ತೆಲುಗು ನಿರ್ದೇಶಕನೊಂದಿಗೆ 2ನೇ ಮದುವೆ ಬಗ್ಗೆ ಮೌನ ಮುರಿದ ಕನ್ನಡದ ನಟಿ ಜ್ಯೋತಿ ರೈ; ಲವ್‌ಸ್ಟೋರಿ ಬಗ್ಗೆ ಗೊತ್ತೇ?
ಕನ್ನಡ ಕಿರುತೆರೆಯಿಂದ ವೃತ್ತಿ ಬದುಕನ್ನು ಆರಂಭಿಸಿದ ನಟಿ ಜ್ಯೋತಿ ರೈ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಸೀರಿಯಲ್, ಸಿನಿಮಾ ಅಂತ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇತ್ತೀಚೆಗೆ ಜ್ಯೋತಿ ಸಿನಿಮಾಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿಯೇ ಸಂಚಲನ ಸೃಷ್ಟಿಸುತ್ತಿದ್ದಾರೆ. ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಹಡ್ಡೆ ಹೈಕಳ ನಿದ್ದೆ ಕೆಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಜ್ಯೋತಿ ಬ್ಲ್ಯಾಕ್ ಟಾಪ್ ಹಾಗೂ ಜೀನ್ಸ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ಫೋಟೋಗಳು ಕೂಡ ವೈರಲ್ ಆಗಿವೆ. ಆದರೆ, ಕಮೆಂಟ್ಸ್ ಸೆಕ್ಷನ್ ಅನ್ನು ಆಫ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಇನ್ನೊಂದು ಕಡೆ 'ಮಾಸ್ಟರ್ ಪೀಸ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ಫಿಲ್ಮಿಬೀಟ್‌ಗೆ ಸಂದರ್ಶನ ನೀಡಿದ್ದು, ತಮ್ಮ ಬದುಕಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಅಂದ್ಹಾಗೆ, ಜ್ಯೋತಿ ರೈಗೆ ತೆಲುಗಿನ 'ಗುಪ್ಪೆಡಂತ ಮನಸು' ಧಾರಾವಾಹಿಯ ಫೇಮಸ್ ಮಾಡಿತ್ತು. ಈ ಸೀರಿಯಲ್ ಮೂಲಕ ತೆಲುಗು ಪ್ರೇಕ್ಷಕರಿಗೆ ಜ್ಯೋತಿ ರೈ ಪರಿಚಯವಾಗಿತ್ತು. ಈಗ ವಿವಾಹದ ಬಳಿಕ ತೆಲುಗು ಮಂದಿಗೆ ಜ್ಯೋತಿ ಪೂರ್ವಜ್ ಎಂದೇ ಚಿರಪರಿಚಿತರಾಗಿದ್ದಾರೆ. ಈ ಧಾರಾವಾಹಿಯಲ್ಲಿ 'ಜಗತಿ' ಎಂಬ ಪಾತ್ರದಲ್ಲಿ ನಟಿಸಿ ತೆಲುಗು ಮಂದಿಯ ಮನಸ್ಸು ಕದ್ದಿದ್ದರು.
ಜ್ಯೋತಿ ರೈ ವಿವಾಹದ ಬಳಿಕ 'ಜ್ಯೋತಿ ಪೂರ್ವಜ್' ಎಂದು ಹೆಸರು ಬದಲಾಯಿಸಿಕೊಂಡಿದ್ದು, ಈ ಸಂದರ್ಶನದಲ್ಲಿ ಅವರ ಲವ್ ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದಾರೆ. ಹಾಗೇ ಪತಿಯೇ ನಿರ್ದೇಶಿಸುತ್ತಿರುವ 'ಮಾಸ್ಟರ್‌ಪೀಸ್' ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ಮಾಸ್ಟರ್‌ಪೀಸ್ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ವಿಭಿನ್ನವಾಗಿದೆ. ಇದು ಅನೇಕ ಆಯಾಮಗಳನ್ನು ಹೊಂದಿರುವ ಪ್ರಮುಖ ಪಾತ್ರ. ಈ ಪಾತ್ರ ಖಂಡಿತಾ ಪ್ರೇಕ್ಷಕರನ್ನು ರಂಜಿಸುತ್ತೆ" ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಕನ್ನಡ ಹಾಗೂ ತೆಲುಗು ಯಾವ ಭಾಷೆಯಲ್ಲಿ ನಟಿಸುವುದಕ್ಕೆ ಖುಷಿ ಕೊಡುತ್ತೆ ಎಂದು ಕೇಳಿದಾಗ, "ಒಮ್ಮೆ ಯಾರನ್ನಾದರೂ ಪ್ರೀತಿಸಿದರೆ, ನಂಬಿದರೆ, ಅವರು ನೀಡುವ ಬೆಂಬಲ ಮರೆಯಲು ಸಾಧ್ಯವಿಲ್ಲ. ನಾನು ಕನ್ನಡ, ತೆಲುಗು ನಟಿಯಷ್ಟೇ ಅಲ್ಲ. ನಾನು ಯಾವಾಗಲೂ ಭಾರತೀಯ ನಟಿ ಎಂದು ಭಾವಿಸುತ್ತೇನೆ. ಯಾಕೆಂದ್ರೆ, ಕಲಾವಿದರಿಗೆ ಯಾವುದೇ ಭಾಷೆಯ ಅಡೆತಡೆ ಇರುವುದಿಲ್ಲ" ಎಂದು ಜ್ಯೋತಿ ರೈ ಹೇಳಿದ್ದಾರೆ. "ನಾನು ಯಾವುದೇ ಚಿತ್ರರಂಗದಲ್ಲಿ ಕೆಲಸ ಮಾಡಿದರೂ, ಅದನ್ನು ನನ್ನ ಭಾಷೆ ಎಂದು ಭಾವಿಸುತ್ತೇನೆ. ಎಲ್ಲಾ ಭಾಷೆಯನ್ನು ನಾನು ಪ್ರೀತಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ. "ಕನ್ನಡ ನನ್ನ ಮಾತೃಭಾಷೆಯಾಗಿದ್ದರೂ, ತೆಲುಗಿನಲ್ಲಿ ನನಗೆ ಉತ್ತಮ ಮನ್ನಣೆ ಮತ್ತು ಪ್ರೀತಿ ದೊರಕಿದೆ. ಕನ್ನಡ ನನಗೆ ತವರುಮನೆ, ತೆಲುಗು ನನ್ನ ಅತ್ತೆ ಮನೆ" ಎಂದು ಜ್ಯೋತಿ ರೈ ಅಭಿಪ್ರಾಯಪಟ್ಟಿದ್ದಾರೆ.

ಜ್ಯೋತಿ ರೈ ಇದೇ ವೇಳೆ ತಮ್ಮ ಬದುಕಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಎರಡನೇ ಮದುವೆ ಆಗಿದ್ದೇಕೆ? ಎರಡನೇ ಪತಿಯೊಂದಿಗೆ ಲವ್ ಶುರುವಾಗಿದ್ದೆಲ್ಲಿ? ಮದುವೆ ಹಂತದವರೆಗೂ ಬಂದಿದ್ದೇಗೆ? ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ನಟಿಯಾಗಿಯೇ ಅವರೊಂದಿಗೆ ನನ್ನ ಪಯಣ ಆರಂಭ ಆಯ್ತು. ನಂತರ ಅವರನ್ನು ಪ್ರೀತಿಸಿ ಮದುವೆಯಾದೆ. ನಾವಿಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ಅವರು ತುಂಬಾನೇ ಮೃಧು ಸ್ವಭಾವದವರು. ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಯಾರೊಂದಿಗೂ ಒರಟಾಗಿ ವರ್ತಿಸುವುದಿಲ್ಲ. ಈ ಕಾರಣಕ್ಕಾಗಿ ಅವರು ನನಗೆ ಅವರು ಇಷ್ಟ" ಎಂದು ಜ್ಯೋತಿ ರೈ ಹೇಳಿದ್ದಾರೆ.
"ನಮಗೆ ಲವ್ ಜರ್ನಿ ಅಂತೇನು ಇಲ್ಲ. ನಾವಿಬ್ಬರೂ ಪರಸ್ಪರ ಪ್ರಪೋಸ್ ಏನೂ ಮಾಡಿಲ್ಲ. ನಮ್ಮ ಜೀವನದ ಬಗ್ಗೆ ಚರ್ಚೆ ಮಾಡಿದ್ವಿ. ನಮ್ಮ ವೃತ್ತಿ ಬಗ್ಗೆ ಹಂಚಿಕೊಂಡೆವು. ನಮ್ಮ ಜೀವನದಲ್ಲಿ ನಮ್ಮಿಬ್ಬರ ಆಸಕ್ತಿಗಳು ಒಂದೇ ಆಗಿದ್ರಿಂದ ಇಷ್ಟ ಆಗಿ ಮದುವೆ ಆದೆವು" ಎಂದು ಹೇಳಿಕೊಂಡಿದ್ದಾರೆ. ಹಾಗೇ "ನನ್ನ ಜೀವನದಲ್ಲಿ ಅನೇಕ ಕೆಟ್ಟ ಘಟನೆಗಳು ನಡೆದು ಹೋಗಿವೆ. ಅವುಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡರು. ಇದರಿಂದ ನಮ್ಮಿಬ್ಬರ ಮನಸ್ಸುಗಳು ಕೂಡ ಅಷ್ಟೇ ಹತ್ತಿರವಾದವು. ಈ ಕಾರಣಕ್ಕೆ ನಾವಿಬ್ಬರೂ ಒಂದಾದೆವು" ಎಂದು ಜ್ಯೋತಿ ರೈ ಹೇಳಿಕೊಂಡಿದ್ದಾರೆ.


Click it and Unblock the Notifications











