ರಂಗಭೂಮಿಯೇ ನನ್ನ ಉಸಿರು, ಕನ್ನಡವೇ ನನ್ನ ಹಸಿರು; 'ಆಸೆ'ಪಟ್ಟ ಮಂಡ್ಯ ರಮೇಶ್ ನಟನಾ ಜರ್ನಿ ಹೇಗಿದೆ?

ರಂಗಕರ್ಮಿ, ನಟ ಮಂಡ್ಯ ರಮೇಶ್ ಕಳೆದ ಹಲವು ವರ್ಷಗಳಿಂದ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು. ಈಗ ಕಿರುತೆರೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರನ್ನು ಸೆಳೆದಿದ್ದಾರೆ.

ಮಂಡ್ಯ ರಮೇಶ್ ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರ ಕಿರುತೆರೆ ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಮಂಡ್ಯ ರಮೇಶ್ ತಂದೆಯ ಪಾತ್ರದಲ್ಲಿ ನೋಡುಗರನ್ನು ನಗಿಸುತ್ತಾ, ಭಾವುಕರನ್ನಾಗಿಸುತ್ತಿದ್ದಾರೆ. ಸ್ಟಾರ್‌ ಸುವರ್ಣದ ಟಾಪ್‌ ಧಾರಾವಾಹಿಗಳಲ್ಲಿ ಒಂದಾಗಿರುವ ಧಾರಾವಾಹಿ 'ಆಸೆ'. ಈ ಸೀರಿಯಲ್‌ನಲ್ಲಿ ನಟಿಸುತ್ತಿರುವ ಬಗ್ಗೆ ಮಂಡ್ಯ ರಮೇಶ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Roots in the Soil Heart on the Stage An Exclusive Talk with Mandya Ramesh

ಸರ್, ಮಂಡ್ಯದ ಮಣ್ಣಿಂದ ಈ ಬಣ್ಣದ ಲೋಕಕ್ಕೆ ನಿಮ್ಮ ಎಂಟ್ರಿ ಹೇಗಾಯ್ತು? ಆ ಜರ್ನಿ ಬಗ್ಗೆ ಹೇಳಿ.

ಮಂಡ್ಯ ರಮೇಶ್: ಮೂಲತಃ ನಾನು ರಂಗಭೂಮಿ ನಟ. ಬಾಲ್ಯದಿಂದಲೂ ನನಗೆ ನಾಟಕದ ಹೇರಳವಾದ ಹುಚ್ಚಿತ್ತು. ಪೌರಾಣಿಕ ನಾಟಕಗಳು, ಜಾನಪದ ನಾಟಕಗಳು ಮತ್ತು ಜಾನಪದ ಕಲೆಗಳ ಮಧ್ಯೆ ಬೆಳೆದವನಿಗೆ, ಗ್ರಾಮೀಣ ಭಾಗದಿಂದ ಬಂದವನಿಗೆ ಒಂದು ದೊಡ್ಡ ಸೌಭಾಗ್ಯ ಏನು ಅಂದ್ರೆ, ತುಂಬಾ ಬೇರೆ ಬೇರೆ ತರಹದ ಜೀವನ ಕ್ರಮಗಳನ್ನು ಅಧ್ಯಯನ ಮಾಡೋಕೆ ಒಂದು ಅವಕಾಶ ಸಿಗುತ್ತೆ. ಈ ರಂಗಭೂಮಿ ಕಾರಣಕ್ಕಾಗಿ ನನಗೆ ಆ ತರಹದ ಒಂದು ಅಧ್ಯಯನಶೀಲ ಪ್ರವೃತ್ತಿ ಆರಂಭದಿಂದಲೂ ಇತ್ತು.

'ಶಿವಶಂಕರ್ ಸಮಿತಿ' ಕಂಪನಿ ರಚಿಸಿದ್ದೇಗೆ?

ಮಂಡ್ಯ ರಮೇಶ್: ನಮ್ಮ ತಂದೆ ಸುಬ್ರಮಣ್ಯಂ ಅಂತ, ತಾಯಿ ನಾಗಲಕ್ಷ್ಮಿ ಅಂತ. ಒಂದು ಸಾಮಾನ್ಯ ಕುಟುಂಬದಿಂದ ಬಂದವನು ನಾನು. ನಮ್ಮ ಮನೆತನದಲ್ಲಿ ಯಾರೂ ಕಂಪನಿಯವರೋ, ನಾಟಕದವರೋ ಅಥವಾ ದೊಡ್ಡ ಸಾಹಿತಿಗಳೋ ಈ ತರಹದ್ದೇನೂ ಇರಲಿಲ್ಲ. ಆದರೆ ಸ್ಕೂಲ್‌ನಲ್ಲಿ ಅಂದ್ರೆ ಆರನೇ ಕ್ಲಾಸ್‌ನಲ್ಲೇ ನಾನು ಒಂದು ನಾಟಕದ ತಂಡವನ್ನು ಕಟ್ಟಿಕೊಂಡು, ಅದಕ್ಕೆ ಟಿಕೆಟ್ ಇಟ್ಟು, ಅವರಿಗೆ ಪ್ರಾಕ್ಟೀಸ್ ಮಾಡಿಸಿ, ನಾನೇ ನಾಟಕ ಬರೆದು, ನಾನೇ ಡೈರೆಕ್ಟ್ ಮಾಡ್ತಾ ಇದ್ದೆ. 'ಶಿವಶಂಕರ್ ಸಮಿತಿ' ಅಂತ ನನ್ನ ತಂಡದ ಹೆಸರು.

ನೀನಾಸಂ ಅನುಭವದ ಬಗ್ಗೆ ಹೇಳಿ

ಮಂಡ್ಯ ರಮೇಶ್: ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬರುವಷ್ಟೊತ್ತಿಗೆ ರಂಗಭೂಮಿ ಅನ್ನೋದು ಬರಿ ಎಂಟರ್ಟೈನ್ಮೆಂಟ್‌ ಮಾತ್ರ ಅಲ್ಲ, ಇದೊಂದು ಸಾಮಾಜಿಕ ಶಿಕ್ಷಣ ಅಂತ ಅರ್ಥವಾಯ್ತು. ಇದು ತುಂಬಾ ಶಕ್ತಿಯುತವಾದ, ಪ್ರಬಲವಾದ ಭಾಷೆ ಅಂತ ಅನಿಸಿತು. ಅದನ್ನ ಹೆಚ್ಚು ಅಧ್ಯಯನ ಮಾಡಬೇಕು ಅಂತ ಎಲ್ಲರೂ ಕೆಲಸದ ಬಗ್ಗೆ, ದುಡ್ಡು ಸಂಪಾದನೆ ಬಗ್ಗೆ ಯೋಚನೆ ಮಾಡ್ತಾ ಇದ್ರೆ, ನಾನು ಮಾತ್ರ ನಮ್ಮ ಜಿಲ್ಲೆಯಿಂದ ಮೊದಲನೇ ಬಾರಿಗೆ 'ನೀನಾಸಂ'ಗೆ ಹೋದೆ. ಅಲ್ಲಿ ಡಿಪ್ಲೊಮಾ ಮುಗಿಸಿದೆ. ನೀನಾಸಂ ತಿರುಗಾಟದ ಮೊದಲ ಬ್ಯಾಚ್‌ವ ಮೊದಲ ನಟ ನಾನು.

Roots in the Soil Heart on the Stage An Exclusive Talk with Mandya Ramesh

ರಂಗಾಯಣದ ನಂಟು ಬೆಳೆದಿದ್ದೇಗೆ?

ಮಂಡ್ಯ ರಮೇಶ್: ಬಿ.ವಿ. ಕಾರಂತರು ನನ್ನನ್ನು ನೋಡಿ ರಂಗಾಯಣಕ್ಕೆ ಬರಲು ಪ್ರಚೋದಿಸಿದರು. ಮೈಸೂರಿನಲ್ಲಿ ರಂಗಾಯಣ ಶುರುವಾದಾಗ ಅಲ್ಲಿನ ಮೊದಲ ಬ್ಯಾಚ್‌ನ ಮೊದಲ ರಂಗಾಭ್ಯಾಸಿ ನಾನಾದೆ. ಅಲ್ಲಿ ನನಗೆ ರಘು, ಪಿಚ್ಚಳ್ಳಿ ಶ್ರೀನಿವಾಸ್, ಅರುಣ್ ಸಾಗರ್ ಅವರಂತಹ ದೊಡ್ಡ ಕಲಾವಿದರ ಟೀಮ್ ಸಿಕ್ಕಿತು. ದೇಶ-ವಿದೇಶಗಳನ್ನೆಲ್ಲಾ ಸುತ್ತಿ ವರ್ಕ್‌ಶಾಪ್ ಮಾಡ್ತಾ ಇದ್ದೆ. ಆದ್ರೆ ಒಂದು ವಯಸ್ಸಿಗೆ ಬಂದ್ಮೇಲೆ ಮನೆಯಲ್ಲಿ ದುಡಿಯಬೇಕಾದ ಅನಿವಾರ್ಯತೆ ಶುರುವಾಯ್ತು.

'ಜನುಮದ ಜೋಡಿ' ನಿಮ್ಮ ಮೊದಲ ಸಿನಿಮಾ ಸಿಕ್ಕಿದ್ದೇಗೆ?

ಮಂಡ್ಯ ರಮೇಶ್: ಟಿ.ಎಸ್. ನಾಗಾಭರಣ ಒತ್ತಾಯದ ಮೇಲೆ 'ಜನುಮದ ಜೋಡಿ' ಸಿನಿಮಾದಲ್ಲಿ ಆಕ್ಟ್ ಮಾಡಿದೆ.'ಜನುಮದ ಜೋಡಿ' ನನ್ನ ಮೊದಲ ಸಿನಿಮಾ. ಅದರಲ್ಲಿ ಶಿವರಾಜ್ ಕುಮಾರ್ ಅವರ ಗೆಳೆಯನಾಗಿ ನಟಿಸಿದೆ. ಮೊದಲ ಚಿತ್ರವೇ ಸೂಪರ್ ಹಿಟ್ ಆಗಿ ಒಂದು ವರ್ಷ ಓಡಿತು. ಅಲ್ಲಿಂದ ಇಲ್ಲಿಯವರೆಗೆ 30 ವರ್ಷಗಳ ಸಿನಿಮಾ ಜರ್ನಿ ಮತ್ತು 48 ವರ್ಷಗಳ ರಂಗಭೂಮಿ ಜರ್ನಿ ನನ್ನದಾಗಿದೆ. ಸುಮಾರು 360 ಸಿನಿಮಾಗಳು ಮತ್ತು ಲೆಕ್ಕ ಹಾಕಲಾಗದಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ಕನ್ನಡದ ಮೊದಲ ಮೆಗಾ ಸೀರಿಯಲ್ 'ಮನೆತನ' ಮತ್ತು 'ಜನನಿ'ಯಿಂದ ನನ್ನ ಜರ್ನಿ ಶುರುವಾಯ್ತು. ಒಬ್ಬ ಸಾಮಾನ್ಯ ಹುಡುಗ ಹಳ್ಳಿಯಿಂದ ಬಂದು ಹೀಗೆ ನಿಂತುಕೊಳ್ಳೋಕೆ ಸಾಧ್ಯವಾಗಿದ್ದು ಕನ್ನಡ ಜನತೆ ತೋರಿಸಿದ ಪ್ರೀತಿಯಿಂದಲೇ.

ನಿಮ್ಮ ಪ್ರಕಾರ ರಂಗಭೂಮಿ ಅಂದರೆ ಏನು? ಅದರ ಮಹತ್ವದ ಬಗ್ಗೆ ತಿಳಿಸಿಕೊಡ್ತೀರಾ?

ಮಂಡ್ಯ ರಮೇಶ್: ನನ್ನ ಪ್ರಕಾರ ರಂಗಭೂಮಿ ಎನ್ನುವುದು ಕೇವಲ ಒಂದು ಕಲೆಯಲ್ಲ, ಅದೊಂದು ಅತ್ಯಂತ ಶುದ್ಧವಾದ ಸಾಮಾಜಿಕ ಶಿಕ್ಷಣ. ಮನುಷ್ಯನ ಆಂತರ್ಯದಲ್ಲಿ ಸುಪ್ತವಾಗಿರುವ ಮತ್ತು ಅನೇಕ ಮಂಕು ಕವಿದ ಘಳಿಗೆಗಳಲ್ಲಿ ಅವನನ್ನು ಜಾಗೃತಗೊಳಿಸುವ ಶಕ್ತಿ ಈ ರಂಗಭೂಮಿಗೆ ಇದೆ. ಜೀವನದಿಂದ ವಿಮುಖರಾದವರು ಅಥವಾ ನಿರಾಸಕ್ತರಾದವರು ಒಂದು ತಿಂಗಳು ರಂಗಭೂಮಿಯ ತಾಲೀಮು ಮತ್ತು ನಾಟಕ ಮಾಡಿದರೆ, ಅವರಲ್ಲಿ ಜೀವನಮುಖಿ ತನ ಜಾಗೃತವಾಗುತ್ತದೆ. ಬದುಕನ್ನು ಪ್ರೀತಿಯಿಂದ ಸ್ವೀಕರಿಸುವ ಅಂತಹ ಅದ್ಭುತ ಕ್ಷಣಗಳನ್ನು ರಂಗಭೂಮಿ ಸೃಷ್ಟಿಸಿಕೊಡುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.

Roots in the Soil Heart on the Stage An Exclusive Talk with Mandya Ramesh

ರಂಗಭೂಮಿ ಕಲಿಕೆ ಈಗ ಯಾವ ರೀತಿಯಾಗಿ ಬದಲಾಗಿದೆ?

ಮಂಡ್ಯ ರಮೇಶ್: ಹಿಂದೆ ರಂಗಭೂಮಿಯನ್ನು ಕೇವಲ ಒಂದು ಜನಪ್ರಿಯ ಮಾಧ್ಯಮವಾಗಿ ಮತ್ತು ಕೇವಲ ಸಂತೋಷ ಪಡುವುದಕ್ಕೋಸ್ಕರ ಇರುವ ಮನರಂಜನೆಯಾಗಿ ಎಲ್ಲರೂ ಸ್ವೀಕರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಂಗಭೂಮಿಯ ಕಲಿಕೆ ಒಂದು ಚಿಕಿತ್ಸಕ ಪದ್ಧತಿ ಆಗಿ ಬದಲಾಗುತ್ತಿದೆ. ಇದು ಕೇವಲ ನಟನೆಗೆ ಸೀಮಿತವಾಗದೆ, ಸಾಮಾಜಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪ್ರಬಲವಾದ ಮಾಧ್ಯಮವಾಗಿದೆ. ರಂಗಭೂಮಿಯು ಒಬ್ಬ ವ್ಯಕ್ತಿಗೆ ತನ್ನದೇ ಆದ ಮಾದರಿ ವ್ಯಕ್ತಿತ್ವಗಳನ್ನು ಸೃಷ್ಟಿಸಿಕೊಳ್ಳಲು ಮತ್ತು ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಒಂದು ವರ್ಣಮಯ ವೇದಿಕೆಯನ್ನು ಒದಗಿಸುತ್ತದೆ. ಈ ಕಾರಣದಿಂದಲೇ, ಪ್ರಾಥಮಿಕ ಶಾಲೆಯಿಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಮತ್ತು ಆರ್ಮಿ ಟ್ರೈನಿಂಗ್ವರೆಗಿನ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಒಬ್ಬ ನಾಟಕ ಶಿಕ್ಷಕರು ಇರಲೇಬೇಕು ಎಂಬುದು ನನ್ನ ಆಗ್ರಹ. ಅನೇಕ ಮಕ್ಕಳು ಕೇವಲ ಪಾಠಕ್ಕಾಗಿ ಅಲ್ಲ, ಅಲ್ಲಿನ ನಾಟಕ ಮತ್ತು ಆಟಗಳ ಕಲಿಕೆಗಾಗಿ ಕಾಲೇಜಿಗೆ ಬರಲು ಇಷ್ಟಪಡುತ್ತಾರೆ; ಅಂತಹ ವಾತಾವರಣವನ್ನು ರಂಗಭೂಮಿ ನಿರ್ಮಿಸುತ್ತದೆ.

ಇಂದಿನ ಕಲಿಕಾ ಪದ್ಧತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಂಡ್ಯ ರಮೇಶ್: ನನ್ನ ಪ್ರಕಾರ ಇಂದಿನ ಶಿಕ್ಷಣ ಪದ್ಧತಿಯು ಮೇಲ್ನೋಟಕ್ಕೆ ತುಂಬಾ ಜಾಣತನದಿಂದ ಕೂಡಿದೆ ಎಂದು ಅನಿಸಿದರೂ, ಅದು ಮಕ್ಕಳಿಗೆ ಕೇವಲ ಹೊರೆಯಾಗುತ್ತಿದೆ. ಇದು ಕೇವಲ 'ಮಕ್ಕಿ ಕಾ ಮಕ್ಕಿ' ಎನ್ನುವಂತೆ ಕಲಿಸಿಕೊಡುತ್ತದೆಯೇ ಹೊರತು, ಜೀವನಮುಖಿ ವ್ಯಕ್ತಿತ್ವಗಳನ್ನು ಸೃಷ್ಟಿಸುತ್ತಿಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ, ರೋಡ್ ಸೈಡ್‌ನಲ್ಲಿ ಪಂಚರ್ ಹಾಕುವವನು ಯಾವುದೇ ಡಿಪ್ಲೊಮಾ ಮಾಡದಿದ್ದರೂ ತನ್ನ ಕೆಲಸವನ್ನು ಅದ್ಭುತವಾಗಿ ಕಲಿತಿರುತ್ತಾನೆ. ಆದರೆ 'ಮಕ್ಕಿ ಕಾ ಮಕ್ಕಿ' ಪುಸ್ತಕ ನೋಡಿ ಕಲಿತವನಿಗೆ ಎಷ್ಟೋ ಸಮಯದಲ್ಲಿ ಏನನ್ನೂ ಕೊಡಲು ಸಾಧ್ಯವಾಗುವುದಿಲ್ಲ. ಅಂದರೆ, ಸಿನಿಮಾ ಅಥವಾ ನಾಟಕದ ಟ್ರೈನಿಂಗ್‌ಗಿಂತ ಹೆಚ್ಚಾಗಿ ಜೀವನದ ಗ್ರಹಿಕೆಯಿಂದ ಕಲಿಯುವುದು ಮುಖ್ಯ ಮತ್ತು ಅಂತಹ ಗುಣಗಳನ್ನು ರಂಗಭೂಮಿ ಬಹಳ ಸರಳವಾಗಿ ಕಲಿಸಿಕೊಡುತ್ತದೆ. ಇಂದಿನ ಶಿಕ್ಷಣ ಪದ್ಧತಿಯು ಅನೇಕ ಸಂದರ್ಭಗಳಲ್ಲಿ ಬಹಳ ಒರಟಾಗಿದೆ ಮತ್ತು ಸಮಾನತೆಯನ್ನು ಸೃಷ್ಟಿಸುತ್ತಿಲ್ಲ.

ಕಾನ್ವೆಂಟ್ ಶಿಕ್ಷಣ ಮತ್ತು ಸರ್ಕಾರಿ ಶಿಕ್ಷಣದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಸರಿಯಾದ ಸಮಯಕ್ಕೆ ಶಾಲೆಗೆ ಬರುವುದು, ಯೂನಿಫಾರ್ಮ್ ಮತ್ತು ಇತರ ಸೌಲಭ್ಯಗಳ ವಿಷಯದಲ್ಲಿ ಬಹಳಷ್ಟು ತಾರತಮ್ಯಗಳಿವೆ. ಇಂದಿನ ಶಿಕ್ಷಣ ಪದ್ಧತಿಯು ದೇಶದ ಮೇಲಿನ ಪ್ರೀತಿ, ಭ್ರಷ್ಟಾಚಾರ ರಹಿತ ಸಮಾಜದ ನಿರ್ಮಾಣ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಶಕ್ತಿಯನ್ನು ರೂಪಿಸುತ್ತಿಲ್ಲ. ರಂಗಭೂಮಿಯ ಕಲಿಕೆಯು ಇಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

'ಆಸೆ' ಧಾರಾವಾಹಿಯ 800 ಸಂಚಿಕೆಗಳ ಯಶಸ್ಸಿನ ಬಗ್ಗೆ ಏನಂತಿರಾ?

ಮಂಡ್ಯ ರಮೇಶ್: 'ಆಸೆ' ಧಾರಾವಾಹಿಯು 800 ಸಂಚಿಕೆಗಳನ್ನು ಪೂರೈಸಿರುವುದು ನನಗೊಂದು ಅದ್ಭುತವಾದ ಅನುಭವ ನೀಡಿದೆ ಮತ್ತು ಇಂತಹ ತಂಡದ ಜೊತೆ ಕೆಲಸ ಮಾಡಿರುವುದು ನನ್ನೊಳಗೆ ಒಂದು ವಿಶಿಷ್ಟವಾದ ಸಾರ್ಥಕ ಪ್ರಜ್ಞೆಯನ್ನು ಮೂಡಿಸಿದೆ. ಈ ಹಿಂದೆ ಕನ್ನಡ ಜನತೆಗೆ ನಾನು ಕೇವಲ ಒಬ್ಬ ಕಾಮಿಡಿಯನ್ ಆಗಿ ಅಥವಾ 'ಮುದ್ದೇಸಪ್ಪ'ನಂತಹ ಪಾತ್ರಗಳ ಮೂಲಕ ಪರಿಚಿತನಾಗಿದ್ದೆ. ರವಿಚಂದ್ರನ್ ಅವರ ಸಿನಿಮಾದಲ್ಲಿ ಹುಡುಗಿಯಾಗಿ ಮಾಡಿದ ಪಾತ್ರ ಸೇರಿದಂತೆ ಅನೇಕ ಕಾಮಿಡಿ ಪಾತ್ರಗಳನ್ನು ನೋಡಿ ಜನ ನಗುತ್ತಿದ್ದರು. ಆದರೆ ಈ ಧಾರಾವಾಹಿಯ 200-300 ಸಂಚಿಕೆಗಳ ನಂತರ ಜನರ ದೃಷ್ಟಿಕೋನ ಸಂಪೂರ್ಣ ಬದಲಾಯಿತು. ಈಗ ನಾನು ಮದುವೆ ಮನೆಗೆ ಹೋಗಲಿ ಅಥವಾ ಯಾವುದೇ ಗಲ್ಲಿಯಲ್ಲೇ ಇರಲಿ, ಜನ ಹತ್ತಿರ ಓಡಿ ಬಂದು ಕಾಲಿಗೆ ನಮಸ್ಕರಿಸುತ್ತಾರೆ. 'ನಿಮ್ಮಂತಹ ಒಬ್ಬ ಅಪ್ಪ ಬೇಕು', 'ನಿಮ್ಮಂತಹ ಒಬ್ಬ ಗಂಡ ಬೇಕು' ಅಥವಾ 'ನಿಮ್ಮಂತಹ ಒಬ್ಬ ಮಾವ ಬೇಕು' ಎಂದು ಭಾವುಕರಾಗಿ ಮಾತನಾಡುತ್ತಾರೆ. ವಿಶೇಷವಾಗಿ ಸೊಸೆಯನ್ನು ಮಗಳಂತೆ ಕಾಣುವ ಮಾವನ ಪಾತ್ರ ಜನರಿಗೆ ಬಹಳ ಹತ್ತಿರವಾಗಿದೆ.

ನಮ್ಮ ಕಥೆಯಲ್ಲಿ ಮೂವರು ಮಕ್ಕಳಿದ್ದಾರೆ. ಒಬ್ಬ ಮಗ ಓದಿಲ್ಲದಿದ್ದರೂ ಬದುಕನ್ನು ಚೆನ್ನಾಗಿ ಕೂಡಿಟ್ಟುಕೊಳ್ಳುತ್ತಾನೆ, ಇನ್ನೊಬ್ಬ ತುಂಬಾ ಓದಿದ್ದರೂ ಅಪ್ಪ-ಅಮ್ಮನಿಗೆ ಸರಿಯಾಗಿ ಊಟ ಹಾಕುವುದಿಲ್ಲ. ಇಂತಹ ವಾಸ್ತವಿಕ ಅಂಶಗಳನ್ನು ನೋಡಿ ಜನ ಫೋನ್ ಮಾಡಿ, 'ಇದು ಸೇಮ್ ನಮ್ಮ ಮನೆ ಕಥೆ ಸರ್, ನಮಗೆ ಕಾಪಿರೈಟ್ ಕೊಡಬೇಕು' ಎಂದು ಪ್ರೀತಿಯಿಂದ ಹೇಳುತ್ತಾರೆ. ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಇದು ಕೇವಲ ಟಿಆರ್‌ಪಿಗಿಂತ ಮಿಗಿಲಾಗಿ, ಕೂಡು ಕುಟುಂಬದ ಕಥೆಯನ್ನು ಕಾವ್ಯಾತ್ಮಕವಾಗಿ ದೃಶ್ಯ ರೂಪದಲ್ಲಿ ತೋರಿಸುತ್ತಿರುವ ಒಂದು ಅಪೂರ್ವವಾದ ಸಾಮಾಜಿಕ ಸಾಂಸಾರಿಕ ದೃಶ್ಯ ಕಾವ್ಯವಾಗಿದೆ.

ನಿಮ್ಮ 'ರಂಗನಾಥ್' ಪಾತ್ರದ ವಿಶೇಷತೆ ಏನು?

ಮಂಡ್ಯ ರಮೇಶ್: ಆರಂಭದಲ್ಲಿ ನಿರ್ದೇಶಕರು ಈ ಪಾತ್ರವು ಬಹಳ ಸೌಮ್ಯವಾಗಿ ಇರಬೇಕು ಎಂದು ಹೇಳಿದ್ದರು. ಆದರೆ, ಸದಾ ಲವಲವಿಕೆಯಿಂದ ಇರುವ ನನ್ನ ವ್ಯಕ್ತಿತ್ವಕ್ಕೆ ಅತಿಯಾದ ಸೌಮ್ಯತೆ ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಹಾಗಾಗಿ ಪಾತ್ರಕ್ಕೆ ಹೆಚ್ಚಿನ ಮೆರುಗು ನೀಡಲು ನಾನು ಕೆಲವು ಕನ್ನಡದ ಗಾದೆಗಳು, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಬಳಸಲು ನಿರ್ದೇಶಕರಿಗೆ ಸಲಹೆ ನೀಡಿದೆ. ಬರಹಗಾರರು ಮತ್ತು ನಿರ್ದೇಶಕ ಶ್ರೀಕಾಂತ್ ಅವರು ಈ ಬದಲಾವಣೆಗಳಿಗೆ ಪೂರ್ಣ ಬೆಂಬಲ ನೀಡಿದರು. ಈ ಧಾರಾವಾಹಿಯ ಯಶಸ್ಸಿಗೆ ಬರಹಗಾರರು ಮತ್ತು ನಿರ್ದೇಶಕರ ಜಂಟಿ ಕಾರ್ಯಚರಣೆಯೇ ಮುಖ್ಯ ಕಾರಣ. ವಿಶೇಷವಾಗಿ ಭಾವನಾತ್ಮಕ ಸನ್ನಿವೇಶಗಳನ್ನು, ಅಳು ಅಥವಾ ಕೋಪದ ದೃಶ್ಯಗಳನ್ನು ನಮ್ಮ ನಿರ್ದೇಶಕರು ಅತ್ಯಂತ ಪರಿಣಾಮಕಾರಿಯಾಗಿ ತೆರೆಯ ಮೇಲೆ ತರುತ್ತಾರೆ. ಎಷ್ಟೋ ಬಾರಿ ಇವು 'ಮೆಲೋಡ್ರಾಮಾ' ಎನಿಸಬಹುದೇ ಎಂಬ ಆತಂಕ ನನಗಿದ್ದರೂ, ಆ ದೃಶ್ಯಗಳ ಆಪ್ತತೆಯು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ.

'ಆಸೆ' ಧಾರಾವಾಹಿ ಇಷ್ಟೊಂದು ಜನಪ್ರಿಯವಾಗಲು ಕಾರಣವೇನು?

ಮಂಡ್ಯ ರಮೇಶ್: ಈ ಧಾರಾವಾಹಿಯ ಯಶಸ್ಸಿಗೆ ಮೊದಲ ಕಾರಣ ಅದರ ಅದ್ಭುತವಾದ ಕಥಾ ಹಂದರ ಮತ್ತು ಇದಕ್ಕಾಗಿ ಹುಟ್ಟಿ ಬಂದಿದ್ದಾರೇನೋ ಎಂಬಂತೆ ನಟಿಸುತ್ತಿರುವ ಪ್ರತಿಯೊಬ್ಬ ಕಲಾವಿದರ ಮೈದುಂಬಿದ ಅಭಿನಯ. ನನ್ನ ಪತ್ನಿಯಾಗಿ ನಟಿಸುತ್ತಿರುವ ಶಾಂತಿ, ಅದ್ಭುತವಾಗಿ ಕನ್ನಡ ನುಡಿಯುವ ಮಗ ನಿನ್ನಾದ್, ಹಳ್ಳಿ ಹುಡುಗಿಯ ಪಾತ್ರಧಾರಿ ಹಾಗೂ ಓದಿದ ಮಗ ಮತ್ತು ಸೊಸೆಯಂದಿರ ಪಾತ್ರಗಳು ಜನರ ಮನ ಗೆದ್ದಿವೆ. ಈ ಯಶಸ್ಸಿನ ಹಿಂದೆ ನಿರ್ದೇಶಕರಾದ ಮುಸ್ಸಂಜೆ ಮಹೇಶ್, ಶ್ರೀಕಾಂತ್ ಹಾಗೂ ಕಿಟ್ಟಿ ಕೌಶಿಕ್ ಮತ್ತು ಕ್ಯಾಮರಾಮನ್ ಮಲ್ಲಿ ಅವರ ಹಗಲು-ರಾತ್ರಿಯ ಕಠಿಣ ಪರಿಶ್ರಮವಿದೆ. ವಿಶೇಷವಾಗಿ, ಪ್ರೇಕ್ಷಕರು ತೋರುತ್ತಿರುವ ಧಾರಾಳತನ ಮತ್ತು ಸಣ್ಣಪುಟ್ಟ ತಪ್ಪುಗಳಿದ್ದರೂ ಕ್ಷಮಿಸಿ ನೀಡುತ್ತಿರುವ ಬೆಂಬಲವು ನಮಗೆ ದೊಡ್ಡ ಶಕ್ತಿ ನೀಡಿದೆ. ಇದರೊಂದಿಗೆ ಸ್ಟಾರ್ ಸುವರ್ಣ ವಾಹಿನಿಯು ನೀಡುತ್ತಿರುವ ಸೃಜನಶೀಲ ಸ್ವಾತಂತ್ರ್ಯವು ಧಾರಾವಾಹಿಯು ಹೊಸ ಎತ್ತರಕ್ಕೆ ಏರಲು ಸಹಕಾರಿಯಾಗಿದೆ.

'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಸೀರಿಯಲ್‌ನಲ್ಲಿ ನಟಿಸಿದ ಅನುಭವ ಹೇಗಿತ್ತು?

ಮಂಡ್ಯ ರಮೇಶ್: ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ಅಪರ್ಣಾ, ಶ್ರೀನಿವಾಸ ಪ್ರಭು ಮತ್ತು ನವೀನ್ ಕೃಷ್ಣ ಅವರಂತಹ ದಿಗ್ಗಜ ಕಲಾವಿದರ ಜೊತೆ ಕೆಲಸ ಮಾಡಿದ್ದು ನನಗೊಂದು ಮರೆಯಲಾಗದ ಅನುಭವ. ಆರಂಭದಲ್ಲಿ ನಿರ್ದೇಶಕ ನವೀನ್ ಕೃಷ್ಣ ಅವರು ಕೇವಲ 3 ರಿಂದ 5 ದಿನಗಳ ಅತಿಥಿ ಪಾತ್ರಕ್ಕಾಗಿ ನನ್ನನ್ನು ಕರೆದಿದ್ದರು. ಆದರೆ, ನಾನು ಶೂಟಿಂಗ್‌ಗೆ ಬರುತ್ತಿದ್ದ ಶಿಸ್ತು ಮತ್ತು ಆ ಪಾತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಅದನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಮುಂದುವರಿಸಿದರು. ಈ ಧಾರಾವಾಹಿಯು ನನಗೆ ವೃತ್ತಿಪರವಾಗಿ ದೊಡ್ಡ ಸಾಮ್ರಾಜ್ಯ ಕಟ್ಟಲು ಮತ್ತು ಆರ್ಥಿಕವಾಗಿ ಸದೃಢವಾಗಲು ಬಹಳ ಸಹಾಯ ಮಾಡಿತು. ಅಲ್ಲಿ ಸಂಭಾವನೆಯನ್ನು ಅತ್ಯಂತ ಪರ್ಫೆಕ್ಟ್ ಆಗಿ ನೀಡಲಾಗುತ್ತಿತ್ತು. ವಿಶೇಷವೆಂದರೆ, ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿನ ನನ್ನ ಗಂಭೀರ ಅಭಿನಯವನ್ನು ಗಮನಿಸಿಯೇ ನಿರ್ದೇಶಕ ಮಹೇಶ್ ಅವರು 'ಆಸೆ' ಧಾರಾವಾಹಿಯ ಪ್ರಮುಖ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು. ಆ ಸಮಯದಲ್ಲಿ ನಾನು 'ನಾನು ಸೀರಿಯಸ್ ರೋಲ್ ಮಾಡ್ತೀನಿ ಅಂತ ನಿಮಗೆ ಧೈರ್ಯ ಇದೆಯಾ ಮಹೇಶ್?' ಎಂದು ತಮಾಷೆಯಾಗಿ ಕೇಳಿದ್ದೆ. ಆದರೆ ಅವರು ನನ್ನ ಮೇಲೆ ಇಟ್ಟ ನಂಬಿಕೆ ಇಂದು ಆ ಪಾತ್ರವನ್ನು ಮನೆಮಾತಾಗಿಸಿದೆ. ನನ್ನ ವೃತ್ತಿಜೀವನದಲ್ಲಿ 'ನಾಗಮಂಡಲ', 'ಕನಸುಗಾರ', 'ಮಠ' ಸಿನಿಮಾಗಳು ಎಷ್ಟು ಮುಖ್ಯವೋ, 'ಆಸೆ' ಧಾರಾವಾಹಿ ಕೂಡ ಅಷ್ಟೇ ಪ್ರಮುಖವಾದ ಮೈಲಿಗಲ್ಲಾಗಿದೆ.

ಮುಂದುವರೆಯುತ್ತದೆ...

More from Filmibeat

English summary
Roots in the Soil, Heart on the Stage; An Exclusive Talk with Mandya Ramesh.
Read more about: serial tv show mandya ramesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X