ಕಾಟೇರ' ಜೂನಿಯರ್ ಆರ್ಟಿಸ್ಟ್ ಆಗಲು ಹೋಗಿದ್ದ ವಿಕ್ಕಿ; ಇಂದು ಕಿರುತೆರೆ ಬೇಡಿಕೆ ನಟನಾಗಿದ್ದೇಗೆ?
ಸ್ಟಾರ್ ಸುವರ್ಣದ ಯಶಸ್ವಿ ಧಾರಾವಾಹಿ 'ಅವನು ಮತ್ತೆ ಶ್ರಾವಣಿ'. ಈ ಸೀರಿಯಲ್ ನೋಡಿ ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಹಾಗೇ ಈ ಧಾರಾವಾಹಿಯಲ್ಲಿ ಖಳನಾಯಕನಾಗಿ ನಟಿಸುತ್ತಿರುವ ವಿಕ್ಕಿ ಉರ್ಫ್ ವಿಕಾಸ್ ಕೂಡ ಜನರ ಮನ ಗೆದ್ದಿದ್ದಾರೆ.
'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲೂ ಇವರ ಪಾತ್ರ ವಿಕ್ಕಿ. ಅಸಲಿಗೆ ಈ ಮೈಸೂರು ಹುಡುಗನ ಮೂಲ ಹೆಸರು ವಿಕಾಸ್. ಮನೆಯಲ್ಲಿ ಎಲ್ಲರೂ ವಿಕ್ಕಿ ಅಂತಲೇ ಕರೆಯುತ್ತಾರೆ. ಸ್ನೇಹಿತರ ಬಳಗಕ್ಕೂ ವಿಕ್ಕಿ ಅಂತಲೇ ಪರಿಚಯ. ಕಾಕತಾಳೀಯವೋ ಏನೋ ಮೊದಲ ಧಾರಾವಾಹಿ 'ಅವನು ಮತ್ತೆ ಶ್ರಾವಣಿ'ಯಲ್ಲಿ ನಟಿಸುತ್ತಿರುವ ಪಾತ್ರದ ಹೆಸರು ಕೂಡ ವಿಕ್ಕಿನೇ.

ಯಾರೂ ಗಾಡ್ ಫಾದರ್ ಇಲ್ಲದೆ ಬಿಸಿಎ ಪದವಿ ಪಡೆದ ಈ ಹುಡುಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಅಷ್ಟು ಸುಲಭವಲ್ಲ. ತನ್ನ ಗುರಿಯನ್ನು ಸಾಧಿಸುವುದಕ್ಕೆ ವಿಕ್ಕಿ ಏನೆಲ್ಲ ಮಾಡಿದರು ಅನ್ನೋದನ್ನು ಸವಿಸ್ತಾರವಾಗಿ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ವಿಕ್ಕಿ ನಿಮ್ಮ ಹಿನ್ನೆಲೆ ಏನು?
"ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಮೈಸೂರು. ನಾನು ಮೈಸೂರಿನ ಶೇಷಾದ್ರಿಪುರಂ ಕಾಲೇಜ್‌ನಲ್ಲಿ ಬಿಸಿಎ ಕಂಪ್ಲೀಟ್ ಮಾಡಿದ್ದೇನೆ. ನಾನು ಹತ್ತನೇ ತರಗತಿ ಇರುವಾಗಲೇ ಯುವ ಸಂಭ್ರಮ, ಯುವ ದಸರಾ ಅಲ್ಲೆಲ್ಲ ಬ್ಯಾಕ್ ಡ್ಯಾನ್ಸರ್ ಆಗಿದ್ದುಕೊಂಡು, 2019 ಮಿಸ್ಟರ್ ಯೂತ್ ಐಕಾನ್ ಆಫ್ ಮೈಸೂರು ಆಗಿದ್ದೆ. ಡಿಗ್ರಿ ಮಾಡುವಾಗಲೇ ಮೈಸೂರಿನ ಲೋಕಲ್ ಚಾನೆಲ್‌ನಲ್ಲಿ ಕ್ಯಾಮರಾ ಭಯ ಹೋಗಲಿ ಅಂತ ಡಿಜೆಯಾಗಿ ಕೆಲಸ ಮಾಡಿದ್ದೆ. ಡಿಗ್ರಿ ಮುಗಿದ ಬಳಿಕ ಕೆಲಸ ಸಿಕ್ಕಿತ್ತು. ಮೂರು ತಿಂಗಳು ಕೆಲಸ ಮಾಡಿದ್ದೆ. ಆದರೆ, ನನಗೆ ಆಕ್ಟರ್ ಆಗಬೇಕು ಅಂತ ಗೋಲ್ ಇಟ್ಟುಕೊಂಡಿದ್ದರಿಂದ ಬಿಟ್ಟು ಬಂದೆ."
ನಿಮ್ಮ ಮನೆಯಲ್ಲಿ ಸಪೋರ್ಟ್ ಹೇಗಿತ್ತು?
"ನನ್ನ ಮನೆಯಲ್ಲಿ ನನ್ನ ಆಕ್ಟಿಂಗ್ ಕರಿಯರ್ ಬಗ್ಗೆ ಅವರು ಸಪೋರ್ಟ್ ಮಾಡುತ್ತಿರಲಿಲ್ಲ. ನನ್ನನ್ನು ಚೆನ್ನಾಗಿ ಓದಿಸಬೇಕು. ನನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕು ಅನ್ನೋದಷ್ಟೇ ಅವರ ಗಮನದಲ್ಲಿತ್ತು. ಹೀಗಾಗಿ ನಾನು ಆಕ್ಟಿಂಗ್ ಮಾಡುವುದು ಇಷ್ಟ ಇಲ್ಲದೆ ಇದ್ದಿದ್ದರಿಂದ ಅವರನ್ನು ನಾನು ಇದರಲ್ಲಿ ಎಳೆದು ತಂದಿಲ್ಲ."

ನೀವು ನಟನೆ ಕಲಿತಿದ್ದು ಹೇಗೆ?
"ಮೂರು ತಿಂಗಳು ಜಾಬ್ ಮಾಡಿ ಮನೆಯವರೊಂದಿಗೆ ಮಾತಾಡಿಕೊಂಡು ಒಂದಿಷ್ಟು ಹಣ ಅವರಿಂದ ತೆಗೆದುಕೊಂಡು ಬೆಂಗಳೂರಿಗೆ ಬಂದೆ. ಇಲ್ಲಿ ಸದಾಶಿವನಗರದಲ್ಲಿದ್ದ ನವರಸನ ನಟನ ಅಕಾಡೆಮಿಗೆ ಸೇರಿಕೊಂಡೆ. ನಾಲ್ಕು ತಿಂಗಳ ಕೋರ್ಸ್ ಇದು. 9 ರಿಂದ 6ರವರೆಗೆ ಆಕ್ಟಿಂಗ್ ಕ್ಲಾಸ್ ಇತ್ತು. ಅದು ಮುಗಿದ ಬಳಿಕ ಡ್ಯಾನ್ಸ್ ಕ್ಲಾಸ್ ಸೇರಿಕೊಂಡೆ. ಆಕ್ಟಿಂಗ್ ಕೋರ್ಸ್ ಮುಗಿದ ಬಳಿಕ ಒಂದಿಷ್ಟು ಶಾರ್ಟ್ ಸಿನಿಮಾ ಮಾಡಿದೆ. ಎಲ್ಲದರಲ್ಲೂ ಲೀಡ್ ಆಗಿಯೇ ತೆಗೆದುಕೊಂಡಿದ್ದರು. ಕರ್ಣ ಭಾರತ ಅಂತ ಡ್ರಾಮ ಮಾಡಿದ್ವಿ. ಅದರಲ್ಲಿ ಕರ್ಣ ಪಾತ್ರ ಮಾಡಿದೆ."
ನೀವು ಆಡಿಷನ್‌ಗೆ ಹೋಗಿದ್ದ ಅನುಭವ ಹೇಗಿತ್ತು?
"ಆಕ್ಟಿಂಗ್ ಕೋರ್ಸ್ ಮುಗಿದ ಮೇಲೆ ಬಹಳಷ್ಟು ಆಡಿಷನ್ ಟ್ರೈ ಮಾಡಿದ್ದೆ. ಅದ್ಯಾವುದೂ ಆಗುತ್ತಿರಲಿಲ್ಲ. ಕೆಲವು ಫೇಕ್ ಆಡಿಷನ್ ಇರುತ್ತಿತ್ತು. ಕೆಲವು ಆಡಿಷನ್‌ಗೆ ಫೋಟೋಗಳನ್ನು ಕಳಿಸುತ್ತಿದ್ದೆವು. ಆದರೆ, ರಿಪ್ಲೈ ಬರುತ್ತಿರಲಿಲ್ಲ. ಆ ಬಳಿಕ ಜೂನಿಯರ್ ಆರ್ಟಿಸ್ಟ್ ಆಗಿ ಹೋದೆ. ಮ್ಯಾನೇಜರ್ ನಂಬರ್ ಸಿಗುತ್ತೇನೋ ಅಂತ ಹೋದೆ. ಹೀಗೆ ಒಂದು ಐದಾರು ಸೀರಿಯಲ್ ಮಾಡಿರಬಹುದು."
ಜೂನಿಯರ್ ಆರ್ಟಿಸ್ಟ್ ಆಗಬೇಕು ಅಂತ ಹೋಗಿದ್ರಂತೆ?
"ಸೀರಿಯಲ್ ಆದ್ಮೇಲೆ ಶಿವಣ್ಣನ ಸಿನಿಮಾಗಳಿಗೆ, ದರ್ಶನ್ ನಟಿಸಿದ ಕಾಟೇರ ಸಿನಿಮಾಗೆ ಜೂನಿಯರ್ ಆರ್ಟಿಸ್ಟ್ ಆಗಿ ಹೋಗಿದ್ದೆ. ಆದರೆ, ಅಲ್ಲಿ ಒಬ್ಬರು ನೀವು ನೋಡುವುದಕ್ಕೆ ಚೆನ್ನಾಗಿದ್ದೀರ. ಸ್ಟೈಲ್ ಚೆನ್ನಾಗಿದೆ. ನೀವು ಜೂನಿಯರ್ ಆರ್ಟಿಸ್ಟ್ ಬಂದರೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜಾಸ್ತಿ ಬರುವುದಕ್ಕೆ ಹೋಗಬೇಡಿ ಅಂದಿದ್ದರು."

'ಕಾಟೇರ' ಸಿನಿಮಾದ ಅನುಭವ ಹೇಳಿ?
"ನಾನು ತರುಣ್ ಸರ್ ಅವರನ್ನು ಎರಡು ದಿನ ಹುಡುಕಿದ್ದೆ. ಹೋಗಿ ಫೋಟೋಗಳನ್ನು ಹಿಡ್ಕೊಂಡು ಸುತ್ತಿದೆ. ಆದರೆ, ಅವರು ಕಾಟೇರದಲ್ಲಿ ಬ್ಯುಸಿ ಇದ್ದರು. ಎರಡು ದಿನ ಏನೇ ಮಾಡಿದರೂ ಸಿಗಲಿಲ್ಲ. ಯಾರೋ ಕಾಟೇರ ಸಿನಿಮಾ ನಡೆಯುತ್ತಿದೆ. ಜೂನಿಯರ್ ಅನ್ನು ಕರೆದುಕೊಂಡು ಹೋಗುತ್ತಿದ್ದಾರೆ ಅಂತ ಸುದ್ದಿ ಬಂದಿತ್ತು. ಅದಕ್ಕೆ ಕಾಟೇರ ಸಿನಿಮಾಗೆ ಹೋದೆ. ನನ್ನ ಬ್ಯಾಡ್ ಲಕ್ ಏನೋ, ನಾನು ಸ್ವಲ್ಪ ಬೆಳ್ಳಗಿದ್ದೇನೆ. ಅಂದು ಹಳ್ಳಿ ಸೀನ್ ಇತ್ತು. 50 ಜನರ ಹಿಂದೆ ಹಾಕಿದ್ದರು. ಆಮೇಲೆ ಬೆಳ್ಳಗೆ ಇದ್ದಾನೆ ಅಂತ ಸೈಡ್‌ಗೆ ಹಾಕಿದರು. ಹಾಗೇ ಶಿವರಾಜ್‌ಕುಮಾರ್ ನಟಿಸಿದ ಘೋಸ್ಟ್ ಸಿನಿಮಾ ಶೂಟಿಂಗ್ ಸ್ಪಾಟ್‌ಗೂ ಹೋಗಿದ್ದೆ. ಆ ನಿರ್ದೇಶಕರು ಕೂಡ ಬ್ಯುಸಿ ಇದ್ದರು. ಮಾತಾಡಿಸುವುದಕ್ಕೆ ಆಗಲಿಲ್ಲ."
ಶಾರ್ಟ್ ಫಿಲ್ಮ್‌ನಲ್ಲೂ ನಟಿಸಿದ್ದೀರಾ ಅಲ್ವಾ?
"ಇನ್ನೇನು ನಟನೆಯ ಅವಕಾಶ ಸಿಗುತ್ತಿಲ್ಲ ಅನ್ನುವಾಗಲೇ ನಾನೇ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಟೀಮ್‌ಗೆ ನಾನೇ ಕೇಳಿಕೊಂಡು ಹೋದೆ. ಮಿನುಗುತಾರೆ ಕಲ್ಪನಾ ನಾಟಕ ನಡೆಯುತ್ತಿತ್ತು. ಡಾಕ್ಟರ್ ರೋಲ್ ಇತ್ತು. ಅದನ್ನು ಮಾಡಬೇಕಿತ್ತು. ಆಗ ಒಬ್ಬರು ಬಂದು ಒಂದು ಅಲ್ಬಮ್ ಸಾಂಗ್‌ಗೆ ಅವಕಾಶ ಕೊಟ್ಟರು. ಅದೇ ನನ್ನ ಮೊದಲ ಪ್ರಾಜೆಕ್ಟ್. ಅದಾದ್ಮೇಲೆ ಕಾಸ್ಟಿಂಗ್ ಕಾಲ್‌ಗೆ ಫೋಟೊ, ಫೋನ್ ನಂಬರ್ ಕಳಿಸುತ್ತಲೇ ಇದೆ. ಆಗ ಸಾವಿನ ಮನೆ ಅನ್ನೋ ಶಾರ್ಟ್ ಫಿಲ್ಮ್ ಮಾಡಿದೆ. ಅದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡೆ. ಆಗ ಸೀರಿಯಲ್ ಮಾಡುತ್ತಿದ್ದ ಪ್ರೇಮ ಅನ್ನುವವರು ನನ್ನ ಆಕ್ಟಿಂಗ್ ನೋಡಿ, ನನ್ನ ನಂಬರ್ ಅವರೇ ತೆಗೆದುಕೊಂಡಿದ್ದರು."
ಯಾವತ್ತಾದರೂ ಬಿಟ್ಟು ಹೋಗಬೇಕು ಅನಿಸಿತ್ತೇ?
"ಪ್ರೇಮ ಮೇಡಂ ನನ್ನ ನಂಬರ್ ತೆಗೆದುಕೊಂಡಿದ್ದರು. ಆಮೇಲೆ ಮತ್ತೆ ಪರದಾಟ ಶುರುವಾಗಿತ್ತು. ಮನೆಯಿಂದ ಒತ್ತಡ ಬೇರೆ ಇತ್ತು. ಇದ್ಯಾಕೋ ವರ್ಕ್‌ಔಟ್ ಆಗುತ್ತಿಲ್ಲ. ಒಂದೆರಡು ವರ್ಷ ಕೆಲಸ ಮಾಡಿ, ಆಮೇಲೆ ಮತ್ತೆ ಟ್ರೈ ಮಾಡೋಣ ಅಂತಿದೆ. ಕೊನೆಯದಾಗಿ ಪ್ರೇಮ ಮೇಡಂ ಮೆಸೇಜ್ ಹಾಕಿದ್ದೆ. ಆಗ ಅವರು ಮೈಸೂರು ಮಂಜು ಸರ್ ನಂಬರ್ ಕೊಟ್ಟರು. ಪ್ರೊಫೈಲ್ ಕಳಿಸಿಕೊಟ್ಟೆ. ಆಫೀಸ್‌ಗೆ ಕರೆಸಿ ಓಕೆ ಮಾಡಿದ್ದರು. ಆದರೆ, ನಾಲ್ಕು ತಿಂಗಳು ಆದರೂ ಏನೂ ಆಗಿಲಿಲ್ಲ."
'ಅವನು ಮತ್ತೆ ಶ್ರಾವಣಿ' ಸಿಕ್ಕಿದ್ದೇಗೆ?
"ನಾಲ್ಕು ತಿಂಗಳು ಆದ್ಮೇಲೆ ಮೆಸೇಜ್ ಮಾಡಿದ್ದೆ. ಅವರು ಮೇಕಪ್ ಹಾಕೊಂಡು ಬಂದು ಆಡಿಷನ್ ಕೊಟ್ಟು ಹೋಗು ಅಂದಿದ್ದರು. ಆಮೇಲೆ ಅವರು ಚಾನೆಲ್‌ಗೆ ಕಳುಹಿಸಿದ್ದರು. ಅವರು ಓಕೆ ಅಂದರು. ಆಗ ನಿರ್ಮಾಪಕರು ಅವನು ಮತ್ತೆ ಶ್ರಾವಣಿಗೆ ಕರೆಸಿ ಮಾತಾಡಿಸಿದರು. ಹಾಗೇ ನನಗೆ ಅವಕಾಶ ಸಿಕ್ಕಿತ್ತು."
'ಅವನು ಮತ್ತೆ ಶ್ರಾವಣಿ' ಪಾತ್ರದ ಅನುಭವ ಹೇಗಿತ್ತು?
"ಅವನು ಮತ್ತೆ ಶ್ರಾವಣಿ ನನಗೆ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದರಿಂದ ಜವಾಬ್ದಾರಿ ತುಂಬಾನೇ ಇತ್ತು. ಚೆನ್ನಾಗಿ ಬರಲಿಲ್ಲ ಅಂದರೆ, ರಿಪ್ಲೇಸ್ ಮಾಡುತ್ತೇವೆ ಎಂದಿದ್ದರು. ಅದಕ್ಕೆ ಒಂದಿಷ್ಟು ತಯಾರಿ ತೆಗೆದುಕೊಂಡು, ಮನೆಯಲ್ಲಿ ಪ್ರಾಕ್ಟೀಸ್ ಮಾಡಿದೆ. ಇದೊಂದು ನೆಗೆಟಿವ್ ಶೇಡ್ ಅನ್ನುವುದಕ್ಕಿಂತ ಇಂದು ಸೈಕೋ ಪಾತ್ರ ಆಗಿತ್ತು. ಅದಕ್ಕೆ ತಯಾರಿ ಮಾಡಿಕೊಂಡು ನಟಿಸಿದೆ. ದಿನದಿಂದ ದಿನಕ್ಕೆ ಚೆನ್ನಾಗಿ ಬರುತ್ತಾ ಹೋಯ್ತು."
'ಕೆಂಡಸಂಪಿಗೆ' ಧಾರಾವಾಹಿ ಅನುಭವ ಹೇಗಿತ್ತು?
"ನನಗೆ ಕೆಂಡ ಸಂಪಿಗೆ ಬಂದಿದ್ದು ರಿಪ್ಲೇಸ್ಮೆಂಟ್ ಕ್ಯಾರೆಕ್ಟರ್. ಅವನು ಮತ್ತೆ ಶ್ರಾವಣಿ ನನಗೆ ಅಂತಲೇ ಬಂದಿತ್ತು. ಆದರೆ, ರಿಪ್ಲೇಸ್ಮೆಂಟ್ ಅಂತ ಬಂದಾಗ, ಆ ಪಾತ್ರವನ್ನು ಹಿಂದಿನವರು ಒಂದು ಮ್ಯಾನರಿಸಂ ಇಟ್ಟು ಹೋಗಿರುತ್ತಾರೆ. ಅದಕ್ಕಿಂತ ಚೆನ್ನಾಗಿ ಮಾಡಿದರೆ ಜನರು ಮೆಚ್ಚುತ್ತಾರೆ. ಸುಭಾಷ್ ಅನ್ನುವ ಪಾತ್ರ ಕಂಪ್ಲೀಟ್ ಚೇಂಜ್ ಇತ್ತು. ಅಲ್ಲದೆ ಒಂದು ಗಂಟೆ ಎಪಿಸೋಡ್ ಇತ್ತು. ಆರಂಭದ ದಿನಗಳಲ್ಲಿ ವಿಕ್ಕಿ ಮ್ಯಾನರಿಸಂ ಬರುತ್ತಿತ್ತು. ಆಗ ಕೆಂಡಸಂಪಿಗೆ ತಂಡ ಸುಳಿವು ಕೊಟ್ಟಿತ್ತು. ಹೀಗಾಗಿ ಕೂತು ಪಾತ್ರವನ್ನು ನೋಡಿ ಬದಲಾಯಿಸಿಕೊಂಡೆ."
ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?
"ನನಗೆ ಬಹಳ ಆಸಕ್ತಿ ಇದ್ದಿದ್ದು ಸಿನಿಮಾ ಮೇಲೆ. ಆದರೆ, ಬೆಟ್ಟ ತಲುಪಬೇಕು ಅಂದರೆ, ಮೆಟ್ಟಿಲು ಹತ್ತಿಕೊಂಡು ಹೋಗಬೇಕು. ನಾನು ಇನ್ನೂ ಕಲಿಯುವುದು ತುಂಬಾ ಇದೆ. ಅದಕ್ಕೆ ಇನ್ನು ಸ್ವಲ್ಪ ಸಮಯ ಕೊಟ್ಟು ಆಮೇಲೆ ಸಿನಿಮಾ ನೋಡುತ್ತೇನೆ. ಸದ್ಯ ಎರಡು ಪಾತ್ರಗಳು ಚೆನ್ನಾಗಿದೆ. ಇನ್ನೂ ಮೂರು ವರ್ಷ ನಟನೆ ಕಲಿಯೋಣ ಅಂತಿದ್ದೇನೆ. ಆದರೆ, ಸಿನಿಮಾ ಮಾಡುವ ಗುರಿ ಅಂತೂ ಇದ್ದೇ ಇದೆ."


Click it and Unblock the Notifications











