ವಯಸ್ಸು 70 ಆದರೂ ಸಿಂಗಲ್.. ಈಗಲೂ 'ಅತ್ತೆಗೆ ತಕ್ಕ ಸೊಸೆ'ಯಾಗಲು ರೆಡಿ; ಈ ಹಿರಿಯ ನಟಿ ನೆನಪಾದ್ರಾ?
ಕನ್ನಡದ ಚಿತ್ರರಂಗ ಬೆಳೆಸುವಲ್ಲಿ ಸಾಕಷ್ಟು ಕಲಾವಿದರ ಶ್ರಮವಿದೆ. ಅದರಲ್ಲೂ ಆರಂಭದ ದಿನಗಳಿಂದ ಹಿಡಿದು 70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಸಮಯದಲ್ಲಿ ಬಂದ ನಟಿಯರ ಪ್ರಮುಖರಾಗಿ ಕಾಣಿಸುತ್ತಾರೆ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸುವುದು ಸವಾಲಿನ ವಿಷಯವಾಗಿರುತ್ತಿತ್ತು. ಇಂತಹ ಸಮಯದಲ್ಲಿ ಗೆದ್ದು ಬೀಗಿದ ಸಾಕಷ್ಟು ನಟಿಯರು ಇದ್ದಾರೆ. ಅವರಲ್ಲಿ ರೇಖಾ ರಾವ್ ಕೂಡ ಒಬ್ಬರು.
ಕನ್ನಡದಲ್ಲಿ ರೇಖಾ ರಾವ್ 22ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟಿ ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ತನ್ನ ಜರ್ನಿಯ ಬಗ್ಗೆ ಮಾತಾಡಿದ್ದಾರೆ. ಮುಂಬೈನಲ್ಲಿ ಬೆಳೆದ ನಟಿ ಕನ್ನಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್, ಜಿವಿ ಅಯ್ಯರ್ ಅಂತ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್ನೂ ಅವಿವಾಹಿತೆಯಾಗಿರುವ ರೇಖಾ ರಾವ್ 70ನೇ ವಯಸ್ಸಿನಲ್ಲಿಯೂ ಈಗಲೂ ಯಾರ ಮೇಲೆ ಲವ್ ಆದರೂ ಮದುವೆ ಆಗುವುದಕ್ಕೆ ರೆಡಿ ಎಂಬ ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ನಿಮ್ಮ ಕಿರುತೆರೆ ಜರ್ನಿ ಹೇಗಿದೆ?
"ನಾನು ಕನ್ನಡ ಸೀರಿಯಲ್‌ಗಳನ್ನು ಮಾಡಿಲ್ಲ. 22-23 ಸಿನಿಮಾಗಳನ್ನು ಮಾಡಿದ್ದೇನೆ. ಆಮೇಲೆ ಮುಂಬೈಗೆ ಮತ್ತೆ ವಾಪಾಸ್ ಹೋಗಿದ್ದೆ. 10-12 ವರ್ಷಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದು ಸೆಟಲ್ ಆಗಿದ್ದೀನಿ. ಬಂದ್ಮೇಲೆ 8-10 ಸೀರಿಯಲ್‌ಗಳನ್ನು ಮಾಡಿದ್ದೇನೆ. ಅವು ತುಂಬಾ ಚೆನ್ನಾಗಿ ನಡೀತು. ಶುಭ ಮಂಗಳ, ಅಶ್ವಿನಿ ನಕ್ಷತ್ರ ಇವೆಲ್ಲ ಬಹಳ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, 500 ಎಪಿಸೋಡ್ ಆಗಿದ್ದು, ನಿನ್ನ ಜೊತೆ ನನ್ನ ಕಥೆ ಸೀರಿಯಲ್."
ಸಿನಿಮಾಗೆ ಬಂದಿದ್ದೇಗೆ? ಮೊದಲ ಸಿನಿಮಾ ಯಾವುದು?
"ನಾನು ಮುಂಬೈನಲ್ಲಿ ಇದ್ದಿದ್ದರಿಂದ ಅಲ್ಲಿಂದಲೇ ಬ್ರೇಕ್ ಸಿಗುತ್ತಾ? ಅಂತ ಅಂದುಕೊಂಡಿದ್ದೆ. ಆದರೆ, ಕನ್ನಡದಲ್ಲಿಯೇ ಮೊದಲು ಅವಕಾಶ ಸಿಕ್ಕಿತು. ಹಂಸಗೀತೆ ಮೊದಲ ಸಿನಿಮಾ. ಜಿವಿ ಅಯ್ಯರ್ ಅವರ ಸಿನಿಮಾ ಆಯ್ತು. ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಎರಡು ಸಿನಿಮಾ ಮಾಡಿದೆ. ಅತ್ತೆಗೆ ತಕ್ಕ ಸೊಸೆ, ಕಪ್ಪುಕೊಳದಂತಹ ಸಿನಿಮಾ ಮಾಡಿದೆ. ತುಂಬಾ ಒಳ್ಳೆಯ ಎಕ್ಸ್‌ಪೀರಿಯನ್ಸ್ ಆಯ್ತು."
ನಿಮ್ಮ ಫ್ಯಾಮಿಲಿ ಬಗ್ಗೆ ಹೇಳಿ
"ನಾನು ಮದುವೆ ಆಗಿಲ್ಲ. ಧಾರಾವಾಹಿಯಲ್ಲಿ ಮಕ್ಕಳು ಮೊಮ್ಮಕ್ಕಳು ಯಾರಿದ್ದಾರೆ ಅವರೇ ಎಲ್ಲ. ನನ್ನ ಮನೆಯಲ್ಲಿ ನಾಲ್ಕು ಕಾಲಿನ ಮಗ ಇದ್ದಾನೆ. ಅವನೇ ನನ್ನ ಮಗ"
ನೀವಿನ್ನು ಯಾಕೆ ಮದುವೆ ಆಗಿಲ್ಲ?
"ಮದುವೆ ಆಗಬಾರದು ಅಂತ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಅದು ಹಾಗೇ ನಡೆದು ಹೋಯ್ತು. ನಾನು ರಿಲೇಷನ್‌ಶಿಪ್‌ನಲ್ಲಿ ಇರಲಿಲ್ಲ ಅಂತೇನೂ ಅಲ್ಲ. ಅದು ಹಾಗೇ ನಡೆದುಕೊಂಡು ಹೋಯ್ತು. ನಾನು ಅದಾಗೇ ಆದರೆ ಆಗಲಿ ಅಂತ ಸುಮ್ಮನಿದ್ದೆ. ನಾನು ನನ್ನ ಕೆಲಸ ಮಾಡಿಕೊಂಡು ಇರುವುದರಲ್ಲಿ ತುಂಬಾನೇ ಖುಷಿಯಾಗಿದ್ದೆ. ಮದುವೆ ಮಾಡಿಕೊಂಡು ಮತ್ತೆ ಸಮಸ್ಯೆ ಆಗೋದು ಯಾಕೆ ಅಂತ ಹಾಯ್ ಆಗಿದ್ದೆ."
ಈಗ ಮದುವೆ ಆಗ್ಬೇಕಿತ್ತು ಅನಿಸುತ್ತಾ?
"ಈಗಲೂ ನನಗೆ ಯಾರ ಮೇಲಾದರೂ ಲವ್ ಆದರೆ, ಹೋಗಿ ಅವರನ್ನು ಮದುವೆ ಆಗುತ್ತೇನೆ. ವಯಸ್ಸು ಅಡ್ಡಿಯಾಗುವುದಿಲ್ಲ. ನಮ್ಮ ಅಪ್ಪ-ಅಮ್ಮನ ಆಲೋಚನೆ ಕೂಡ ಹಾಗೇ ಇದೆ. ನಾವು ಆರು ಜನ ಮಕ್ಕಳು. ನಾವು ಮನೆಯಲ್ಲಿ ಎಲ್ಲರೂ ಸ್ವತಂತ್ರರು ಎಂದು ಟ್ರೀಟ್ ಮಾಡುತ್ತಿದ್ದೆವು. ಆದರೆ, ನಮಗೆ ತಪ್ಪು-ಸರಿ ಏನು ಅನ್ನೋದನ್ನು ಹೇಳುತ್ತಿದ್ದರು. ಆದರೆ, ಯಾವುದನ್ನೂ ಹಿಡಿದಿಟ್ಟುಕೊಳ್ಳುತ್ತಿರಲಿಲ್ಲ." ಎಂದು ಹಿರಿಯ ನಟಿ ರೇಖಾ ರಾವ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











