'ಹೊಯ್ಸಳ' ಸಿನಿಮಾ ಬಳಿಕ ಪ್ರತಾಪ್ ಕೈ ತುಂಬಾ ಸಿನಿಮಾ: ಕೈ ಹಿಡೀತು ದರ್ಶನ್ ನೀಡಿದ ಒಂದು ಸಲಹೆ!
ಸಿನಿಮಾರಂಗದಲ್ಲಿ ನೆಲೆಯೂರುವುದು ಅಷ್ಟು ಸುಲಭದ ಮಾತಲ್ಲ. ಹೀರೊ ಆಗಬೇಕು, ವಿಲನ್ ಆಗಬೇಕು, ಪೋಷಕ ನಟ ಆಗ್ಬೇಕು ಅಂತ ಕನಸು ಕಾಣುತ್ತಾ ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಸಕ್ಸಸ್ ಕಾಣುವುದು ಕೆಲವರು ಮಾತ್ರ. ಅದರಲ್ಲಿ 'ಹೊಯ್ಸಳ' ಸಿನಿಮಾ ವಿಲನ್ ಪಾತ್ರಧಾರಿ ಪ್ರತಾಪ್ ಕೂಡ ಒಬ್ಬರು.
'ಬೆಂಕಿಪಟ್ಟಣ' ಅಂತಹ ಸಿನಿಮಾದಲ್ಲಿ ನಟಿಸಿ ಜನಮನ ಗೆದ್ದಿದ್ದ ನಟ ಇತ್ತೀಚೆಗೆ 'ಹೊಯ್ಸಳ' ಮೂಲಕ ಗಮನ ಸೆಳೆದಿದ್ದಾರೆ. ನಾನಾ ಪಾತ್ರ ಸಿನಿಪ್ರೇಮಿಗಳ ಮನಗೆದ್ದಿದೆ. ಆದರೆ, ಇವರ ಸಿನಿಮಾ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. 2009ರಲ್ಲಿ 'ಡೆಡ್ಲಿ 2' ಸಿನಿಮಾ ಮೂಲಕ ಆರಂಭವಾದ ಸಿನಿಪಯಣ 'ಹೊಯ್ಸಳ'ವರೆಗೂ ಬಂದು ನಿಂತಿದೆ. ತಮ್ಮ ಈ ಸುದೀರ್ಘ ಜರ್ನಿಯನ್ನು ಫಿಲ್ಮಿಬೀಟ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸಿನಿಮಾ ಜರ್ನಿ ಆರಂಭ ಆಗಿದ್ದು ಯಾವಾಗ?
" 2006ನಿಂದ ಕೆಲಸ ಮಾಡಿಕೊಂಡೇ ಸಿನಿಮಾದಲ್ಲಿ ಅವಕಾಶ ಹುಡುಕುತ್ತಿದ್ದೆ. 2009ರಲ್ಲಿ ಡೆಡ್ಲಿ 2 ಅನ್ನೋ ಸಿನಿಮಾ ರಿಲೀಸ್ ಆಗುತ್ತೆ. ಈ ಸಿನಿಮಾಗಿಂತ ಮುನ್ನ ಒಂದು ವರ್ಷ ಸೈಕಲ್ ಹೊಡೆಯುತ್ತೇನೆ. ಒಂದು ವರ್ಷ ಕೆಲಸ ಇರೋದಿಲ್ಲ. ಎಲ್ಲಾ ಕಡೆ ಆಡಿಷನ್‌ಗೆ ಹೋಗೋದು, ಫೋಟೊ ಕೋಡೋದು ಬರೋದು ಇದೇ ಆಗುತ್ತೆ. ಎಲ್ಲೂ ಸೆಲೆಕ್ಟ್ ಆಗುತ್ತಿರಲ್ಲ. ಈ ಮೂರು ವರ್ಷ ಆಸಕ್ತಿ ಕಳೆದುಕೊಂಡಿದ್ದೆ."
ನಿಮಗೆ 'ಡೆಡ್ಲಿ 2' ಸಿನಿಮಾ ಸಿಕ್ಕಿದ್ದು ಹೇಗೆ?
"ನನ್ನ ಫ್ರೆಂಡ್ ಉದ್ದ ಕೂದಲು ಬಿಡು, ಗಡ್ಡ ಎಂದು ಸವಾಲೆಸೆದಿದ್ದ. ಇದೇ ವೇಳೆ ನಾನು ಸಿನಿಮಾ ಕೊನೆಯ ಟ್ರೈ ಮಾಡಲು ಮುಂದಾಗಿದ್ದೆ. ಆಗ ಅಭಿನಯ ತರಂಗದಲ್ಲಿ ರವಿ ಶ್ರೀವತ್ಸ ಸರ್ ಡೆಡ್ಲಿ 2ಗೆ ಆಡಿಷನ್ ಮಾಡುತ್ತಿದ್ದರು. ಏನೋ ಆಗಬಹುದು ಅಂತ ಒಳ್ಳೆ ಮನಸ್ಸಲ್ಲಿ ಹೋಗಿದ್ದೆ. ರವಿಶ್ರೀವತ್ಸ ನನ್ನನ್ನು ನೋಡಿ ಆಡಿಷನ್ ಏನೂ ಮಾಡಲಿಲ್ಲ. ಎರಡು ಫೋಟೊ ತರಲು ಹೇಳಿದ್ದರು. ಆಫೀಸ್‌ಗೆ ಹೋದಾಗ, ಅನಿಲ ಅಂತ ಒಂದು ಕ್ಯಾರೆಕ್ಟರ್ ಇದೆ ಮಾಡು ಅಂದ್ರು. ಅಲ್ಲಿಂದ ಜರ್ನಿ ಶುರುವಾಗಿತ್ತು."
ಗೆಳೆಯ ಮಧುಗುರುಸ್ವಾಮಿಯಿಂದ ಅವಕಾಶ ಸಿಕ್ಕಿತ್ತಂತೆ ಹೌದಾ?
"ಡೆಡ್ಲಿ 2 ಬಳಿಕ ಪ್ರಜ್ವಲ್ ದೇವರಾಜ್ ಸಿನಿಮಾ ಗೋಕುಲ ಕೃಷ್ಣದಲ್ಲೂ ನಟಿಸಿದ್ದೆ, ಆ ಮೇಲೆ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದ್ದೆ. ಜೂನಿಯರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದೇನೆ. ಗೆಳೆಯ ಮಧು ಗುರುಸ್ವಾಮಿ ಅವರೂ ಖಳನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೊಂದು ಅವಕಾಶ ಬಂದಿತ್ತು. ನಾನು ಹೀರೊ ಆಗಿ ಮಾಡಲ್ಲ. ನಾನು ನಿರ್ಧಾರ ಮಾಡಿದ್ದೇನೆ. ನನ್ನ ಬದಲು ನೀನು ಹೋಗು ಅಂತ ಹೇಳಿದ್ರು. ನಾನು ಆಡಿಷನ್ ಕೊಟ್ಟಾಗ ನನಗೆ ತೃಪ್ತಿಯಾಗಿಲ್ಲ. ಆಗ ಡೈರೆಕ್ಟರ್‌ಗೆ ತೃಪ್ತಿಯಾಗಿಲ್ಲ ಮತ್ತೆ ಮಾಡುತ್ತೇನೆ ಅಂದರೆ, ಮೂರು ದಿನ ಕಾಯಿಸಿದ್ರು. ಅವ್ರಿಗೆ ಇವನಿಗೆ ನಿಜಕ್ಕೂ ಆಸಕ್ತಿ ಇದೆಯಾ ಅಂತ ಟೆಸ್ಟ್ ಮಾಡಿದ್ದರು. ಅದೇ ಸ್ಟೋರಿ ಕಥೆ ಸಿನಿಮಾ."
'ಬೆಂಕಿ ಪಟ್ಟಣ' ಸಿನಿಮಾ ಮಾಡಿದ ಮೇಲೆ ಸೈಲೆಂಟ್ ಆಗಿದ್ದೇಕೆ?
"ಬೆಂಕಿ ಪಟ್ಟಣ ಅಂತ ಸಿನಿಮಾ ಸಿಕ್ಕಿತ್ತು. ಅಲ್ಲೂ ಅಷ್ಟೇ ನನಗಿಂತ ಮುಂಚೆ 10 ಜನರು ಬಂದು ಹೋಗಿದ್ದರು. ಈ ಸಿನಿಮಾಗೆ ನಾನು ಆಡಿಷನ್ ಕೊಟ್ಟ ಮರುದಿನವೇ ಸಹಿ ಮಾಡಿಸಿಕೊಂಡ್ರು. ಇದೇ ಸಿನಿಮಾ ಸೈಮಾ ಅವಾರ್ಡ್‌ನಲ್ಲಿ ನಾಮಿನೇಟ್ ಆಗಿದ್ದೆ. ಎರಡು ವರ್ಷ ಇದೇ ಪಾತ್ರ ತರಹದ್ದೇ ಸಿನಿಮಾ ಬರೋಕೆ ಶುರುವಾಗಿತ್ತು. ನನಗೆ ಆಗ ಒಂದೇ ತರಹದ ಪಾತ್ರ ಬೇಡ ಅಂತ ಅನಿಸಿತ್ತು. ಹೀಗಾಗಿ ಎರಡೂವರೆ ವರ್ಷ ಓಡಾಡಿಕೊಂಡಿದ್ದೆ. ಸಿನಿಮಾದಲ್ಲಿ ಕಾಂಟೆಕ್ಟ್ ಮಿಸ್ ಆಯ್ತು."

ನಿಮಗೆ ದರ್ಶನ್ ಕೊಟ್ಟ ಸಲಹೆ ಏನು?
"ಇದೇ ಸಮಯದಲ್ಲಿ ಸಿಸಿಎಲ್ ಶುರುವಾಗುತ್ತೆ. ಅದಾದ್ಮೇಲೆ ಅಲ್ಲೊಂದಿಷ್ಟು ಕಾಂಟೆಕ್ಟ್ ಸಿಕ್ಕಿತ್ತು. ದರ್ಶನ್ ಸರ್ ಸಿಕ್ಕು ಏನ್ ಹೀರೋ ಬೆಂಕಿಪಟ್ಟಣ ಮಾಡಿದ್ರಿ, ಚೆನ್ನಾಗಿ ಯಾಕೆ ಮಾಡ್ತಿಲ್ಲ ಅಂದ್ರು. ಇಲ್ಲ ಅಣ್ಣ ಅದೇ ತರಹದ್ದೇ ಸಿನಿಮಾ ಬರ್ತಿದೆ ಅಂತ ಹೇಳಿದೆ. ಅವಾಗ ಅವರು, ನೋಡಿ ನಿಮ್ಮ ತರ ವಾರದಲ್ಲಿ 20 ಜನ ಹೊಸಬರು ಬರುತ್ತಾರೆ. ಜನಕ್ಕೆ ಕಾಣಿಸಿಕೊಂಡಿಲ್ಲ ಅಂದ್ರೆ ಮರೆತು ಹೋಗ್ತಾರೆ. ಹಾಗೆ ಮಾಡುವುದಕ್ಕೆ ಹೋಗ್ಬೇಡಿ. ಆಮಿರ್ ಖಾನ್ ತರ ಬೆಳೆದಾಗ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡಿ ಅಂದ್ರು."
ನಿಮ್ಮ ಕೈಯಲ್ಲೀಗ ಯಾವ್ಯಾವ ಸಿನಿಮಾವಿದೆ?
"ಗುಡುಗು, ಒಂಥರಾ ಬಣ್ಣಗಳು, ಐ ಯಾಮ್ ಪ್ರೆಗ್ನೆಂಟ್ ಸಿನಿಮಾಗಳು ಒಟ್ಟಿಗೆ ಬಂದವು. 2017ರಲ್ಲಿ ಎರಡೂ ಸಿನಿಮಾಗಳನ್ನು ಮುಗಿಸಿದೆ. ಅದಾದ್ಮೇಲೆ ಉತ್ತಮರು ಅಂತ ಗ್ಯಾಂಗಸ್ಟರ್ ಸಿನಿಮಾ ಮಾಡಿದೆ. ಅದಾದ್ಮೇಲೆ ಈಗ ಐದು ಸಿನಿಮಾ ಸಹಿ ಮಾಡಿದ್ದೇನೆ. 'ಕಲರ್ ಆಫ್ ಟೊಮ್ಯಾಟೊ' ಅದೊಂದು ಶೂಟಿಂಗ್ ನಡೆಯುತ್ತಿದೆ. 'ತ್ರಿವೇದಂ' ಅನ್ನೋ ಸಿನಿಮಾ ಮಾಡುತ್ತಿದ್ದೇನೆ. 'ಶಬರಿ ಸರ್ಚ್ ಆಫ್ ರಾವಣ' ಅನ್ನೋ ಸಿನಿಮಾ ಮಾಡುತ್ತಿದ್ದೇನೆ. 'ಮಾರ್ಟಿನ್'ನಲ್ಲಿ ಅತಿಥಿ ಪಾತ್ರ ಮಾಡಿದ್ದೇನೆ. 'ಹೊಯ್ಸಳ' ಟ್ರೈಲರ್ ಬಂದ್ಮೇಲೆ 'ಸೂರಿ ಲವ್ಸ್ ಸಂದ್ಯ' ಅನ್ನೋ ಸಿನಿಮಾ ಮಾಡಿದ್ದೇನೆ."
ಕ್ರಿಕೆಟ್‌ನಿಂದ 'ಹೊಯ್ಸಳ' ಅವಕಾಶ ಸಿಕ್ಕಿದ್ದೇಗೆ?
"ಕ್ರಿಕೆಟ್ ಆಟಗಾರ ಆಗಬೇಕು ಅಂತ ಆಸೆ ನನಗೆ. ಹೊಯ್ಸಳ ಸಿನಿಮಾ ಸಿಗುವುದಕ್ಕೂ ರಾಜ್ ಕಪ್ ಕಾರಣ. ಈ ಬಾರಿ ರಾಜ್ ಕಪ್ ನಡೆಯುತ್ತಿರಬೇಕಾದರೆ, ಕಾರ್ತಿಕ್ ಅವರು ಹಾಗೂ ಯೋಗಿ ಅವರ ಟೀಮ್‌ನಲ್ಲೇ ಆಡುತ್ತಿದೆ. ಕಾರ್ತಿಕ್ ಅವರು ನನ್ನ 'ಕಲರ್ ಆಫ್ ಟೊಮ್ಯಾಟೋ' ನೋಡಿ ತುಂಬಾನೇ ಇಷ್ಟಪಟ್ಟಿದ್ದರು. ಮೊದಲು ಪೊಲೀಸ್ ಪಾತ್ರಕ್ಕೆ ಕೇಳಿದ್ರು. ಮೂರು ಸಿನಿಮಾ ಮಾಡುತ್ತಿದ್ದೆ ಕೂದಲು ಕಟ್ ಮಾಡುವ ಹಾಗಿರಲಿಲ್ಲ. ಆಗಲೇ ನೆಗೆಟಿವ್ ರೋಲ್ ಇದೆ ಮಾಡ್ತೀರಾ ಅಂದ್ರು. ಆ ಕಥೆ ಹೇಳಿದಾಗ, ನೆಗೆಟಿವ್ ರೋಲ್‌ಗೆ ಇದು ಲಾಂಚ್ ಆಗುತ್ತೆ ಅಂದ್ಕೊಂಡೆ. ಇವತ್ತು ಜನ ನನ್ನ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ."

ಕೊನೆಯಲ್ಲಿ ನಿಮ್ಮ ಜರ್ನಿ ಬಗ್ಗೆ ಏನಂತೀರಾ?
" ಜನ ಈಗ ನನ್ನನ್ನು ಗುರುತು ಹಿಡಿಯುತ್ತಿದ್ದಾರೆ. ನಾನಾ, ನಾನಾ ಅಂತಲೇ ಕರೆಯುತ್ತಿದ್ದಾರೆ. ಆಮೇಲೆ ಕ್ಲೈಮ್ಯಾಕ್ಸ್ ಧಮ್ ಹೊಡೆಯೋ ಸೀನ್ ಇದೆಯಲ್ಲ, ಥಿಯೇಟರ್ ಮುಂದೆ ಜನ ಅದನ್ನೇ ಹೇಳುತ್ತಿದ್ದರು. ಅದನ್ನು ನೋಡಿ ಖುಷಿ ಕೊಟ್ಟಿದೆ. ಕೆಲವರು ಎಷ್ಟೋ ಸಿನಿಮಾ ಮಾಡಿದ್ದಾರೆ ಕೆಲವು ಸಿನಿಮಾ ರಿಲೀಸ್ ಆಗಿಲ್ಲ. ನಾನು ನಟಿಸಿದ ಎಲ್ಲಾ ಸಿನಿಮಾಗಳು ರಿಲೀಸ್ ಆಗಿದೆ. ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದೇನೆ. ಕೆಲವು ರಿಲೀಸ್ ಆಗಿದೆ. ಇನ್ನು ಕೆಲವು ರಿಲೀಸ್ ಆಗುತ್ತಿದೆ."


Click it and Unblock the Notifications











