ಈ ನಟಿ ಕನ್ನಡ ಕಿರುತೆರೆಯ ಮಾಲಾಶ್ರೀ.. ಕನ್ನಡ ಟೀಚರ್; ಇವರ ಬಗ್ಗೆ ನಿಮಗೇನು ಗೊತ್ತು?
ಕಿರುತೆರೆ ವೀಕ್ಷಕರಿಗೆ ಕನ್ನಡ ಟೀಚರ್ ಪ್ರಿಯಾ ಜೆ ಆಚಾರ್ ಬಲು ಪರಿಚಯ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಅದಿತಿ ಪಾತ್ರದಲ್ಲಿ ಮಿಂಚಿದ್ದ ನಟಿ ಬಳಿಕ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಸರ್ವಸ್ವ ಅಂದುಕೊಂಡಿರುವಂತಹ ಪಾತ್ರವಿದು.
ಪ್ರಿಯಾ ಜೆ ಆಚಾರ್ ಕಿರುತೆರೆ, ಸಿನಿಮಾಗಳಲ್ಲಿ ನಟಿಸುವುದಕ್ಕೂ ಮುನ್ನ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ರೀಲ್ಸ್ ಮೂಲಕ ಗಮನ ಸೆಳೆದಿದ್ದರು. ಆದರೆ, ಕಿರುತೆರೆಯಲ್ಲಿ ಅವರು ತಮ್ಮ ನಟನೆಯಿಂದ ವೀಕ್ಷಕರಿಗೆ ಮತ್ತಷ್ಟು ಹತ್ತಿರ ಆಗಿದ್ದರು. ಈಗ ಧಾರಾವಾಹಿ, ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಈಗ 'ಕಾವೇರಿ ಕನ್ನಡ ಮೀಡಿಯಂ' ಸೀರಿಯಲ್‌ನಲ್ಲಿ ನಟಿಸುತ್ತಿರುವ ಪ್ರಿಯಾ ಜೆ ಆಚಾರ್ ತಮ್ಮ ಲೈಫ್ ಸ್ಟೋರಿ ಹಾಗೂ ಸೀರಿಯಲ್ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ನೀವು ಎಲ್ಲಿಯವರು? ನಿಮ್ಮ ಹಿನ್ನೆಲೆ ಏನು?
"ನನ್ನ ತಂದೆ ಗೋಲ್ಡ್ ಸ್ಮಿತ್. ನನ್ನ ಅಮ್ಮ ಹೌಸ್ ವೈಫ್. ತಂಗಿ ಓದುತ್ತಿದ್ದಾರೆ. ಈಗ ನಾವಿರೋದು ದಾವಣಗೆರೆಯಲ್ಲಿ. ನಾನು ಸೋಶಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಎಲ್ಲ ಮಾಡುತ್ತಿದ್ದೆ. ನನಗೆ ಕಾಲೇಜ್‌ನಲ್ಲಿ ಆಗಿರಬಹುದು, ಸ್ಕೂಲ್‌ನಲ್ಲಿ ಆಗಿರಬಹುದು ಸಾಂಸ್ಕೃತಿಕ ಕಾರ್ಯಕ್ರಮದ ಮೇಲೆ ಒಲವಿತ್ತು. ನಟನೆ, ವೇದಿಕೆ ಅಂದರೆ ನನಗೆ ಖುಷಿ ಕೊಡುತ್ತಿತ್ತು. ಇದರ ಬಗ್ಗೆ ಆಸಕ್ತಿ ಚಿಕ್ಕಂದಿನಿಂದಲೂ ಇತ್ತು ಅನಿಸುತ್ತೆ. ಆದರೆ, ನನ್ನ ಟ್ಯಾಲೆಂಟ್‌ಗೆ ವೇದಿಕೆ ಸಿಗಲಿಲ್ಲ ಅಂತ ಅನಿಸುತ್ತಿತ್ತು. ಆಗ ನನಗೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಗಟ್ಟಿಮೇಳ ಧಾರಾವಾಹಿಗೆ ಕಾಲ್ ಬರುತ್ತೆ. ಅದೇ ನನ್ನ ಮೊದಲನೇ ಪ್ರಾಜೆಕ್ಟ್."
'ಗಟ್ಟಿಮೇಳ' ಬಳಿಕ ಏನು ಚಮತ್ಕಾರ ನಡೀತು?
"ಗಟ್ಟಿಮೇಳ ಧಾರಾವಾಹಿಯಿಂದ ನಾನು ಜನರೊಂದಿಗೆ ಮೊದಲ ಬಾರಿಗೆ ಕನೆಕ್ಟ್ ಆಗಿದ್ದೆ. ಅದಕ್ಕೂ ಮುನ್ನ ಜನರು ಸೋಶಿಯಲ್ ಮೀಡಿಯಾ ವೇದಿಕೆಯಿಂದ ಗುರುತು ಹಿಡಿಯುತ್ತಿದ್ದರು. ಒಂದು ಪಾತ್ರವಾಗಿ ನನ್ನೊಂದಿಗೆ ಜನರು ಕನೆಕ್ಟ್ ಆಗುತ್ತಾ ಹೋದರು. ಅದಾದ್ಮೇಲೆ ಧಮಾಕಾ ಅಂತ ಒಂದು ಸಿನಿಮಾ ಮಾಡಿದೆ. ಅದಾದ್ಮೇಲೆ ನಾನು ಎಂಸಿಎ ಮಾಡುತ್ತಿದ್ದರಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡೆ. ಈ ಗ್ಯಾಪ್‌ನಲ್ಲಿ ನನಗೆ ಮದುವೆ ಆಯ್ತು. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಮಾಡುತ್ತಿದ್ದೇನೆ. ನನ್ನ ಫ್ಯೂಚರ್ ಪ್ರಾಜೆಕ್ಟ್‌ಗಳ ಶೂಟಿಂಗ್ ನಡೆಯುತ್ತಿದೆ. ಅದಿನ್ನೂ ಆನ್ ಏರ್ ಹೋಗಲು ಕಂಪ್ಲೀಟ್ ಆಗಿಲ್ಲ."
ಕಾವೇರಿ ಕನ್ನಡ ಮೀಡಿಯಂ ಬಗ್ಗೆ ಹೇಳಿ
"ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಪಾತ್ರವೇನಿದೆ ಅದು ನಾನು ಈ ಹಿಂದೆ ಮಾಡಿದ ಪಾತ್ರಕ್ಕಿಂತ ತುಂಬಾನೇ ಡಿಫ್ರೆಂಟ್ ಇದೆ. ಅವರು ನನ್ನನ್ನು ಕರೆದು ಲುಕ್ ಟೆಸ್ಟ್ ಮಾಡಿದರು. ಆ ವೇಳೆ ಅಚ್ಚ ಕನ್ನಡದಲ್ಲಿ ಡೈಲಾಗ್ ಹೇಳಬೇಕಿತ್ತು. ಚಿಕ್ಕಂದಿನಿಂದಲೂ ಕನ್ನಡವನ್ನೇ ಸರ್ವಸ್ವವಾಗಿ ನೋಡುವಂತಹ ಪಾತ್ರ. ನನ್ನ ಅಪ್ಪ ಕೊಡಗಿನ ಕಡೆಯವರು. ನನ್ನ ಅಮ್ಮ ಶಿವಮೊಗ್ಗ. ನಾವು ಇರೋದು ದಾವಣಗೆರೆ ಆಗಿದ್ದರಿಂದ ಭಾಷೆ ಮಿಕ್ಸ್ ಆಗಿಬಿಟ್ಟಿದೆ. ಈ ಪಾತ್ರ ಸಿಕ್ಕಿದ ಮೇಲೆ ಕನ್ನಡದ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಕನ್ನಡವನ್ನು ಈಗ ತುಂಬಾನೇ ಕಾನ್ಫಿಡೆಂಟ್ ಮಾತಾಡುತ್ತೇನೆ."

ಈಗ ಕನ್ನಡ ಟೀಚರ್ ಅಂತಾರಂತೆ ಹೌದೇ?
"ನನಗೆ ಮುಂಚೆ ಅದಿತಿ ಅಂತ ಕರೆಯುತ್ತಿದ್ದರು. ಈಗ ಕಾವೇರಿ ಕನ್ನಡ ಮೀಡಿಯಂ ಮಾಡಿದಾಗ ಟೀಚರ್ ಅಂತ ಕರೆಯುತ್ತಾರೆ. ಕಾವೇರಿ ಅಂತ ಕರೆಯುತ್ತಾರೆ. ಆತರ ಗುರುತಿಸಿದಾಗ ಖುಷಿಯಾಗುತ್ತೆ. ನನ್ನ ಪಾತ್ರಕ್ಕೆ ನ್ಯಾಯ ಸಿಕ್ಕಿದೆ ಅಂತ ಗೊತ್ತಾಗೋದು ಜನರು ಹೀಗೆ ಗುರುತು ಹಿಡಿದು ಮಾತಾಡಿಸಿದಾಗ ಮಾತ್ರ."
ಈ ಪಾತ್ರ ನಿಮ್ಮನ್ನು ಬದಲಾಯಿಸಿದೆಯೇ?
"ನಾನು ಮೊದಲು ಕಂಗ್ಲಿಷ್ ತರ ಮಾತಾಡುತ್ತಿದ್ದೆ. ಈಗ ನಾನು ಸಂಪೂರ್ಣವಾಗಿ ಕನ್ನಡದಲ್ಲಿ ಮಾತಾಡು ಅಂದರೆ ಮಾತಾಡುತ್ತೇನೆ. ಪ್ರತಿದಿನ ನಾವು ಮಾಡುವ ಕೆಲಸದಲ್ಲಿ ಕನ್ನಡ ಬರುವಾಗ ಇನ್ನೂ ಆತ್ಮವಿಶ್ವಾಸ ಬರುತ್ತೆ. ನಮ್ಮೂರಲ್ಲೇ ನಾವು ಅರ್ಧಂಬರ್ಧ ಕನ್ನಡ ಮಾಡುತ್ತಿದ್ದೇವೆ ಅಂದಾಗ ಕಾನ್ಫಿಡೆನ್ಸ್ ಅಷ್ಟು ಇರೋದಿಲ್ಲ."
ನಿಮ್ಮ ಕನ್ನಡದ ಬಗ್ಗೆ ಸಿಕ್ಕ ಹೊಗಳಿಕೆ ಏನು?
"ನನ್ನ ಪತಿ ಸಿದ್ಧೂ ಮೂಲಿಮನಿ ಒಳ್ಳೆ ಕನ್ನಡ ಮಾತಾಡುತ್ತಾರೆ. ಒಳ್ಳೆಯ ಬರಹಗಾರ. ನಾವು ಮಾತಾಡುವಾಗ ಎಷ್ಟೋ ಕನ್ನಡ ಪದಗಳನ್ನು ಅವರು ಸರಿ ಮಾಡಿಕೊಡುತ್ತಿದ್ದರು. ಮತ್ತೆ ನಮ್ಮಲ್ಲಿ ಬದಲಾವಣೆ ಆದಾಗ ಅದನ್ನು ನೋಡಿ ನನ್ನ ಪಾರ್ಟ್ನರ್ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದೀಯ ಅಂತ ಹೇಳಿದಾಗ ಅದರ ಖುಷಿನೇ ಬೇರೆ ಇರುತ್ತೆ. ಆ ಹೊಗಳಿಕೆ ನನ್ನ ಪಾರ್ಟ್ನರ್ ಯಿಂದ ಸಿಕ್ಕಿದೆ."

ನಿಮ್ಮನ್ನು ಕಿರುತೆರೆ ಮಾಲಾಶ್ರೀ ಅಂತಾರಲ್ಲ?
"ಅಯ್ಯೋ.. ನನಗೆ ಗೊತ್ತಿಲ್ಲ. ಆ ಹೆಸರನ್ನು ತೆಗೆದುಕೊಳ್ಳುವುದಕ್ಕೆ ಅರ್ಹಳೋ ಅಲ್ಲವೋ ಅಂತ. ಆ ರೀತಿ ಹೇಳಿದ್ದಕ್ಕೆ ನಿಜಕ್ಕೂ ನಾನು ಧನ್ಯವಾದಗಳನ್ನು ಹೇಳಬೇಕು. ಇದಕ್ಕೆ ಇನ್ನೇನು ಹೇಳಬೇಕೋ ಗೊತ್ತಾಗುತ್ತಿಲ್ಲ ನನಗೆ. ಮಾಲಾಶ್ರೀ ಮೇಡಂ ಅವರ ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಅಂದರೆ, ಹಿಟ್ ಸಿನಿಮಾಗಳೆಲ್ಲನ್ನೂ ನೋಡಿದ್ದೀನಿ. ಅವರ ಎನರ್ಜಿ, ಉತ್ಸಾಹಕ್ಕೆ ಮೆಚ್ಚಲೇಬೇಕು. ಈಗ ನಾನು ಏನೇ ಮಾಡುತ್ತಿದ್ದರೂ, ಮಾಲಾಶ್ರೀ ಮೇಡಂ ಅವರ ಫ್ಯಾನ್ ಅಂತ ಹೇಳಿ ಪಾತ್ರ ಮಾಡುತ್ತಿದ್ದೇನೆ. ಆದರೆ, ಯಾರೂ ಅವರು ಆಗುವುದಕ್ಕೆ ಆಗುವುದಿಲ್ಲ."
ಕಾವೇರಿ ರೆಬೆಲ್ ಆದ್ಮೇಲೆ ಹೇಗಿದೆ?
"ಈಗ ಎಲ್ಲರೂ ಖುಷಿಯಲ್ಲಿ ಮಾತಾಡಿಸುತ್ತಾರೆ. ಆಗ ಎಲ್ಲರೂ ಬೇಜಾರಲ್ಲಿ ಮಾತಾಡಿಸೋರು. ಕಾವೇರಿ ಯಾವಾಗಲೂ ಅಳೋದು, ಬೇಜಾರು ಮಾಡಿಕೊಳ್ಳುವುದು ಇರುತ್ತಿತ್ತು.ಹೀಗಾಗಿ ಫನ್ ಎಲಿಮೆಂಟ್ ಮಿಸ್ ಆಗಿರುತ್ತಿತ್ತು. ಈಗ ಬುದ್ದಿ ಕಲಿಸೋ ನೆಪದಲ್ಲಿ ದುರ್ಗಿ ವೇಷ ಹಾಕೊಂಡು ಬಂದಿದ್ದೀನಿ. ಈಗ ಸಖತ್ ಮಜವಾಗಿ ನಡೆಯುತ್ತಿದೆ."
ಕಾವೇರಿ ಕನ್ನಡ ಮೀಡಿಯಂನಲ್ಲಿ ಏನು ನಡೀತಿದೆ?
"ಈಗ ನಿಜವಾದ ಅಗಸ್ತ್ಯನೇ ಇಲ್ಲವೇನೋ ಅನ್ನೋದನ್ನು ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ನಾನು ಅಗಸ್ತ್ಯನ ಕಂಡು ಹಿಡಿಯುವುದು.ಅಗಸ್ತ್ಯ ನಿಜವಾದ ಕಾವೇರಿನ ಕಂಡು ಹಿಡಿಯುವ ಕೆಲಸ ನಡೆಯುತ್ತಿದೆ."

ಮಹಾಲಕ್ಷ್ಮಿ ಜೊತೆ ನಟನೆ.. ನಿಮ್ಮ ಫೀಲಿಂಗ್ ಏನು?
"ಮಹಾಲಕ್ಷ್ಮಿ ಅಮ್ಮನ ಜೊತೆ ಕೆಲಸ ಮಾಡುತ್ತಿರುವುದು ಖುಷಿಕೊಟ್ಟಿದೆ. ನನ್ನ ಅಜ್ಜಿ ಹೆಸರು ಪುಟ್ಟಲಕ್ಷ್ಮಿ ಅಂತ. ನಮ್ಮ ಅಜ್ಜಿಗೆ ಜೂನಿಯರ್ ಮಹಾಲಕ್ಷ್ಮಿ ಅಂತ ಕರೆಯುತ್ತಿದ್ದರು. ಅವರು ಬಹಳಷ್ಟು ಸಾರಿ ಮಹಾಲಕ್ಷ್ಮಿ ಹಂಗೆ ಹಿಂದೆ ಹೇಳುತ್ತಿದ್ದರು. ನನಗಿಂತ ಹೆಚ್ಚಾಗಿ ನಮ್ಮ ಅಜ್ಜಿ ಈ ಪಾತ್ರ ಮಾಡುತ್ತಿರುವುದಕ್ಕೆ ಖುಷಿಯಾಗಿದ್ದರು. ಮಹಾಲಕ್ಷ್ಮಿ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಎಲ್ಲರನ್ನೂ ಒಂದೇ ತರ ನೋಡುತ್ತಾರೆ. ಒಂದೇ ತರ ಮಾತಾಡಿಸುತ್ತಾರೆ. ಕಾವೇರಿ ಕನ್ನಡ ಮೀಡಿಯಂನಲ್ಲಿ ಅವರೊಂದಿಗೆ ಆಕ್ಟ್ ಮಾಡುತ್ತಿರುವುದು ದೊಡ್ಡ ಖುಷಿ ನನಗೆ.


Click it and Unblock the Notifications











