ಮಂಡ್ಯ ರಮೇಶ್ ಅವರ 'ನಟನ'ದಿಂದ ಹೊರ ಬಂದ ನಟರು ಯಾರು ಗೊತ್ತೇ?
ಮಂಡ್ಯ ರಮೇಶ್ ಕೇವಲ ಕಲಾವಿದರಾಗಿ ಗುರುತಿಸಿಕೊಂಡಿಲ್ಲ. ಅವರು ಮೊದಲಿನಿಂದಲೂ ರಂಗಭೂಮಿ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡವರು. ಹೀಗಾಗಿ ಮೈಸೂರಿನಲ್ಲಿ ನಾಟಕಗಳನ್ನು ಇಷ್ಟಪಡುವವರಿಗೆ ತರಬೇತಿ ನೀಡುವುದಕ್ಕೆ 'ನಟನ' ಸಂಸ್ಥೆಯನ್ನು ಹುಟ್ಟಾಕಿದ್ದಾರೆ.
ಈ 'ನಟನ' ಸಂಸ್ಥೆಯಿಂದ ಹಲವು ಮಂದಿ ಕಲಾವಿದರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರ ಬಗ್ಗೆ, ನಟನ ಜೊತೆ ತಮ್ಮ ಜರ್ನಿ, ವಾಹಿನಿಗಳೊಂದಿಗೆ ತಮ್ಮ ಒಡನಾಟವನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

'ನಟನ' ಸಂಸ್ಥೆ ಶುರು ಮಾಡುವ ಆಲೋಚನೆ ಬಂದಿದ್ದು ಯಾಕೆ?
ಮಂಡ್ಯ ರಮೇಶ್: ನಾನು ನೀನಾಸಂ ಮತ್ತು ರಂಗಾಯಣದಲ್ಲಿ ಕಳೆದ ದೀರ್ಘಾವಧಿಯ ಅನುಭವ ಹಾಗೂ ಕರ್ನಾಟಕದಾದ್ಯಂತ ಗ್ರಾಮೀಣ ಭಾಗದ ಹಳ್ಳಿ ಹುಡುಗರಿಗಾಗಿ ನಡೆಸಿದ ರಂಗ ತರಬೇತಿ ಶಿಬಿರಗಳ ಸಾರವನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು ಎನ್ನುವ ಹಂಬಲದಿಂದ ಈ ಸಂಸ್ಥೆಯನ್ನು ಸ್ಥಾಪಿಸಿದೆ. ನನಗೆ ಇಂಗ್ಲಿಷ್ ಸರಿಯಾಗಿ ಬರದಿದ್ದರೂ ಸುಮಾರು 10-12 ದೇಶಗಳನ್ನು ಸುತ್ತಿ ಅಲ್ಲಿ ಪಾಠ ಮಾಡಿ ಬಂದಿದ್ದೇನೆ. ಆ ಎಲ್ಲಾ ಕಲಿಕೆಯನ್ನು ಯುವಕರಿಗೆ ಹಂಚಲು ಒಂದು ವೇದಿಕೆ ಬೇಕಿತ್ತು. ಹೀಗೆ ಮೈಸೂರಿನಲ್ಲಿ ನನ್ನ ಮನೆಯ ಮೇಲೆಯೇ ಪುಟ್ಟದಾಗಿ ಆರಂಭವಾದ 'ನಟನ' ಸಂಸ್ಥೆಯು ಇಂದು ಇಡೀ ರಾಷ್ಟ್ರದ ಗಮನ ಸೆಳೆದಿರುವ ಪ್ರಮುಖ ರಂಗಶಿಕ್ಷಣ ಕೇಂದ್ರವಾಗಿ ಬೆಳೆದು ನಿಂತಿದೆ.
ನಮ್ಮ ಸಂಸ್ಥೆಯು ನೀನಾಸಂನ ವೃತ್ತಿಪರತೆ, ರಂಗಾಯಣದ ಪ್ರಯೋಗಶೀಲತೆ ಮತ್ತು ಗ್ರಾಮೀಣ ರಂಗಭೂಮಿಯ ಚೈತನ್ಯವನ್ನು ಮೈಗೂಡಿಸಿಕೊಂಡಿದೆ. ಇಲ್ಲಿ ಕೇವಲ ಅಭಿನಯವನ್ನಷ್ಟೇ ಕಲಿಸದೆ, ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಮತ್ತು ಬದುಕಿನ ಶಿಸ್ತನ್ನು ಕಲಿಸಿಕೊಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ವಂಚನೆ ಅಥವಾ ಹಣದ ಅಮಿಷವಿಲ್ಲದೆ ಅತ್ಯಂತ ಅಚ್ಚುಕಟ್ಟಾಗಿ ತರಬೇತಿ ನೀಡಲಾಗುತ್ತದೆ. ಕನ್ನಡಿಗರು ನಮಗೆ ನೀಡಿದ ಪ್ರೀತಿಯ ಭಿಕ್ಷೆ ಮತ್ತು ದೊಡ್ಡ ಆಸ್ತಿಯಾಗಿರುವ ಈ ಸಂಸ್ಥೆಯ ಮೂಲಕ ಅನೇಕ ಶಿಷ್ಯರು ಇಂದು ಸಿನಿಮಾ ಹಾಗೂ ಕಿರುತೆರೆಯಲ್ಲಿ ದೊಡ್ಡ ಸಾಧನೆ ಮಾಡುತ್ತಿರುವುದು ನನಗೆ ಅತ್ಯಂತ ಸಾರ್ಥಕ ಭಾವ ನೀಡಿದೆ.
ನಿಮ್ಮ ಶಿಷ್ಯರು ಇಂದು ಸೀರಿಯಲ್‌ಗಳಲ್ಲಿ ಮಿಂಚುತ್ತಿರುವುದನ್ನು ಕಂಡು ಏನನ್ನಿಸುತ್ತೆ?
ಮಂಡ್ಯ ರಮೇಶ್: ನನ್ನ ಶಿಷ್ಯರು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಮಿಂಚುತ್ತಿರುವುದನ್ನು ಕಂಡರೆ ನನಗೆ ಸಿಕ್ಕಾಪಟ್ಟೆ ಹೆಮ್ಮೆಯಾಗುತ್ತದೆ. 'ಡೇರ್‌ಡೆವಿಲ್ ಮುಸ್ತಫಾ' ಚಿತ್ರದ ತಂಡ, 'ಭೀಮ' ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿದ ಗಿರಿಜಾ, ಗಾಯಕಿ ಅನನ್ಯಾ ಭಟ್ ಮತ್ತು 'ಜೀ ಕನ್ನಡ' ವಾಹಿನಿಯ ಹರ್ಷ ಅವರಂತಹ ಅಸಂಖ್ಯಾತ ಕಲಾವಿದರು ನಮ್ಮಲ್ಲಿ ತರಬೇತಿ ಪಡೆದಿದ್ದಾರೆ. ಸ್ವತಃ ನನ್ನ ಮನೆಯಲ್ಲಿರುವ ದಿಶಾ ರಮೇಶ್ ಹಾಗೂ 'ರಾಘವೇಂದ್ರ ಸ್ವಾಮಿಗಳು' ಸೀರಿಯಲ್‌ನಲ್ಲಿ ನಟಿಸುತ್ತಿರುವ ಚಾಮರಾಜನಗರದ ಹುಡುಗಿ ಕೂಡ ನಮ್ಮ ಸಂಸ್ಥೆಯ ಪ್ರತಿಭೆಗಳೇ. ಇತ್ತೀಚೆಗೆ ಬಂದ 'ತೀರ್ಥರೂಪ ತಂದೆಯವರಿಗೆ' ಚಿತ್ರದ ಹೀರೋ ಕೂಡ ನಮ್ಮ ನಟನ ಶಾಲೆಯವನೇ ಆಗಿದ್ದಾನೆ. ನಮ್ಮ ಸಂಸ್ಥೆ ಕೇವಲ ಹಣಕ್ಕಾಗಿ ಕೆಲಸ ಮಾಡದೆ, ಕಲಾವಿದರಿಗೆ ಶಿಸ್ತು, ಅಚ್ಚುಕಟ್ಟುತನ ಮತ್ತು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಸಿಕೊಡುತ್ತಿದೆ. ರಂಗಭೂಮಿಯ ಮೂಲಕ ಅನೇಕರಿಗೆ ಬದುಕಿನ ಹಾದಿ ತೋರಿಸಿಕೊಟ್ಟಿರುವುದು ನನಗೆ ದೊಡ್ಡ ಸಾರ್ಥಕತೆಯ ಭಾವ ಮೂಡಿಸಿದೆ.

'ನೀನಾದೆನಾ' ನಾಯಕಿ 'ನಟನ'ದಲ್ಲಿ ತರಬೇತಿ ಪಡೆದವರೇ ಅಲ್ವೇ?
ಮಂಡ್ಯ ರಮೇಶ್: 'ನೀನಾದೆನಾ' ಧಾರಾವಾಹಿಯ ನಾಯಕಿ ರಮಿಕಾ (ಖುಷಿ) ಕೂಡ ನಮ್ಮ ನಟನ ಸಂಸ್ಥೆಯ ಪ್ರತಿಭೆಯೇ. ಅವಳು ಬಾಲ್ಯದಿಂದಲೇ ನಮ್ಮಲ್ಲಿ ತರಬೇತಿ ಪಡೆದಿದ್ದಾಳೆ. ನಮ್ಮ ಸಂಸ್ಥೆಯಿಂದ ಕೇವಲ ಹೊಸಬರು ಮಾತ್ರವಲ್ಲ, ಇಂದು ಚಿತ್ರರಂಗದ ದಿಗ್ಗಜರಾಗಿರುವ ದರ್ಶನ್ ಅವರಂತಹ ನಟರು ಕೂಡ ನಮ್ಮಲ್ಲಿ ಕಲಿತು ಹೋದವರು. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿರುವ ಇಂತಹ ಅನೇಕ ಪ್ರತಿಭೆಗಳು ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ರಂಗಭೂಮಿ, ಸಿನಿಮಾ, ಸೀರಿಯಲ್ - ಈ ಮೂರರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದು?
ಮಂಡ್ಯ ರಮೇಶ್:ನನಗೆ ಸಿನಿಮಾ ಮತ್ತು ಸೀರಿಯಲ್ ಅನ್ನುವುದು ನನ್ನ ಎರಡು ಕಣ್ಣುಗಳಿದ್ದ ಹಾಗೆ. ನನ್ನ ಇಡೀ ಜಗತ್ತನ್ನು ನೋಡಲಿಕ್ಕೆ, ಬದುಕಲಿಕ್ಕೆ ಮತ್ತು ಹೊಸ ವಿಶೇಷವಾದದ್ದನ್ನು ತೋರಿಸಲಿಕ್ಕೆ ಇವೆರಡು ನನಗೆ ತುಂಬಾ ಸಹಾಯ ಮಾಡಿದ ಅದ್ಭುತವಾದ ಎರಡು ಕಣ್ಣುಗಳು. ಆದರೆ ನನ್ನ ಆತ್ಮ ಮತ್ತು ಉಸಿರು ರಂಗಭೂಮಿ. ಅದು ಇಲ್ಲದೆ ಹೋದರೆ ಕೆಲಸ ಮಾಡಲಿಕ್ಕೆ ಸಾಧ್ಯವೇ ಇಲ್ಲ. ನಾನು ಯಾವುದನ್ನೇ, ಏನನ್ನೇ ಬೇರೆ ತರ ನೋಡಬೇಕು ಅಂದರೂ ಅದನ್ನು ರಂಗಭೂಮಿಯ ದೃಷ್ಟಿಯಿಂದಲೇ ನೋಡುವ ಪ್ರಯತ್ನ ಮಾಡುತ್ತೇನೆ.
ಬಿಡುವಿಲ್ಲದ ಶೂಟಿಂಗ್ ನಡುವೆ ಆಕ್ಟಿಂಗ್ ಕ್ಲಾಸ್ ಹೇಗೆ ಮ್ಯಾನೇಜ್ ಮಾಡ್ತೀರಾ?
ಮಂಡ್ಯ ರಮೇಶ್: ಇವತ್ತಿನ ಉದಾಹರಣೆ ಹೇಳಬೇಕು ಅಂದರೆ, ಬೆಳಗ್ಗೆ 6:30ಕ್ಕೆ ಮೈಸೂರಿನಲ್ಲಿ ನಮ್ಮ ಸ್ಟೂಡೆಂಟ್ಸ್ಗೆ ಹೊಸ ನಾಟಕವೊಂದರ ರಿಹರ್ಸಲ್ ಮತ್ತು ಆಕ್ಟಿಂಗ್ ತರಬೇತಿ ಮಾಡಿಸಿ, ಕರೆಕ್ಟ್ ಆಗಿ 9 ಗಂಟೆಗೆ ಅಲ್ಲಿಂದ ಬಿಟ್ಟು ಇಲ್ಲಿಗೆ (ಬೆಂಗಳೂರಿಗೆ) ಬಂದು ಸೀರಿಯಲ್ ಶೂಟಿಂಗ್ನಲ್ಲಿ ಭಾಗವಹಿಸಿದ್ದೇನೆ. ನನಗೆ ಶೂಟಿಂಗ್ ಇದ್ದಾಗ ಮಾತ್ರ ನಾನು ಬೆಂಗಳೂರಿನಲ್ಲಿ ಇರುತ್ತೇನೆ, ಇಲ್ಲದಿದ್ದರೆ ತಕ್ಷಣ ಮೈಸೂರಿಗೆ ಹೊರಡುತ್ತೇನೆ. ಇದರಿಂದಾಗಿ ನನಗೆ ಅನೇಕ ಪ್ರೆಸ್ ಮೀಟ್ ಅಥವಾ ಕಲಾವಿದರ ಸಂಘದ ಮೀಟಿಂಗ್‌ಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ, ನಾನು ತುಂಬಾ ಉತ್ಸಾಹಿಯಾಗಿರುವುದರಿಂದ ಮತ್ತು ರಂಗಭೂಮಿಯನ್ನು ಅತಿಯಾಗಿ ಪ್ರೀತಿಸುವುದರಿಂದ ನನಗೆ ಈ ಕೆಲಸ ಕಷ್ಟ ಎಂದು ಅನಿಸುವುದಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಕೆಲಸಗಳನ್ನು ನಿಭಾಯಿಸಲು ಒಂದು ಭವ್ಯವಾದ ತಂಡವನ್ನು ನಾನು ರೆಡಿ ಮಾಡಿಕೊಂಡಿದ್ದೇನೆ. ಈಗ 'ರಜಾ ಮಜಾ' ಎಂಬ ದೊಡ್ಡ ಮಕ್ಕಳ ಶಿಬಿರ ಬರುತ್ತಿದೆ. ಅದರಲ್ಲಿ ರಾಜ್ಯದ ಅನೇಕ ಕವಿಗಳು, ಸಾಹಿತಿಗಳು ಮತ್ತು ಕಲಾವಿದರ ಮಕ್ಕಳು ಭಾಗವಹಿಸುತ್ತಿದ್ದಾರೆ. ನನಗೆ ಹೊಟ್ಟೆಪಾಡಿಗೆ ಸಿನಿಮಾ ಮತ್ತು ಟಿವಿ ಮೊದಲ ಆದ್ಯತೆಯಾದರೂ, ರಂಗಭೂಮಿ ಎಂಬುದು ನನ್ನ ಉಸಿರು ಮತ್ತು ಆತ್ಮವಿದ್ದಂತೆ.
ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ವಾಹಿನಿಗಳ ಜೊತೆಗಿನ ನಿಮ್ಮ ಪಯಣದ ಬಗ್ಗೆ ಹೇಳಿ
ಮಂಡ್ಯ ರಮೇಶ್: ಮೊದಲನೆಯದಾಗಿ ಕಲರ್ಸ್ ಕನ್ನಡದಲ್ಲಿ ಕೂಡ ಅನೇಕ ಧಾರಾವಾಹಿಗಳಲ್ಲಿ ನಾನು ಆಕ್ಟ್ ಮಾಡಿದ್ದೇನೆ. ಅಲ್ಲಿ 'ಮಜಾ ಟಾಕೀಸ್' ಅಂತ ಒಂದು ದೊಡ್ಡ ಹಿಟ್ ಪ್ರೋಗ್ರಾಂನಲ್ಲೇ ನಾನು ಮಾಡಿದ್ದೇನೆ. ಇನ್ನು ಜೀ ಕನ್ನಡದಲ್ಲಿ ಶ್ರುತಿ ನಾಯ್ಡು ಅವರ 'ಚಿ ಸೌ ಸಾವಿತ್ರಿ'ಯಲ್ಲಿ ಮೊದಲ ಬಾರಿಗೆ ನನ್ನನ್ನು ವಿಲನ್ ಆಗಿ ನೋಡಿದರು. ಆ ಸೀರಿಯಲ್ ಮತ್ತು ಆನಂತರದ ಎರಡು-ಮೂರು ಸೀರಿಯಲ್ಗಳಲ್ಲಿ ನಾನು ವಿಲನ್ ಆಗಿ ಮಾಡಿದ್ದಕ್ಕೆ ನನಗೆ 'ಬೆಸ್ಟ್ ವಿಲನ್' ಅಂತ ಸತತವಾಗಿ ಅವಾರ್ಡ್ ಬಂದಿದೆ, ಅದು ನನಗೆ ಸಂತೋಷ ತಂದಿದೆ. ಹಾಗೆಯೇ ಕಲರ್ಸ್ ಕನ್ನಡದ 'ಮುದ್ದೇಶ' ಮಾಡಿದಾಗ ಆ ವರ್ಷದ 'ಬೆಸ್ಟ್ ಕಾಮಿಡಿಯನ್' ಅಂತ ಅವಾರ್ಡ್ ಸಿಕ್ಕಿದೆ. ಇದರ ಜೊತೆಗೆ ಬೇರೆ ಬೇರೆ ಚಾನೆಲ್ಗಳಲ್ಲಿ ಮಾಡಿದ ಸಾಧನೆಗೆ ಸರ್ಕಾರದ 'ರಾಜ್ಯ ಪ್ರಶಸ್ತಿ' ಕೂಡ ನನಗೆ ಸಿಕ್ಕಿದೆ. ಕರ್ನಾಟಕದ ಯಾವುದೇ ಭಾಗ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿ ಕನ್ನಡಿಗರು ಇದ್ದರೂ ಅಲ್ಲಿಗೆ ಹೋದಾಗ 'ಮಂಡ್ಯ ರಮೇಶ್' ಅಂತ ಗುರುತಿಸಿ ಪ್ರೀತಿ ತೋರಿಸ್ತಾರೆ, ಮಾತಾಡಿಸ್ತಾರೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಇದಕ್ಕಿಂತ ದೊಡ್ಡ ಪ್ರೀತಿ ಅಥವಾ ನಿರೀಕ್ಷೆ ಇರಲು ಸಾಧ್ಯವಿಲ್ಲ. ರಂಗಭೂಮಿಗೆ ಸ್ವಲ್ಪ ಆರ್ಥಿಕ ಸಹಾಯ ಸಿಗಬಹುದು ಅಂತ ಮೊದಲು ನಿರೀಕ್ಷೆ ಇತ್ತು. ಆದರೆ, ಈಗ ನಾನು ನನ್ನ ಖುಷಿಗೆ ಮಾಡ್ತಿರೋದ್ರಿಂದ ಯಾವುದೇ ನಿರೀಕ್ಷೆಗಳಿಲ್ಲ.
ಪ್ರಬುದ್ಧ ಪಾತ್ರಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?
ಮಂಡ್ಯ ರಮೇಶ್: ನನಗೆ ಒಂದು ಪಾತ್ರ ಸವಾಲು ಒಡ್ಡುವಂತಹ ಪಾತ್ರಗಳೇ ಆಗಿರಬೇಕು. ಅದು ನನ್ನ ಒಳಗೆ ನನ್ನನ್ನು ಕೆರಳಿಸಿ, ಮತ್ತಷ್ಟು ಹೆಚ್ಚು ಶ್ರಮ ಕೊಟ್ಟು, ನನ್ನನ್ನು ಸುಸ್ತು ಮಾಡಿ, ನನಗೆ ಅವಮಾನಿಸಿ ಆಮೇಲೆ ಅದು ಸನ್ಮಾನ ಸಿಗುವ ಹಾಗೆ ಮಾಡಬೇಕು. ತಕ್ಷಣವೇ ಸಿಗುವ ಸುಖ ಒಳ್ಳೆಯದಲ್ಲ ಎಂಬುದು ನನ್ನ ನಂಬಿಕೆ. ಸೋಲು ಮತ್ತು ಅವಮಾನಗಳು ಮನುಷ್ಯನನ್ನು ರೂಪಿಸುತ್ತವೆ ಎಂಬ ಬಲವಾದ ನಂಬಿಕೆ ನನಗಿದೆ.
ಇಂದಿನ ಯುವ ನಟರಿಗೆ ನೀವು ನೀಡುವ ಸಿಂಪಲ್ ಸಲಹೆ ಏನು?
ಮಂಡ್ಯ ರಮೇಶ್: ಒಂದು ಅಪಾರವಾದಂತಹ ಇಚ್ಛಾಶಕ್ತಿಯನ್ನು ಅವರು ರೂಪಿಸಿಕೊಳ್ಳಬೇಕು. ನಾನು ಮಾಡೇ ಮಾಡ್ತೀನಿ ಅನ್ನೋ ಹಠ. ಎರಡನೆಯದು ಕಾಯಕ ಶ್ರದ್ಧೆ. ಇಚ್ಛಾಶಕ್ತಿ ಮತ್ತು ಕಾಯಕ ಶ್ರದ್ಧೆ ತುಂಬಾ ಅಮೂಲ್ಯ. ಮೂರನೆಯದು, ನಮ್ಮ ಈ ಫೀಲ್ಡ್‌ಗೆ ಬರ್ತೀವಿ ಯುವ ನಟ-ನಟಿಯರು ಅಂತ ಅಂದ್ರೆ ಅಪಾರವಾದ ತಾಳ್ಮೆ ಒಂದನ್ನು ಇಟ್ಟುಕೊಳ್ಳಬೇಕು. ಅಭಿನಯನೇ ಕಲಿತೀನಿ ಅಂತ ಬಂದವರಿಗೆ ಆ ಹೆಸರಲ್ಲೇ ಇರೋ ಹಾಗೆ 'ಅಭಿನಯ' ಅಂತ ಇದೆಯಲ್ಲ, ಸ್ವಲ್ಪ ನಯವಾಗಿರಬೇಕು. ವಿನಯ ಸೇರಿಕೊಂಡರೆ ಇನ್ನೂ ಒಳ್ಳೆಯದು. ವಿನಯ ಇಲ್ಲದಿದ್ದರೆ ವಿದ್ಯೆ ಹತ್ತುವುದಿಲ್ಲ ಅನ್ನೋದು ನನ್ನದೊಂದು ನಂಬಿಕೆ.

ದಿವಂಗತ ಅಪರ್ಣಾ ಅವರ ಜೊತೆ ಕೆಲಸ ಮಾಡಿದ ಆ ದಿನಗಳ ಬಗ್ಗೆ ಹೇಳಿ
ಮಂಡ್ಯ ರಮೇಶ್: 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಅಪರ್ಣಾ ಅವರು ಆರೋಗ್ಯದ ಏರುಪೇರಿನಿಂದಾಗಿ ಬಹಳ ಸುಸ್ತಾಗಿದ್ದರು. ಮೊದಲು ಕೆಲವು ದಿನಗಳ ವಿಶ್ರಾಂತಿ ಎಂದು ಹೋದವರು, ಅನಾರೋಗ್ಯದ ಕಾರಣದಿಂದಾಗಿ ಸುಮಾರು ಏಳು ತಿಂಗಳುಗಳ ಕಾಲ ಚಿತ್ರೀಕರಣಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅವರ ಸಾವು ಅತ್ಯಂತ ಆಕಸ್ಮಿಕ ಮತ್ತು ದಿಢೀರ್ ಎಂದು ಸಂಭವಿಸಿತು. ಇದು ನನಗೆ ದೊಡ್ಡ ಆಘಾತ ತಂದಿದೆ. ಅಪರ್ಣಾ ಅವರು ತಮ್ಮ ಜೀವನದ ಕೊನೆಯ ಪಾತ್ರ ಮತ್ತು ಕೊನೆಯ ಕ್ಷಣದ ಅಭಿನಯವನ್ನು ನನ್ನ ಜೊತೆಯಲ್ಲೇ ಮಾಡಿದರು ಎನ್ನುವುದು ನನಗೆ ಇಂದಿಗೂ ಕಾಡುವ ನೋವಿನ ಸಂಗತಿ.
ಅಪರ್ಣಾ ಅವರು ಕೇವಲ ಶ್ರೇಷ್ಠ ನಟಿಯಷ್ಟೇ ಅಲ್ಲದೆ, ಅತ್ಯಂತ ಸುಮನೋಹರ ವ್ಯಕ್ತಿತ್ವ, ಸಜ್ಜನಿಕೆ ಮತ್ತು ಸೌಹಾರ್ದತೆಯ ಸಂಗಮವಾಗಿದ್ದರು. ಅವರು ಒಬ್ಬ ಉತ್ತಮ ಲೇಖಕಿಯೂ ಆಗಿದ್ದು, ನನ್ನ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರಿಕೆಯೊಂದಕ್ಕೆ ಅದ್ಭುತವಾದ ಲೇಖನವನ್ನು ಬರೆದಿದ್ದರು. ಅವರ ಪತಿ ಹೇಳುವಂತೆ, ಅಪರ್ಣಾ ಅವರು ಮನೆಯಲ್ಲಿಯೂ ಸದಾ ನನ್ನ ಕೆಲಸದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಇಂತಹ ಒಬ್ಬ ಶ್ರೇಷ್ಠ ಪ್ರತಿಭೆಯೊಂದಿಗೆ ಕೆಲಸ ಮಾಡಿದ್ದು ನನ್ನ ಜೀವನದ ಸೌಭಾಗ್ಯ ಮತ್ತು ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ.
ನಿಮ್ಮ ಮುಂದಿನ ಬಿಗ್ ಪ್ರಾಜೆಕ್ಟ್ ಯಾವುದು?
ಮಂಡ್ಯ ರಮೇಶ್: ಸಿನಿಮಾ, ಟಿವಿಗಳಲ್ಲಿ ಯಾರೇ ಯಾವಾಗಲೇ ಕರೆದು ಯಾವುದೇ ತರಹದ ಒಂದು ಒಳ್ಳೆಯ ಮಹತ್ವಪೂರ್ಣ ಪಾತ್ರ ಕೊಟ್ಟರೆ ಅದನ್ನ ಶ್ರದ್ಧೆಯಿಂದ ಮಾಡೋದು ನನ್ನ ನಿಜವಾದ ಪ್ರಾಜೆಕ್ಟ್ಗಳಲ್ಲಿ ಒಂದು. ಅದರ ಜೊತೇಲೇ ನನಗೆ ತುಂಬಾ ದೊಡ್ಡ ಆಸೆ ಇರೋದು ಅಂದ್ರೆ ರಂಗಭೂಮಿಯ ಅನೇಕ ದೊಡ್ಡ ದೊಡ್ಡ ಪ್ರಯೋಗಗಳನ್ನ ಹಳ್ಳಿಗಳಿಗೆ ತಗೊಂಡು ಹೋಗೋಕೆ ಬೇಕಾದಂತಹ ದೊಡ್ಡ ಆರ್ಥಿಕ ಶಕ್ತಿ ನನಗೆ ರೂಪಿತವಾಗಲಿ ಅಂತ. ಸಿಕ್ಕಾಪಟ್ಟೆ ದುಡ್ಡು ಸಿಗಬೇಕು, ಒಂದು ಐದತ್ತು ಕೋಟಿ ಅಥವಾ ನೂರು ಕೋಟಿ ಅಷ್ಟೆಲ್ಲಾ ದುಡ್ಡು ಸಿಕ್ಕರೆ ಒಂದು ಸ್ಟೇಜ್ ನನ್ನ ಜೊತೆಯಲ್ಲಿ ಬಂದು ನಿರ್ಮಾಣ ಆಗಿ ಹಳ್ಳಿಗಳಿಗೆ ಹೋಗಿ ಅಲ್ಲಿ ಅದ್ಭುತವಾದ ಪ್ರೊಡಕ್ಷನ್ಸ್ ತೋರಿಸಬೇಕು ಅನ್ನೋ ಹಂಬಲ ಇದೆ. ಯಾಕೆಂದರೆ, ಹಳ್ಳಿಯ ಜನರಿಗೆ ಮತ್ತು ಮಕ್ಕಳಿಗೆ ಇಲ್ಲಿಗೆ ಬರೋದು ಕಷ್ಟ. ಬೆಂಗಳೂರಿನಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿ ನಾಟಕ ನೋಡೋದು ಕಷ್ಟ ಅಂತಾರೆ. ಅಂತಹ ಕಡೆ ಅವರಿದ್ದಲ್ಲಿಗೆ ಹೋಗಿ ನಾಟಕ ತೋರಿಸುವ ಶಕ್ತಿ ಮತ್ತು ಅಂತಹ ದೊಡ್ಡ ಪ್ರಾಜೆಕ್ಟ್ ನನಗೆ ಸಿಗಲಿ ಅನ್ನೋ ಆಸೆ ಇದೆ.
ನಿಮ್ಮ ಈ ಜರ್ನಿಗೆ ಮನೆಯವರಿಂದ ಸಿಗುತ್ತಿರುವ ಪ್ರೋತ್ಸಾಹ ಹೇಗಿದೆ?
ಮಂಡ್ಯ ರಮೇಶ್: ನನ್ನನ್ನು ಅಪ್ಪ-ಅಮ್ಮ ತುಂಬಾ ಪ್ರೀತಿ ಮಾಡಿ ಬೆಳೆಸಿದರು. ಅಕ್ಕ-ಅಣ್ಣ ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದರು. ನನ್ನ ಅತ್ತೆ-ಮಾವ ಸೇರಿದಂತೆ ಎಲ್ಲರೂ ಚೆನ್ನಾಗಿದ್ದರು. ಇನ್ನು ನನ್ನ ಹೆಂಡತಿ ಮತ್ತು ಮಕ್ಕಳು ಅಂತೂ ನನ್ನ ಜೊತೆಯಲ್ಲೇ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ಹೆಂಡತಿ ಸರೋಜಾ ಹೆಗಡೆ ಅಂತ, ಆಕೆ ಕಳೆದ 30 ವರ್ಷಗಳಿಂದ ರಂಗಾಯಣದಲ್ಲೇ ಕೆಲಸ ಮಾಡುತ್ತಿದ್ದಾಳೆ. ನನ್ನ ಮಗಳು ದಿಶಾ ರಮೇಶ್ ಈಗ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದಾಳೆ. ಆಕೆ ವೇದಿಕೆಯ ಮೇಲೆ ಹಾಡುತ್ತಾ, ಡ್ಯಾನ್ಸ್ ಮಾಡುತ್ತಾ ನಟಿಸುತ್ತಾಳೆ. ಅದು ಎಲ್ಲರಿಗೂ ಸಾಧ್ಯವಾಗದ ಕಷ್ಟದ ಕೆಲಸ. ಅವಳ ಬಗ್ಗೆ ನನಗೆ ಅಪಾರವಾದ ಪ್ರೀತಿ ಮತ್ತು ಗೌರವ ಇದೆ. ನನ್ನ ಅಳಿಯ ಕೂಡ ನಟನಾಗಿದ್ದಾನೆ. ಮೇಘ ಸಮೀರ್ ಅವರಂತಹ ಒಳ್ಳೆಯ ನಟರು ನನ್ನ ಸುತ್ತ ಇದ್ದಾರೆ ಅನ್ನೋದೇ ನನಗೆ ದೊಡ್ಡ ನಂಬಿಕೆ ಮತ್ತು ಸಂತೋಷ.
ಕೊನೆಯದಾಗಿ ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?
ಮಂಡ್ಯ ರಮೇಶ್: ನಾನು ಆ ಪಾತ್ರ ಮಾಡ್ತಾ ಇದ್ದೀನಿ, ನೀವು ಪ್ರೀತಿ ಮಾಡ್ತಾ ಇದ್ದೀರಿ, ತುಂಬಾ ದೊಡ್ಡ ಸಂತೋಷ. ಆದರೆ ಆ ಪಾತ್ರವೇ ಫೈನಲ್, ನಾನು ಆ ಪಾತ್ರದ ಹಾಗೆಯೇ ಬದುಕಬೇಕು, ಹಂಗೆ ಇದ್ದುಬಿಡಬೇಕು ಅಂತ ಆಜ್ಞಾಪನೆ ಮಾಡದೇನೆ, ಇವನು ಎಲ್ಲರ ಹಾಗೆ ಬದುಕೋ ಒಂದು ಪಾತ್ರ, ನಮ್ಮ ಹಾಗೆಯೇ ಒಬ್ಬ ಮನುಷ್ಯ ಅಂತ ನಂಬಿ. ನಿಮ್ಮ ಪ್ರೀತಿ ಮಾಡುವ ಗುಣ ಸೆಲೆಬ್ರಿಟಿಗಳು ಅಂತ ಹೇಳಿಸಿಕೊಳ್ಳೋರ ಹತ್ತಿರ ಅತಿರೇಕದ ಅಂಚಿಗೆ ಹೋಗಿ ನಿಂತುಕೊಳ್ಳೋದ್ರಿಂದ ಅಪಾಯಗಳು ಕೂಡ ಆಗಬಹುದು. ಅದಕ್ಕಾಗಿ ನಿಮ್ಮ ಪ್ರೀತಿ, ವಿಶ್ವಾಸ, ಹಾರೈಕೆ ಬೇಕು, ಆದರೆ ಅದು ಅತಿರೇಕಕ್ಕೆ ಹೋಗಿ ಆಜ್ಞಾಪನೆ ತರಹ ಆಗಬಾರದು ಅನ್ನೋದು ನನ್ನ ಮನವಿ.
ನಾನು ಇವತ್ತು ಏನಾದರೂ ಬದುಕಿದ್ದೀನಿ, ಏನಾದರೂ ಇಲ್ಲಿ ಮಾಡ್ತಾ ಇದ್ದೀನಿ, ಯಶಸ್ವಿಯಾಗಿದ್ದೀನಿ ಅಂದ್ರೆ ಅದಕ್ಕೆ ನಿಜವಾದ ಕಾರಣ ಒಂದೇ, ಅದು ಕನ್ನಡ, ಕನ್ನಡ, ಕನ್ನಡ. ಕನ್ನಡದಿಂದಲೇ ನನಗೆ ಎಲ್ಲವೂ ಸಿಕ್ಕಿರೋದು. ದಯವಿಟ್ಟು ಹೆಚ್ಚು ಜನ ರಂಗಭೂಮಿಗೆ ಬನ್ನಿ, ನಿಮ್ಮ ಮಕ್ಕಳನ್ನು ರಂಗಭೂಮಿಗೆ ಸೇರಿಸಿ. ನಾಟಕಗಳನ್ನು ಹೆಚ್ಚು ಹೆಚ್ಚು ನೋಡೋದ್ರಿಂದ ಪ್ರಜ್ಞೆ ಮತ್ತು ಸಂವೇದನೆ ಜಾಸ್ತಿ ಆಗ್ತದೆ. ಹಾಗಾಗಿ ರಂಗ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತಾಗಲಿ ಅಂತ ನಾನು ಆಶಿಸುತ್ತೇನೆ.


Click it and Unblock the Notifications











