ಭದ್ರಾವತಿಯ ಈ ಕಿರುತೆರೆ ನಟಿ ಕೋಳಿ ರಮ್ಯಾ ಆಗಿದ್ದೇಗೆ? ಬದುಕನ್ನೇ ಬದಲಿದ್ದೇಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'?
ಅಪ್ಪಟ ಕನ್ನಡದ ಈ ನಟಿ ಚಿಕ್ಕ ವಯಸ್ಸಿನಲ್ಲೇ ಕಿರುತೆರೆ ಎಂಟ್ರಿ ಕೊಟ್ಟವರು. ಇಂದು ಕನ್ನಡ, ತಮಿಳು ಅಂತ ಬ್ಯುಸಿಯಾಗಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 1, 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 2, 'ಹಳ್ಳಿ ಹೈದ ಪ್ಯಾಟೆಗ್ ಬಂದ' ಅಂತಹ ಶೋಗಳಲ್ಲಿ ಮಿಂಚಿದ ನಟಿಯೀಕೆ. ಕನ್ನಡ ಕಿರುತೆರೆಗೆ ಇವರು ಕೋಳಿ ರಮ್ಯಾ ಅಂತಲೇ ಫೇಮಸ್.
ಕೋಳಿ ರಮ್ಯಾ ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ತಮಿಳಿನ 'ಸತ್ಯ' ಧಾರಾವಾಹಿ ಸೇರಿದಂತೆ ಕೆಲವು ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಹಾಗೇ ಎರಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಈಗ ಕೆಲವು ದಿನಗಳ ಬಳಿಕ 'ನೀನಾದೆ ನಾ' ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿರುವ ನಟಿ ರಮ್ಯಾ ಫಿಲ್ಮಿಬೀಟ್ ಕನ್ನಡದ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತನಗೆ ಕೋಳಿ ರಮ್ಯಾ ಅನ್ನೋ ಹೆಸರು ಹೇಗೆ ಬಂತು ಅನ್ನೋ ಸ್ವಾರಸ್ಯಕರ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

ನೀವು ಎಲ್ಲಿಯವರು? ಕಿರುತೆರೆಗೆ ಬಂದಿದ್ದೇಗೆ?
"ನಾನು ಭದ್ರಾವತಿಯವಳು. ಇಂಡಸ್ಟ್ರಿಗೆ ಬರಬೇಕು ಅಂತ ಪ್ರಯತ್ನ ಪಟ್ಟು ಬಂದಿದ್ದಲ್ಲ. ಹೀಗೆ ನಾಗಭರಣ ಅವರ ಆಫೀಸ್‌ಗೆ ಹೋಗುವಂತಹ ಸಂದರ್ಭ ಬಂತು. ಅಲ್ಲಿಗೆ ಹೋದಾಗ ಅವರು ಚಿಕ್ಕ ಹುಡುಗಿ ಪಾತ್ರವನ್ನು ಹುಡುಕುತ್ತಿದ್ದರು. ಆಗ ನನ್ನನ್ನು ಅವರ ಹೆಂಡ್ತಿ ನೋಡಿದರು. ಅವತ್ತಿಗೆ ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಈ ಇಂಡಸ್ಟ್ರಿಯ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಆ ವೇಳೆ ಸುಮ್ಮನೆ ಆಯ್ತು ಅಂತ ಒಪ್ಪಿಕೊಂಡೆ. ಯಾಕಂದ್ರೆ, ನನಗೆ ಡ್ಯಾನ್ಸ್, ಆಕ್ಟಿಂಗ್ ಅಂದರೆ ಇಷ್ಟವಿತ್ತು."
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'ಗೆ ಹೇಗೆ ಬಂದ್ರಿ?
"ಒಂದು ಸೀರಿಯಲ್‌ನಿಂದ ನನ್ನ ಜರ್ನಿ ಶುರುವಾಗುತ್ತಾ ಹೋಯ್ತು. ಆಗ ನಾನು 9ನೇ ತರಗತಿ ಓದುತ್ತಿದ್ದೆ. ಅದಾದ್ಮೇಲೆ ಬಿಗ್ ಬ್ರೇಕ್ ಅಂತ ಸಿಕ್ಕಿದ್ದು, ಸುವರ್ಣ ಚಾನೆಲ್‌ನಲ್ಲೇ ಬಂದಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು. ನಾನು ಇದರ ಆಡಿಷನ್‌ಗೆ ಹೋದಾಗ ಒಳಗಡೆನೂ ಬಿಟ್ಟಿರಲಿಲ್ಲ. ಯಾಕಂದ್ರೆ, ನಾನು ಅಷ್ಟು ಚಿಕ್ಕವಳಿದ್ದೆ. ಆ ಶೋ ಆಯ್ಕೆ ಆದವರು ಅಂದು ಬರಲಿಲ್ಲ. ಅವರಿಗೆ ಒಬ್ಬ ಹುಡುಗಿ ಬೇಕಾಗಿತ್ತು. ನಾನು ಇಂಟರ್‌ವ್ಯೂಗೆ ಹೋದಾಗ ಅವರು ಸೆಲೆಕ್ಟ್ ಮಾಡಿರಲಿಲ್ಲ. ಆಯ್ಕೆ ಆದವರು ಬಾರದೇ ಇದ್ದಿದ್ದರಿಂದ ಚಾನೆಲ್‌ನವರು ನೆನಪಿಟ್ಟುಕೊಂಡು ಫೋನ್ ಮಾಡಿದರು. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಮಾಡುತ್ತೀಯಾ ಅಂತ ಹೇಳಿದರು. ಹಾಗೆ ಸೇರಿಕೊಂಡಿದ್ದು."

ಶೋ ಕೊನೆವರೆಗೂ ಉಳಿದುಕೊಂಡಿದ್ದೇಗೆ?
"ನಾನು ಒಂದು ವಾರಕ್ಕೆ ಎಲಿಮಿನೇಟ್ ಆಗುವಂತಹ ಸ್ಪರ್ಧಿಯಾಗಿದ್ದೆ. ಆಗ ನಾನು ತುಂಬಾ ಮೆಚ್ಯೂರಿಟಿ ಇದ್ದಂತಹ ಹುಡುಗಿ ಏನು ಆಗಿರಲಿಲ್ಲ. ಬಹುಶ: ಅದೇ ನನಗೆ ಪ್ಲಸ್ ಆಯ್ತು ಅಂತ ಅನಿಸುತ್ತೆ. ನನಗೆ ಏನೂ ಗೊತ್ತಿಲ್ಲದೇ ಇರೋದು ಒಳ್ಳೆಯದಾಯ್ತು ಅಂತ ಅಂದುಕೊಳ್ತೀನಿ. ನಾನು ಈ ಶೋ ಅನ್ನು ಸ್ವಲ್ಪ ಚಾಲೆಂಜಿಂಗ್ ಆಗಿ ತಗೊಂಡೆ. ಯಾಕಂದ್ರೆ, ಎಲ್ಲರೂ ನನಗಿಂತ ಚೆನ್ನಾಗಿದ್ದಾರೆ, ನನಗಿಂತ ಟಾಸ್ಕ್ ಚೆನ್ನಾಗಿ ಮಾಡುತ್ತಾರೆ. ಅದನ್ನು ನೋಡಿ ಮೊದಲ ವಾರ ಚಾಲೆಂಜಿಂಗ್ ಆಗಿ ತಗೊಂಡಿದ್ದರಿಂದ ಕೊನೆಯವರೆಗೂ ಇರುವಂತಹ ಮೋಟಿವೇಷನ್ ಬಂದಿತ್ತು. ಜನರು ಕೂಡ ನನ್ನನ್ನು ಇಷ್ಟ ಪಟ್ಟರು. ನನ್ನ ವೃತ್ತಿ ಬದುಕಿನಲ್ಲಿ ಅದು ಮರೆಯಲಾದ ಘಟನೆ. ಈ ಶೋ ಯಿಂದಾನೇ ನನ್ನ ಭವಿಷ್ಯವನ್ನು ಕ್ರಿಯೇಟ್ ಮಾಡಿಕೊಂಡು ಮುಂದೆ ಹೋದೆ."
ಸೀರಿಯಲ್‌ಗಳಿಗೆ ಎಂಟ್ರಿ ಹೇಗಾಯ್ತು?
"'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಆದ್ಮೇಲೆ ಒಂದಷ್ಟು ಸೀರಿಯಲ್‌ಗಳನ್ನು ಮಾಡಿಕೊಂಡು ಹೋದೆ. ನನಗೆ ಸಿನಿಮಾದಲ್ಲಿ ಮಾಡಬೇಕು ಎನ್ನುವ ಮೈಂಡ್ ಸೆಟ್ ಇರಲಿಲ್ಲ. ಅಂದರೆ, ಸಿನಿಮಾಗಳನ್ನೇ ಮಾಡಬೇಕು ಅಂತ ಹೋಗಲಿಲ್ಲ. ಸೀರಿಯಲ್‌ಗಳನ್ನು ಮಾಡುತ್ತಾ ಹೋದೆ. ಸೊಸೆ ತಂದ ಸೌಭಾಗ್ಯ, ಪುಟ್ಟ ಗೌರಿ ಮದುವೆ ಅಂತಹ ಒಳ್ಳೊಳ್ಳೆ ಸೀರಿಯಲ್‌ಗಳನ್ನು ಮಾಡಿದೆ. ಅದಾದ್ಮೇಲೆ ಬ್ರೇಕ್ ಕೊಟ್ಟು ತೆಲುಗು, ತಮಿಳಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶುರು ಮಾಡಿದೆ. ಕನ್ನಡದಲ್ಲೂ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಮಾಡಿದೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' , ಪ್ಯಾಟೆ ಹೈದ ಹಳ್ಳಿಗ್ ಬಂದ, 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 2 ಮಾಡಿದೆ. ಹಾಗೆ ನನ್ನ ಜರ್ನಿ ಶುರುವಾಯ್ತು. ಅವತ್ತಿಂದ ಇವತ್ತಿನವರೆಗೂ ನನ್ನ ಜರ್ನಿ ನಿಂತಿಲ್ಲ. ಕೆಲಸ ಮಾಡುತ್ತಲೇ ಇದ್ದೇನೆ. ಇದೆಲ್ಲ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'ನಿಂದಲೇ ಶುರುವಾಗಿದ್ದು ಅಂತ ನಂಬುತ್ತೇನೆ."

ನೀವು ಕೋಳಿ ರಮ್ಯಾ ಆಗಿದ್ದು ಹೇಗೆ?
"ನಾನು ಇವತ್ತು ಎಲ್ಲಿಗೆ ಹೋದರೂ, ಕೋಳಿ ರಮ್ಯಾ ಅಂತಲೇ ಗುರುತಿಸುತ್ತಾರೆ. ರಮ್ಯಾ ಅಂತ ಯಾರೂ ಹೇಳುವುದೇ ಇಲ್ಲ. ನಾನು ಆ ಶೋ ಮಾಡಿ 13 ವರ್ಷ ಆಗಿರಬಹುದು. ಇನ್ನೂ ಅದೇ ಹೆಸರಿನಿಂದ ಕರೆಯುತ್ತಾರೆ ಅಂದರೆ, 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಶೋನೇ ಕಾರಣ ಅಂತ ನಂಬುತ್ತೇನೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಶೋನಲ್ಲಿ ಒಂದು ಟಾಸ್ಕ್ ಇತ್ತು. ಆ ಟಾಸ್ಕ್‌ನಲ್ಲಿ ನಾನು ಚೆನ್ನಾಗಿ ಆಡಲಿಲ್ಲ ಅಂದರೆ, ಎಲಿಮಿನೇಟ್ ಆಗುತ್ತಿದ್ದೆ. ಅದೇ ಕೋಳಿ ಟಾಸ್ಕ್. ಯಾರು ಜಾಸ್ತಿ ಕೋಳಿ ಹಿಡಿಯುತ್ತಾರೋ ಅವರು ವಿನ್ ಆಗಿತ್ತಾರೆ ಅಂತ ಇತ್ತು. ಅದು ನನ್ನ ಮೈಂಡ್‌ನಲ್ಲಿ ಇತ್ತು. ಆ ಟಾಸ್ಕ್‌ನಲ್ಲಿ ನಾನು ಜಾಸ್ತಿ ಕೋಳಿಯನ್ನು ಹಿಡಿದು ಟಾಸ್ಕ್ ವಿನ್ ಆದೆ. ಸುಮ್ನೆ ಅಕುಲ್ ಅವರು ಕೋಳಿ ರಮ್ಯಾ ಕೋಳಿ ಹಿಡಿದರು ಅಂತ ಹೇಳಿದರು. ನನಗೆ ಆ ಟೈಮ್‌ನಲ್ಲಿ ಆ ಹೆಸರು ತೆಗೆದುಕೊಳ್ಳಲು ಆಗಲಿಲ್ಲ. ಕ್ಯೂಟ್ ಆಗಿರುವ ಹೆಸರು ಎಷ್ಟಿದೆ. ಅದನ್ನು ಬಿಟ್ಟು ಇದೇನಿದು ಕೋಳಿ ರಮ್ಯಾ ಅಂತ ಕರೀತಾರೆ ಅಂತ ಜಗಳಕ್ಕೆ ಹೋಗಿದ್ದೆ. ಆಗ ಜಗಳ ಮಾಡ್ತಾ ಮಾಡ್ತಾ ಅದೇ ಇಷ್ಟ ಆಗ್ತಾ ಹೋಯ್ತು. ಜನರು ಕೂಡ ಹಾಗೇ ಕರೆಯುವುದಕ್ಕೆ ಶುರು ಮಾಡಿದರು. ಈಗ ಅದು ನನ್ನ ಹೆಸರೇ ಆಗಿ ಹೋಗಿದೆ."
ನಿಮಗೆ ಸೀರಿಯಲ್‌ಗಿಂತ ರಿಯಾಲಿಟಿ ಶೋ ಯಾಕಿಷ್ಟ?
"ರಿಯಾಲಿಟಿ ಶೋ ಚಾಲೆಂಜ್ ಆಗಿರುತ್ತೆ. ಎಲ್ಲರಿಗಿಂತ ಚೆನ್ನಾಗಿ ಆಡಬೇಕು ಅಂತ ಅನಿಸುತ್ತೆ. ನೀವು ಅಲ್ಲಿ ಉಳಿದುಕೊಳ್ಳಬೇಕು ಚೆನ್ನಾಗಿ ಆಡಬೇಕು. ಅದು ನನಗೆ ತುಂಬಾನೇ ಸ್ಪೂರ್ತಿ ಕೊಡುತ್ತೆ. ನನ್ನನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೆ ಅಂತ ನಂಬಿದ್ದೇನೆ. ವೈಯಕ್ತಿಕವಾಗಿ ನಟನೆಗಿಂತ ರಿಯಾಲಿಟಿ ಶೋ ಮೋಟಿವೇಟ್ ಮಾಡುತ್ತೆ ಅಂತ ನನಗೆ ಅನಿಸುತ್ತೆ. ಸೀರಿಯಲ್‌ನಲ್ಲಿ ಯಾವುದೇ ಪಾತ್ರ ಮಾಡಿದರೂ ಆಕ್ಟಿಂಗ್ ಮಾಡುತ್ತೀರ ಅಷ್ಟೇ. ರಿಯಾಲಿಟಿ ಶೋ ಹಾಗಲ್ಲ. ಅಲ್ಲಿ ಏನಾದರೂ ಒಂದು ಹೊಸದು ನಡೆಯುತ್ತೆ."

ಕನ್ನಡ ಕಿರುತೆರೆ ಯಾಕೆ ಬ್ರೇಕ್ ಕೊಟ್ಟಿದ್ರಿ?
"ಕನ್ನಡದಲ್ಲಿ ಹಾಗೂ ತಮಿಳಿನಲ್ಲಿ ನಾನು ಸೀರಿಯಲ್ ಹಾಗೂ ರಿಯಾಲಿಟಿ ಶೋ ಮಾಡುತ್ತಿದ್ದೆ. ತಮಿಳಿನಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋನಲ್ಲಿ ಬ್ಯುಸಿಯಿದ್ದೆ. ಹಾಗಾಗಿ ಕನ್ನಡ ಹಾಗೂ ತಮಿಳು ಅಂತ ಓಡಾಡುತ್ತಲೇ ಇದ್ದೆ. ಕನ್ನಡದಲ್ಲಿ ಬ್ರೇಕ್ ಆಗಿತ್ತು ನಿಜ. ಮಿಥುನ ರಾಶಿ ಆದ್ಮೇಲೆ ಮತ್ತೆ ನಾನು ನಟಿಸುತ್ತಿರೋದೇ ನೀನಾದೆ ನಾ ಸೀರಿಯಲ್‌ನಲ್ಲಿ"
'ನೀನಾದೆ ನಾ' ಆಯ್ಕೆ ಮಾಡಿಕೊಂಡಿದ್ದೇಕೆ?
"ನೀನಾದೆ ನಾ ಯಾಕೆ ಅಂದರೆ, ಅಮ್ಮನಿಗೆ ಕನ್ನಡದಲ್ಲಿ ನಟಿಸಬೇಕು ಅಂತ ಬಹಳ ಆಸೆ. ನಾನು ಯಾವಾಗಲೂ ಚೆನ್ನೈಗೆ ಹೋಗುತ್ತಿದ್ದೆ. ಅಲ್ಲೇ ಹೆಚ್ಚಾಗಿ ಇರುತ್ತಿದ್ದೆ. ಅಮ್ಮ ಯಾವಾಗಲೂ ಕನ್ನಡದಲ್ಲಿ ಆಕ್ಟ್ ಮಾಡು ಅಂತ ಹೇಳುತ್ತಿದ್ದರು. ನನಗೆ ಸುವರ್ಣದಿಂದ ಬೇರೆ ಸೀರಿಯಲ್‌ಗೆ ಆಫರ್ ಬಂದಿದ್ದು. ಆ ಸೀರಿಯಲ್‌ಗೆ ನನ್ನ ಫೋಟೋಗಳು ಹೋಯ್ತು. ಆಗ ಚಾನೆಲ್‌ನವರು, ಇಲ್ಲ ನೀನಾದೆ ನಾ ಮಾಡಲಿ ಅಂತ ಅಂದರು. ನಾನು ಇದೂವರೆಗೂ ನಟಿಸಿದ್ದೆಲ್ಲ ನೆಗೆಟಿವ್ ರೋಲ್‌ಗಳೇ. ನನ್ನ ನೋಡಿದ ಕೂಡಲೇ ನೆಗೆಟಿವ್ ರೋಲ್‌ಗೆ ಆಯ್ಕೆ ಮಾಡುತ್ತಾರೆ ಅಂತ ಅನಿಸುತ್ತೆ. ಯಾಕೆ ಅಂತ ಗೊತ್ತಿಲ್ಲ. ಇದೂವರೆಗೂ ಪಾಸಿಟಿವ್ ರೋಲ್ ಕೊಟ್ಟಿಲ್ಲ. ನನಗೆ ನೀನಾದೆ ನಾ ರೋಲ್ ಹೀಗೆ ಇರುತ್ತೆ ಅಂತ ಹೇಳಿದ್ದಾಗ, ಎಷ್ಟೋ ದಿನ ಆಯ್ತಲ್ಲ. ಕನ್ನಡದಲ್ಲಿ ಮಾಡೋಣ ಅಂತ ಮಾಡುತ್ತಿದ್ದೇನೆ."
'ನೀನಾದೆ ನಾ' ಪಾತ್ರದ ಬಗ್ಗೆ ಹೇಳಿ?
"ನನಗೆ ಪಾತ್ರ ಇಷ್ಟ ಆಗುತ್ತಿದೆ. ನಾನು ಇಂತಹ ಪಾತ್ರವನ್ನು ಮಾಡಿಲ್ಲ. ಈ ಪಾತ್ರ ನೆಗೆಟಿವ್ ಇದ್ದರೂ, ಲೈವ್‌ಲಿಯಾಗಿದೆ. ಮಿಥುನ ರಾಶಿ ಮಾಡುವಾಗ ಒಂದೇ ರೀತಿ ಹೋಗುತ್ತಿತ್ತು. ಇದರಲ್ಲಿ ನೆಗೆಟಿವ್ ಶೇಡ್ ಜೊತೆಗೆ ತಮಾಷೆಯಾಗಿ ಮಾತಾಡುವ ಸನ್ನಿವೇಶಗಳೆಲ್ಲವೂ ಇದೆ. ಈ ಪಾತ್ರದಲ್ಲಿ ನಟಿಸುವುದಕ್ಕೆ ಫ್ರೀಡಂ ಇದೆ ಅಂತ ಅನಿಸುತ್ತಿದೆ."


Click it and Unblock the Notifications











