ಓದಿದ್ದು ಸಿವಿಲ್ ಇಂಜಿನಿಯರ್.. ಸ್ವಿಗ್ಗಿ..ಝೊಮ್ಯಾಟೊ ಡಿಲೆವರಿ ಮಾಡಿದ್ದವ ಈಗ ಕಿರುತೆರೆಯ ಮೆಚ್ಚಿನ ನಟ!
ಬಣ್ಣದ ಪ್ರಪಂಚನೇ ಹಾಗೇ ಇದು ಬಣ್ಣ ಬಣ್ಣದ ಕನಸುಗಳನ್ನು ಮೂಡಿಸುವ ಲೋಕ. ಒಮ್ಮೆ ಬಣ್ಣ ಹಚ್ಚಿ ನಟಿಸಬೇಕು ಅಂತ ಅನಿಸಿದರೆ ಮುಗೀತು. ಆ ಗೀಳು ಅದೆಷ್ಟೇ ಕಷ್ಟ ಬಂದರೂ ಹೋಗುವುದಿಲ್ಲ. ಹಾಗಂತ ಹೀಗೆ ಕನಸು ಹೊತ್ತು ಬಂದವರೆಲ್ಲ ಯಶಸ್ಸು ಕಂಡಿದ್ದಾರೆ ಅಂತಲ್ಲ. ಹಾಗೂ ಈ ಲೋಕಕ್ಕೆ ಬಂದು ಗೆದ್ದವರ ಹಿಂದೊಂದು ರೋಚಕ ಕಥೆ ಇರುತ್ತೆ. ಅಂತಹವರಲ್ಲಿ ಕಿರುತೆರೆ ನಟ ಅಥರ್ವ ಕೂಡ ಒಬ್ಬರು. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕಿರುತೆರೆಯಲ್ಲಿ ಮಿಂಚುತ್ತಿರುವ ಅಥರ್ವ ಸಿವಿಲ್ ಇಂಜಿನಿಯರ್ ಆಗಿದ್ದವರು. ಆದರೆ ನಟಿಸಬೇಕು ಅನ್ನೋದು ಅವರ ಪ್ಯಾಷನ್. ತನ್ನ ಕನಸನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಅಥರ್ವ ಮಾಡದ ಕೆಲಸ ಒಂದೆರಡಲ್ಲ. ಇಂಜಿನಿಯರಿಂಗ್ ಪದವಿ ಮುಗಿದಿದ್ದರೂ, ನಟನೆಗಾಗಿ ಸ್ವಿಗ್ಗಿ, ಝೊಮ್ಯಾಟೊಗೆ ಡಿಲೆವರಿ ಬಾಯ್ ಕೆಲಸ ಮಾಡಿದ್ದರು. ಕೊನೆಗೂ ತಾನಂದುಕೊಂಡಿದ್ದನ್ನು ಹೇಗೆ ಸಾಧಿಸಿದರು ಅನ್ನೋದನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ನೀವು ಎಲ್ಲಿವರು? ಕಿರುತೆರೆಗೆ ಬರುವುದಕ್ಕೂ ಏನು ಮಾಡುತ್ತಿದ್ರಿ?
"ನನ್ನ ಊರು ಬಂದು ಹಾಸನ. ಓದಿದ್ದೆಲ್ಲ ಹಾಸನದಲ್ಲಿಯೇ.. ಸಿವಿಲ್ ಇಂಜಿನಿಯರಿಂಗ್ ಮಾಡಿದ್ದೇನೆ. ಅದಾದ್ಮೇಲೆ ನಾನು ನನ್ನ ಪ್ಯಾಷನ್ ಅನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದೆ. 2020ರಲ್ಲಿ ಇಂಜಿನಿಯರಿಂಗ್ ಮುಗಿದ ಕೂಡಲೇ ಬಂದೆ. ನಾಟಕ ತಂಡ ಸೇರಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದೆ. ಆ ಕೋವಿಡ್ ಇತ್ತು. ಹಾಗಾಗಿ ನಾಟಕ ಮಾಡುವುದಕ್ಕೆ ಅವಕಾಶವಿರಲಿಲ್ಲ. ಆಗ ಕೋವಿಡ್ ಜಾಗೃತಿ ಮಾಡುವುದಕ್ಕೆ ಅಂತ ಒಂದು ತಂಡ ಸಿಕ್ಕಿತು. ಬೀದಿ ನಾಟಕ ಮಾಡುತ್ತಿದ್ದರು. ಆ ತಂಡ ಸೇರಿಕೊಂಡು ಬೀದಿ ನಾಟಕ ಮಾಡಿದೆ. ಇದರ ಜೊತೆಗೆನೇ ಝೊಮ್ಯಾಟೊ, ಸ್ವಿಗ್ಗಿ ಅಂತ ಕೆಲಸ ಮಾಡಿದೆ. ವಿ2ಒನ್ ಅಂತ ಒಂದು ಯೂಟ್ಯೂಬ್ ಚಾನೆಲ್ ಇತ್ತು. ಅದರಲ್ಲಿ ಒಂದು ಆರು ತಿಂಗಳು ಕೆಲಸ ಮಾಡಿದೆ. ಇದು ಹಿನ್ನೆಲೆಯಲ್ಲಿ ನಡೀತಾ ಇತ್ತು. ಜೊತೆ ನಾಟಕಗಳನ್ನು ಮಾಡುತ್ತಿದ್ದೆ."
ಈಗ ನಿಮ್ಮ ತಂದೆ ತಾಯಿ ಏನಂತಾರೆ?
"ನಮ್ಮ ಮನೆಯಲ್ಲಿ ಆಕ್ಟಿಂಗ್‌ಗೆ ಒಪ್ಪಲಿಲ್ಲ. ಓದಿದ್ದೀಯಾ ಚೆನ್ನಾಗಿ ಕೆಲಸಕ್ಕೆ ಹೋಗು ಅಂತಿದ್ದರು. ಯಾರಿಗೆ ಆದರೂ ತಂದೆ ತಾಯಿಗೆ ಆತಂಕ ಇರುತ್ತೆ. ಮನೆಯಲ್ಲಿ ನಾನು 2 ವರ್ಷ ಟೈಮ್ ಹೇಳಿದ್ದೆ. ಒಂದು ವೇಳೆ ವರ್ಕ್ ಆಗಿಲ್ಲ ಅಂದರೆ, ನಾನು ವಾಪಸ್ ಇಂಜಿನಿಯರಿಂಗ್ ಕೆಲಸಕ್ಕೆ ಹೋಗುತ್ತೇನೆ ಅಂತ ಪ್ರಾಮಿಸ್ ಮಾಡಿದ್ದೆ. ಸದ್ಯ ಕೋವಿಡ್ ಮುಗಿಯುತ್ತಿದ್ದಂತೆ ಅವಕಾಶಗಳು ಸಿಗುವುದಕ್ಕೆ ಆರಂಭ ಆಗಿತ್ತು. ಈಗ ತುಂಬಾನೇ ಸಪೋರ್ಟ್ ಮಾಡುತ್ತಿದ್ದಾರೆ"

ಮೊದಲ ಧಾರಾವಾಹಿಗೆ ಅವಕಾಶ ಸಿಕ್ಕಿದ್ದೇಗೆ?
"ಪ್ರದೀಪ್ ತಿಪಟೂರು ಒಂದು ನಮ್ಮ ಗುರುಗಳು ಪರಿಚಯವಾದರು. ಕನ್ಯಾಕುಮಾರಿ ಆಡಿಷನ್‌ಗೆ ಹೋದಾಗ ಅಲ್ಲಿ ಪರಿಚಯವಾದರು. ಅವರು ಒಂದು ನಾಟಕ ಶುರು ಮಾಡಿದರು. ಕತ್ತಲೆ ದಾರಿ ದೂರ ಅಂತ ಹೇಳಿ. ಅವಾಗ ನನಗೆ ಮೊದಲು ಸ್ಟೇಜ್‌ನಲ್ಲಿ ನಾಟಕ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಅವರು ಕೆಳಗೆ ನಾನು ಕೆಲಸ ಮಾಡಿದೆ. ಒಂದು 50 ರಿಂದ 70 ಆಡಿಷನ್ ಕೊಟ್ಟೆ ಯಾವುದೂ ವರ್ಕ್‌ಔಟ್ ಆಗುತ್ತಿರಲಿಲ್ಲ. ಈ ವೇಳೆ ಒಂದಷ್ಟು ಶಾಂತಂ ಪಾಪಂ ಎಪಿಸೋಡ್ ಮಾಡಿದೆ. ಕಮಲಿಯಲ್ಲಿ ಒನ್ ಡೇ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. ಇಷ್ಟು ಆಡಿಷನ್ ಕೊಟ್ಟ ಮೇಲೆ ಸಿರಿಕನ್ನಡದಲ್ಲಿ ರಜಿಯಾ ರಾಮ್ ಅನ್ನುವ ಸೀರಿಯಲ್‌ನಲ್ಲಿ ನಟಿಸುವುದಕ್ಕೆ ಒಂದು ಅವಕಾಶ ಸಿಕ್ಕಿತ್ತು. ಅದು 500 ಎಪಿಸೋಡ್ ಎರಡು ವರ್ಷ ಆದ್ಮೇಲೆ ಮುಗೀತು."
ರಜಿಯಾ ರಾಮ್ ಬಳಿಕ ಹೇಗಿತ್ತು ಜರ್ನಿ?
"ರಜಿಯಾ ರಾಮ್ ಮುಗಿಯುತ್ತಿದ್ದಂತೆ ಗೌರಿಶಂಕರ ಅನ್ನೋ ಧಾರಾವಾಹಿ ಸಿಕ್ಕಿತು ಸ್ಟಾರ್ ಸುವರ್ಣದಲ್ಲಿ. ಅದು ನೆಗೆಟಿವ್ ಪಾತ್ರ. ಅದರಲ್ಲಿ ಮಂಜ ಅಂತ ಪಾತ್ರ ಮಾಡಿದೆ. ಒಂದು ನೂರು ಎಪಿಸೋಡ್ ಮಾಡಿದೆ. ನನ್ನ ಪಾತ್ರ ಅಷ್ಟೇ ಇದ್ದಿದ್ದು. ಆನಂತ್ರ ಜೀ ಕನ್ನಡಕ್ಕೆ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮಾಡಿದೆ. ಈಗ ಅದರಲ್ಲಿ ನೆಗೆಟಿವ್ ಶೇಡ್ ಮಾಡುತ್ತಿದ್ದೇನೆ. ಈ ಪಾತ್ರ ಮಾಡುತ್ತಿರುವಾಗಲೇ ಸ್ಟಾರ್ ಸುವರ್ಣದವರು ಮತ್ತೊಂದು ಅವಕಾಶ ಕೊಟ್ಟರು. ನೀನಾದೆ ನಾ ಧಾರಾವಾಹಿಯಲ್ಲಿ ಇನ್‌ಸ್ಟೆಕ್ಟರ್ ವಿಶ್ವ ಪಾತ್ರ ಕೊಟ್ಟರು. ಇದು ಸೀಸನ್ 2, ಚೆನ್ನಾಗಿ ಮೂಡಿಬರುತ್ತಿದೆ."
ನೆಗೆಟಿವ್ ಪಾತ್ರಗಳು ಯಾಕೆ?
"ನಾನು ಒಬ್ಬ ಒಳ್ಳೆಯ ಆರ್ಟಿಸ್ಟ್ ಆಗಬೇಕು ಅಂತ ಬಂದಿದ್ದೇನೆ. ನನಗೆ ಪಾಸಿಟಿವ್, ನೆಗೆಟಿವ್ ಅಂತೇನೂ ಇಲ್ಲ. ಹಾಗಾಗಿ ಈ ಪಾತ್ರವನ್ನು ತೆಗೆದುಕೊಂಡಿದ್ದೇನೆ. ಆದರೆ, ಬ್ಯಾಕ್ ಟು ಬ್ಯಾಕ್ ಸಿಗುತ್ತಿದೆ. ನೆಗೆಟಿವ್ ಪಾತ್ರಗಳನ್ನು ಮಾಡುವಾಗ ಯಾವುದೇ ಅಡೆತಡೆಗಳಿರುವುದಿಲ್ಲ. ಗೌರಿಶಂಕರ, ಶ್ರಾವಣಿ ಸುಬ್ರಹ್ಮಣ್ಯ, ನೀನಾದೇ ನಾ ಪ್ರತಿಯೊಂದು ಪಾತ್ರಕ್ಕೂ ನಾನು ಬದಲಾಗುತ್ತಿದ್ದೇನೆ."

ನೀನಾದೆ ನಾ ಪಾತ್ರ ಒಪ್ಪಿದ್ದೇಕೆ?
"ನನಗೆ ನೀನಾದೆ ನಾ ಪಾತ್ರ ಮಾಡುವಾಗ ಒಂದು ತೂಕವಿರಬೇಕು. ನಾನು ಇದೂವರೆಗೂ ಪೊಲೀಸ್ ಪಾತ್ರವನ್ನು ಮಾಡಿಯೇ ಇಲ್ಲ. ಈ ಪಾತ್ರ ಸಿಕ್ಕಿದಾಗ ಖುಷಿ ಆಯ್ತು. ಮೊದಲು ಈ ಪಾತ್ರನೂ ನೆಗೆಟಿವ್ ಇದೆಯಲ್ಲ ತಗೋಬೇಕಾ ಬೇಡ್ವಾ ಅಂತ ಯೋಚನೆ ಮಾಡಿದ್ದೆ. ಆದರೆ, ಪೊಲೀಸ್ ಪಾತ್ರ ಆಗಿದ್ದರಿಂದ ಟ್ರೈ ಮಾಡೋಣ ಅಂತ ತೆಗೆದುಕೊಂಡೆ. ಈ ಪಾತ್ರ ಈಗ ವೇದ ಅವರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದೆ. ಕೆಟ್ಟ ರೀತಿಯಲ್ಲಿ ಆದರೂ ಪರ್ವಾಗಿಲ್ಲ. ಅವರನ್ನು ಪಡೆದುಕೊಳ್ಳಬೇಕು. ಹೀಗೆ ಸಾಗುತ್ತಿದೆ ನನ್ನ ಪಾತ್ರ"
ಈ ಇಂಡಸ್ಟ್ರಿಯಲ್ಲಿ ಗೆಲ್ಲುತ್ತೇನೆ ಅನಿಸಿದ್ಯಾವಾಗ?
"ಆರಂಭದಲ್ಲಿ 70 ಆಡಿಷನ್ ಕೊಟ್ಟಾಗ ಡೌನ್ ಆಗಿಬಿಟ್ಟೆ ಅಂತ ಅನಿಸಿತ್ತು. ಎಷ್ಟು ಟ್ರೈ ಮಾಡಿದರೂ ಏನೂ ಆಗುತ್ತಿರಲಿಲ್ಲ. ನನ್ನದೇನು ತಪ್ಪಿದೆ ಅಂತ ಯಾರೂ ಹೇಳುತ್ತಲೂ ಇಲ್ಲ. ಯಾಕಂದ್ರೆ, ಯಾರೂ ನನ್ನನ್ನು ಕರೆಯುತ್ತಿಲ್ಲ. ಪಾಸಿಟಿವ್ ಹೋಪ್ಸ್ ಕೊಡುತ್ತಿಲ್ಲ. ರಜಿಯಾ ರಾಮ್ ಯಾವಾಗ ಸಿಕ್ಕಿತೋ ಆಗ ನನಗೆ ಕಾನ್ಫಿಡೆನ್ಸ್ ಬಂತು. ಈ ಇಂಡಸ್ಟ್ರಿಯಲ್ಲಿ ಗೆಲ್ಲಬಹುದು ಅಂತ ಕಾನ್ಫಿಡೆನ್ಸ್ ಬಂತು. ಇದನ್ನು ಬಿಟ್ಟು ಇನ್ನೊಂದು ಆಲೋಚನೆ ಬಂದೇ ಇಲ್ಲ. ಇಂಜಿನಿಯರಿಂಗ್ ಮಾಡಿದಾಗ ಒಂದು ಕಡೆ ಕೆಲಸ ಮಾಡುತ್ತಿದ್ದೆ. ಒಳ್ಳೆಯ ಹಣ ಬರುತ್ತಿದ್ದರೂ, ಪ್ಯಾಷನ್ ಕಡೆಗೆ ಹೋಗು ಅಂತ ಮನಸ್ಸು ಹೇಳುತ್ತಿತ್ತು. ಈಗ ನನಗೆ ಖುಷಿಯಿದೆ."
ಮುಂದಿನ ಪ್ರಾಜೆಕ್ಟ್ ಯಾವುವು?
"ಈಗ ಒಂದು ಸಿನಿಮಾ ಮಾಡುತ್ತಿದ್ದೇನೆ. ಇನ್ನೂ ಅವರು ಟೈಟಲ್ ರಿವೀಲ್ ಮಾಡಿಲ್ಲ. ಅರ್ಧ ಶೂಟ್ ಆಗಿದೆ. ಈ ವರ್ಷದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಅದು ಬಿಟ್ಟು ಸಿನಿಮಾ ಮಾಡಬೇಕು ಅಂತ ತುಂಬಾನೇ ಆಸೆಯಿದೆ. ಸೀರಿಯಲ್‌ನಲ್ಲಿ ಮತ್ತೇನು ಅಪ್‌ಡೇಟ್ ಇಲ್ಲ. ಯಾಕಂದ್ರೆ ಎರಡು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದೇನೆ. ಸಮಯದ ಅಭಾವವಿದೆ. ಅದು ಬಿಟ್ಟರೆ ಸಿನಿಮಾದಲ್ಲಿ ಒಂದೊಳ್ಳೆ ವಿಲನ್ ಆಗಬೇಕು. ಇಲ್ಲ ಹೀರೋ ಆಗಿ ಮಾಡಬೇಕು. ಅಷ್ಟೇ"


Click it and Unblock the Notifications











