Interview: ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈ ನಟಿಯನ್ನು ಕಿರುತೆರೆ ಸೆಳೆದಿದ್ದೇಕೆ? ಯಾರಿವರು ಗೊತ್ತೇ?
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಈ ನಟಿ ಮೂಲತ: ಕೊಡಗಿನವರು. ಚಿಕ್ಕಂದಿನಿಂದಲೂ ನಟಿಸಬೇಕು ಅನ್ನೋ ಆಸೆಯನ್ನು ಹೆಮ್ಮರವಾಗಿ ಬೆಳೆಸಿಕೊಂಡು ಆ ಗುರಿಯನ್ನು ತಲುಪಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀದೇವೀ ಮಹಾತ್ಮೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಶುರುವಾಗಿದ ಜರ್ನಿ ಇದೇ ವಾಹಿನಿಯ ಮತ್ತೊಂದು ಸೀರಿಯಲ್ 'ನಿನ್ನ ಜೊತೆ ನನ್ನ ಕಥೆ' ವರೆಗೂ ಬಂದು ನಿಂತಿದೆ.
ಅಂದ್ಹಾಗೆ, 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಮನಸ್ವಿನಿ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಇವರ ಅಸಲಿ ಹೆಸರು ಲಿಖಿತಾ. ಆಕ್ಸೆಂಚರ್ ಅಂತಹ ದೈತ್ಯ ಐಟಿ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ನಟನೆ ಅವರನ್ನು ಸೆಳೆದಿತ್ತು. ಒಂದೊಳ್ಳೆ ಕೆಲಸವನ್ನು ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಜರ್ನಿ ಹಾಗೂ ಕನಸುಗಳ ಬಗ್ಗೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಪರಿಚಯ ಮಾಡಿಕೊಡಿ
"ಹಾಯ್ ನಾನು ಲಿಖಿತಾ.. ನಾನು ಮೂಲತ: ಕೊಡಗಿನ ವಿರಾಜಪೇಟೆಯವಳು. ನಾನು ಹುಟ್ಟಿದ್ದು, ಬೆಳೆದಿದ್ದು ಓದಿದ್ದು ಎಲ್ಲಾ ಕೂರ್ಗ್‌ನಲ್ಲಿಯೇ. ನಾನು ಎಜ್ಯುಕೇಷನ್ ಮುಗಿಸಿದ ಬಳಿಕ ನಾನು ಆಕ್ಸೆಂಚರ್‌ನಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದೆ. ಮೂರು ವರ್ಷ ಕೆಲಸ ಮಾಡಿದ ಬಳಿಕ ನನ್ನ ಒಬ್ಬ ಸ್ನೇಹಿತರು ಶ್ರೀದೇವೀ ಮಹಾತ್ಮೆ ಸೀರಿಯಲ್‌ಗೆ ರೆಫರ್ ಮಾಡಿದರು. ಅದರಲ್ಲಿ ನಾನು ಪಾರ್ವತಿಯ ಗೆಳತಿಯಾಗಿ ಒಂದು ಪಾತ್ರ ಮಾಡಿದ್ದೇನೆ."
ನಿಮ್ಮ ಕರಿಯರ್ ಶುರುವಾಗಿದ್ದೇಗೆ?
"ಶ್ರೀದೇವೀ ಮಹಾತ್ಮೆ ನಡೆಯುತ್ತಿರುವಾಗಲೇ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಗೆ ಆಡಿಷನ್ ತೆಗೆದುಕೊಂಡರು. ವಿಲನ್ ಪಾತ್ರಕ್ಕೆ ಆಡಿಷನ್ ತೆಗೆದುಕೊಂಡರು. ಅದಕ್ಕೆ ನಾನು ಆಯ್ಕೆಯಾದೆ. ಹೀಗೆ ನನ್ನ ಸೀರಿಯಲ್ ಕರಿಯರ್ ಶುರುವಾಯ್ತು."
ಹಾಡುವುದು ಅಂದರೆ ಇಷ್ಟ ಅಂತೆ ಹೌದಾ?
"ನಟನೆ ಬಿಟ್ಟು ನನಗೆ ಹಾಡುವುದು ಅಂದರೆ ಇಷ್ಟ. ನಾನು ಐದನೇ ತರಗತಿಯಿಂದಲೇ ಹಾಡುತ್ತಿದ್ದೇನೆ. ಈಗ ಸೀರಿಯಲ್ ಮಾಡುತ್ತಿರುವುದರಿಂದ ಸಮಯದ ಅಭಾವದಿಂದ ಹಾಡುವುದು ಕಮ್ಮಿಯಾಗಿದೆ. ಈಗಾಗಲೇ ಕೊಡವ ಭಾಷೆಯಲ್ಲಿ ಒಂದೆರಡು ಅಲ್ಬಮ್ ಬಂದಿದೆ. ಮಡಿಕೇರಿ ಎಫ್.ಎಂನಲ್ಲಿ ಇನ್ನೂ ನನ್ನ ಎರಡು ಹಾಡುಗಳು ಬರುತ್ತಲೇ ಇರುತ್ತವೆ. ಪ್ರೊಫೆಷನಲ್ ಆಗಿ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ. ಸರಿಗಮಪಗೂ ಆಡಿಷನ್ ಕೊಟ್ಟೆ, ಆದರೆ ಸೆಲೆಕ್ಟ್ ಆಗಲಿಲ್ಲ. ಅದು ಬಿಟ್ಟರೆ ವಾಯ್ಸ್ ಆಫ್ ಕೂರ್ಗ್ ಸಿಕ್ಕಿದೆ. ಅದು ಬಿಟ್ಟರೆ, ಭಾರತದ್ ಸ್ಕೌಟ್ಸ್ ಅಂಡ್ ಗೈಡ್ಸ್ ಅದರಲ್ಲಿ ನಾನು ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದುಕೊಂಡೆ.

ನಟನೆ ಗೀಳು ಬೆಳೆದಿದ್ದು ಯಾವಾಗ?
"ನಾನು 7ನೇ ತರಗತಿ ಇರುವಾಗ ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಸಿನಿಮಾಗಳನ್ನು ನೋಡುತ್ತಿದ್ದೆ. ನನಗೂ ಹಾಗೇ ಆಗಬೇಕು ಅಂತ ಆಸೆ. ಅಂದಿನಿಂದ ನಟಿಯಾಗಬೇಕು ಅಂತಿತ್ತು. ಆದರೆ, ಯಾವುದೂ ಕೈ ಹಿಡಿಯುತ್ತಿರಲಿಲ್ಲ. ಯಾಕಂದ್ರೆ, ನಾನು ತುಂಬಾನೇ ತೆಳ್ಳಗಿದ್ದೆ. ಆ ಕಾರಣಕ್ಕೆ ನಾನು ರಿಜೆಕ್ಟ್ ಆಗುತ್ತಿದ್ದೆ. ಒಂದು ದಿನ ನನಗೊಂದು ರೋಲ್ ಸಿಗುತ್ತೆ ಎಂದು ಕಾಯುತ್ತಿದ್ದೆ. ಆಗ ಸಿಕ್ಕಿದ್ದೇ ಶ್ರೀದೇವೀ ಮಹಾತ್ಮೆ. ಅದೇ ನನ್ನ ಮೊದಲ ಸೀರಿಯಲ್."
ಪೌರಾಣಿಕ ಪಾತ್ರದ ಅನುಭವ ಹೇಳಿ
"ಮೊದಲ ಸೀರಿಯಲ್ ಪೌರಾಣಿಕ ಅಂದಾಗ ಕಷ್ಟ ಆಗುತ್ತಿತ್ತು. ಆದರೆ, ನನ್ನ ಪಾತ್ರ ಪಾರ್ವತಿಯ ಗೆಳತಿ ಪಾತ್ರ ಆಗಿರುವುದರಿಂದ ಹೆಜ್ಜೆ ಡೈಲಾಗ್ ಇರಲಿಲ್ಲ. ಹಾಗಾಗಿ ಸುಲಭ ಅಂತ ಅನಿಸಿತ್ತು. ಹಾಗೇ ಪೌರಾಣಿಕ ಸೀರಿಯಲ್ ಕಾಸ್ಟ್ಯೂಮ್ ಧರಿಸೋದು ನನಗೆ ತುಂಬಾನೇ ಖುಷಿ ಕೊಟ್ಟಿತ್ತು."
ನಿನ್ನ ಜೊತೆ ನನ್ನ ಕಥೆ ಪಾತ್ರದ ಬಗ್ಗೆ ಹೇಳಿ?
"ಶ್ರೀದೇವೀ ಮಹಾತ್ಮೆಯಲ್ಲಿ ಒಂದೆರಡು ಡೈಲಾಗ್ ಇತ್ತು. ಅದನ್ನು ಹೇಗೋ ಮ್ಯಾನೇಜ್ ಮಾಡುತ್ತಿದ್ದೆ. ಸಡನ್ ಆಗಿ ನಿನ್ನ ಜೊತೆ ನನ್ನ ಕಥೆಯಲ್ಲಿ ಮನಸ್ವಿನಿ ಅನ್ನೋ ಒಂದು ಸ್ಟ್ರಾಂಗ್ ಪಾತ್ರ ಬಂದಾಗ ನನಗೆ ಆರಂಭದಲ್ಲಿ ತುಂಬಾನೇ ಕಷ್ಟ ಆಗುತ್ತಿತ್ತು. ಡೈಲಾಗ್ಸ್, ರಿಯಾಕ್ಷನ್ ಎಲ್ಲವೂ ಕಷ್ಟ ಎನಿಸುತ್ತಿತ್ತು. ಯಾಕಂದ್ರೆ, ಯಾವಾಗಲೂ ಮುಖವನ್ನು ಹಿಂಡಿಕೊಂಡೇ ಇರಬೇಕಿತ್ತು. ಯಾಕಂದ್ರೆ, ಸೀರಿಯಸ್ ಕ್ಯಾರೆಕ್ಟರ್ ಇತ್ತು. ನಾನು ನಗುವ ಹಾಗೇ ಇರಲಿಲ್ಲ. ಮನಸ್ವಿನಿ ಅನ್ನೋ ಪಾತ್ರವನ್ನು ಪ್ರತಿಯೊಬ್ಬರು ಬೈಯ್ಯುತ್ತಾರೆ. ಅಂತಹ ಪಾತ್ರವಿದು."

ನಿಮ್ಮ ಸಿಕ್ಕ ಅತ್ಯುತ್ತಮ ಹೊಗಳಿಕೆ ಯಾವುದು?
"ನಮ್ಮ ಸೀರಿಯಲ್‌ನಲ್ಲಿ ಪಲ್ಲವಿ ಅನ್ನೋರು ಮನೆ ಕೆಲಸದವರ ಪಾತ್ರ ಮಾಡುತ್ತಾರೆ. ಇತ್ತೀಚೆಗೆ ಅವರು ಯಾವುದೋ ಶೂಟಿಂಗ್‌ಗೆ ಹೋಗಿದ್ದಾಗ, ಮಕ್ಕಳು ಅವರೊಂದಿಗೆ ಮನಸ್ವಿನಿ ಅಕ್ಕನ ಜೊತೆ ಮಾತಾಡಬೇಕು ವಿಡಿಯೋ ಕಾಲ್ ಮಾಡಿ ಅಂತ ಹೇಳಿದ್ರಂತೆ. ಅದು ನನಗೆ ತುಂಬಾನೇ ಖುಷಿ ಕೊಡ್ತು. ಅದು ಬಿಟ್ಟರೆ, ಬಹಳಷ್ಟು ಮಂದಿ ನನ್ನ ಪಾತ್ರದ ಬಗ್ಗೆ ಮಾತಾಡುತ್ತಾರೆ. ಆದರೆ, ಮಕ್ಕಳು ಮಾತಾಡಿದ್ದು ಖುಷಿಕೊಡ್ತು."
ನಿಮ್ಮ ಮುಂದಿನ ಗುರಿಯೇನು?
"ನಾನು ಐಟಿ ಇಂಡಸ್ಟ್ಟಿ ನೋಡಿದ್ದೀನಿ. ನಾನು ಮತ್ತೆ ಅಲ್ಲಿಗೆ ಹೋಗುವುದಕ್ಕೆ ಇಷ್ಟವಿಲ್ಲ. ನಟನೆ ಕೈ ಹಿಡಿಯುತ್ತೆ ಅಂದುಕೊಂಡಿದ್ದೇನೆ. ಒಂದು ವೇಳೆ ಆಕ್ಟಿಂಗ್ ಕೈ ಹಿಡಿದಿಲ್ಲ ಅಂದರೆ, ಐಟಿಗೆ ಹೋಗುತ್ತೇನೆ. ನನ್ನ ಕೈಲಾದಷ್ಟು ಇನ್ನಷ್ಟು ಸೀರಿಯಲ್ ಹಾಗೂ ಸಿನಿಮಾಗಳಿಗೆ ಟ್ರೈ ಮಾಡುತ್ತಾ ಹೋಗುತ್ತೇನೆ. ನನಗೆ ಈ ಚಿತ್ರರಂಗದಲ್ಲಿಯೇ ಇರಬೇಕು ಅಂತ ಆಸೆ. ಹಾಗೇ ಸಿಂಗಿಂಗ್ ಕಡೆಗೆ ಗಮನ ಕೊಟ್ಟು ರಿಯಾಲಿಟಿ ಶೋಗೂ ಹೋಗಬೇಕು ಅನ್ನೋ ಆಸೆನೂ ಇದೆ"


Click it and Unblock the Notifications











