Interview: ಅಪ್ಪ-ಅಮ್ಮನ ಗರಡಿಯಲ್ಲಿ ಬೆಳೆದ ಬಹುಮುಖ ಪ್ರತಿಭೆ ಅನನ್ಯಾ ಕಾಸವರವಳ್ಳಿ; ಸ್ನೇಹದ ಕಡಲಲ್ಲಿ ಇಂದ್ರಾಣಿಯಾದ ನಟಿ
ಭಾರತೀಯ ಚಿತ್ರರಂಗದಲ್ಲಿ ಗಿರೀಶ್ ಕಾಸರವಳ್ಳಿ ಅನ್ನೋದೇ ಒಂದು ದೊಡ್ಡ ಹೆಸರು. ಕನ್ನಡ ಚಿತ್ರರಂಗಕ್ಕೆ ಹಲವು ಅತ್ಯದ್ಭುತ ಸಿನಿಮಾಗಳನ್ನು ಕೊಟ್ಟಿರುವ ಹೆಗ್ಗಳಿಕೆ ಇವರದ್ದು. ಇವರು ನಿರ್ದೇಶಿಸಿದ ಸಿನಿಮಾಗಳಿಗೆ ಹಲವು ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಇವರ ಪುತ್ರಿ ಅನನ್ಯಾ ಕಾಸರವಳ್ಳಿ ಕೂಡ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಆಕ್ಟಿವ್ ಆಗಿ ತೊಡಗಿಸಿಕೊಂಡಿದ್ದಾರೆ. ಅಂದ್ಹಾಗೆ ಇವರ ತಾಯಿ ಕನ್ನಡದ ಜನಪ್ರಿಯ ನಟಿ ವೈಶಾಲಿ ಕಾಸರವಳ್ಳಿ.
ನಾಟಕಗಳಿಂದ ಆರಂಭ ಆಗಿದ್ದ ಅನನ್ಯಾ ಅವರ ವೃತ್ತಿ ಬದುಕು ಸಿನಿಮಾ, ಧಾರಾವಾಹಿವರೆಗೂ ವಿಸ್ತರಿಸಿದೆ. ನಟನೆ, ನಿರ್ದೇಶನ ಅಷ್ಟೇ ಅಲ್ಲ ವಸ್ತ್ರ ವಿನ್ಯಾಸಕಿಯಾಗಿ, ಡ್ಯಾಕ್ಯೂಮೆಂಟರಿ ಫಿಲ್ಮ್ ಮೇಕರ್ ಆಗಿಯೂ ಯಶಸ್ಸು ಕಂಡಿದ್ದಾರೆ. ಸದ್ಯಕ್ಕೀಗ ತಂದೆ ನಿರ್ದೇಶಿಸುತ್ತಿರುವ ಹೊಸ ಸಿನಿಮಾಗೆ ಸಹಾಯ ಮಾಡುತ್ತಿದ್ದಾರೆ. ಇದರೊಂದಿಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಇಂದ್ರಾಣಿ ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅನನ್ಯಾ ಕಾಸರವಳ್ಳಿ ತಮ್ಮ ಜರ್ನಿಯನ್ನು ಮೆಲುಕು ಹಾಕಿದ್ದಾರೆ.

ನಿಮ್ಮದು ಸಿನಿಮಾ ಕುಟುಂಬವೇ ಆಗಿದ್ದರೂ ನಟನೆ ಕಡೆಗೆ ವಾಲಿದ್ದೇಗೆ?
"ನಮ್ಮ ಮನೆಯಲ್ಲಿ ವಾತಾವರಣ ಹೇಗಿತ್ತು ಅಂದರೆ, ನಮ್ಮ ತಂದೆ ತಾಯಿ ಇಬ್ಬರೂ ಇದೇ ಫೀಲ್ಡ್‌ನಲ್ಲಿ ಇದ್ದಿದ್ದರಿಂದ ಊಟ ಮಾಡುವಾಗಿನಿಂದ ಹಿಡಿದು ಬೇರೆ ಬೇರೆ ಸಂದರ್ಭಗಳಲ್ಲಿ ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿತ್ತು. ಅಪ್ಪ, ಅಮ್ಮನ ಸ್ನೇಹಿತರು ಯಾರೇ ಬಂದರೂ ಸಿನಿಮಾನೇ ಚರ್ಚೆ ಮಾಡುತ್ತಿದ್ದರು. ಹೀಗಾಗಿ ನನಗೆ ಸಿನಿಮಾನೇ ಒಂದು ಪ್ರಪಂಚ ಆಗಿತ್ತು. ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ ತಾಯಿ ನಮಗೆ ಸೆಲೆಬ್ರಿಟಿ ಎನ್ನುವ ಫೀಲಿಂಗ್ ಅನ್ನು ಕೊಡಲಿಲ್ಲ. ಅವರು ಎಲ್ಲರಂತೆ ಕೆಲಸಕ್ಕೆ ಹೋಗುತ್ತಾರೆ ಎನ್ನುವ ಫೀಲಿಂಗ್ ಇತ್ತು. ಇನ್ನು ನನಗೆ ಚಿಕ್ಕಂದಿನಿಂದಲೇ ನಟನೆಗೆ ಬಗ್ಗೆ ಆಸಕ್ತಿ ಬೆಳೆಯಿತು."
ಅಪ್ಪ ನಿರ್ದೇಶನಕರು, ಅಮ್ಮ ನಟಿ.. ಯಾವ ಕಡೆಗೆ ಒಲವಿತ್ತು?
"ನನಗೆ ಎರಡೂ ಕಡೆಗೂ ಸೆಳೆತವಿತ್ತು. ನಾನು ನಾಟಕಗಳಲ್ಲಿ ಆಕ್ಟ್ ಮಾಡುತ್ತಿದ್ದೆ. ಕಾಲೇಜಿನಲ್ಲಿ ನಾಟಕಗಳಿಗೆ ನಿರ್ದೇಶನವನ್ನೂ ಮಾಡುತ್ತಿದ್ದೆ. ನನಗೆ ಚಿಕ್ಕವಯಸ್ಸಿನಲ್ಲಿ ಡ್ಯಾನ್ಸ್ ಕಲಿಯುವುದಕ್ಕೆ ಶುರು ಮಾಡಿದ್ದೆ. ಒಂದು ಕಡೆ ಡ್ಯಾನ್ಸ್, ಅಭಿನಯ ಅದರಲ್ಲಿ ಆಸಕ್ತಿ ಇತ್ತು. ನಾನು ಕಾಲೇಜಿನ ಸಾಕಷ್ಟು ನಾಟಕಗಳಿಗೆ ನಿರ್ದೇಶನ ಮಾಡಿದ್ದೆ. ಹೀಗಾಗಿ ನಟನೆ ಮತ್ತು ನಿರ್ದೇಶನ ಎರಡೂ ಒಟ್ಟೊಟ್ಟಿಗೆ ಆಸಕ್ತಿ ಬೆಳೆಯುತ್ತಾ ಹೋಯ್ತು."
ನಿಮ್ಮ ತಂದೆ ಪ್ರಭಾವ ನಿಮ್ಮ ಮೇಲೆ ಎಷ್ಟಿದೆ?
"ನನಗೆ ನಮ್ಮ ತಂದೆಯವರ ಪ್ರಭಾವ ಬಹಳ ಇದೆ. ನನ್ನ ಸಿನಿಮಾ ಜರ್ನಿ ಅಷ್ಟೇ ಅಲ್ಲ. ನನ್ನ ವೈಯಕ್ತಿಕ ಬೆಳವಣಿಗೆಯಲ್ಲೂ ಅವರ ಪ್ರಭಾವ ತುಂಬಾನೇ ಇದೆ. ನಾನು ಮಾಡುತ್ತಿರುವ ಸಿನಿಮಾ ಹಾಗೂ ಆಸಕ್ತಿಯನ್ನು ತಂದೆಯಿಂದಲೇ ಪಡೆದಿದ್ದೀನಿ. ಯಾಕಂದ್ರೆ, ನಾನು ಅವರೊಂದಿಗೆ ತುಂಬಾ ಹೊತ್ತು ಕಾಲ ಕಳೆಯುತ್ತಿದ್ದೆ. ಅವರು ಎಲ್ಲೇ ಹೋದರೂ ಅವರೊಂದಿಗೆ ಹೋಗುತ್ತಿದ್ದೆ. ಸಿನಿಮಾ ನೋಡುವುದಕ್ಕೆ ಅವರು ಪ್ರೋತ್ಸಾಹ ಕೊಡುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ನಾನು ಅವರೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಅವರಿಗೂ ನಾನು ಏನು ಹೇಳಿದರೂ ಕೇಳಿಸಿಕೊಳ್ಳವ ತಾಳ್ಮೆ ಇತ್ತು. ಕಥೆ ಕಾದಂಬರಿ ಓದಿದಾಗ, ಸಿನಿಮಾ ನೋಡಿ ಬಂದಾಗ ಅವರೊಂದಿಗೆ ಚರ್ಚೆ ಮಾಡುತ್ತಿದೆ. ಹೀಗಾಗಿ ಅವರ ಪ್ರಭಾವ ತುಂಬಾನೇ ಇದೆ ಅಂತ ಹೇಳಬಹುದು."

ನಿರ್ದೇಶಕಿಯಾಗಿ ತಂದೆಯಿಂದ ಕಲಿತಿದ್ದೇನು?
"ಅವರು ಸಿನಿಮಾವನ್ನು ಆಯ್ಕೆ ಮಾಡುವಾಗ ತುಂಬಾ ದೀರ್ಘಕಾಲ ಯೋಜನೆ ಮಾಡುತ್ತಿದ್ದರು. ಯಾವುದೇ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಅದು ನಮ್ಮ ಕಾಲಘಟ್ಟವನ್ನು ಪ್ರತಿನಿಧಿಸಬೇಕು. ಅದಕ್ಕೆ ಪ್ರತಿಕ್ರಿಯಿಸುತ್ತಿರಬೇಕು. ಅದು ಏನೋ ಹೇಳುತ್ತಿರಬೇಕು. ಸಮಯದ ಜೊತೆ ಆ ಕಥೆ ಚರ್ಚೆಯಾಗುತ್ತಿರಬೇಕು. ಅದು ಅವರ ಕತೆಯನ್ನು ಆಯ್ಕೆ ಮಾಡಿಕೊಳ್ಳುವ ಶೈಲಿ. ಒಮ್ಮೆ ಕಥೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರು ಅದರ ಬಗ್ಗೆನೇ ಧ್ಯಾನವನ್ನೇ ಮಾಡುತ್ತಿದ್ದರು. ಅವರ ಸಿನಿಮ್ಯಾಟಿಕ್ ಅಪ್ರೋಚ್ ಹೇಗಿತ್ತು ಅಂದರೆ, ಆ ಸಿನಿಮಾ ಭಾವನಾತ್ಮಕವಾಗಿ ಕನೆಕ್ಟ್ ಆಗಬೇಕು. ಇನ್ನೊಂದು ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕು. ಮೂರನೆಯದು ಫಿಲಾಸೋಫಿಕಲ್ ಲೆವೆಲ್‌ನಲ್ಲಿ ಈ ಕಥೆ ಹೇಗೆ ತೆರೆದುಕೊಳ್ಳುತ್ತಾ ಹೋಗುತ್ತೆ ಅನ್ನೋದು ಅವರ ಹುಡುಕಾಟ ಆಗಿರುತ್ತಿತ್ತು. ಅದನ್ನೇ ನಾನು ಅವರಿಂದ ಕಲಿತಿದ್ದು."
'ನಾಯಿ ನೆರಳು', 'ಕಾಡ ಬೆಳದಿಂಗಳು' ನಿಮಗೆಷ್ಟು ಸ್ಪೆಷಲ್?
"ನಾಯಿ ನೆರಳು ನಾನು ಅಭಿನಯಿಸಿದ ಎರಡನೇ ಚಿತ್ರ. ಅದರಲ್ಲಿ ನಾನು ಕಾಸ್ಟ್ಯೂಮ್ ಡಿಸೈನರ್ ಕೂಡ ಆಗಿದ್ದೆ. ಹಾಗೆ ಅಪ್ಪನಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದೆ. ಅದರಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡಿದ್ದೇನೆ. ಈ ಸಿನಿಮಾದಿಂದ ನನಗೆ ಒಂದೊಳ್ಳೆ ಅನುಭವ ಸಿಕ್ಕಿತ್ತು. ನಾಯಿ ನೆರಳು ಕತೆ ಓದಿದ್ದೆ. ಅದನ್ನು ನಮ್ಮ ತಂದೆ ಹೇಗೆ ಬದಲಾಯಿಸಿಕೊಂಡರು ಎಂದು ಅರ್ಥ ಮಾಡಿಕೊಂಡೆ. ನಟಿಸುವಾಗ ಅವರು ಕಲಾವಿದರನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆಂದು ತಿಳಿದುಕೊಂಡೆ. ಕಾಡ ಬೆಳದಿಂಗಳು ಸಿನಿಮಾವನ್ನು ಲಿಂಗದೇವರು ನಿರ್ದೇಶನ ಮಾಡಿದ್ದರು. ಇದನ್ನು ನಾನು ಫ್ಯಾಮಿಲಿಯಿಂದ ಹೊರತಾಗಿ ಮಾಡಿದ ಸಿನಿಮಾ ಅದು. ಈ ಸಿನಿಮಾದ ಕಥೆಯನ್ನು ನಾವು 15 ವರ್ಷಗಳ ಹಿಂದೆ ಮಾಡಿದ್ದರೂ, ಈಗಿನ ಕಾಲಕ್ಕೂ ಪ್ರಸ್ತುತ ಎನಿಸುತ್ತದೆ. ಹಳ್ಳಿಗಳಲ್ಲಿ ಯುವಕರು ಹೇಗೆ ಪಟ್ಟಣ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಯುವಕರೇ ಇಲ್ಲ ಅನ್ನೋದು ಕಾನ್ಸೆಪ್ಟ್ ಆಗಿತ್ತು. ಅವರೊಂದಿಗೆ ಕೆಲಸ ಮಾಡಿದ್ದು ತುಂಬಾನೇ ಖುಷಿಕೊಟ್ಟಿತ್ತು."
ನಟನೆ, ನಿರ್ದೇಶನ, ಕಾಸ್ಟ್ಯೂಮ್ ಎಲ್ಲದರಲ್ಲೂ ಯಾಕೆ?
"ಇದು ತುಂಬಾನೇ ಆರ್ಗ್ಯಾನಿಕ್ ಆಗಿ ನಡೆದಿರುವ ಪ್ರಕ್ರಿಯೆ ಇದು. ನಾನು ಹೀಗೆ ಮಾಡುತ್ತೀನಿ. ಹಾಗೆ ಮಾಡುತ್ತೀನಿ ಅಂತ ಮಾಡಿದ್ದಲ್ಲ. ನನಗೆ ಚಿಕ್ಕಂದಿನಿಂದಲೂ ಡ್ಯಾನ್ಸ್, ಆಕ್ಟಿಂಗ್ ಮಾಡುವುದರಲ್ಲಿ ಆಸಕ್ತಿಯಿತ್ತು. ಅದರ ಜೊತೆ ಜೊತೆಗೆ ನಿರ್ದೇಶನ ಮಾಡುವುದನ್ನೂ ಮಾಡಿಕೊಂಡು ಬಂದೆ. ನೀವು ಕೇಳಿದ್ದಕ್ಕೆ ನಾನು ಯೋಚನೆ ಮಾಡುವುದಾದರೇ, ನಾನು ಬೆಳೆದು ಬಂದ ರೀತಿ ಹಾಗಿತ್ತು ಅನಿಸುತ್ತೆ. ಅಪ್ಪ ನಿರ್ದೇಶನ ಮಾಡಿದ ಸಿನಿಮಾಗೆ ಅಮ್ಮ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದರು. ಅಮ್ಮ ನಿರ್ದೇಶನ ಮಾಡುತ್ತಿದ್ದರೆ, ಅಪ್ಪ ಪ್ರೊಡಕ್ಷನ್‌ನಲ್ಲಿ ಸಹಾಯ ಮಾಡುತ್ತಿದ್ದರು. ಇವೆಲ್ಲವನ್ನೂ ಅಪ್ಪ ಅಮ್ಮ ಇಬ್ಬರೂ ಮಾಡುತ್ತಿದ್ದರಿಂದ ನಾನು ಅವೆಲ್ಲವನ್ನೂ ನೋಡಿ ಕಲೀತಾ ಬಂದೆ ಅನಿಸುತ್ತೆ. ನಾನು ಏನೇ ಮಾಡಿದರೂ ನೋಡಿದವರು ಚೆನ್ನಾಗಿದೆ ಅಂತ ಹೇಳಬೇಕು ಅಷ್ಟೇ. ನಾನು ಸಿನಿಮಾ ಮಾಡುವಾಗ ಇದೆಲ್ಲವೂ ಸಹಾಯ ಆಯ್ತು."
ಹರಿಕಥೆ ಪ್ರಸಂಗ ನಿಮ್ಮನ್ನು ಕಾಡಿದ್ದೇಕೆ?
"ನಾನು ಹೇಳಿದ ಹಾಗೆ.. ನಾಟಕಗಳಾಯ್ತು, ಆಮೇಲೆ ಸಿನಿಮಾಗಳಾಯ್ತು. ಇದಾದ್ಮೇಲೆ ಕೆಲವು ಧಾರಾವಾಹಿಗಳನ್ನು ಮಾಡಿದೆ. ಇದಾದ್ಮೇಲೆ ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳೋಣ ಅಂತ ಫಿಲ್ಮ್ ಸ್ಕೂಲ್‌ಗೆ ಸೇರಿಕೊಂಡೆ. ನಿರ್ದೇಶನವನ್ನು ಸೀರಿಯಸ್ ಆಗಿ ತಗೋಬೇಕು ಅಂದುಕೊಂಡೆ. ಅಲ್ಲಿ ನಾನೊಂದು ಡಾಕ್ಯೂಮೆಂಟರಿ ಮಾಡಿದ್ದೆ. ಇದನ್ನು ನೋಡಿ ಗೋಪಾಲಕೃಷ್ಣ ಪೈ ಅವರು ಒಂದು ಕಥೆ ಬರೆದಿದ್ದೀನಿ ಅಂತ ಹೇಳಿದರು. ಆ ಕಥೆ ಓದಿದ ಮೇಲೆ ಬಹಳ ಆಸಕ್ತಿ ಹುಟ್ಟಿತು. ಒಬ್ಬ ಯಕ್ಷಗಾನದಲ್ಲಿ ಸ್ತ್ರೀ ವೇಷ ಹಾಕುವವರ ಕಥೆ. ಅವರು ರಾತ್ರಿಯೆಲ್ಲ ಸ್ತ್ರೀ ವೇಷ ಹಾಕುತ್ತಾರೆ. ಹಗಲಿನಲ್ಲಿ ಅವರು ಪುರುಷರಾಗಿರುತ್ತಾರೆ. ಅವನು ಗೊಂದಲಕ್ಕೆ ಬೀಳುತ್ತಾನೆ. ನಾನು ಹೆಂಗಸಿನ ವೇಷ ಹಾಕಿರುವ ಗಂಡಸಾ? ಇಲ್ಲ ಗಂಡಸಿನ ವೇಷ ಹಾಕಿರುವ ಹೆಂಗಸಾ? ಅಂತ. ನನಗೆ ಈ ಸ್ಟೋರಿ ಕೇಳಿ ಥ್ರಿಲ್ ಆಯ್ತು. ಹಾಗಾಗಿ ನಾನು ನಿರ್ದೇಶನ ಮಾಡುವುದಕ್ಕೆ ಹರಿಕಥೆ ಪ್ರಸಂಗ ಆರಿಸಿಕೊಂಡೆ."
ಸಿನಿಮಾ ಮತ್ತು ಸೀರಿಯಲ್ ಎರಡೂ ಒಂದೇನಾ?
"ನಾನು ಸೀರಿಯಲ್ ಮತ್ತು ಸಿನಿಮಾ ಎರಡರಲ್ಲೂ ಬೇರೆ ಮಾಧ್ಯಮಗಳು. ನಾನು ಸೀರಿಯಲ್‌ನಲ್ಲಿ ನಟಿಸಿದ ಹಾಗೆ ಸಿನಿಮಾದಲ್ಲಿ ನಟಿಸುವುದಿಲ್ಲ. ಸಿನಿಮಾದಲ್ಲಿ ನಟಿಸಿದ ಹಾಗೆ ಸೀರಿಯಲ್‌ನಲ್ಲಿ ನಟಿಸುವುದಿಲ್ಲ. ಎರಡರಲ್ಲೂ ಬೇರೆ ಬೇರೆ ಪಿಚ್ ಇರುತ್ತೆ. ಅದು ನನಗೆ ತುಂಬಾ ಇಂಟ್ರೆಸ್ಟಿಂಗ್ ಅನಿಸುತ್ತೆ. ನಾನು ನಟಿಸಿದ್ದೆಲ್ಲವನ್ನೂ ಖುಷಿಯಿಂದ ಮಾಡಿದ್ದೇನೆ. ಮೂಕರಾಗದಲ್ಲಿ ಮುಖ್ಯ ಪಾತ್ರ ಆಗಿರಬಹುದು, ತ್ರಿಪುರ ಸುಂದರಿ, ಮಳೆ ಬಿಲ್ಲು ಧಾರಾವಾಹಿಯಲ್ಲಿ ಒಳ್ಳೊಳ್ಳೆ ಡೈಲಾಗ್ಸ್ ಇತ್ತು, ಚೆನ್ನಾಗಿ ಬರೆದಿರುವ ಸೀನ್‌ಗಳಿತ್ತು. ಸಿನಿಮಾ ಮಾಡುವ ಸಲುವಾಗಿ ಸಣ್ಣ ಬ್ರೇಕ್ ತೆಗೆದುಕೊಂಡಿದ್ದೆ. ಆಮೇಲೆ ತ್ರಿಪುರ ಸುಂದರಿ ಮಾಡಿದ್ದು. ಎಷ್ಟೋ ವರ್ಷ ಆದ್ಮೇಲೆ ಆಕ್ಟ್ ಟಿವಿ ಶೋನಲ್ಲಿ ಆಕ್ಟ್ ಮಾಡುತ್ತಿದ್ದೆ. ಒಂಥರಾ ಖುಷಿಯಿತ್ತು. ಅದರಲ್ಲೂ ಚಿಕ್ಕದೊಂದು ನೆಗೆಟಿವ್ ರೋಲ್ ಆಗಿತ್ತು."
'ಸ್ನೇಹದ ಕಡಲಲ್ಲಿ' ಸೀರಿಯಲ್ ಒಪ್ಪಿದ್ದೇಗೆ?
"ಸ್ನೇಹದ ಕಡಲಲ್ಲಿ ಕಂಪ್ಲೀಟ್ ನೆಗೆಟಿವ್ ರೋಲ್. ನಾನು ಯಾವತ್ತೂ ಇಂತಹದ್ದೊಂದು ಪಾತ್ರ ಮಾಡಿಲ್ಲ. ಇಂತಹ ಗೆಟಪ್ ಕೂಡ ಹಾಕಿರಲಿಲ್ಲ. ಈ ಗೆಟಪ್ ನನಗೆ ಖುಷಿ ಆಯ್ತು. ಆ ಮೂಗುಬೊಟ್ಟು, ಆ ಹೂವು, ಆ ಗತ್ತು ಇಷ್ಟ ಆಯ್ತು. ಟ್ರೈ ಮಾಡಿದಾಗ ಗೆಟಪ್ ಬಹಳ ಚೆನ್ನಾಗಿದೆ ಎಂದು ಹೇಳಿದ್ದರು. ಇಂತಹ ನೆಗೆಟಿವ್ ಪಾತ್ರ ಮಾಡುವುದಕ್ಕೆ ಆಗುತ್ತಾ ಎಂದು ಅಂದುಕೊಂಡಿದ್ದೆ. ಆದರೆ, ಚೆನ್ನಾಗಿ ನಡೆಯುತ್ತಿದೆ."
ಇಂದ್ರಾಣಿ ಪಾತ್ರ ಯಾಕೆ ಇಷ್ಟ ಆಯ್ತು?
"ಇಂದ್ರಾಣಿ ನೆಗೆಟಿವ್ ರೋಲ್ ಅನ್ನುವುದಕ್ಕಿಂತ, ಅವಳ ಮಗನ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡವಳು. ಮಗನ ಮೇಲಿನ ಪ್ರೀತಿ ಅವಳ ಕಣ್ಣು ಕಟ್ಟಿರುತ್ತೆ. ಅದಕ್ಕೋಸ್ಕರ ಅವಳು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಅವಳು ಸುಮ್ಮನೆ ಕೆಟ್ಟ ಹೆಂಗಸು ಅಲ್ಲ. ಅವಳು ಯಾವಾಗ ಕೆಟ್ಟ ಹೆಂಗಸು ಆಗ್ತಾಳೆ ಅಂದರೆ, ಮಗನಿಗೆ ಏನಾದರೂ ಬೇಜಾರು ಆದಾಗ ಮಾತ್ರ ಕೆಟ್ಟವಳು. ಈ ಕಾರಣಕ್ಕೆ ಇಂದ್ರಾಣಿ ನನಗೆ ಇಂಟ್ರೆಸ್ಟಿಂಗ್ ಅಂತ ಅನಿಸಿದ್ದಳು."
ಮುಂದೇನಿದೆ ಪ್ಲ್ಯಾನ್?
"ಅಪ್ಪ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ನಾನು ಸಹಾಯ ಮಾಡುತ್ತಿದ್ದೇನೆ. ಇದರೊಂದಿಗೆ ಸ್ನೇಹದ ಕಡಲಲ್ಲಿ ಸೀರಿಯಲ್ ನಡೀತಾ ಇದೆ. ಇಷ್ಟು ಪ್ರಾಜೆಕ್ಟ್ ಸದ್ಯಕ್ಕೆ ನಡೆಯುತ್ತಿದೆ." ಎನ್ನುತ್ತಾರೆ ಅನನ್ಯಾ ಕಾಸರವಳ್ಳಿ.


Click it and Unblock the Notifications











