"ಅವರವರ ಮಾರ್ಕೆಟ್ ನೋಡ್ಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು"– ಡಾಲಿ ಧನಂಜಯ್
ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದ್ಕಡೆ ಸಿನಿಮಾ ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ತಮ್ಮ 25ನೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಖಾಕಿ ತೊಟ್ಟು ಮತ್ತೆ ಅಖಾಡಕ್ಕೆ ಇಳಿದಿರೋ ಡಾಲಿ ಖಡಕ್ ಲುಕ್ ಕೊಟ್ಟಿದ್ದಾರೆ.
ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಹೊಚ್ಚ ಹೊಸ ಸಿನಿಮಾ 'ಹೊಯ್ಸಳ'. ಇದು ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಕೂಡ ಹೌದು. ಹೀಗಾಗಿ ಪ್ರಚಾರದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ.

ಮಾರ್ಚ್ 30 ರಂದು 'ಹೊಯ್ಸಳ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾ ಚಿಕ್ಕ ತುಣುಕು ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ. ಡಾಲಿ ಡೈಲಾಗ್, ಲುಕ್, ಮ್ಯಾನರಿಸಂ ಎಲ್ಲವನ್ನೂ ನೋಡಿದರೆ, ಸ್ಯಾಂಡಲ್‌ವುಡ್‌ಗೆ ಮತ್ತೊಂದು ಬಿಗ್ ಹಿಟ್ ಸಿಗೋದು ಪಕ್ಕಾ ಎಂದೇ ಭವಿಷ್ಯ ನುಡಿಯಲಾಗುತ್ತಿದೆ. 'ರತ್ನನ್ ಪ್ರಪಂಚ ಬಳಿಕ ಧನಂಜಯ್ ಹಾಗೂ ಕೆಆರ್‌ಜಿ ಸ್ಟುಡಿಯೋ ಒಂದಾಗಿದೆ. ಈ ವೇಳೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಧನಂಜಯ್ ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಅನ್ನೋದು ಮುಕ್ತವಾಗಿ ಮಾತಾಡಿದ್ದಾರೆ.
"ಪ್ಯಾನ್ ಇಂಡಿಯಾ ಅನ್ನೋದು ಒಂದಿಷ್ಟು ಮಂದಿ ಕನಸುಗಾರರು ಸೇರಿಕೊಂಡಾಗ ಆಗೋದು. ಇಲ್ಲಾ ಅದಾಗಿ ಅದೇ ಘಟಿಸುವಂತಹದ್ದು. ಪ್ಯಾನ್ ಇಂಡಿಯಾ ಅಂತ ಪ್ಲ್ಯಾನ್ ಮಾಡಿ ಮಾಡುವುದಕ್ಕೆ ಆಗುವುದಿಲ್ಲ. ಹಂತ ಹಂತವಾಗಿಯೇ ಮುಂದಕ್ಕೆ ಹೋಗಬೇಕಾಗುತ್ತೆ. ಬಡವ ರಾಸ್ಕಲ್ ಬ್ಯುಸಿನೆಸ್ ಬೇರೆ ಆದರೆ, ಹೆಡ್ ಬುಷ್ ಬ್ಯುಸಿನೆಸ್ ಬೇರೆ. ಹೊಯ್ಸಳ ಬ್ಯುಸಿನೆಸ್ ಬೇರೆ. ಹಾಗೇ ಒಂದೊಂದೇ ಸ್ಟೇಜ್ ಬೈ ಸ್ಟೇಜ ಬೆಳೆಯುತ್ತಾ ಹೋಗಬೇಕಾಗುತ್ತೆ. ಹಾಗೇ ನನ್ನ ಸಿನಿಮಾಗಳನ್ನು ಹೋಲಿಕೆ ಮಾಡಲು ಆಗುವುದಿಲ್ಲ." ಎಂದು ಧನಂಜಯ್ ಹೇಳುತ್ತಾರೆ.
"ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ವ್ಯಾಪಾರ. ಯಾರದ್ದು ಎಷ್ಟೆಷ್ಟು ಮಾರ್ಕೆಟ್ ಇರುತ್ತೋ ಅದನ್ನು ನೋಡಿಕೊಂಡು ಅಷ್ಟಷ್ಟು ಹೂಡಿಕೆ ಮಾಡಿಕೊಂಡು, ಸಿನಿಮಾದಿಂದ ಸಿನಿಮಾಗೆ ಬೆಳೆಯುತ್ತಾ ಹೋಗಬೇಕಾಗುತ್ತೆ. ನಾನು ಆ ವಿಷಯದಲ್ಲಿ ತುಂಬಾನೇ ಸ್ಪಷ್ಟವಾಗಿ ಬಂದಿದ್ದೇನೆ. ನನ್ನ ಸಿನಿಮಾ ಯಾವುದ ಹಿಟ್ ಅಂತ ಆಗಿದೆ ಅದನ್ನು ಸೆಲೆಬ್ರೆಟ್ ಮಾಡುತ್ತೀನಿ. ಯಾವುದು ವರ್ಕ್ ಆಗಿಲ್ಲ. ಅದು ಆಗಿಲ್ಲ ಅಷ್ಟೇ." ಎಂದು ಡಾಲಿ ಅಭಿಪ್ರಾಯ ಪಟ್ಟಿದ್ದಾರೆ.

"ಅಭಿಮಾನಿಗಳು ಹೇಳುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಅಂತ. ಪ್ಯಾನ್ ಇಂಡಿಯಾ ಮಾಡುವುದು ಅಷ್ಟು ಸುಲಭ ಅಲ್ಲ. ಪ್ರೊಡಕ್ಷನ್ ಹೌಸ್‌ಗೆ ಒಂದು ದೂರ ದೃಷ್ಟಿ ಬೇಕಾಗುತ್ತೆ. ನಿರ್ದೇಶಕನಿಗೊಂದು ದೂರ ದೃಷ್ಟಿ ಇರಬೇಕು. ಅದರ ಜೊತೆಗೆ ನಾವು ಕೆಲಸ ಮಾಡಿದಾಗ ಆಗುತ್ತೆ. ನಾವಾಗಿ ನಾವೇ ನಿರ್ದೇಶನ ಮಾಡಿಕೊಳ್ಳುವ ಹಾಗೂ ಇಲ್ಲ. ಯಾಕಂದ್ರೆ ನಾವು ನಟರು. ನಾವು ಒಳ್ಳೊಳ್ಳೆ ನಿರ್ದೇಶಕರಿಗೆ ಡಿಪೆಂಡ್ ಆಗಿದ್ದೇವೆ. ಅದಾಗೇ ಯಾವಾಗಲಾದರೂ ಆದಾಗ ಆಗಲಿ." ಎಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಅನ್ನೋದು ರಿವೀಲ್ ಮಾಡಿದ್ದಾರೆ.


Click it and Unblock the Notifications











