ಓದಿದ್ದು ಇಂಜಿನಿಯರಿಂಗ್.. ಸೆಳೆದಿದ್ದು ಕಿರುತೆರೆ; 'ಫಿಲ್ಮಿಬೀಟ್ ಜೊತೆ ನಟ ಶಶಾಂಕ್ ಕಥೆ
ಕನ್ನಡ ಕಿರುತೆರೆಯಲ್ಲೀಗ ಯುವ ಪ್ರತಿಭೆಗಳದ್ದೇ ಕಾರುಬಾರು. ಧಾರಾವಾಹಿಗಳಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇಂತಹವರಲ್ಲಿ ಗಮನ ಸೆಳೆಯುತ್ತಿರುವವರು ಶಶಾಂಕ್. ಈಗ ಕನ್ನಡದ ಎರಡು ಪ್ರಮುಖ ಮನರಂಜನಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ'ಯಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶಶಾಂಕ್ ಮೂಲತ: ಸಾಫ್ಟ್‌ವೇರ್ ಇಂಜಿನಿಯರ್. ಕೆಲವು ದಿನಗಳು ಕೆಲಸ ಮಾಡಿದ ಬಳಿಕ ಅವರಿಗೆ ಇದು ನನ್ನ ಕ್ಷೇತ್ರ ಅಲ್ಲ ಅಂತ ಅನಿಸಿತ್ತು. ಹೀಗಾಗಿ ನಟನೆಯತ್ತ ಹೊರಳಿದರು. ಧಾರಾವಾಹಿಗಳಲ್ಲಿ ನಟಿಸುವುದಕ್ಕೂ ಮುನ್ನ ನಟನೆಗೆ ತರಬೇತಿ ಪಡೆದುಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಲೈಫ್ ಸ್ಟೋರಿಯನ್ನು ಶಾರ್ಟ್ ಸ್ವೀಟ್ ಆಗಿ ತೆರೆದಿಟ್ಟಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ಶಶಾಂಕ್ ನೀವು ಎಲ್ಲಿಯವರು?
"ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ನನ್ನ ಅಪ್ಪ-ಅಮ್ಮ ಕೂಡ ಬೆಂಗಳೂರಿನವರೇ. ಏನೂ ಇಲ್ಲದೆ ಇರೋದ್ರಿಂದ ಎಲ್ಲಾ ಇರೋ ತನಕ ಬೆಂಗಳೂರನ್ನು ನೋಡಿದ್ದೇನೆ."
ನಟನಾಗಬೇಕು ಅಂತ ಅನಿಸಿದ್ದು ಯಾವಾಗ?
"ನಾನು 6ನೇ ತರಗತಿಯಲ್ಲಿ ಇರುವಾಗಲೇ ನಾನು ಆಕ್ಟರ್ ಆಗಬೇಕು ಅನ್ನೋ ಆಸೆ ಶುರುವಾಗಿತ್ತು. ನಾನು ಕಾಲೇಜ್‌ನಲ್ಲಿ ಇರುವಾಗ ಡ್ಯಾನ್ಸ್ ಎಲ್ಲಾ ಮಾಡುತ್ತಿದ್ದೆ. ಆದರೆ, ನನಗೆ ನಟನೆ ಕಡೆಗೆ ಆಸಕ್ತಿಯಿತ್ತು. ಎಲ್ಲೂ ಭಾಗವಹಿಸಿರಲಿಲ್ಲ. ಕೊನೆಗೆ ನಾನು ಇಂಜಿನಿಯರಿಂದ ಸೇರಿಕೊಂಡಾಗ ನನಗೆ ಅನಿಸಿತು. ಈ ಕೆಲಸ ನನಗಲ್ಲ. ಇದನ್ನೆಲ್ಲ ಬಿಟ್ಟು ಆಕ್ಟರ್ ಆಗಬೇಕು ಅಂತ ಆಗ ಅನಿಸಿತು. ಸ್ಟೇಜ್ ಅನ್ನೇ ಜಗತ್ತು ಮಾಡಿಕೊಡಿಕೊಳ್ಳಬೇಕು ಅಂತ ಅನಿಸಿತು"
ಮೊದಲ ಧಾರಾವಾಹಿ ಸಿಕ್ಕಿದ್ದೇಗೆ?
"ಲೈಮ್ ಲೈಟ್ ಅಕಾಡೆಮಿ ಅಂತ ಇದೆ. ಸಿಲ್ಲಿ-ಲಲ್ಲಿಯಲ್ಲಿ ನಟನೆ ಮಾಡಿರುವ ರೂಪಾ ಪ್ರಭಾಕರ್, ಪ್ರಶಾಂತ್, ಸುನೇತ್ರಾ ಪಂಡಿತ್ ಅವರ ಆಕ್ಟಿಂಗ್ ಇನ್‌ಸ್ಟಿಟ್ಯೂಟ್ ಅದು. 2018ರಲ್ಲಿ ಅಲ್ಲಿಗೆ ಸೇರಿಕೊಂಡೆ. ಒಂದೂವರೆ ಎರಡು ತಿಂಗಳು ಬೇಸಿಕ್ ಕೋರ್ಸ್ ಮಾಡಿದೆ. ಕೋರ್ಸ್ ಮುಗಿದ ಮೇಲೆ ಎಲ್ಲೂ ಆಯ್ಕೆ ಆಗುತ್ತಿರಲಿಲ್ಲ. ಬಿಡಬಾರದು ಅಂತ ಕಂಟಿನ್ಯೂ ಮಾಡಿಕೊಂಡು ಬಂದೆ. 2021ರಲ್ಲಿ ವ್ಯೋಮಾ ಆಕ್ಟರ್ಸ್ ಅಕಾಡೆಮಿ ಅಂತ ಅಲ್ಲಿ ಸೇರಿಕೊಂಡೆ. ಮೂರು ತಿಂಗಳು ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿಕೊಂಡೆ. ಅಲ್ಲಿ ನನಗೆ ಮೊದಲ ಪ್ರಾಜೆಕ್ಟ್ ಸಿಕ್ಕಿತು. ಅಲ್ಲಿ ನನಗೆ ಹೆಸರುವಾಸಿ ಬರಹಗಾರರು ಶರತ್ ಪರ್ವತ್ ವಾಣಿ ಪರಿಚಯ ಆಯ್ತು. ಅವರು ನನಗೆ ಮೊದಲು ಯುಗಾಂತರ ಅನ್ನೋ ಒಂದು ಸೀರಿಯಲ್‌ಗೆ ಸೇತುರಾಂ ಸರ್ ಜೊತೆ ಕನೆಕ್ಟ್ ಮಾಡಿ ಕೊಟ್ಟರು. ಹಾಗೇ ಶುರುವಾಯ್ತು"

'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಎಂಟ್ರಿ ಹೇಗಾಯ್ತು?
"ಯುಗಾಂತರ ಸೀರಿಯಲ್ ಬರುತ್ತಿದ್ದಂತೆ ಸಿರಿ ಕನ್ನಡದಲ್ಲಿಯೇ ಇನ್ನೊಂದು ಪ್ರಾಜೆಕ್ಟ್ ಸಿಕ್ಕಿತು. ಅದು ಅಮೃತ ಘಳಿಗೆ. ಅದು ಐದರಿಂದ ಆರು ತಿಂಗಳು ನಡೀತು. ಅದಾದ್ಮೇಲೆ ಮುಂದೇನು ಅಂತ ಯೋಚನೆ ಮಾಡುತ್ತಿದ್ದೆ. ಆಗ 2023 ಮೇನಲ್ಲಿ ನನಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಿಂದ ಕರೆ ಬಂತು. ಈ ಸೀರಿಯಲ್‌ಗೆ ಕಾಲ್ ಬಂದಾಗ ನಾನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆನೆ ಆಡಿಷನ್ ಕೊಟ್ಟೆ. ಅವರಿಗೆ ನನ್ನ ಲುಕ್ ಮ್ಯಾಚ್ ಆಗುತ್ತಿತ್ತು. ಅಲ್ಲಿಂದ ಮುಖ್ಯ ವಾಹಿನಿಗೆ ಬಂದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಚಿನ್ ಪಾತ್ರ ನಡೆಯುತ್ತಿದೆ."
'ನಿನ್ನ ಜೊತೆ ನನ್ನ ಕಥೆ' ಬಗ್ಗೆ ಹೇಳಿ
"ಆಗಸ್ಟ್ ತಿಂಗಳಲ್ಲಿ ನನಗೆ ನಿನ್ನ ಜೊತೆ ನನ್ನ ಕಥೆ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದಿತ್ತು. ಹೀರೋ ತಮ್ಮನ ಪಾತ್ರ ನೋಡುತ್ತಿದ್ದೇವೆ ಎಂದು ಹೇಳಿದ್ದರು. ಈ ಸೀರಿಯಲ್‌ಗೆ ಬಂದು ಆಡಿಷನ್ ಕೊಟ್ಟೆ. ಅವರಿಗೂ ನನ್ನ ಲುಕ್ ಟೆಸ್ಟ್ ಇಷ್ಟ ಆಯ್ತು. ನನಗೆ ಈ ಕ್ಯಾರೆಕ್ಟರ್ ತುಂಬಾನೇ ಇಷ್ಟ ಆಯ್ತು. ಈಗ ನಿನ್ನ ಜೊತೆ ನನ್ನ ಕಥೆ ನಡೆಯುತ್ತಿದೆ."

ನಿಮ್ಮ ಪಾತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
"ನಾನು ಎಲ್ಲೇ ಹೋದರೂ ನಿನ್ನೆ ಜೊತೆ ನನ್ನ ಕಥೆ ಸೀರಿಯಲ್‌ನಲ್ಲಿ ನಿನ್ನ ಪಾತ್ರ ತುಂಬಾನೇ ಎನೆರ್ಜೆಟಿಕ್ ಆಗಿದೆ ಅಂತ ಹೇಳುತ್ತಾರೆ. ನಚಿಕೇತ್ ಪಾತ್ರ ಹೇಗೆ ಅಂದರೆ, ಅವನು ಎಲ್ಲರನ್ನೂ ನಗಿಸುತ್ತಿರುತ್ತಾನೆ. ಎಲ್ಲರಿಗೂ ಒಂದು ಪಾಸಿಟಿವಿಟಿ ತುಂಬುತ್ತಿರುತ್ತಾನೆ. ಅದು ಜನರಿಗೆ ಅರ್ಥ ಆಗುತ್ತಿದೆ. ಮನೆಯಲ್ಲಿ ತುಂಬಾನೇ ನೆಗೆಟಿವ್ ಕ್ಯಾರೆಕ್ಟರ್ ಇವೆ. ಇದು ಪಾಸಿಟಿವ್ ಪಾತ್ರ ಆಗಿರುವುದರಿಂದ ತುಂಬಾನೇ ಇಷ್ಟ ಪಟ್ಟಿದ್ದಾರೆ. ನೀವು ಸೀನ್‌ಗೆ ಬರೋದ್ರಿಂದ ಎನರ್ಜಿ ಬಂದಿದೆ ಅಂತಾರೆ. ಇದು ತುಂಬಾನೇ ಖುಷಿಯಾಗುತ್ತೆ"
ನಿಮ್ಮ ಮುಂದಿನ ಗುರಿಯೇನು?
"ಈ ಇಂಡಸ್ಟ್ರಿಗೆ ಬಂದಿದ್ದೇ ಸ್ಟಾರ್ ಆಗಬೇಕು ಅಂತ. ಸೀರಿಯಲ್‌ನಲ್ಲಿ ನನ್ನನ್ನು ಗುರುತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ಆಗಿ, ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಸರನ್ನು ದೊಡ್ಡದಾಗಿ ಮಾಡಿ, ಕನ್ನಡಕ್ಕೆ ಸೀಮಿತಗೊಳಿಸದೆ ಹಾಲಿವುಡ್, ಬಾಲಿವುಡ್‌ನಲ್ಲೂ ನಟನೆ ಮಾಡಬೇಕು ಅನ್ನೋದು ನನ್ನ ಆಸೆ." ಎಂದು ನಿನ್ನ ಜೊತೆ ನನ್ನ ಕಥೆ ಧಾರಾವಾಹಿ ಶಶಾಂಕ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.


Click it and Unblock the Notifications











