ಸೀರಿಯಲ್‌ನಲ್ಲಿ ಅತ್ತೆ.. ರಿಯಲ್ ಲೈಫ್‌ನಲ್ಲಿ ಸೊಸೆ; ರೈತನ ಮಗಳು ಕಿರುತೆರೆಯಲ್ಲಿ ಮಿಂಚಿದ್ದೇಗೆ?
ಸೀರಿಯಲ್ ಅಂದ್ಮೇಲೆ ಅತ್ತೆ-ಸೊಸೆ ಜಗಳ ಇರಲೇಬೇಕು. ಇವರಿಬ್ಬರ ಕಿತ್ತಾಟ, ಮುನಿಸು ಇಲ್ಲದ ಕನ್ನಡದ ಧಾರಾವಾಹಿಗಳನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಆದರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಇದೆಲ್ಲದಕ್ಕೂ ತದ್ಭಿರುದ್ಧ. ಇಲ್ಲಿ ಅತ್ತೆ ಸೊಸೆಯ ಸಂಬಂಧ ಕಂಡು ಕಿರಿತೆರೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ತೆ ಸೊಸೆ ಅಂತ ಹೀಗಿರಬೇಕು ಅಂತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಅತ್ತೆ ಪಾತ್ರದಲ್ಲಿ ನಟಿಸುತ್ತಿರೋದು ಶೀಲಾ. ಕಳೆದ 15 ವರ್ಷಗಳಿಂದ 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಶೀಲಾ 8 ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ 'ಬೃಂದಾವನ' ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಆದರೆ, ಅದು ಒಂದು ವರ್ಷಕ್ಕೆ ನಿಂತು ಹೋಯ್ತು. ಇದೇ ಸಮಯದಲ್ಲಿ 'ನಿನ್ನ ಜೊತೆ ನನ್ನ ಕಥೆ'ಯಲ್ಲಿ ಅತ್ತೆ ಪಾತ್ರದಲ್ಲಿ ನಟಿಸುವುದಕ್ಕೆ ಆಫರ್ ಬಂದಿದೆ. ಹಳ್ಳಿ ಹುಡುಗಿ ಅಚಾನಕ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟು ಮಿಂಚಿದ ಕತೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಶೀಲಾ ತಮ್ಮ ಜರ್ನಿ ಹಾಗೂ ಬದುಕಿನ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ನಿಮ್ಮ ಊರು? ನಟನೆಗೆ ಎಂಟ್ರಿ ಹೇಗೆ?
"ನನ್ನ ಹೆಸರು ಶೀಲಾ. ನಾನು ಒಬ್ಬ ಸಾಮಾನ್ಯ ರೈತನ ಮಗಳು. ನಾನು ಮೂಲತ: ಹಾಸನದವಳು. ಯಾರದ್ದೇ ಸಪೋರ್ಟ್ ಇಲ್ಲಿದೆ ಇಲ್ಲಿವರೆಗೆ ಬಂದಿದ್ದೇನೆ. ನನ್ನ 18ನೇ ಬರ್ತ್‌ಡೇಯನ್ನು ಧಾರಾವಾಹಿ ಸೆಟ್ಟಿನಲ್ಲಿ ಆಚರಣೆ ಮಾಡಿಕೊಂಡೆ. ನನ್ನ ಫ್ಯಾಮಿಲಿಯಲ್ಲಿ, ನನಗೆ ಗೊತ್ತಿರೋರಲ್ಲಿ ಯಾವುದೇ ಕಲಾವಿದರು ಇಲ್ಲ. ನನಗೆ ಯಾವುದೇ ಸಪೋಟರ್ಸ್ ಇಲ್ಲ. ಯಾವುದೇ ಥಿಯೇಟರ್‌ನಿಂದ ಬಂದವಳಲ್ಲ. ಅಚಾನಕ್ ಆಗಿ ಇಂಡಸ್ಟ್ರಿಗೆ ಬಂದೆ. ಆದರೆ, ನನಗೆ ನಟನೆ ಮಾಡಬೇಕು ಅನ್ನೋ ಒಲವು ಅಂತೂ ಇತ್ತು."
ನಟನೆ ಬಗ್ಗೆ ಆಸಕ್ತಿ ಬೆಳೆದಿದ್ದೇಗೆ?
"ಹತ್ತು ವರ್ಷದ ಹಿಂದೆ ನನ್ನನ್ನು ನೋಡಿದರೆ ಸೇಮ್ ರಕ್ಷಿತಾ ಅವರಂತೆ ಇದ್ದೆ. ಹಿಂದೆಲ್ಲ ಅವರ ಸಿನಿಮಾಗಳು ಎಷ್ಟು ಹಿಟ್ ಆಗುತ್ತಿತ್ತು ಅಂತ ಗೊತ್ತಿದೆ. ಎಲ್ಲರ ಬಾಯಿಯಲ್ಲಿಯೂ ರಕ್ಷಿತಾ ರಕ್ಷಿತಾ ಅಂತ ಬರುತ್ತಿತ್ತು. ಕಾಲೇಜ್ ಡೇಸ್‌ನಲ್ಲಿ ಎಲ್ಲರೂ ನೀನು ಅವರ ಹಾಗೇನೆ ಇದ್ದೀಯಾ. ನೀವು ಆಕ್ಟ್ ಮಾಡು ಅಂತ ಹೇಳುತ್ತಿದ್ದರು. ನಾನು ಆಕ್ಟ್ ಮಾಡಬಹುದಾ? ನಾನು ಹಾಗೇ ಕಾಣಿಸಬಹುದಾ? ಅಂತ ಅನಿಸಿತ್ತು. ಹಾಗೆ ಆಸಕ್ತಿ ಬೆಳೆದಿತ್ತು."

ಅವಕಾಶ ಸಿಕ್ಕಿದ್ದು ಹೇಗೆ?
"ನಾನು ಪಿಯುಸಿ ಸೈನ್ಸ್ ಮುಗಿಸಿ ಬೆಂಗಳೂರಿಗೆ ಓದುವುದಕ್ಕೆ ಬಂದೆ. ಆಗ ನಾನು ನಮ್ಮ ಅಣ್ಣ ಹಾಗೂ ಅಕ್ಕನ ರೂಮ್‌ನಲ್ಲಿ ಇದ್ದೆವು. ಆಗ ಯಾರೋ ಗೊತ್ತಿರೋರು ನಮ್ಮ ಅಣ್ಣನನ್ನು ಕೇಳಿ. ನಮ್ಮ ಅಣ್ಣ ನನ್ನನ್ನು ಕೇಳಿ. ನಾನು ಓಕೆ ಅಂದು ಮಾಡಿದ್ದು ಮಾಂಗಲ್ಯ ಅಂತ ಸೀರಿಯಲ್. ಅದು ಸೂಪರ್ ಹಿಟ್ ಸೀರಿಯಲ್. 10 ವರ್ಷ ಈ ಸೀರಿಯಲ್ ಬಂತು. ಉಮೇಶ್ ಹೆಗಡೆ ಅಂತ ಅವರ ಮಗ ಆದರ್ಶ್ ಹೆಗಡೆ ಅಂತ ಅವರು ಡೈರೆಕ್ಟರ್ ಆಗಿದ್ದಾರೆ. ಅವರ ಜೊತೆಯಲ್ಲಿ ಸುಮ್ಮನೆ ನಿಲ್ಲುವಂತಹ ಕ್ಯಾರೆಕ್ಟರ್ ಸಿಕ್ಕಿತ್ತು. ಅದೇ ಪ್ರೊಡಕ್ಷನ್ ಹೌಸ್ ಇನ್ನೊಂದು ಸೀರಿಯಲ್ ಮಾಡಿದರು. ನೋಡೋಕೆ ಚೆನ್ನಾಗಿ ಇದ್ದಾಳೆ ಆಡಿಷನ್ ಕೊಡು ಅಂತ ಹೇಳಿದರು. ಆಡಿಷನ್ ಕೊಟ್ಟೆ ಸೆಲೆಕ್ಟ್ ಆದೆ."
8 ವರ್ಷ ಗ್ಯಾಪ್ ಯಾಕೆ?
"ನಾನು ಇದೂವರೆಗೂ ಒಂದು 25 ಸೀರಿಯಲ್ ಮಾಡಿದ್ದೀನಿ. 15 ಸಿನಿಮಾ ಮಾಡಿದ್ದೀನಿ. ರಮೇಶ್ ಅರವಿಂದ್, ಶ್ರೀಧರ್ ಸರ್ ಜೊತೆಯಲ್ಲಿ ನಟಿಸಿದ್ದೀನಿ. ಆ ಮೇಲೆ ನಿಮಗೆ ಗೊತ್ತು. ಮದುವೆ ಬ್ರೇಕ್ ಅಂತ ಇರುತ್ತಲ್ಲ. ಮದುವೆ ಆಯ್ತು. ಮಕ್ಕಳಾಯ್ತು. ಅದಾದ್ಮೇಲೆ ಗ್ಯಾಪ್ ತೆಗೆದುಕೊಂಡೆ. ನಾವು ಯಾವುದೇ ಪಾತ್ರ ಮಾಡಿದರೂ, ತಾಯಿ ಪಾತ್ರ ಅಂತ ಇರುತ್ತಲ್ಲ ಅದು ಮಹತ್ತರವಾದ ಪಾತ್ರ. ನನ್ನ ಮಕ್ಕಳಿಗೋಸ್ಕರ ಅಂತ 8 ವರ್ಷ ತೆಗೆದುಕೊಂಡೆ. ಆ ಸಮಯದಲ್ಲಿ ನಾನು ಏಳು ಸೀರಿಯಲ್ ಮಾಡುತ್ತಿದ್ದೆ. ಈಗ ಒಂದು ವರ್ಷ ಆಗಿದೆ. ಮತ್ತೆ ಆಕ್ಟಿಂಗ್ ಜರ್ನಿ ಶುರು ಮಾಡಿದ್ದೇನೆ. ಪ್ರೆಸೆಂಟ್ ಆಗಿ ನಿನ್ನ ಜೊತೆ ನನ್ನ ಕಥೆ ಅಂತ ಸ್ಟಾರ್ ಸುವರ್ಣದಲ್ಲಿ ಬರುತ್ತಿದೆ."

ಅತ್ತೆ ಮಗಳ ಪಾತ್ರಕ್ಕೆ ಹೇಗಿದೆ ರೆಸ್ಪಾನ್ಸ್?
"ಈ ಸೀರಿಯಲ್‌ನಲ್ಲಿ ಅತ್ತೆ ಸೊಸೆಯನ್ನು ಎಷ್ಟು ಚೆನ್ನಾಗಿ ತೋರಿಸಿದ್ದರೆ ಅಂದರೆ, ನಿಜವಾಗಲೂ ಅತ್ತೆ ಸೊಸೆ ಇಷ್ಟು ಚೆನ್ನಾಗಿ ಇರುತ್ತಾರಾ ಅಂತ ಎಷ್ಟೋ ಜನ ಹೇಳಿದ್ದಾರೆ. ನಮಗೆ ನಿಜವಾಗಲೂ ನೀವು ಅಮ್ಮ ಮಗಳು ತರ ಅನಿಸುತ್ತೆ ಅಂತಾರೆ. ನಮ್ಮ ಸೀರಿಯಲ್‌ಗೆ ಒಳ್ಳೆಯ ಹೆಸರು ಬಂದಿದೆ. ಒಳ್ಳೆಯ ಟಿಆರ್‌ಪಿ ಇದೆ."
ಮನೆಯಲ್ಲಿ ಹೇಗಿತ್ತು ಸಪೋರ್ಟ್
"ನಮ್ಮ ತಂದೆ ಸ್ವಲ್ಪ ಹೆದರಿಕೊಳ್ಳುತ್ತಿದ್ದರು. ಬೇಡ ಇದೆಲ್ಲ ನಮಗೆ ಗೊತ್ತಿಲ್ಲ ಅನ್ನೋರು. ನಮ್ಮ ತಾಯಿ ಮಾತ್ರ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದರು. ನಿನಗೆ ಏನು ಇಷ್ಟವೋ ಅದನ್ನು ಮಾಡು. ನಾವು ಸಪೋರ್ಟ್ ಮಾಡುತ್ತೇವೆ ಅಂದಿದ್ದರು. ನಾನು ಇಂಡಸ್ಟ್ರಿಗೆ ಬಂದು 15 ವರ್ಷ ಆಯ್ತು. ಇದೂವರೆಗೂ ನಮ್ಮ ಅಪ್ಪ ಅಮ್ಮ ಶೂಟಿಂಗ್ ಸೆಟ್ಟಿಗೆ ಬಂದಿಲ್ಲ. ಹಿಂದೆಯಿಂದ ಸಪೋರ್ಟ್ ಮಾಡಿದ್ದಾರೆ. ಇವತ್ತೂ ತಂದೆ ವ್ಯವಸಾಯ ಮಾಡುತ್ತಾರೆ. ನಾನು ಹೋದರೂ ಮಾಡುತ್ತೇನೆ."
ನಿಮ್ಮ ಮೊದಲ ಪೇಮೆಂಟ್ ಎಷ್ಟು?
"ನಾನು ಹೀರೋಯಿನ್ ಆದಾಗ ನನ್ನ ಪೇಮೆಂಟ್ 750 ರೂಪಾಯಿ. ಆಗ ಅದೇ ದೊಡ್ಡದು ನನಗೆ. ಅಂದು ನನಗೆ ಅದು ಖಂಡಿತಾ ಚಿಕ್ಕದು ಅನಿಸುತ್ತಲೇ ಇರಲಿಲ್ಲ. ತುಂಬಾ ಅವಮಾನ ಅನುಭವಿಸಿದ್ದೀನಿ. ಮಾತಾಡುವ ಧೈರ್ಯ ಇರುತ್ತಿರಲಿಲ್ಲ. ಅತ್ತಿದ್ದೀನಿ, ನಕ್ಕಿದ್ದೀನಿ. ನಮ್ಮ ಚಿತ್ರರಂಗದ ಲೆಜೆಂಡರಿ ಆಕ್ಟರ್ ಶ್ರೀಧರ್ ಅವರು. ಅವರು ಎಷ್ಟು ಚೆನ್ನಾಗಿ ಆಕ್ಟ್ ಮಾಡುತ್ತೀಯ ಅಂತ ಹೇಳಿದ್ದರು. ನೀನು ಥಿಯೇಟರ್ ಅಂತ ಕೇಳಿದ್ದರು."
ನಿಮಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ ಏನು?
"ಅನಂತ್‌ನಾಗ್ ಸರ್ ಜೊತೆ ಒಂದು ಸಿನಿಮಾ ಮಾಡಿದ್ದೆ ಅಂಜದಿರು ಅಂತ. ಅವರೊಂದಿಗೆ ನಟನೆ ಮಾಡೋದು ಅಂದರೆ ನಡುಗ ಬರುತ್ತೆ. ಅವರೇ ಚೇರ್ ಹಾಕಿ ಕೂರಿಸಿ, ನೀವು ಯಾವ ಊರಮ್ಮ? ಯಾವ ಸೀರಿಯಲ್ ಮಾಡುತ್ತಿದ್ದೀಯ ಅಂತ ಕೇಳಿ ಚೆನ್ನಾಗಿ ಆಕ್ಟಿಂಗ್ ಮಾಡುತ್ತೀಯಾ ಅಂತ ಹೇಳಿದ್ದರು. ನಿಮ್ಮದು ಹಳ್ಳಿನಾ? ಹಳ್ಳಿ ಹುಡುಗಿನಾ? ನಿಮಗೆ ನಾಟಕ ಮಾಡಿ ಅಭ್ಯಾಸ ಇದೆಯಾ? ಅಂತ ಕೇಳಿದ್ದಾರೆ. ಸಾಕಲ್ವ?"
ಸ್ಟಾರ್ ಸುವರ್ಣ ಜೊತೆ ನಿಮ್ಮ ನಂಟು?
"ಸ್ಟಾರ್ ಸುವರ್ಣದಲ್ಲಿ ಅಮೃತವರ್ಷಿಣಿ ಸೀರಿಯಲ್ ಮಾಡಿದ್ದೆ. ನನ್ನ ಸೆಕೆಂಡ್ ಜರ್ನಿಯಲ್ಲಿ ಶುರುವಾಗಿದ್ದು ನಿನ್ನ ಜೊತೆ ನನ್ನ ಕತೆ. ಆಗ ಹೀರೋಯಿನ್ ಆಗಿದ್ದೆ. ಈಗ ತಾಯಿ ಪಾತ್ರಕ್ಕೆ ಪ್ರಮೋಷನ್ ಕೊಟ್ಟಿದ್ದಾರೆ. ಹೇಗೆ ಮಾಡುತ್ತೀನೋ? ಹೇಗೆ ನಿಭಾಯಿಸುತ್ತೇನೋ ಅಂತ ಭಯವಿತ್ತು. ಈಗಲೂ ಇದೆ."
35ವರ್ಷಕ್ಕೆ ಅಮ್ಮನ ಪಾತ್ರ ಹೇಗೆ?
"ನನ್ನ ಕಮ್‌ಬ್ಯಾಕ್ ಸೀರಿಯಲ್ ಬೃಂದಾವನ ಇತ್ತು. ಅದರಲ್ಲೂ ತಾಯಿ ಪಾತ್ರವನ್ನೇ ಕೇಳಿದ್ದರು. ಅತ್ತೆ ಮತ್ತು ನಾದಿನಿಗೆ ಏಜ್ ಡಿಫ್ರೆನ್ಸ್ ಇತ್ತು. ಅದಕ್ಕೆ ನನಗೆ ತಾಯಿ ಪಾತ್ರಕ್ಕೆ ಹಾಕಿ. ವೀಣಾ ಸುಂದರ್ ಅವರನ್ನು ಅತ್ತೆ ಪಾತ್ರಕ್ಕೆ ಹಾಕಿದ್ದರು. ನನಗೆ ಇನ್ನೂ 35 ವರ್ಷ. ಅದಕ್ಕೆ ಪಾತ್ರವನ್ನು ಅದಲು ಬದಲು ಮಾಡಿದ್ದರು. ಒಂದು ವರ್ಷ ಬಂತು. ಸಡನ್ ಆಗಿ ನಿಂತು ಹೋಗಿತ್ತು. ಯಾಕೆ ಅಂತ ಗೊತ್ತಿಲ್ಲ."
ನಿಮ್ಮ ಆಸೆ ಏನು?
"ನನಗೆ ಸಿನಿಮಾ ಮಾಡುವ ಆಸೆಯಿದೆ. ನಾನು ಸಿನಿಮಾ ಮಾಡಿದ್ದೇ ಕಮ್ಮಿ. ಸೀರಿಯಲ್‌ನವರನ್ನು ಸಿನಿಮಾಗೆ ಕರೆಯೋದೇ ಇಲ್ಲ. ನಮಗೆ ಒಂದು ಅವಕಾಶ ಕೊಡಿ. ಸೀರಿಯಲ್‌ನವರಿಗೆ ಒಂದು ಪೇಜ್ ಡೈಲಾಗ್ ಕೊಡಿ ನಿರಂತರವಾಗಿ ಹೇಳುತ್ತೇವೆ. ಹೀಗಾಗಿ ಸಿನಿಮಾದಲ್ಲಿ ಮಾಡಬೇಕು ಅಂತ ಆಸೆಯಿದೆ." ಎನ್ನುತ್ತಾರೆ ನಟಿ ಶೀಲಾ.


Click it and Unblock the Notifications











