ನಟನಾಗಲು ಕುಟುಂಬವನ್ನೇ ಎದುರಾಗಿಕಿಕೊಂಡಿದ್ದ ಲ್ಯಾಬ್ ಟೆಕ್ನಿಶಿಯನ್ ಈಗ ಕಿರುತೆರೆಯ ಸ್ಟಾರ್!
ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟನಾಗಬೇಕು ಅಂತ ಕನಸು ಕಟ್ಟಿಕೊಂಡು ಬರುವವರು ಅದೆಷ್ಟೋ ಮಂದಿ. ಯಾವುದೇ ಹಿನ್ನೆಲೆಯಿಲ್ಲದೆ, ಗಾಢ್ ಫಾದರ್ ಇಲ್ಲದೆ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ, ಕೆಲವರು ಮಾತ್ರ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಅಂತಹವರ ಸಾಲಿನಲ್ಲಿ ಕಿರುತೆರೆ ಹಾಗೂ ಸಿನಿಮಾ ನಟ ನಂದೀಶ್ ನಿಲ್ಲುತ್ತಾರೆ.
ಇದೂವರೆಗೂ ಸುಮಾರು 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಂದೀಶ್ ನಟಿಸಿದ್ದಾರೆ. 'ಗಾಳಿಪಟ', 'ಮನೆದೇವ್ರು', 'ಜನುಮದ ಜೋಡಿ', 'ನೀಲಿ', 'ಬಿಳಿ ಹೆಂಡ್ತಿ', ತೆಲುಗಿನಲ್ಲಿ 'ಶ್ರಾವಣ ಸಂಧ್ಯ', 'ಪುಟ್ಟಕ್ಕನ ಮಕ್ಕಳು' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಆಸೆ'ಯಲ್ಲಿ ಮನೋಜ್ ಅನ್ನುವ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ನಂದೀಶ್ ತಮ್ಮ ಜರ್ನಿ ಹಾಗೂ 'ಆಸೆ' ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನೀವು ಎಲ್ಲಿಯವರು ಪರಿಚಯ ಮಾಡಿಕೊಡಿ
"ನನ್ನ ರಿಯಲ್ ಹೆಸರು ನಂದೀಶ್ ಅಂತಾನೇ. ನನ್ನ ಹುಟ್ಟೂರು ಮಾಗಡಿ. ನಾನು ಪಿಯುಸಿವರೆಗೂ ಓದಿದ್ದು ಮಾಗಡಿಯಲ್ಲೇ. ಶಾಲಾ ದಿನಗಳಲ್ಲಿ ಸಿನಿಮಾಗಳನ್ನು ನೋಡಿ ಆಸಕ್ತಿ ಬೆಳೆದಿತ್ತು. ಸ್ನೇಹಿತರು ನನ್ನನ್ನು ನೋಡಿ ನೀನು ಹೀರೋ ತರ ಇದ್ದೀಯ. ಯಾಕೆ ಹೀರೋ ಆಗಬಾರದು ಅನ್ನೋರು. ಕೆಲವು ಸಿನಿಮಾಗಳನ್ನು ನೋಡಿ ನೀನು ಸುದೀಪ್ ತರ ಇದ್ದೀಯ ಕಣೋ ಅಂತ ಹೋಲಿಕೆ ಮಾಡುತ್ತಿದ್ದರು. ಅಲ್ಲಿಂದ ನನಗೂ ಚಿಕ್ಕದಾಗಿ ಆಸೆ ಚಿಗುರೊಡೆಯುವುದಕ್ಕೆ ಶುರು ಮಾಡಿತ್ತು."
ನಿಮ್ಮ ನಟನಾ ಜರ್ನಿ ಶುರುವಾಗಿದ್ದೇಗೆ?
"ನನಗೆ ಯಾವುದೇ ರೀತಿಯ ಹಿನ್ನೆಲೆಯಿರಲಿಲ್ಲ. ಏನೇ ಮಾಡಬೇಕಿದ್ದರೂ ನಾನೇ ಮಾಡಬೇಕಿತ್ತು. ನಾನು ಬೆಂಗಳೂರಿಗೆ ಬಂದ್ಮೇಲೆ 2010ರಲ್ಲಿ ಒಂದು ಪೇಪರ್‌ನಲ್ಲಿ ಜಾಹೀರಾತು ನೋಡಿದೆ. ನಿರ್ದೇಶಕ ಗುರುದೇಶಪಾಂಡೆ ಅವರದ್ದು ಸ್ಟಾರ್ ಕ್ರಿಯೇಟರ್ಸ್ ಅಂತ ಕೋರ್ಸ್ ಇತ್ತು. ಅಲ್ಲಿ ರಾಜಾಜಿನಗರದಲ್ಲಿ ಕ್ಲಾಸ್ ಇತ್ತು. ಮೂರು ತಿಂಗಳ ಕೋರ್ಸ್‌ಗೆ ಜಾಯಿನ್ ಆದೆ. ಅಲ್ಲಿಂದ ಶುರುವಾಯ್ತು ನನ್ನ ಜರ್ನಿ ಶುರುವಾಯ್ತು."

ಮೊದಲ ಪಾತ್ರ ಯಾವುದು?
"ಮೊದಲ ಬಣ್ಣ ಹಚ್ಚಿದ್ದು ಕಸ್ತೂರಿಯಲ್ಲಿ ಶಿರಡಿ ಸಾಯಿಬಾಬಾ ಸೀರಿಯಲ್ ಬರುತ್ತಿತ್ತು. ನಾನು ಮೊದಲು ಮೇಕಪ್ ಹಾಕಿದ್ದೇ ಬಾಬಾ ಅವರ ಪಾತ್ರಕ್ಕೆ. ಶಿರಡಿ ಸಾಯಿ ಬಾಬಾ ಅವರ ಪಾತ್ರದಲ್ಲಿ ನಟಿಸಿದ್ದೆ. ಲೈಟ್ಸ್ ಕ್ಯಾಮರಾ ಆಕ್ಷನ್ ಅಂತ ಒಂದು ಸಿನಿಮಾದಲ್ಲಿ ನಟಿಸಿದೆ. ನನಗೆ ಮೊದಲು ಲೀಡ್ ರೋಲ್ ಸಿಕ್ಕಿದ್ದು ಈಟಿವಿಯಲ್ಲಿ ಬಂದಿದ್ದ ಗಾಳಿಪಟ ಅನ್ನೋ ಧಾರಾವಾಹಿಯಿಂದ. ಅದಾದ್ಮೇಲೆ, ಮನೆದೇವ್ರು, ಜನುಮದ ಜೋಡಿ, ನೀಲಿ, ಉದಯ ಟಿವಿಗೆ ಕಣ್ಮಣಿ ಮಾಡಿದೆ. ಸ್ಟಾರ್ ಸುವರ್ಣ ಬಿಳಿ ಹೆಂಡ್ತಿ ಮಾಡಿದೆ. ತೆಲುಗಿನ ಜೆಮಿನಿಯಲ್ಲಿ ಕಾವ್ಯಾಂಜಲಿ, ಶ್ರಾವಣ ಸಂಜೆ ಲೀಡ್ ಆಗಿ ಮಾಡಿದೆ. ಅಂಧಗಾರ ಅಂತ ಒಂದು ಸಿನಿಮಾ ಮಾಡಿದೆ. 2020 ಗೋಪಿಕೆಯರು ಇದರಲ್ಲಿ ನಾನು ಒಬ್ಬ ಹೀರೋ. ಅದಾದ್ಮೇಲೆ ಗಿಣಿರಾಮ, ಪುಟ್ಟಕ್ಕನ ಮಕ್ಕಳು, ನಿನ್ನಿಂದಲೇ ಈಗ 'ಆಸೆ' ಧಾರಾವಾಹಿ ಮಾಡುತ್ತಿದ್ದೇನೆ."
ನೀವು ನಟನಾಗುವುದು ಕುಟುಂಬಕ್ಕೆ ಇಷ್ಟವಿತ್ತೇ?
"ನಾನು ನಟನಾಗಬೇಕು ಅಂತ ಎಲ್ಲರನ್ನೂ ಎದುರಾಕಿಕೊಂಡು ಬಂದಿದ್ದು. ನನ್ನ ಕುಟುಂಬದವರಿಗೆ ಯಾರಿಗೂ ಇಷ್ಟವಿರಲಿಲ್ಲ. ನಾನು ಓದಿರುವುದು ಲ್ಯಾಬ್ ಟೆಕ್ನಿಷಿಯನ್ ಕೋರ್ಸ್. ನಾನು ಒಂದು ಲ್ಯಾಬೊರೇಟರಿಯನ್ನು ತೆರೆದಿದ್ದೆ. ನನಗೆ ಈಗ ಗಮನ ಇದ್ದಿದ್ದರಿಂದ ಅದನ್ನು ಸರಿಯಾಗಿ ನಡೆಸುವುದಕ್ಕೆ ಆಗದೆ, ಅದನ್ನು ಅರ್ಧಕ್ಕೆ ಕೈ ಬಿಟ್ಟೆ. ಪೂರ್ತಿ ನಟನೆ ಕಡೆಗೆ ಇರಬೇಕು ಅಂತ ಬಂದೆ. ಸಿಕ್ಕಾಪಟ್ಟೆ ಆಡಿಷನ್ ಕೊಟ್ಟಿದ್ದೇನೆ. ಕೆಲವೊಮ್ಮೆ ಪೂರ್ವ ತಯಾರಿ ಇಲ್ಲದೆ ಕೈ ಬಿಟ್ಟು ಹೋಗಿದ್ದು ಇದೆ."

'ಆಸೆ'ಯ ಮನೋಜ ಪಾತ್ರದ ಬಗ್ಗೆ ಹೇಳಿ
"ಆಸೆ ಧಾರಾವಾಹಿಯ ಮನೋಜ ಪಾತ್ರದಲ್ಲಿ ಎಲ್ಲಾ ರೀತಿಯ ವೇರಿಯೇಷನ್ಸ್ ಇದೆ. ಇದು ಕೂಡ ಲೀಡ್ ಪಾತ್ರವೇ. ಜೊತೆಗೆ ಕಾಮಿಡಿ ಕೂಡದೆ. ಒಂಥರಾ ಅತೀ ಬುದ್ಧಿವಂತ ಹಾಗೂ ಅತೀ ದಡ್ಡ ಅಂತಾರಲ್ಲ ಹಾಗೆ. ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ದಡ್ಡನಾಗಿಬಿಡುತ್ತಾನೆ. ಎಲ್ಲಾ ಶೇಡ್ ಕೂಡ ಇರುವುದರಿಂದ ಡಿಫ್ರೆಂಡ್ ಕ್ಯಾರೆಕ್ಟರ್ ಅಂತ ಅನಿಸುತ್ತೆ."
ಪಾತ್ರ ನೆಗೆಟಿವ್ ಶೇಡ್‌ಗೆ ತಿರುಗಿದರೆ ಹೇಗೆ?
"ಒಮ್ಮೆ ಒಂದು ಪಾತ್ರಕ್ಕೆ ಕಮಿಟ್ ಆದರೆ, ಅದು ಹೇಗೆ ಬದಲಾವಣೆ ಆಗುತ್ತೋ ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಕತೆ ಮೇಲೆ ಹೋಗುತ್ತೆ. ಅದನ್ನು ರಿಸೀವ್ ಮಾಡಿಕೊಂಡು ಮಾಡಲೇಬೇಕು. ಆ ಪಾತ್ರಕ್ಕೆ ನಾವು ಜೀವ ತುಂಬಲೇ ಬೇಕು. ಕಾಮೆಂಟ್ಸ್ ಅನ್ನು ಕೆಲವೊಮ್ಮೆ ನೋಡುತ್ತೇನೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ."
ನಿಮಗೂ ಸ್ಟಾರ್ ಸುವರ್ಣಗೂ ಬಿಡಲಾರದ ನಂಟು ಅಲ್ಲವೇ?
"ಸ್ಟಾರ್ ಸುವರ್ಣದಲ್ಲಿ ಇದು ನನಗೆ ಮೂರನೇ ಪ್ರಾಜೆಕ್ಟ್. ಹೀರೋ ಆಗಿ ಮಾಡಿದೆ. ವಿಲನ್ ಆಗಿ ಮಾಡಿದೆ. ಈಗ ಮನೋಜ್ ಅನ್ನೋ ಪಾತ್ರ ಮಾಡುತ್ತಿದ್ದೇನೆ. ಸರಿಯಾದ ಸಮಯಕ್ಕೆ ನನಗೆ ಒಳ್ಳೆಯ ಲೈಫ್ ಕೊಟ್ಟಿದೆ. ಕೆಲವೊಮ್ಮೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದಾಗ ಕಾಲ್ ಬಂದಿದ್ದು ಸುವರ್ಣದಿಂದ. ಯಾವ ಚಾನೆಲ್ ಅನ್ನೂ ಮರೆಯೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸುವರ್ಣ ತುಂಬಾನೇ ಸಹಾಯ ಮಾಡಿದೆ. ನಾನೇ ಬೇಕು. ಈ ಪಾತ್ರಕ್ಕೆ ಇವನೇ ಸೂಟ್ ಆಗ್ತಾನೆ ಅಂತ ಕರೆದು ಕೆಲಸ ಕೊಟ್ಟಿದ್ದಾರೆ."
ನಿಮ್ಮ ಮೆಚ್ಚಿನ ಧಾರಾವಾಹಿ ಯಾವುದು?
"ನಾನು ಬಿಳಿ ಹೆಂಡ್ತಿಯಲ್ಲಿ ಅಜಿತ್ ಅನ್ನುವ ಪಾತ್ರವನ್ನು ತುಂಬಾನೇ ಎಂಜಾಯ್ ಮಾಡಿದೆ. ಅದರಲ್ಲಿ ದ್ವಿಪಾತ್ರವಿತ್ತು. ಇದರಲ್ಲಿ ಲಕ್ಕಿ ಅನ್ನೋ ಪಾತ್ರ ಬಂತು. ಅದನ್ನು ತುಂಬಾನೇ ಎಂಜಾಯ್ ಮಾಡಿದೆ. ಈಗ ನನಗೆ ಮನೋಜ್ ಅನ್ನೋ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದೇನೆ."
ಸೀರಿಯಲ್ ಓಕೆನಾ? ಸಿನಿಮಾ?
"ಸೀರಿಯಲ್ ಅಂದರೆ, ಸಿಂಪಲ್.. ನಮಗೆ ಡೈಲಿ ಅನ್ನ ಹಾಕುವಂತಹ ವ್ಯವಸ್ಥೆಯಿದೆ. ಸಿನಿಮಾ ಫೀಲ್ಡ್ ಅಂದರೆ ಲಾಟರಿತರ ಯಾವಾಗ ಏನು ಬೇಕಾದರೀ ಆಗಬಹುದು. ಸೀರಿಯಲ್ ನಮಗೆ ಸರ್ಕಾರಿ ಕೆಲಸದ ಹಾಗೆ. ಪ್ರತಿದಿನ ನಮಗೆ ಅನ್ನ ಹಾಕುತ್ತೆ. ಎರಡರಿಂದ ಮೂರು ವರ್ಷ ಒಂದು ಸೀರಿಯಲ್ ಮಾಡಿಕೊಂಡು ಹೋದರೂ ಸಾಕು. ಸೀರಿಯಲ್ ನಮಗೆ ಗ್ಯಾರಂಟಿ ಕಾರ್ಡ್ ಇದ್ದಂತೆ. ಮೂರು ಸೀರಿಯಲ್ ಮಾಡಿದವರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ, ಸಿನಿಮಾದಲ್ಲಿ ಆತರ ಎಕ್ಸ್‌ಪೀರಿಯನ್ಸ್ ಆಗಿಲ್ಲ."
ಆಸೆಯಲ್ಲಿ ಈಗ ಏನಾಗ್ತಿದೆ?
"ಆಸೆಯಲ್ಲಿ ನಾನು ಫುಲ್ ಝೀರೋ ಇದ್ದೆ. ಈಗ ಅಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ. ಕಳೆದುಕೊಂಡಿದ್ದ ದುಡ್ಡು ಮತ್ತೆ ವಾಪಸ್ ಸಿಕ್ಕಿದೆ. ಅದರ ಮೂಲಕ ಬ್ಯುಸಿನೆಸ್ ಶುರು ಮಾಡಿ, ಒಂದು ಒಳ್ಳೆಯ ಸ್ಟೇಜ್ ಹೋಗಬೇಕಿದೆ. ಎಲ್ಲರೂ ನನ್ನನ್ನು ಆಡಿಕೊಳ್ಳುತ್ತಿದ್ದವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗಾಗಿದೆ."
ಏನೇ ಮಾಡಿದ್ರೂ ತಾಯಿ ಸಪೂರ್ಟ್ ಯಾಕೆ ಸಿಗ್ತಿದೆ?
"ಅದು ಹೆತ್ತ ಕರುಳು. ಎಲ್ಲಾ ತಾಯಿಂದರೂ ಕೂಡ ಹಾಗೇ. ನನ್ನ ರಿಯಲ್ ಲೈಫ್ ತಾಯಿ ಕೂಡ ನಾನು ಏನೇ ತಪ್ಪು ಮಾಡಿದರೂ ಸಪೋರ್ಟ್ ಮಾಡುತ್ತಾಳೆ. ಎಲ್ಲಾ ತಾಯಿ ಹೃದಯ ಒಂದೇ ಇರುತ್ತೆ. ಸೀರಿಯಲ್ ಅಂದ್ಮೇಲೆ ಬೇರೆ ಇರೋದಿಲ್ಲ." ಎಂದು ನಟ ನಂದೀಶ್ ಜರ್ನಿ ಹಾಗೂ ಪ್ರಸ್ತುತ ನಟಿಸುತ್ತಿರುವ ಆಸೆ ಧಾರಾವಾಹಿಯ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











