ಬಣ್ಣದ ಲೋಕದ ಮಿಂಚಿನ ಸಂಚಲನ: ಯುವ ನಟನ ಅದೃಷ್ಟ ಬದಲಿಸಿದ ಆ ಒಂದು ನಿರ್ಧಾರ
ಬಣ್ಣದ ಲೋಕ ಅಂದ ಮೇಲೆ ಅಲ್ಲಿ ಸಾವಿರಾರು ಕನಸುಗಳು ಅರಳುತ್ತವೆ. ಪ್ರತಿದಿನ ನೂರಾರು ಪ್ರತಿಭೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಆದರೆ ಎಲ್ಲರಿಗೂ ಇಲ್ಲಿ ನೆಲೆ ಸಿಗುವುದು ಸುಲಭವಲ್ಲ. ಪರಿಶ್ರಮದ ಜೊತೆಗೆ ಸರಿಯಾದ ದಾರಿಯ ಆಯ್ಕೆ ಬಹಳ ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಎಲ್ಲರಂತೆ ಇವರು ಕೂಡ ಒಂದು ಭದ್ರವಾದ ವೃತ್ತಿಜೀವನದ ಕನಸು ಕಂಡಿದ್ದರು. ಓದಿನಲ್ಲಿ ಮುಂದಿದ್ದ ಇವರು ಪೋಷಕರ ಆಸೆಯಂತೆ ಉನ್ನತ ಶಿಕ್ಷಣ ಮುಗಿಸಿದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮನಸ್ಸಿನ ಮೂಲೆಯಲ್ಲಿ ನಟನೆಯ ಬಗ್ಗೆ ಒಂದು ಸಣ್ಣ ಆಸೆ ಚಿಗುರಿತ್ತು.

ಆರಂಭದಲ್ಲಿ ಇದು ಕೇವಲ ಹವ್ಯಾಸ ಎನಿಸಿತ್ತು. ಆದರೆ ದಿನ ಕಳೆದಂತೆ ಅದೇ ಜೀವನದ ಗುರಿಯಾಯಿತು. ಬೆಂಗಳೂರಿನಂತಹ ಮಹಾನಗರದಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸವಾಲುಗಳು ಎದುರಾದವು. ಆ ಸವಾಲುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಬೆಳೆದ ಕಥೆ ನಿಜಕ್ಕೂ ರೋಚಕ. ಈ ಯುವ ಪ್ರತಿಭೆ ಈ ಬಗ್ಗೆ ಏನು ಹೇಳ್ತಾರೆ ಅನ್ನೋದನ್ನ ಅವರ ಮಾತುಗಳಲ್ಲೇ ನೋಡೋಣ ಬನ್ನಿ.
ನಿಮ್ಮ ಹಿನ್ನೆಲೆ ಮತ್ತು ಇಂಡಸ್ಟ್ರಿಗೆ ಬಂದ ಹಾದಿ ಬಗ್ಗೆ ಹೇಳಿ?
ಶಿವಾಂಕ್: ನಾನು ಮೂಲತಃ ಚಿತ್ರದುರ್ಗದವನು. ಅಲ್ಲಿಯೇ ನನ್ನ ಶಾಲಾ ಶಿಕ್ಷಣ ಮತ್ತು ಪಿಯುಸಿ ಮುಗಿಯಿತು. ನಂತರ ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದೆ. ಎಂಜಿನಿಯರಿಂಗ್ ಮುಗಿದ ಮೇಲೆ ಸುಮಾರು ಆರು ತಿಂಗಳು ಕಾಲ ಕೆಲಸ ಕೂಡ ಮಾಡಿದೆ. ಆದರೆ ಕೆಲಸ ಮಾಡುತ್ತಿರುವಾಗ ನನಗೆ ಆ ಫೀಲ್ಡ್ ಅಷ್ಟು ತೃಪ್ತಿ ನೀಡಲಿಲ್ಲ. ಕಾಲೇಜಿನಲ್ಲಿದ್ದಾಗಲೇ ನನಗೆ ಮಾಡೆಲಿಂಗ್ ಮತ್ತು ಆಡಿಷನ್ಗಳ ಮೇಲೆ ಆಸಕ್ತಿ ಇತ್ತು. ಆಡಿಷನ್ ಸಾಲಿನಲ್ಲಿ ಸಾವಿರಾರು ಜನರನ್ನು ಕಂಡಾಗ, ನಟನೆಗೆ ಕೇವಲ ಆಸೆ ಸಾಲದು, ಸರಿಯಾದ ಕಲಿಕೆ ಬೇಕು ಎಂದು ಅರಿವಾಯಿತು. ಆ ಆಸಕ್ತಿಯೇ ನನ್ನನ್ನು ನಟನಾ ಲೋಕಕ್ಕೆ ಬರುವಂತೆ ಮಾಡಿತು.
ಎಂಜಿನಿಯರಿಂಗ್ ಬಿಟ್ಟು ನಟನೆಯನ್ನು ಆರಿಸಿದ್ದಕ್ಕೆ ಪಶ್ಚಾತ್ತಾಪವಿದೆಯೇ?
ಶಿವಾಂಕ್: ಎಂಜಿನಿಯರಿಂಗ್ ಓದಿದ್ದು ವ್ಯರ್ಥವಾಯಿತು ಎಂದು ನನಗೇನೂ ಅನ್ನಿಸುವುದಿಲ್ಲ. ಆದರೆ ಆವತ್ತಿನ ಹಳೆಯ ಪಠ್ಯಕ್ರಮವು ನನ್ನ ಭವಿಷ್ಯಕ್ಕೆ ಪೂರಕವಾಗಿಲ್ಲ ಎಂದು ಅರಿವಾಗಿ ನಟನೆಯತ್ತ ವಾಲಿದೆ. ನಟನೆಯಲ್ಲಿ ನಾನು ಪಡೆದ ವೃತ್ತಿಪರ ತರಬೇತಿಯು ನನಗೆ ಕ್ಯಾಮೆರಾ ಎದುರಿಸಲು ತುಂಬಾ ಸಹಾಯ ಮಾಡಿದೆ. ಈಗ ತಿರುಗಿ ನೋಡಿದಾಗ, ನಟನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಬದಲಾಗಿ ತುಂಬಾ ಖುಷಿಯಿದೆ.

'ಜೈಲಲಿತಾ' ಧಾರಾವಾಹಿಯ ಪಾತ್ರವನ್ನು ಯಾಕೆ ಒಪ್ಪಿಕೊಂಡಿರಿ?
ಶಿವಾಂಕ್: ಜೈಲಲಿತಾ ಪಾತ್ರದಲ್ಲಿ ಒಂದು ವಿಭಿನ್ನವಾದ ತೀವ್ರತೆ ಇದೆ. ಈ ಹಿಂದೆ ನಾನು ಮಾಡಿದ ಪಾತ್ರಗಳಿಗಿಂತ ಇದು ಬಹಳ ಭಿನ್ನವಾಗಿದೆ. ಪಾತ್ರದ ಹಿನ್ನೆಲೆ ಮತ್ತು ಅದು ಸಾಗುವ ರೀತಿ ನನಗೆ ತುಂಬಾ ಇಷ್ಟವಾಯಿತು. ಒಬ್ಬ ನಟನಾಗಿ ನನಗೆ ಸವಾಲೆನಿಸುವ ಪಾತ್ರಗಳು ಬೇಕಿತ್ತು, ಅದು ಈ ಧಾರಾವಾಹಿಯಲ್ಲಿ ಸಿಕ್ಕಿತು.
ಇಲ್ಲಿಯವರೆಗೆ ನಿಮ್ಮ ನಟನಾ ಪಯಣ ಹೇಗಿದೆ?
ಶಿವಾಂಕ್: ಜೈಲಲಿತಾ ಧಾರಾವಾಹಿಯ ಪ್ರಯಾಣವು ಅದ್ಭುತವಾಗಿದೆ. ಈ ಹಂತಕ್ಕೆ ಬರುವ ಮೊದಲು ನನ್ನ ಪಯಣ ಆರಂಭವಾಗಿದ್ದು 'ಅಮೂಲ್ ಬೇಬಿ' ಸಿನಿಮಾದ ಮೂಲಕ. ನಂತರ ಕಿರುತೆರೆಯಲ್ಲಿ 'ಬ್ರಾಹ್ಮಿನ್ಸ್ ಕೆಫೆ' ಹಾಗೂ ತೆಲುಗಿನ 'ನುವ್ವೆ ಕಾವಾಲಿ' ಎಂಬ ಸೀರಿಯಲ್ ಮಾಡಿದೆ. ಆ ಎಲ್ಲಾ ಅನುಭವಗಳ ನಂತರ ಈಗ ಜೈಲಲಿತಾದಲ್ಲಿ ನಟಿಸುತ್ತಿದ್ದೇನೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ ಮತ್ತು ತಂಡವು ನನಗೆ ತುಂಬಾ ಸಪೋರ್ಟ್ ಮಾಡುತ್ತಿದೆ.
ನಿಮ್ಮ ಪಾತ್ರಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ?
ಶಿವಾಂಕ್: ಜನರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪಾತ್ರದ ಗಾಂಭೀರ್ಯವನ್ನು ಜನರು ಇಷ್ಟಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಜನರು ಮೆಸೇಜ್ ಮಾಡಿ ವಿಶ್ ಮಾಡುತ್ತಿದ್ದಾರೆ. ನನ್ನ ನಟನೆಯಲ್ಲಿ ಇಂಪ್ರೂವ್ಮೆಂಟ್ ಇದೆ ಎಂದು ಹಿರಿಯ ಕಲಾವಿದರು ಹೇಳಿದಾಗ ಸಿಗುವ ಖುಷಿಯೇ ಬೇರೆ.
ಸೀರಿಯಲ್ನಲ್ಲಿ ನಾಯಕಿ ಮತ್ತು ನಿಮ್ಮ ನಡುವಿನ ಕೆಮಿಸ್ಟ್ರಿ ಹೇಗಿದೆ?
ಶಿವಾಂಕ್: ಹೌದು, ಸದ್ಯಕ್ಕೆ ನಮ್ಮ ಪಾತ್ರಗಳು ಪರಸ್ಪರ ವಿರೋಧವಾಗಿ ಸಾಗುತ್ತಿವೆ. ಆದರೆ ಆನ್-ಸ್ಕ್ರೀನ್ ಎಷ್ಟೇ ಕೋಪ-ತಾಪಗಳಿದ್ದರೂ ಆಫ್-ಸ್ಕ್ರೀನ್ ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ. ಮುಂದೆ ಈ ಪಾತ್ರಗಳು ಹೇಗೆ ಒಂದಾಗುತ್ತವೆ ಅಥವಾ ತಿರುವು ಪಡೆಯುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಪ್ರೇಕ್ಷಕರಿಗೆ ಇದು ಖಂಡಿತವಾಗಿಯೂ ಇಷ್ಟವಾಗಲಿದೆ.
ಸುನಿಲ್ ಪುರಾಣಿಕ ಅವರ ಜೊತೆಗಿನ ನಟನಾ ಅನುಭವ ಹೇಗಿದೆ?
ಶಿವಾಂಕ್: ಸುನಿಲ್ ಪುರಾಣಿಕ ಅವರಂತಹ ಹಿರಿಯ ನಟರ ಜೊತೆ ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ. ಅವರು ಶೂಟಿಂಗ್ ಸೆಟ್ನಲ್ಲಿ ತುಂಬಾ ಸರಳವಾಗಿ ಇರುತ್ತಾರೆ. ಅವರ ಅನುಭವದಿಂದ ನಾನು ಕಲಿಯುವುದು ಸಾಕಷ್ಟಿದೆ. ಅವರ ಜೊತೆಗಿನ ಪ್ರತಿಯೊಂದು ದೃಶ್ಯವೂ ನನಗೆ ಒಂದು ಪಾಠವಿದ್ದಂತೆ.


Click it and Unblock the Notifications











