ್ದರೆ ನೀವು ಕೇಳಿ ಎಂದೆ. ಇನ್ನೊಂದರಲ್ಲಿ ಬಾಳೆ ನೆರಳು ನಮ್ಮ ಮೇಲೆ ಬಿದ್ದರೆ ಅಪಶಕುನ ಎಂದು ಶುಭಾ ಹೇಳಿರುತ್ತಾಳೆ ಅದನ್ನೂ ಹೇಳಿದ್ರಾ? ಅಂತ ಕೇಳಿದ್ದರು. ಇವೆರಡನ್ನೂ ರಂಗನಾಥ್ ಹತ್ತಿರವೇ ಕೇಳಿ ಎಂದೆ. ಬೇಡ ಬಿಡಿ ಎಂದರು. ಆಮೇಲೆ ಒಂದೇ ಒಂದು ಕರೆಕ್ಷನ್ ಮಾಡುವುದಕ್ಕೆ ಆಗುತ್ತಾ ಎಂದರು. ಶುಭಾ ಪಾತ್ರದ ಹತ್ತಿರ ಆಯುದ್ಧಗಳನ್ನು ಕಳ್ಳತನ ಮಾಡಿದ್ದೀರ ಅಂತ ಹೇಳಿಸಿದ್ದೀರ. ಆದರೆ, ನಾವು ಯುದ್ಧದಲ್ಲಿ ವಶ ಪಡಿಸಿಕೊಂಡಿದ್ದೇವೆ ಎಂದು ಮಾಡುವುದಕ್ಕೆ ಆಗುತ್ತಾ ಎಂದು ಹೇಳಿದರು. ನಾನು ತಮಿಳಿನಲ್ಲಿ ಮಾಡಿಕೊಟ್ಟೆ. ಆದರೆ, ಕನ್ನಡದಲ್ಲಿ ಹಾಗೇ ಇದೆ."
ಸೈನೈಡ್ ರಿಲೀಸ್ ಆದಾಗ ಪ್ರತಿಕ್ರಿಯೆ ಹೇಗಿತ್ತು?
"ಜಿಎಸ್ ಶಿವರುದ್ರಪ್ಪನವರು ಒಂದು ಲೆಟರ್ ಬರೆದಿದ್ದಾರೆ. ಅದು ಓದಿದರೆ ನನಗೆ ಇಂದಿಗೂ ಕಣ್ಣಲ್ಲಿ ನೀರು ಬರುತ್ತೆ. ಅದೇ ತರ ಚಂದ್ರಶೇಖರ ಕಂಬಾರ ಅವರು ಒಂದು ಲೆಟರ್ ಬರೆದಿದ್ದಾರೆ. ಅವರು ಈ ಸಿನಿಮಾ ಆಸ್ಕರ್‌ಗೆ ಹೋಗಬೇಕು ಅಂತ ಬರೆದಿದ್ದಾರೆ. ಸಿಆರ್ ಸಿಂಹ, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್ ಲೆಟರ್ ಬರೆದಿದ್ದಾರೆ. ಅಷ್ಟು ದೊಡ್ಡ ಚಿಂತಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಇನ್ನು ವರ್ಷ ಹೋದರೂ 50 ಸಿನಿಮಾಗಳಲ್ಲಿ ನಿಮ್ಮ ಸಿನಿಮಾ ಸೈನೈಡ್ ಇರುತ್ತೆ ಎಂದು ಗಿರೀಶ್ ಕಾಸರವಳ್ಳಿ ಹೇಳಿದ್ದರು."
ಹ್ಯೂಮನ್ ಬಾಂಬ್ ಇದೆನಾ?
"ಇವತ್ತಿನ ಜನರೇಷನ್ ಈ ಸಿನಿಮಾ ನೋಡಬೇಕು. ಅವತ್ತಿನ ದಿನ ಹ್ಯೂಮನ್ ಬಾಂಬ್ ಎನ್ನುವ ಕಲ್ಚರ್ ಇರಲಿಲ್ಲ. ಇದೇ ಮೊದಲ ಬಾರಿಗೆ ಹ್ಯೂಮನ್ ಬಾಂಬ್ ಅಂತಹ ಘಟನೆ ನಡೆದಿದ್ದು. ಇತಿಹಾಸದಲ್ಲೇ ನಡೆದಿಲ್ಲ. ಪೊಲೀಸರಿಗೆ ಒಂದು ದಿನ ಆಗೋವರೆಗೂ ಎಲ್ಲಿಂದ ಬಾಂಬ್ ಬಂದಿದೆ ಅನ್ನೋದೇ ಗೊತ್ತಿರಲಿಲ್ಲ. ಎಲ್ಲಿ ಬಾಂಬ್ ಇಟ್ಟಿದ್ದರು. ಅಂತ ಹುಡುಕುತ್ತಿರುತ್ತಾರೆ. ಯಾವಾಗ ಗುರುತು ಹಿಡಿದ ಮೃತದೇಹ ಸಿಗುತ್ತೆ. ಆಗಲೇ ಇದು ಹ್ಯೂಮನ್ ಬಾಂಬ್ ಅಂತ ಗೊತ್ತಾಗುತ್ತೆ."

ಸೆನ್ಸಾರ್ ಬೋರ್ಡ್ ಯು ಸರ್ಟಿಫಿಕೇಟ್ ಕೊಟ್ಟಿದ್ದೇಕೆ?
"ನಾನು ಈ ಸಿನಿಮಾ ಬ್ಯಾನ್ ಆಗುತ್ತೆ ಅಂತ ಅಂದುಕೊಂಡಿದ್ದೆ. ಯಾಕಂದ್ರೆ, ತುಂಬಾ ಜನ ಭಯ ಹುಟ್ಟಿಸಿದ್ದರು. ನಾನು ಮೊದಲ ಈ ಸಿನಿಮಾ ಮಾಡಬೇಕು ಅಂತಿದ್ದೆ. ಆದರೆ, ಎಲ್ಲರೂ ನನಗೆ ಭಯ ಬೀಳಿಸಿದ್ದರು ಅಂತ ಸಂತೋಷ ಸಿನಿಮಾ ಮಾಡಿದೆ. ಅದರಲ್ಲಿ ದುಡ್ಡು ಕಳೆದುಕೊಂಡೆ ರಾಜ್ಯ ಪ್ರಶಸ್ತಿ ಬಂತು. ಅಯ್ಯೋ ನಾನು ದುಡ್ಡು ಕಳೆದುಕೊಳ್ಳೋಣ ಅಂದರೆ, ಸೈನೈಡ್‌ಯಿಂದಲೇ ಕಳೆದುಕೊಳ್ಳಬಹುದಿತ್ತಲ್ಲ ಅಂತ ಮತ್ತೆ ಸೈನೈಡ್ ಶುರುಮಾಡಿದೆ. ಈ ಸಿನಿಮಾ ಬ್ಯೂಟಿ ಅಂದರೆ, ಸೆನ್ಸಾರ್ ಬೋರ್ಡ್ ಯು ಸರ್ಟಿಫಿಕೇಟ್ ಕೊಟ್ಟಿದ್ದು. ಸೆನ್ಸಾರ್ ಬೋರ್ಡ್‌ನವರು ದೊಡ್ಡದೊಂದು ಪ್ರೆಸ್ ಮೀಟ್ ಮಾಡಿದ್ದರು. ಚೇಂಬರ್‌ಗೂ, ಸೆನ್ಸಾರ್ ಬೋರ್ಡ್‌ಗೂ ಗಲಾಟೆ ಆಗುತ್ತಿತ್ತು. ಎಲ್ಲಾ ಸಿನಿಮಾಗೂ ಕಟ್ ಮಾಡುತ್ತಿರಾ. ಯುಎ ಸರ್ಟಿಫಿಕೆಟ್ ಕೊಡುತ್ತಿರಾ? ಅಂತ ಗಲಾಟೆ ನಡೆಯುತ್ತಿತ್ತು. ಇಂತಹ ಸೂಕ್ಷ್ಮ ಸಿನಿಮಾಗೆ ನಾವು ಯು ಸರ್ಟಿಫಿಕೆಟ್ ಕೊಟ್ಟಿದ್ದೀವಿ. ಯಾಕಂದ್ರೆ, ಒಂದು ಸೀನ್‌ನಲ್ಲೂ ಇವರು ರಕ್ತಪಾತವನ್ನು ತೋರಿಸಿಲ್ಲ. ಭಾಷೆಯಲ್ಲಿ ಹಿಡಿತವಿದೆ. ಬೇರೆ ದೇಶವನ್ನು ದೂಷಿಸಲ್ಲ ಎಂದು ಹೇಳಿದರು."
ಮುಂಗಾರು ಮಳೆ, ದುನಿಯಾ ಜೊತೆ ಸೈನೈಡ್ ಹೇಗೆ?
"ನಮಗೆ ಕಾಂಪಿಟೇಷನ್ ಕೊಟ್ಟಿದ್ದು ಎರಡು ಸಿನಿಮಾ. ಒಂದು ಮುಂಗಾರು ಮಳೆ, ಇನ್ನೊಂದು ದುನಿಯಾ, ಮತ್ತೊಂದು ನಮ್ಮ ಸಿನಿಮಾ ಸೈನೈಡ್. ಮೂರು ಸಿನಿಮಾ ಹೆಚ್ಚು ಕಡಿಮೆ ಒಟ್ಟಿಗೆ ಬಂದಿತ್ತು. ಈ ಮೂರು ಸಿನಿಮಾಗೂ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಮೂರೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅವರದ್ದು ಮ್ಯಾಸಿವ್ ಹಿಟ್ ಆಯ್ತು. ನಮಗೆ ಸಿಕ್ಕಾಪಟ್ಟೆ ಹೆಸರು ಬಂತು."
'ಸೈನೈಡ್' ಪ್ರಿಕ್ವೆಲ್‌ನಲ್ಲಿ ಏನೇನಿರುತ್ತೆ?
"ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಹೋದಾಗ ನಿಂತುಕೊಂಡು ಚಪ್ಪಾಳೆ ಹೊಡೆದಿದ್ದರು. ಆಗ ಎಲ್ಲರೂ ರಾಜೀವ್ ಗಾಂಧಿಯನ್ನು ಹೇಗೆ ಹತ್ಯೆ ಮಾಡಿದರು ಅಂತ ತೋರಿಸಲೇ ಇಲ್ವಲ್ಲ ಸರ್ ತೋರಿಸಿ ಎಂದಿದ್ದರು. ನಾನು ಭಯ ಬಿದ್ದಿದ್ದೆ. ನಾನು ತೋರಿಸಿದರೆ, ಎಲ್ಲ ಬ್ಯಾನ್ ಆಗುತ್ತೋ ಅಂತ. ಈಗ ಪ್ರೀಕ್ವೆಲ್ ಮಾಡುವುದಕ್ಕೆ ಪ್ರತಿಯೊಬ್ಬರು ಉತ್ತೇಜನ ಕೊಡುತ್ತಿದ್ದಾರೆ. ಪ್ರೀಕ್ವೆಲ್‌ನಲ್ಲಿ 9 ಜನರ ತಂಡ ಹೇಗೆ ಬರುತ್ತೆ? ಶ್ರೀಲಂಕಾದಿಂದ ತಮಿಳುನಾಡಿಗೆ ಹೇಗೆ ಬರುತ್ತಾರೆ? ಚೆನ್ನೈನಿಂದ ಹೇಗೆ ಬರುತ್ತಾರೆ? ಅವರು ಬರೋದು ಮೇ 1, 1991.. ಅವರು ರಾಜೀವ್ ಗಾಂಧಿಯನ್ನು ಕೊಂದು ಹಾಕೋದು ಮೇ 21ನೇ ತಾರೀಕು. ಆಮೇಲೆ ಆಗಸ್ಟ್ 1ನೇ ತಾರೀಕು ಬರೋದು. ಇನ್ನು 70 ದಿನಗಳು ಎಲ್ಲೆಲ್ಲಿಗೆ ಹೋದರು ಅನ್ನೋದು ಇಲ್ಲಿ ಬರುತ್ತೆ. ನಾವೀಗ ಪ್ರೀಕ್ವೆಲ್ ಮಾಡುತ್ತಿರುವುದು ಕೂಡ 'ಸೈನೈಡ್; ದಿ ಹ್ಯೂಮನ್ ಬಾಂಬ್' ಅಂತಲೇ."


Click it and Unblock the Notifications











