Interview:ಸಿನಿಮಾ ಶೂಟಿಂಗ್ ನೋಡಲು ಹೋಗಿ ನಟಿಯಾದ ಕಥೆ: 'ನಿಮ್ಮ ಜೊತೆ ಮರೀನಾ ತಾರಾ ಕಥೆ'
ಕನ್ನಡ ಕಿರುತೆರೆ ಹಾಗೂ ಚಿತ್ರರಂಗಕ್ಕೆ ಈ ನಟಿ ತುಂಬಾನೇ ಚಿರಪರಿಚಿತ. ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರೇ ಮರೀನಾ ತಾರಾ.
ಕೆವಿ ಜಯರಾಮ್ ನಿರ್ದೇಶಿಸಿದ್ದ 'ರಶ್ಮಿ' ಅನ್ನುವ ಸಿನಿಮಾ ಮೂಲಕ ನಟನಾ ಜರ್ನಿಯನ್ನು ಶುರು ಮಾಡಿದ್ದರು. ಬಳಿಕ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ನಾಗಾಭರಣ ನಿರ್ದೇಶಿಸಿದ 'ರಾಗ ರಾಗಿಣಿ' ಮರೀನಾ ತಾರಾ ನಟಿಸಿದ ಮೊದಲ ಧಾರಾವಾಹಿ. ಅಲ್ಲಿಂದ 'ಜನನಿ', 'ಆನಂದ ಸಾಗರ', ದಿನೇಶ್ ಬಾಬು ನಿರ್ದೇಶಿಸಿದ 'ಮನೆ ಮನೆ ಕಥೆ', ಸೊಸೆ ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಹೆಚ್ಚಾಗಿ ಸಂದರ್ಶನಕ್ಕೆ ಸಿಗದೆ ನಟಿ ಮರೀನಾ ತಾರಾ ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ತಮ್ಮ ಲೈಫ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ನಟನಾ ಜರ್ನಿ ಬಗ್ಗೆ ಮನಸಾರೆ ಮಾತಾಡಿದ್ದಾರೆ. ಸ್ಟಾರ್ ಸುವರ್ಣದಲ್ಲಿ ನಟಿಸುತ್ತಿರುವ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ನೀವು ಎಲ್ಲಿಯವರು?
"ನಾನು ಬೆಂಗಳೂರು ಹುಡುಗಿನೇ.. ಇಲ್ಲೇ ಹುಟ್ಟಿ ಬೆಳೆದಿದ್ದು. ವಿದ್ಯಾಭ್ಯಾಸ ಇಲ್ಲೇ ಆಗಿದ್ದು. ಅಣ್ಣ, ಅಕ್ಕ ಮತ್ತು ನಾನು ಮೂರು ಜನ ಮಕ್ಕಳು ನಮ್ಮ ತಂದೆ ತಾಯಿಗೆ. ನಮ್ಮ ಮಾತೃ ಭಾಷೆ ತೆಲುಗು. ಬೆಂಗಳೂರಿನಲ್ಲಿ ಇರುವುದರಿಂದ ಐದು ಭಾಷೆ ಬರುತ್ತೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಯನ್ನು ಆರಾಮಾಗಿ ಮಾತಾಡಬಹುದು."
ನಿಮಗೆ ಮೊದಲು ಅವಕಾಶ ಸಿಕ್ಕಿದ್ದೇಗೆ?
"ನಾನು ಸ್ಕೂಲ್‌ನಲ್ಲಿ ಇರುವಾಗಲೇ ನಟಿಸುವುದಕ್ಕೆ ಅವಕಾಶ ಬಂತು. ಅದು ಇಲ್ಲಿವರೆಗೂ ಬಂದಿದೆ. ಎಲ್ಲರೂ ಹೇಳ್ತಾರೆ. ಕಲೆ ಎಲ್ಲರಿಗೂ ಒದಗುತ್ತೆ. ಆದರೆ, ಅದು ಕೈ ಹಿಡಿಯುವುದು ಕೆಲವರಿಗೆ ಮಾತ್ರ ಅಂತಾರಲ್ಲ ಹಾಗೆ. ನಮ್ಮ ಕುಟುಂಬದಲ್ಲಿ ಯಾರು ನಟನೆ ಮಾಡುತ್ತಿರಲಿಲ್ಲ. ಒಮ್ಮೆ ಕೆವಿ ಜಯರಾಂ ಅಂಕಲ್ ಅವರ ರಂಜಿತಾ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆ ಶೂಟ್ ನೋಡುವುದಕ್ಕೆ ಹೋಗಿ ನಿಂತಿದ್ದೆ. ಅವರೇ ಬಂದು ನನ್ನನ್ನು ಮಾತಾಡಿಸಿ, ಅವರು ಮನೆಗೆ ಕರೆಸಿಕೊಂಡು ರಶ್ಮಿ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು. ಆ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು. ಆಗ ನಾನಿನನ್ನೂ 9ನೇ ತರಗತಿ ಓದುತ್ತಿದ್ದೆ."

ರಶ್ಮಿ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?
"ಡ್ಯಾನ್ಸ್ ಚೆನ್ನಾಗಿ ಮಾಡುತ್ತೀಯ ಅಂತ ಎರಡನೇ ಹೀರೋಯಿನ್ ಅವಕಾಶ ಕೊಟ್ಟಿದ್ದರು. ಶ್ರುತಿಯವರದ್ದು ಲೀಡ್ ರೋಲ್. ಆದರೆ, ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿರುವಾಗ ಅಪಘಾತವಾಯ್ತು. ಆಗ ಒಂದು ತಿಂಗಳು ರೆಸ್ಟ್‌ನಲ್ಲಿ ಇರಬೇಕು ಅಂತ ಹೇಳಿಬಿಟ್ಟರು. ಹಾಗಾಗಿ ಅವರಿಗೆ ಈತರ ಆಯ್ತು ಅಂತ ಹೇಳಿದಾಗ ಆಯ್ತು ಅಂತ ಹೇಳಿ ಆ ಸಿನಿಮಾದಲ್ಲಿ ನನಗೆ ಪೋಷಕ ಪಾತ್ರ ಕೊಟ್ಟರು. ಆಗ ನನಗೆ ಸಿನಿಮಾ ಬಗ್ಗೆ ಏನೂ ಐಡಿಯಾ ಇರಲಿಲ್ಲ."
ಕಿರುತೆರೆಗೆ ಎಂಟ್ರಿ ಹೇಗಾಯ್ತು?
"ದೂರದರ್ಶನಕ್ಕೆ ರಾಗ ರಾಗಿಣಿ ಅಂತ ಒಂದು ಸೀರಿಯಲ್ ಆಗ್ತಿತ್ತು. ಅದರ ಟೈಟಲ್ ರೋಲ್‌ಗೆ ನನಗೆ ಕರೆದರು. ಆಗ ಮೆಗಾ ಸೀರಿಯಲ್ ಅಂದರೆ, 26 ಎಪಿಸೋಡ್. ಆ ಧಾರಾವಾಹಿ ತುಂಬಾನೇ ಹೆಸರು ಮಾಡಿತು. ಜನರು ತುಂಬಾನೇ ಗುರುತಿಸುವುದಕ್ಕೆ ಶುರು ಮಾಡಿದ್ದರು. ಅದೊಂತರ ಹೊಸ ಫೀಲಿಂಗ್. ಸಿನಿಮಾಗಿಂತ ಹೆಚ್ಚು ಸೀರಿಯಲ್‌ನಲ್ಲಿ ತುಂಬಾನೇ ಫೇಮಸ್ ಆದೆ. ಈ ಸೀರಿಯಲ್‌ಗೆ ಆರ್ಯಭಟ ಹಾಗೂ ಪ್ರಿಯದರ್ಶಿನಿ ಎರಡೂ ಅವಾರ್ಡ್ ಸಿಕ್ಕಿತ್ತು."
ಸಿನಿಮಾ ಬಿಟ್ಟು ಧಾರಾವಾಹಿ ಕಡೆ ವಾಲಿದ್ದೇಕೆ?
"ನಾವು ಬೆಳೆದು ಬಂದಿದ್ದು ಹೇಗೆ ಅಂದರೆ, ಆರು ಗಂಟೆ ಬಳಿಕ ಹೆಣ್ಣು ಮಕ್ಕಳು ಹೊರಗಡೆ ಹೋಗಬಾರದು ಅಂತೆಲ್ಲ ಇತ್ತು. ಅದು ಹೇಗೋ ನನಗೆ ಡ್ಯಾನ್ಸ್‌ನಲ್ಲಿ ಇಂಟ್ರೆಸ್ಟ್ ಇತ್ತು ಅಂತ ಪ್ರತಿ ಬಾರಿ ಅಮ್ಮ ನನ್ನ ಜೊತೆಗೆ ಬರೋರು. ಕ್ಲಾಸ್‌ಗೆ ಜೊತೆಗೆ ಕರೆದುಕೊಂಡು ಹೋಗೋರು. ಹೀಗೆ ಶುರುವಾಗಿತ್ತು. ಹೀಗಾಗಿ ನಮಗೆ ಸಿನಿಮಾ ಬೇಡ ಧಾರಾವಾಹಿ ಕಡೆಗೆ ಹೋಗಿಬಿಟ್ಟೆ. ಸಿನಿಮಾ ಹೆಚ್ಚು ಮಾಡಲಿಲ್ಲ. ಅಲ್ಲದೆ ಅಷ್ಟು ಸಿನಿಮಾ ಮಾಡಿದರೂ ಸಂಭಾವನೆನೇ ಕೊಡುತ್ತಿರಲಿಲ್ಲ. ಆದರೆ, ಸೀರಿಯಲ್‌ನಲ್ಲಿ ಹಾಗಿರಲಿಲ್ಲ."

ಸಿನಿಮಾದಲ್ಲಿ ನಟಿಸಬೇಕು ಅನ್ನೋ ಅಳುಕಿದೆಯಾ?
"ನನಗೆ ಸಿನಿಮಾದಲ್ಲಿ ಮಾಡಬೇಕಿತ್ತು ಅನ್ನೋ ಯಾವುದೇ ಅಳುಕು ಇಲ್ಲ. ನಾನು ಧಾರಾವಾಹಿಯಲ್ಲೇ ಖುಷಿಯಾಗಿದ್ದೇನೆ. ನಟನೆಗೆ ಬಂದು 35 ವರ್ಷಗಳಾಗಿವೆ. ಮಧ್ಯದಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದೇನೆ. ಅದು ನನಗೆ ಕಂಫರ್ಟ್ ಅಂತ ಅನಿಸಿದ್ದು. ಈಗ ಮದರ್ ರೋಲ್ ಎಲ್ಲಾ ಬಂದರೆ ಕಂಡಿತಾ ಮಾಡುತ್ತೇನೆ."
ಈಗಿನ ಸೀರಿಯಲ್ ಮೇಕಿಂಗ್ ಹೇಗನಿಸುತ್ತೆ?
"ಈಗ ಧಾರಾವಾಹಿಯರನ್ನು ಸಿನಿಮಾ ಸ್ಟೈಲ್‌ನಲ್ಲಿಯೇ ಮಾಡುವುದಕ್ಕೆ ಹೋಗುತ್ತಾರೆ. ಅಷ್ಟೇ ದೊಡ್ಡ ಮಟ್ಟಕ್ಕೆ ಸೆಟ್ ಹಾಕಿ ಮಾಡುತ್ತಾರೆ. ಹಿಂದೆ ಎರಡು ಕ್ಯಾಮರಾ ಅಂದರೆ ಓ.. ಅದ್ಭುತ ಅನ್ನೋರು. ಈಗ ನಾಲ್ಕು ಕ್ಯಾಮರಾ ಇಟ್ಕೊಂಡು ಮಾಡುತ್ತಾರೆ. ಆಗ ಕಂಟೆಂಟ್‌ಗಿಂತ ಹೆಚ್ಚಾಗಿ ಸಿನಿಮಾ ಸ್ಟೈಲ್‌ನಲ್ಲಿ ಸೀರಿಯಲ್ ಮಾಡುತ್ತಿರುವುದರಿಂದ ಗ್ಲಾಮರ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ನಾನು ಹೀರೋಯಿನ್ ಆಗಿ ನಟಿಸುವಾ ಇಬ್ಬರು ಜೋಡಿಯಾಗಿ ನಗಾಡಿಕೊಂಡು ಬರಬೇಕು ಅಂತಹ ಸೀನ್ ಇಟ್ಟರೆ ಕಕ್ಕಾಬಿಕ್ಕಿಯಾಗಿಬಿಡುತ್ತಿದ್ವಿ. ಏನು ಮಾತಾಡಬೇಕು ಅಂತ ಗಾಬರಿಯಾಗೋದು. ಈಗ ಕಟ್ ಮಾಡಿದರೆ, ಇಲ್ಲೊಂದು ಡ್ಯುಯೆಟ್. ಅಲ್ಲೊಂದು ಡ್ಯುಯೆಟ್ ಇರುತ್ತೆ. ಜನಕ್ಕೂ ಅದು ಇಷ್ಟ ಆಗುತ್ತಿದೆ."
ಯಾವ ಧಾರಾವಾಹಿಗೆ ಮೆಚ್ಚುಗೆ ಸಿಕ್ಕಿತ್ತು?
"ಸೊಸೆ ಅಂತ ಒಂದು ಸೀರಿಯಲ್ ಬಂದಿತ್ತು. ಆಗ ಯಾರೋ ಒಬ್ಬರು ಬಂದು ಹೇಳಿದ್ದರು. ನಮ್ಮ ಅತ್ತೆ ದಿನಾಲೂ ಸೀರಿಯಲ್ ನೋಡುತ್ತಾರೆ. ಆ ಸೀರಿಯಲ್ ಬಂತು ಅಂದರೆ,ನಮ್ಮ ಅತ್ತೆ ಕರೆದು ನಿಮ್ಮನ್ನು ತೋರಿಸೋರು. ಸೊಸೆ ಅಂದರೆ ಹೀಗೆ ಇರಬೇಕು ಅಂತ ಹೇಳೋರು ಅಂತ ಅವರು ಹೇಳಿದ್ದು ಇನ್ನೂ ನೆನಪಿದೆ. ಅದೆಲ್ಲ ಕೇಳಿದಾಗ ಹೀಗೂ ಊಂಟಾ ಅಂತ ಅನಿಸಿತ್ತು."
ನಿಮ್ಮ ಸ್ಟಾರ್ ಸುವರ್ಣ ಸಂಬಂಧವೇನು?
"ಸುವರ್ಣ ಬಂದು ನನಗೆ ತವರು ಮನೆ ತರ. ಸುವರ್ಣದಲ್ಲಿ ಯಾವುದೇ ಗೇಮ್ ಶೋ ಆಗಿರಬಹುದು ಎಲ್ಲದಕ್ಕೂ ಹೋಗಿದ್ದೇನೆ. ಒಂದು ಸೀರಿಯಲ್ ಆದ ಕೂಡ ಇನ್ನೊಂದು ಸೀರಿಯಲ್ ಸಿಕ್ಕಿದೆ. ಜಾನಕಿ ಸಂಸಾರ ಅಂತ ಸೀರಿಯಲ್ ಬರುತ್ತಿತ್ತು. ಅದಾದ ಕೂಡಲೇ ನನಗೆ 'ನಿನ್ನ ಜೊತೆ ನನ್ನ ಕಥೆ' ಸಿಕ್ಕಿದೆ. ಇದರಲ್ಲಿ ನಾನು ಮಾಡುತ್ತಿರುವ ದೇವಯಾನಿ ಪಾತ್ರ ಡಿಫ್ರೆಂಡ್ ಶೇಡ್ ಇರುವ ಪಾತ್ರ. ಸ್ವಲ್ಪ ನೆಗೆಟಿವ್ ಶೇಡ್ ಇರುತ್ತೆ. ಬಹಳ ದಿನಗಳ ಬಳಿಕ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದೇನೆ."
ನೆಗೆಟಿವ್ ಶೇಡ್ ಯಾಕೆ ಒಪ್ಪಿಕೊಂಡ್ರಿ?
"ಪಾಸಿಟಿವ್ ಪಾತ್ರಕ್ಕಿಂತ ಇದು ಚಾಲೆಂಜಿಂಗ್ ಆಗಿದೆ. ನಾನು ಹೀಗೆ ಮಾಡಿದರೆ ಜನರು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋ ಕುತೂಹಲವಿರುತ್ತೆ. ನನಗೆ ಏನು ಅನಿಸುತ್ತೋ ಅದನ್ನು ಅರಿತು ಕೊಂಡು, ನಾನೊಬ್ಬಳು ಮರೀನಾ ತಾರಾ ಆಗಿ ಆ ಪಾತ್ರದೊಳಗೆ ಹೋಗಿ ನಟನೆ ಮಾಡಿಕೊಂಡು ಹೋಗುತ್ತಿದ್ದೇನೆ."
ನಿಮ್ಮ ಪಾತ್ರದ ಬಗ್ಗೆ ಹೇಳಿ
"ಈ ಪಾತ್ರ ಹೇಗೆ ಅಂದರೆ ಗೋಮುಖವ್ಯಾಘ್ರ ಅಂತಾರಲ್ಲ ಹಾಗೆ. ಸಾಫ್ಟ್ ಆಗಿ ತುಂಬಾ ಅಯ್ಯೋ ಪಾಪ ಅಂತ ಇರುವ ಲೇಡಿ. ಮದುವೆ ಆದ್ಮೇಲೆ ತುಂಬಾ ಸಾಫ್ಟ್ ಇರುವಂತಹ ಪಾತ್ರಗಳನ್ನೇ ಮಾಡಿ ಈಗ ಯೋಚನೆ ಮಾಡುವುದಕ್ಕೆ ಶುರು ಮಾಡಿದ್ದೀನಿ. ಮಕ್ಕಳು ಈ ಪಾತ್ರವನ್ನು ನೋಡಿದರೆ ಹೇಗೆ ಅನಿಸಬಹುದು ಅಂತ. ಆದರೆ, ನನ್ನ ಮಕ್ಕಳಿಗೆ ಯಾರಾದರೂ ನಿಮ್ಮಮ್ಮ ವಿಲನ್ ಅಂದರೆ ಹರ್ಟ್ ಆಗಬಹುದೇನೋ ಅಂತ ಈಗ ಯೋಚನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಮಕ್ಕಳು ಪ್ರಬುದ್ಧರಾಗಿದ್ದಾರೆ. ಅವರು ಅರ್ಥ ಮಾಡಿಕೊಳ್ಳುತ್ತಾರೆ ಅಂತ ಅನಿಸುತ್ತೆ."


Click it and Unblock the Notifications











