ಮೂರು ಹೊತ್ತಿನ ಊಟ ಸಿಗುತ್ತೆ ಎಂದು ನೀನಾಸಂಗೆ ಸೇರಿದ್ದ ನಟಿ ಭವಾನಿ ಪ್ರಕಾಶ್; ಈಗ ಕನ್ನಡದ ಜನಪ್ರಿಯ ನಟಿ
ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಭವಾನಿ ಪ್ರಕಾಶ್. ಕಳೆದ ಎರಡೂವರೆ ದಶಕಗಳಿಂದ ಭವಾನಿ ಪ್ರಕಾಶ್ ನಟನೆ ಮಾಡುತ್ತಿದ್ದಾರೆ. ಸಾಕಷ್ಟು ಪ್ರಭುದ್ಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಈ ನಟಿ ಎಂತಹದ್ದೇ ಪಾತ್ರಗಳನ್ನು ಕೊಟ್ಟರೂ ಸಲೀಸಾಗಿ ನಿಭಾಯಿಸುವ ಪ್ರತಿಭೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನೀನಾದೆ ನಾ' ಸೀರಿಯಲ್‌ನಲ್ಲಿ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ.
ಭವಾನಿ ಪ್ರಕಾಶ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಪದವೀಧರೆ. ಅಲ್ಲದೆ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೋಮವನ್ನು ಪಡೆದಿದ್ದಾರೆ. 125ಕ್ಕೂ ಸಿನಿಮಾದಲ್ಲಿ ಮಾಡಿದ್ದಾರೆ. ಧಾರಾವಾಹಿ, ಡಾಕ್ಯೂಮೆಂಟರಿ, ನಾಟಕಗಳು ಅಂತ ಇವರ ಸಾಧನೆ ಒಂದೆರಡಲ್ಲ. ಕನ್ನಡದ ಈ ಅದ್ಭುತ ನಟಿ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹಿನ್ನೆಲೆಯನ್ನು ಅನಾವರಣ ಮಾಡಿದ್ದಾರೆ.

ನಿಮ್ಮೂರು, ಮೊದಲ ಕ್ಯಾಮರಾ ಮುಂದೆ ನಿಂತಿದ್ಯಾವಾಗ?
"ನಾನು ದಾವಣಗೆರೆ ಹತ್ತಿರ ಒಂದು ಹಳ್ಳಿಯಲ್ಲಿ ಬೆಳೆದಿದ್ದೇನೆ. ನಾನು ಓದಿದ್ದು ಕೂಡ ದಾವಣಗೆರೆ, ಹರಿಹರ ಆಮೇಲೆ ನೀನಾಸಂಗೆ ಹೋದೆ. ಅಲ್ಲಿ ತಿರುಗಾಟ ಅದೆಲ್ಲ ಮುಗಿಸಿಕೊಂಡು ಬಂದಿತ್ತು. ಚಿತ್ರರಂಗಕ್ಕೆ ಬಂದಿದ್ದು ಎಂಎಸ್ ಸತ್ಯು ಒಂದು ಪಾತ್ರದ ಹುಡುಕಾಟದಲ್ಲಿ ಇದ್ದರು. ಡಿಡಿ1ಗೆ ಶಿಕ್ಷಣಕ್ಕೆ ಸಂಬಂಧ ಪಟ್ಟಂತೆ ಒಂದು ಮಲ್ಲಿಕಾ ಅಂತ ಡಾಕ್ಯೂಮೆಂಟರಿ ಮಾಡಿದ್ದರು. ಆಗ ನಾನು ಒಂದು ಪಾತ್ರಕ್ಕೆ ಮುಸ್ಲಿಂ ತರ ಕಾಣುತ್ತೇನೆ ಎಂದು ತೆಗೊಂಡಿದ್ದರು. ಅವರು ನನ್ನನ್ನು ಮೊದಲು ಕ್ಯಾಮರಾ ಮುಂದೆ ನಿಲ್ಲಿಸಿದವರು. ಅದು ನನ್ನ ಮೊದಲ ನಟನೆಯ ಅನುಭವ."
ನೀನಾಸಂಗೆ ಹೋಗಿದ್ದು ಏಕೆ?
"ನನಗೆ ರಂಗಭೂಮಿ ಹಿನ್ನೆಲೆ ಅಂತೇನು ಇರಲಿಲ್ಲ. ನನಗೆ ಸ್ಕೂಲ್ ಹಾಗೂ ಕಾಲೇಜಿಗಳಲ್ಲಿ ನಾಟಕದ ಕಡೆಗೆ ತುಂಬಾನೇ ಒಲವು. ಎಲ್ಲದಕ್ಕೂ ನನ್ನ ಹೆಸರನ್ನು ಕೇಳುವುದಕ್ಕೆ ಮುನ್ನವೇ ಬರೆದುಕೊಳ್ಳುತ್ತಿದ್ದರು. ಹಾಡು ಭವಾನಿ, ನಾಟಕ ಭವಾನಿ ಅಂತ ಬರೆದುಕೊಳ್ಳುತ್ತಿದ್ದರು. ಬಹುಶ: ಕಲೆ ಅನ್ನೋದು ಅಲ್ಲಿಂದ ಬಂತು ಅನಿಸುತ್ತೆ. ನನ್ನ ಅಕ್ಕ ನೀನಾಸಂನಲ್ಲಿ ಇದ್ದಳು. ಅಲ್ಲಿಗೊಮ್ಮೆ ಭೇಟಿ ಮಾಡುವುದಕ್ಕೆ ಹೋಗಿದ್ದೆ. ಅಲ್ಲಿ ಚಿದಂಬರ್ ಜಂಬೆ ಅವರು ಅಲ್ಲಿ ಪ್ರಿನ್ಸಿಪಾಲ್ ಅಲ್ಲಿದ್ದರು. ಸಂದರ್ಶನ ಏನೂ ಮಾಡದೆ ಸೇರಿಕೊಂಡಿದ್ದರು. ನನಗೆ ಕಲಿಯುವ ಹಸಿವೂ ಇತ್ತು. ಹೊಟ್ಟೆ ಹಸಿವು ಕೂಡ ಇತ್ತು. ಹಾಗೂ ಮೂರು ಹೊತ್ತು ಊಟ ಸಿಗುತ್ತೆ ಎನ್ನುವ ಕಾರಣವೂ ಒಂದು. ಅಂದರೆ, ಕಲಿಯುವ ಹಸಿವೂ ಇತ್ತು. ಹೊಟ್ಟೆ ಹಸಿವೂ ಇತ್ತು. ಈ ಕಾರಣಕ್ಕೆ ಹೋದೆ ಅಂದರೆ, ನೀವು ನನ್ನ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬಹುದು."

ರಂಗಭೂಮಿ ಕಡೆಗೆ ಹೋಗಿದ್ದೇಕೆ?
"ನನಗೆ ನಾಟಕಗಳಿಗೆ ಹೋಗಬೇಕೆಂದು ಇಷ್ಟವಿರಲಿಲ್ಲ. ನನಗೆ ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು. ಅದರ ಜೊತೆಗೆ ಒಂದು ಕೋರ್ಸ್ ಆಗಬೇಕಿತ್ತು. ಆ ಉದ್ದೇಶಕ್ಕೆ ಹೋದೆ ಬಿಟ್ಟರೆ, ಬೇರೇನೂ ಇರಲಿಲ್ಲ. ಮೊದಲು ನೀನು ನೀನಾಸಂ ಬರುತ್ತೀಯ ಅಂತ ಕೇಳಿದಾಗ ನಾನು ಕೇಳಿದ್ದು ಒಂದೇ. ಇಲ್ಲಿ ಊಟ ಸಿಗುತ್ತಾ? ಫ್ರೀಯಾಗಿ ಸಿಗುತ್ತಾ? ಎನ್ನುವ ಪ್ರಶ್ನೆ. ಅದು ನನ್ನನ್ನು ಇಲ್ಲಿವರೆಗೂ ಬೆಳೆಸಿಕೊಂಡು ಬಂತು."
ನೀನಾಸಂ ಬಳಿಕ ನಿಮ್ಮ ಬದುಕು ಬದಲಾಗಿದ್ದೇಗೆ?
"ನೀನಾಸಂ ಮುಗಿದ ಬಳಿಕ ನನ್ನ ಜೀವನದಲ್ಲಿ ಒಂದು ಮಿರಾಕಲ್ ನಡೀತು. ಇಲ್ಲಿ ಬೆಂಗಳೂರು ಲಿಟಲ್ ಥಿಯೇಟರ್ ಮತ್ತು ರಾಯಲ್ ಲಿಟಲ್ ಥಿಯೇಟರ್ ಲಂಡನ್ ಇವರು ಏಳು ಜನರನ್ನು ಕರೆದುಕೊಂಡು ಕಲ್ಚರಲ್ ಎಕ್ಸ್‌ಚೇಂಜ್ ಅಂತ ಮಾಡಿದರು. ಅವರು ಬಂದು ಇಲ್ಲಿ ನಾಟಕ ಮಾಡಿದರು. ನಾವು ಅಲ್ಲಿಗೆ ಹೋಗಬೇಕಿತ್ತು. ನನಗೆ ಭಾಷೆ ಗೊತ್ತಿರಲಿಲ್ಲ. ಪಾಸ್‌ಪೋರ್ಟ್, ವಿಸಾ ಅಂದರೆ ಏನೂ ಗೊತ್ತಿರಲಿಲ್ಲ. ನನಗೆ ಯಾರೂ ಸಹಾಯ ಮಾಡುವವರು ಇರಲಿಲ್ಲ. ಲಂಡನ್‌ನಿಂದ ಬಂದ್ಮೇಲೆ ಬಿವಿ ಕಾರಂತರು ನಾಟಕಗಳನ್ನು ಮಾಡಿಸುತ್ತಿದ್ದರು. ಒಟ್ಟೊಟ್ಟಿಗೆ ತಿರುಗಾಟಕ್ಕೆ ಅಂತ ಮೂರು ನಾಟಕನ್ನು ಮಾಡಿಸುತ್ತಿದ್ದರು. ಆಗ ನಾನು ನಾಟಕವನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದು. ಏನಾದರೂ ಮಾಡಬೇಕು. ಕನ್ನಡಿ ಮುಂದು ನಿಂತರೆ ಚೆನ್ನಾಗಿ ಕಾಣಿಸಬೇಕು. ಅತ್ತರೆ ಚೆನ್ನಾಗಿ ಕಾಣಿಸಬೇಕು ಅಂದಾಗ ಕಾರಂತ್ ಸರ್ ನಿನ್ನ ನಟನೆಯನ್ನು ಸೌಂದರ್ಯದಲ್ಲಿ ತೋರಿಸು ಅಂತ. ಅಲ್ಲಿವರೆಗೂ ನನಗೆ ಸೌಂದರ್ಯ ಅಂದರೆ ಏನೂ ಅಂತಾನೇ ಗೊತ್ತಿರಲಿಲ್ಲ. ಅಲ್ಲಿಂದ ನನ್ನ ಜರ್ನಿ ಶುರುವಾಯ್ತು. ಇನ್ನೂ ನಿಂತಿಲ್ಲ."
ನಿಮ್ಮ ಸೀರಿಯಲ್ ಪಯಣ ಶುರುವಾಗಿದ್ದೇಗೆ?
"ನಾಗಾಭರಣ ಅವರ ಮಹಾಮಾಯಿ ಅಂತ ಒಂದು ಸೀರಿಯಲ್ ಮಾಡಿದೆ. ಅದಾದ್ಮೇಲೆ ಕೆ.ಎಂ ಚೈತನ್ಯ ಒತ್ತಾಯ ಮಾಡಿ ಕಿಚ್ಚುನಲ್ಲಿ ಒಂದೊಳ್ಳೆ ರೋಲ್ ಕೊಟ್ಟರು. ಅಲ್ಲಿಂದ ಮಧ್ಯೆ ನಾಟಕಗಳು, ವರ್ಲ್ಡ್ ಮೂವೀಸ್ ಅನ್ನು ನೋಡುವುದು ಹೀಗೆ ಮುಂದುವರೆಸಿದ್ದೆ. ಕನ್ನಡ ಸಾಹಿತ್ಯದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದರಿಂದ ಓದು, ಸಾಹಿತ್ಯ ಅಂತ ಆಸಕ್ತಿ ಬೆಳೆದುಕೊಂಡು ಹೋಯ್ತು."

ಮೆಗಾ ಸೀರಿಯಲ್‌ಗಳು ಸಿಕ್ಕಿದ್ದೇಗೆ?
"ಮೆಗಾ ಸೀರಿಯಲ್ ಅಂತ ಬಂದರೆ, ನಾಗಾಭರಣ ಅವರದ್ದು ಮಹಾಮಾಯಿ ಅಂತ. ಅಷ್ಟೊತ್ತಿಗೆ ನನಗೆ ಒಂದೂವರೆ ತಿಂಗಳ ಮಗು ಇತ್ತು. ನನಗೆ ಮನೆಯಲ್ಲಿ ಕೂತು ಸಾಕಾಗಿತ್ತು. ಮೆಗಾ ಸೀರಿಯಲ್ ಅಂದರೆ ಹೇಗಿರುತ್ತೆ ಅನ್ನೋದು ಗೊತ್ತಿರಲಿಲ್ಲ. ಅದಕ್ಕೂ ಮುನ್ನ 15 ಎಪಿಸೋಡ್‌ಗಳು ಬರೋದು. ಆಗ ನಾನು ಪಿ.ಶೇಷಾದ್ರಿಯವರ ಸೀರಿಯಲ್ ಮಾಡಿದ್ದೆ. ಮೆಗಾ ಸೀರಿಯಲ್ ಅಂತ ಮಾಡಿದ್ದು ಭರಣ ಸರ್ ಹಾಗೂ ಚೈತನ್ಯ ಅವರದ್ದು."
ಸ್ಟಾರ್ ಸುವರ್ಣದ ನಿಮ್ಮ ನಂಟು ಹೇಳಿ
"ಸುವರ್ಣದಲ್ಲಿ ನಾನು ಮಧುಬಾಲ, ಗುಂಡ್ಯನ ಹೆಂಡ್ತಿ, ಕಥೆಯೊಂದು ಶುರುವಾಗಿದೆ, ಈಗ ನೀನಾದೆ ನಾ ಧಾರಾವಾಹಿ ಮಾಡಿತ್ತಿದ್ದೇನೆ. ಸ್ಟಾರ್ ಸುವರ್ಣ ನನಗೆ ತುಂಬಾನೇ ಕೆಲಸ ಕೊಟ್ಟಿದೆ. ಎಲ್ಲಾ ಚಾನೆಲ್‌ನಲ್ಲೂ ಮಾಡಿದ್ದೇನೆ. ಸುವರ್ಣ ನನಗೆ ಸ್ವಲ್ಪ ಸ್ಪೆಷಲ್. ನನಗೆ ಕೆಲಸ ಇಲ್ಲಾ ಅಂತಾದರೆ, ಪಟ್ ಅಂತ ಅಲ್ಲೊಂದು ಕೆಲಸ ಸಿಗುತ್ತೆ."

ಗುಂಡ್ಯನ ಹೆಂಡ್ತಿ ಸೀರಿಯಲ್ ಬಗ್ಗೆ ಹೇಳಿ?
"ಗುಂಡ್ಯನ ಹೆಂಡ್ತಿ ಸೀರಿಯಲ್ ಬೆಳಗಾವಿಯಲ್ಲಿ ನಡೆಯುತ್ತಿತ್ತು. ಅದಿತಿ ಪ್ರಭುದೇವ ತುಂಬಾನೇ ಒಳ್ಳೆಯ ಹುಡುಗಿ. ದಾವಣಗೆರೆ ಹುಡುಗಿ ಅಂತ ನನಗೆ ಮಮಕಾರವಿತ್ತು. ಮೊನ್ನೆ ಅವರ ಮಗುವಿನ ಬರ್ತ್‌ಡೇಗೆ ಆಹ್ವಾನ ಮಾಡಿದ್ದರು. ಕಾರಣಾಂತರಗಳಿಂದ ಹೋಗುವುದಕ್ಕೆ ಆಗಲಿಲ್ಲ. ಅವಳು ಅದಾಗಲೇ ಸ್ಟಾರ್ ಆಗಿದ್ದಳು. ಇವಾಗಲೂ ಹಾಗೇ ಇದ್ದಾಳೆ."
ನಿಮಗೆ ತೃಪ್ತಿಕೊಟ್ಟ ಸೀರಿಯಲ್ ಯಾವುದು?
"ತುಂಬಾ ತೃಪ್ತಿಕೊಟ್ಟಿರುವ ಸೀರಿಯಲ್ ಅಂದರೆ, ದೊರೆಸಾನಿ. ಈ ಸೀರಿಯಲ್‌ನಲ್ಲಿ ನಾನು ಶೇ.100ರಷ್ಟು ನನ್ನನ್ನು ನಾನು ತೊಡಗಿಸಿಕೊಂಡು ಮಾಡುತ್ತಿದ್ದೆ. ಒಂದು ನಾಲ್ಕೈದು ಸೀರೆಗಳನ್ನು ಇಟ್ಟುಕೊಂಡಿದ್ದೆ ಅಷ್ಟೇ. ಸೀರಿಯಲ್‌ನಲ್ಲಿ ಸೀರೆ, ಬಳೆ, ಒಡವೆಗಳನ್ನು ನೋಡುತ್ತಾರೆ ಅಂತಾರಲ್ಲ. ನನಗೆ ಅದೆಲ್ಲ ಸುಳ್ಳು ಅಂತ ಅನಿಸುತ್ತೆ. ಯಾರೂ ನನಗೆ ಅಲ್ಲಿ ಸೀರೆಯ ಬಗ್ಗೆ ಕಮೆಂಟ್ ಮಾಡಿಲ್ಲ. ಮುಖ ವಾಶ್ ಮಾಡಿಕೊಂಡು ಕುಂಕುಮ ಹಚ್ಚಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದೆ. ಅದು ಹೆಂಗಿತ್ತು ಅಂದರೆ, ವಿಲನ್ ಅನ್ನೋದು ಸ್ಥಾಯಿ ಭಾವ ಅಷ್ಟೇ. ಇನ್ನು ಸಂಚಾರಿ ಭಾವ ಮಗನ ಮೇಲೆ ಪ್ರೀತಿ, ಗಂಡನ ಮೇಲೆ ಪ್ರೀತಿ, ಮಗಳ ಮೇಲೆ ಆತಂಕ ಹೀಗೆ ಎಲ್ಲಾ ಭಾವನೆಗಳ ಜೊತೆ ಆಟ ಆಡುವುದಕ್ಕೆ ಅವಕಾಶ ಕೊಟ್ಟ ಪಾತ್ರವದು. ಇದು ಬಿಟ್ಟರೆ ಶ್ರಾವಣಿ ಸುಬ್ರಹ್ಮಣ್ಯದ ಕಾಂತಮ್ಮ ಪಾತ್ರ. ಅದು ಜನ ತುಂಬಾ ನೋಡುತ್ತಿದ್ದಾರೆ."
ನಿಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿ?
"ನಾನು 125 ಸಿನಿಮಾಗಳನ್ನು ಮಾಡಿದ್ದೀನಿ. ಅಂದರೆ, ಕಮರ್ಷಿಯಲ್ ಅಂತ ಬರುವುದಕ್ಕೂ ಮುನ್ನ ಆರ್ಟ್ ಸಿನಿಮಾಗಳು, ಮಕ್ಕಳ ಸಿನಿಮಾಗಳನ್ನು ಮಾಡುತ್ತಿದ್ದೆ. ಕಮರ್ಷಿಯಲ್ ಸಿನಿಮಾಗಳ ಕಡೆಗೆ ಬಂದಿದ್ದು ಪರಮಾತ್ಮ ಸಿನಿಮಾದಿಂದ. ಅದಾದ್ಮೇಲೆ ರಾಟೆ ಬಂತು. ಇಲ್ಲಿಂದ ಸುಮಾರು ಮಾಡಿದ್ದೇನೆ. ಈಗಂತೂ ರಿಲೀಸ್ ಆಗುವುದಕ್ಕೆ ಸುಮಾರು 25 ಸಿನಿಮಾಗಳಿವೆ. ಅದ್ಯಾವಾಗ ಆಗುತ್ತೋ ಗೊತ್ತಿಲ್ಲ. ಈಗಿನ ಪರಿಸ್ಥಿತಿ ರಿಲೀಸ್ ಆಗುತ್ತೋ? ಓಟಿಟಿಗೆ ಬರುತ್ತೋ ಗೊತ್ತಿಲ್ಲ."
'ನೀನಾದೆ ನಾ'ದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ
"ನೀನಾದೆ ನಾ ಸೀರಿಯಲ್‌ನಲ್ಲಿ ನನಗೆ ವಿಲನ್ ಪಾತ್ರವನ್ನೇ ಕೊಟ್ಟಿದ್ದಾರೆ. ನಾನು ಅದನ್ನು ಬೇರೆ ತರ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಎರಡು ದಿನ ಅಷ್ಟೇ ಶೂಟಿಂಗ್ ಮಾಡಿ ಬಂದಿದ್ದೇನೆ. ಇನ್ನೂ ಪಾತ್ರಕ್ಕೆ ಹೆಸರು ಕೊಟ್ಟಿಲ್ಲ. ಒಂದೊಳ್ಳೆ ಹೆಸರು ಕೊಡುತ್ತಾರೆ."

ನಿಮ್ಮ ಫ್ಯಾಮಿಲಿ ಬಗ್ಗೆ ಹೇಳಿ
"ನನ್ನ ಯಜಮಾನರು ಪ್ರಕಾಶ್ ಬಾಬು. ಅವರು ದಾವಣಗೆರೆಯವರೇ. ಅವರು ಓದಿದ್ದು ಶಾಂತಿ ನಿಕೇತನದಲ್ಲಿ ಎಂಸಿಎ ಮಾಡಿದ್ದಾರೆ. ಈಗ ದೃಷ್ಠಿ ಮಣಿಪಾಲ್‌ನಲ್ಲಿ ಪ್ರೊಫೆಸರ್ ಆಗಿದ್ದಾರೆ. ನನ್ನ ಮಗ ಚಾರುವಾಕ ಪ್ರಕಾಶ್. ಅವನದ್ದು ಸೈಕಾಲಜಿಯಲ್ಲಿ ಡಿಗ್ರಿ ಆಗಿದೆ. ಮಾಸ್ಟರ್ ಮಾಡುವುದಕ್ಕೆ ಜರ್ಮನಿಗೆ ಹೋಗುವುದಕ್ಕೆ ರೆಡಿಯಾಗುತ್ತಿದ್ದಾನೆ. ಕಾಲೇಜುಗಳಿಗೆ ಅಪ್ಲೇ ಮಾಡುತ್ತಿದ್ದಾನೆ. ನನ್ನ ತಾಯಿ ನನ್ನ ಜೊತೆಗೆ ಇರುತ್ತಾರೆ. ನಾನು ಪ್ರಾಣಿ ಪ್ರಿಯೆ. ನನ್ನ ಬಳಿ ಶ್ವಾನಗಳಿವೆ. ಪರ್ಷಿಯನ್ ಕ್ಯಾಟ್ ಇದೆ. ಗಿಡ ಮರಗಳು ಅಂದರೆ ಇಷ್ಟ. ನಾನೊಬ್ಬ ಸಿಂಪಲ್ ಹೆಣ್ಣು ಮಗಳು. ನನಗೆ ಕನಸುಗಳು ಅಂದರೆ, ಬಟ್ಟೆ , ಒಡವೆ ಮನೆ ಅಂತೇನೂ ಇಲ್ಲ. ಒಳ್ಳೆಯ ನಟಿಯಾಗಿ ಸಾಯಬೇಕು ಅಂತ ಇದೆ."


Click it and Unblock the Notifications











