ಐಎಎಸ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಈ ನಟಿ ಅದೇ ಪಾತ್ರದಿಂದಲೇ ಫೇಮಸ್ ಆಗ್ಬಿಟ್ರು: ಯಾರೀ ನಟಿ? ಇವರ ಹಿನ್ನೆಲೆಯೇನು?
ಅಪ್ಪಟ ಕನ್ನಡದ ಈ ನಟಿ ಕೇವಲ ಕಿರುತೆರೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಈ ನಟಿಯ ಹೆಸರು ತೇಜಸ್ವಿನಿ ಶೇಖರ್. ಕನ್ನಡದಲ್ಲಿ ಹಲವು ಜನಪ್ರಿಯ ಧಾರಾವಾಹಿಯಲ್ಲಿ ವೀಕ್ಷಕರು ಎಂದೂ ಮರೆಯದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
'ಮಧುಬಾಲ', 'ಸಂಘರ್ಷ', 'ಸೌಭಾಗ್ಯವತಿ', 'ನೀಲಿ', 'ರೇಣುಕಾ ಯಲ್ಲಮ್ಮ'ಯಂತಹ ಧಾರಾವಾಹಿಗಳಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀದೇವೀ ಮಹಾತ್ಮೆ' ಧಾರಾವಾಹಿಯಲ್ಲಿ ಅನಸೂಯಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ತಂದೆ ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕೆಂಬ ಆಸೆಯಿತ್ತು. ಆದರೆ, ನಟನೆ ಇವರನ್ನು ಕಿರುತೆರೆಗೆ ಎಳೆದು ತಂದಿತ್ತು. ವಿಶೇಷ ಅಂದರೆ, ಇವರಿಗೆ ಅದೇ ಐಎಎಸ್ ಪಾತ್ರವೇ ಜನಪ್ರಿಯತೆ ತಂದುಕೊಟ್ಟಿತ್ತು. ಈ ಬಗ್ಗೆ ತೇಜಸ್ವಿನಿ ಶೇಖರ್ ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನೀವು ಕಿರುತೆರೆ ಎಂಟ್ರಿ ಕೊಟ್ಟಿದ್ದೇಗೆ?
"ನಾನು ಡಿಗ್ರಿ ಮುಗಿದ ಕೂಡಲೇ ಸಿಎ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ. ಅದಕ್ಕಾಗಿ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೆ. ಆಗ ವಿನು ಬಳಂಜ ಅವರು ನನ್ನ ಫೋಟೊವನ್ನು ಫೇಸ್‌ಬುಕ್‌ನಲ್ಲಿ ನೋಡಿ ನನಗೆ ಆಡಿಷನ್ ಅಟೆಂಡ್ ಮಾಡುತ್ತೀರಾ ಎಂದು ಅಪ್ರೋಚ್ ಮಾಡಿದರು. ಆಗ ಅವರ 'ಪ್ರೀತಿ ಇಲ್ಲದ ಮೇಲೆ' ಸೀರಿಯಲ್ ತುಂಬಾನೇ ಹಿಟ್ ಆಗಿತ್ತು. ನಮ್ಮನೆಯಲ್ಲಿ ಎಲ್ಲರೂ ಅವರ ಸೀರಿಯಲ್ ಅನ್ನು ನೋಡುತ್ತಿದ್ದರು. ಹೀಗಾಗಿ ಅವರು ಯಾರು ಅಂತ ಗೊತ್ತಿತ್ತು. ಅಷ್ಟು ದೊಡ್ಡ ಕ್ಯಾರೆಕ್ಟರ್ ಕೇಳುತ್ತಿದ್ದಾರಲ್ಲ ನೋಡೋಣ ಅಂತ ಬಂದಿದ್ದು. ಅದೇ ವೇಳೆ ಹಯವದನ ಅವರೂ ನನಗೆ ಆಫರ್ ಕೊಟ್ಟಿದ್ದರು. ಇಬ್ಬರದ್ದೂ ಆಡಿಷನ್ ಒಂದೇ ದಿನ ಇತ್ತು. ಅಟೆಂಟ್ ಮಾಡಿದೆ. ಎರಡರಲ್ಲೂ ಸೆಲೆಕ್ಟ್ ಆದೆ. ಆದರೆ, ವಿನು ಬಳಂಜ ಅವರು ಗಾಂಧಾರಿ ಮಾಡಬೇಕಿತ್ತು. ಆದರೆ, ಅದು ಟೇಕಾಫ್ ಆಗಲಿಲ್ಲ. ಆಗ ಹಯವದನ ಅವರ ಮಧುಬಾಲ ಶುರುವಾಯ್ತು. ಇದರಲ್ಲಿ ನಟಿಸುತ್ತಿದ್ದೆ. ಆಗ ಕಲರ್ಸ್ ಕನ್ನಡದಿಂದ ರವಿ ಕಿರಣ್ ಅವರು ಕರೆದರು. ಸೌಭಾಗ್ಯವತಿ ಬಂತು. ಆ ಸೀರಿಯಲ್ ಅನ್ನು ಮಾಡಿದೆ. ಹಾಗೆ ತಮಿಳು ಸೀರಿಯಲ್‌ಗಳು ಬಂದವು. ಅದನ್ನು ಮಾಡಿದೆ. ಹಾಗೇ ಆಫರ್‌ಗಳು ಸಿಗುತ್ತಾ ಹೋಯ್ತು. ಹಾಗೇ ಐದಾರು ವರ್ಷ ಕಳೆದು ಹೋಯ್ತು. ನಾನು ಇದನ್ನೇ ಎಂಜಾಯ್ ಮಾಡುವುದಕ್ಕೆ ಶುರು ಮಾಡಿದೆ."
ನಿಮ್ಮ ಮೊದಲ ಧಾರಾವಾಹಿ ಬಗ್ಗೆ ಹೇಳಿ
"ನಾನು ಮಾಡಿದ ಫಸ್ಟ್ ಸೀರಿಯಲ್ ಮಧುಬಾಲ. ಅದು ಸುವರ್ಣದಲ್ಲಿಯೇ ಬಂದಿತ್ತು. ಅದಕ್ಕಿಂತ ಮುಂಚೆ ನಾನು ಕ್ಯಾಮರಾವನ್ನು ಫೇಸ್ ಮಾಡಿಯೇ ಇರಲಿಲ್ಲ. ಸ್ಕೂಲ್‌ನಲ್ಲಿ, ಕಾಲೇಜ್‌ನಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ಅಷ್ಟೇ ಮಾಡಿರೋದು. ಅದು ಬಿಟ್ಟರೆ, ನಾನು ಕ್ಯಾಮರಾ ಫೇಸ್ ಮಾಡಿ ಅನುಭವ ಇಲ್ಲವೇ ಇಲ್ಲ. ಸಮರ್ ಕ್ಯಾಂಪ್‌ನಲ್ಲಿ ಒಂದು ನಾಟಕ ಮಾಡಿದ್ದೆ ಅಷ್ಟೇ. ನನಗೆ ಮೇಕಪ್ ಅಂದರೆ ಏನು ಅಂತಾನೇ ಗೊತ್ತಿರಲಿಲ್ಲ."
ತಂದೆಯ ಐಎಎಸ್ ಆಸೆ ಈಡೇರಿಸಿದ್ದೇಗೆ?
"ನಾನು ಚೆನ್ನಾಗಿ ಓದುತ್ತಿದ್ದೆ. ಅದಕ್ಕೆ ನಮ್ಮ ಮನೆಯಲ್ಲಿಯೂ ಅದೇ ಆಯ್ತು. ನಮ್ಮ ತಂದೆಗೆ ಐಎಎಸ್ ಮಾಡಿಸಬೇಕು ಅಂತ ಆಸೆಯಿತ್ತು. ಹಾಗಾಗಿ ಅವರಿಗೆ ಓದಬೇಕು ಅಂತಾನೇ ಆಸೆಯಿತ್ತು. ಈ ಫೀಲ್ಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಅಂತ ಊಹೆ ಕೂಡ ಮಾಡಿಕೊಂಡಿರಲಿಲ್ಲ. ನನಗೂ ಇದು ಗೊತ್ತಿರಲಿಲ್ಲ. ಅಪ್ಪನಿಗೆ ಇಷ್ಟವಿರಲಿಲ್ಲ. ನಮ್ಮ ಸಂಬಂಧಿಕರೂ ಕೂಡ ಸಪೋರ್ಟಿವ್ ಆಗಿರಲಿಲ್ಲ. ಅಮ್ಮ ಒಬ್ಬರೇ ಬೆಂಬಲಕ್ಕೆ ನಿಂತಿದ್ದು. ಅಪ್ಪ ನನ್ನ ಜೊತೆ ಸ್ವಲ್ಪ ದಿನ ಮಾತೇ ಆಡುತ್ತಿರಲಿಲ್ಲ. ಅಮ್ಮ ನನ್ನ ಜೊತೆ ಯಾವಾಗಲೂ ಬೆಂಗಳೂರಿಗೆ ಬರುತ್ತಿದ್ದರು. ಆಮೇಲೆ ನನ್ನನ್ನು ಸ್ಕ್ರೀನ್ ಮೇಲೆ ನೋಡಿದ ಮೇಲೆ ಓಕೆ ಆಯ್ತು. ನಮ್ಮ ಮನೆಯಲ್ಲಿ ಯಾರಿಗೂ ಇಂಡಸ್ಟ್ರಿ ಗೊತ್ತೇ ಇರಲಿಲ್ಲ. ಹಾಗಾಗಿ ಸ್ವಲ್ಪ ಭಯವಿತ್ತು. ಸಂಘರ್ಷ ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿಯಾಗಿ ನಟಿಸಿದೆ. ಹೀಗಾಗಿ ಆ ಪಾತ್ರ ನನ್ನ ಹೃದಯಕ್ಕೆ ತುಂಬಾನೇ ಹತ್ತಿರ."

ನೀವು ನಟಿಸಿದ ಯಾವ ಧಾರಾವಾಹಿ ನಿಮಗಿಷ್ಟ?
"ಎಲ್ಲಾ ಸೀರಿಯಲ್‌ನಲ್ಲೂ ಒಂದೊಂದು ಎಕ್ಸ್‌ಪೀರಿಯನ್ಸ್ ಸಿಕ್ಕಿದೆ. ಪ್ರತಿಯೊಂದು ಸೀರಿಯಲ್‌ನಲ್ಲೂ, ಪ್ರತಿಯೊಬ್ಬ ಡೈರೆಕ್ಟರ್‌ನಿಂದಲೂ ಕಲಿತಿದ್ದೀನಿ. ನನಗೆ ಎಲ್ಲರೂ ಒಳ್ಳೆಯ ಡೈರೆಕ್ಟರ್‌ಗಳು ಸಿಕ್ಕಿದ್ದಾರೆ. ಒಳ್ಳೊಳ್ಳೆ ಪ್ರಡ್ಯೂಸರ್‌ಗಳು ಸಿಕ್ಕಿದ್ದಾರೆ. ಎಲ್ಲಾ ಸೀರಿಯಲ್ ತಂಡವರ ಜೊತೆ ಫ್ಯಾಮಿಲಿ ತರ ಕೆಲಸ ಮಾಡಿದ್ದೇವೆ. ಅದರಲ್ಲಿ ತುಂಬಾನೇ ಹತ್ತಿರ ಆಗಿದ್ದು ಅಂದರೆ, ಶ್ರುತಿ ನಾಯ್ಡು ಕಂಪನಿ ಹಾಗೂ ರಮೇಶ್ ಇಂದಿರಾ ಸರ್."
ನಿಮಗೂ ಸುವರ್ಣಗೂ ಬಿಡಲಾದ ನಂಟು ಅಲ್ವಾ?
"ಸುವರ್ಣಗೂ ನನಗೂ ಬಿಡಲಾರದ ನಂಟು. ನನ್ನ ಮೊದಲ ಸೀರಿಯಲ್ ಸುವರ್ಣದಲ್ಲಿಯೇ. ಅದಾದ್ಮೇಲೆ ಸಂಘರ್ಷ ಮಾಡಿದೆ. ರೇಣುಕಾ ಯಲ್ಲಮ್ಮ ಮಾಡಿದೆ. ಈಗ ಶ್ರೀದೇವೀ ಮಹಾತ್ಮೆ ಮಾಡುತ್ತಿದ್ದೇನೆ. ಕಸ್ತೂರಿ ಚಾನೆಲ್ ಒಂದು ಬಿಟ್ಟು ಎಲ್ಲಾ ಚಾನೆಲ್‌ನಲ್ಲೂ ಕೆಲಸ ಮಾಡಿದ್ದೇನೆ. ಆದರೆ, ಸುವರ್ಣದಲ್ಲಿಯೇ ಹೆಚ್ಚು ಸೀರಿಯಲ್ ಮಾಡಿದ್ದೇನೆ. ಒಟ್ಟು ಐದು ಪ್ರಾಜೆಕ್ಟ್‌ಗಳನ್ನು ಇಲ್ಲೇ ಮಾಡಿದ್ದೇನೆ."
ನಿಮ್ಮನ್ನು ಹೆಚ್ಚು ಇಷ್ಟಪಟ್ಟಿದ್ದು ಯಾವ ಸೀರಿಯಲ್‌ನಲ್ಲಿ?
"ಎಲ್ಲಾ ಸೀರಿಯಲ್‌ನಲ್ಲೂ ಒಂದೊಂದು ಕಾಂಟ್ರಿಬ್ಯೂಷನ್ ಇದೆ. ಈಗ ಸಂಘರ್ಷದಲ್ಲಿ ಒಂದು ರೀತಿ ಇಷ್ಟ ಪಟ್ಟರು. ರಾಧಿಕಾದಲ್ಲಿ ಒಂದು ರೀತಿ ಇಷ್ಟ ಪಟ್ಟರು. ರೇಣುಕಾ ಯಲ್ಲಮ್ಮದಲ್ಲೂ ಒಂದು ರೀತಿ ಇಷ್ಟ ಪಟ್ಟರು. ಎಲ್ಲದರಲ್ಲೂ ನನಗೆ ಒಳ್ಳೆಯ ಹೆಸರು ಬಂದಿದೆ. ಒಂದು ಸೀರಿಯಲ್‌ನಲ್ಲಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇವತ್ತಿಗೂ ಸೌಭಾಗ್ಯವತಿ ಧಾರಾವಾಹಿಯಿಂದ ಗುರುತಿಸುತ್ತಾರೆ. ಕೆಲವೊಬ್ಬರು ಮೇಘನಾ ಟೀಚರ್ ಅಂತ ಮಹಾನದಿ ಸೀರಿಯಲ್‌ನಿಂದ ಕರೆಯುತ್ತಾರೆ. ಎಲ್ಲಾ ಸೀರಿಯಲ್‌ನಿಂದಲೂ ಗುರುತಿಸುತ್ತಾರೆ. ಕನ್ನಡದಲ್ಲಿ ಮಹಾನದಿ ಸೀರಿಯಲ್‌ನ ಟೀಚರ್ ರೋಲ್ ಅನ್ನು ಜನರು ತುಂಬಾನೇ ಇಷ್ಟ ಪಟ್ಟಿದ್ದರು. ಸಂಘರ್ಷದ ಸೀರಿಯಲ್ ಕೂಡ ಜನಪ್ರಿಯತೆ ಕೊಟ್ಟಿತ್ತು. ಯಾಕಂದ್ರೆ, ನನಗೆ ಇನ್‌ಸ್ಟಾಗ್ರಾಂನಲ್ಲೆಲ್ಲ ಮೆಸೇಜ್ ಮಾಡುತ್ತಿದ್ದರು. ಐಎಎಸ್ ಕ್ಯಾರೆಕ್ಟರ್ ಅಲ್ವಾ? ಈ ಪಾತ್ರ ನೋಡಿದರೆ ನಮಗೆ ಸ್ಪೂರ್ತಿ. ನಾನು ಐಎಎಸ್ ಮಾಡಬೇಕು ಅಂತಿದ್ದೀನಿ ಎಂದು ಮೆಸೇಜ್ ಮಾಡುತ್ತಿದ್ದರು. ಹೀಗಾಗಿ ಸಂಘರ್ಷ ಧಾರಾವಾಹಿಯಲ್ಲೂ ಹೆಚ್ಚು ಜನಪ್ರಿಯತೆ ಸಿಕ್ಕಿತ್ತು."

ಹರ ಹರ ಮಹಾದೇವ ಸೀರಿಯಲ್ ಕೈ ಬಿಟ್ಟಿದ್ದೇಕೆ?
"ನನಗೆ ಮೊದಲು ಸ್ಟಾರ್ ಸುವರ್ಣದಲ್ಲಿಯೇ ಹರ ಹರ ಮಹಾದೇವ ಅಂತ ಒಂದು ಸೀರಿಯಲ್ ಒಂದಿತ್ತು. ಸಂಗೀತಾ ಶೃಂಗೇರಿ ನಟಿಸಿದ್ದರು. ಆ ಸೀರಿಯಲ್‌ಗೆ ನನಗೆ ಮೊದಲು ಆಫರ್ ಬಂದಿತ್ತು. ನಾನು ಆಗ ನಾನು ತೆಲುಗು ಹಾಗೂ ತಮಿಳು ಸೀರಿಯಲ್ ಅನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದೆ. ಆಗ ಮುಂಬೈ ಟೀಮ್ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಅವರು ಸ್ಕ್ರೀನ್ ಟೆಸ್ಟ್‌ಗೆ ಅಂತ ಕರೆದರು. ಆಗ ನನ್ನನ್ನು ಆಯ್ಕೆ ಮಾಡಿದ್ದರು. ಆಗ ಅವರು ಎರಡೂ ಸೀರಿಯಲ್ ಅನ್ನು ಬಿಡಬೇಕು. ಯಾಕಂದ್ರೆ, ತುಂಬಾನೇ ದೊಡ್ಡ ಹೋರ್ಡಿಂಗ್ಸ್ ಬರುತ್ತೆ. ಇದೊಂದರಲ್ಲೇ ಕಾಣಿಸಿಕೊಳ್ಳಬೇಕು. ಸತಿ ಕ್ಯಾರೆಕ್ಟರ್ ಆರು ತಿಂಗಳು ಇರುತ್ತೆ. ಅದಾದ್ಮೇಲೆ ಅವಳು ಸತ್ತು ಹೋಗುತ್ತಾಳೆ. ಆ ಪಾತ್ರ ಹೇಗಿರುತ್ತೆ ಅಂತ ನೋಡಿದ ಮೇಲೆ ನಿಮ್ಮ ಪಾತ್ರವನ್ನು ಮುಂದುವರೆಸಬಹುದು. ಇಲ್ಲದೆಯೂ ಇರಬಹುದು. ಡೌಟ್ ಇದೆ ಅಂತ ಹೇಳಿದರು. ಇತ್ತ ಶ್ರುತಿ ನಾಯ್ಡು ಅವರು ಮಹಾನದಿ ಸೀರಿಯಲ್‌ಗೆ ಕರೆದು ಮಾತಾಡಿಸಿದ್ದರು. ಎರಡೂ ಆಯ್ಕೆ ಇತ್ತು. ಕೇವಲ ಆರು ತಿಂಗಳಿಗೆ ಏನಕ್ಕೆ ಸೀರಿಯಲ್ ಬಿಡಬೇಕು ಅಂದ್ಕೊಂಡು ಮಹಾನದಿಯನ್ನು ಆಯ್ಕೆ ಮಾಡಿದ್ದೆ. ಆಗ ಪೌರಾಣಿಕ ಸೀರಿಯಲ್ ಬಿಟ್ಟಿದ್ದೆ. ಮತ್ತೆ ರೇಣುಕಾ ಯಲ್ಲಮ್ಮದಲ್ಲಿ ಪೌರಾಣಿಕಾ ಪಾತ್ರ ಸಿಕ್ತು."
ಶ್ರೀದೇವೀ ಮಹಾತ್ಮೆ ಸೀರಿಯಲ್ ಒಪ್ಪಿದ್ದೇಕೆ?
"ರೇಣುಕಾ ಯಲ್ಲಮ್ಮ ಧಾರಾವಾಹಿಯ ಅರವಿಂದ್ ಅವರೇ ಶ್ರೀದೇವೀ ಮಹಾತ್ಮೆ ಸೀರಿಯಲ್ ಮಾಡಿ ಅಂದರು. ನನಗೂ ಈ ಪಾತ್ರ ತುಂಬಾನೇ ಖುಷಿ ಆಯ್ತು. ಈ ಪಾತ್ರ ತುಂಬಾನೇ ಚೆನ್ನಾಗಿದೆ. ನಾನು ನಟಿಸುತ್ತಿರುವ ಅನಸೂಯಾ ಪಾತ್ರದ ಬಗ್ಗೆ ಹೇಳಬೇಕು ಅಂದರೆ, ಅವಳು ಮಹಾ ಪತಿವ್ರತೆ. ಅವಳಿಗೆ ಶ್ರೇಷ್ಠ ಸ್ಥಾನ ಇರುತ್ತೆ. ಅವಳಿಗೆ ಮಕ್ಕಳು ಇರುವುದಿಲ್ಲ. ಅದೇ ಅವಳ ಕೊರತೆ. ಹೀಗಾಗಿ ತ್ರಿಮೂರ್ತಿಗಳನ್ನೇ ಮಕ್ಕಳಾಗಿ ಪಡೆಬೇಕು ಅಂತ ಬಯಸುತ್ತಾಳೆ. ತ್ರಿಮೂರ್ತಿಗಳು ಲೋಕವನ್ನೇ ಆಳುವವರು. ಅವರೇ ಮಕ್ಕಳಾಗಿ ಬಂದರೆ, ಲೋಕದ ಕಥೆಯೇನು? ಸಮಸ್ಯೆಗಳು ಏನಾಗುತ್ತೆ? ಆ ಮಕ್ಕಳನ್ನು ಹೇಗೆ ಸಾಕುತ್ತಾಳೆ? ಅದೇ ಕಥೆ."
ಅನಸೂಯಾ ಪಾತ್ರದ ಬಗ್ಗೆ ಹೇಳಿ
"ನನಗೆ ಅನಸೂಯಾ ಲುಕ್ ತಂಬಾನೇ ಇಷ್ಟ ಆಯ್ತು. ಆ ಕ್ಯಾರೆಕ್ಟರ್ ಬಹಳ ಚಾಲೆಂಜಿಂಗ್ ಆಯ್ತು. ದೇವರು ಮಕ್ಕಳಾಗಿ, ಅವರಿಗೆ ತಾಯಿ ಆಗಬೇಕು ಅಂದಾಗ ತುಂಬಾ ಖುಷಿ ಆಯ್ತು. ಇಂತಹ ಪಾತ್ರಕ್ಕೆ ಆ ದೇವರೇ ಆಯ್ಕೆ ಮಾಡಿಕೊಂಡಿದ್ದಾರೇನೋ ಅನ್ನೋತರ. ನಾನು ಈ ಪಾತ್ರದ ಬಗ್ಗೆ ತುಂಬಾನೇ ಖುಷಿಯಾಗಿದ್ದೇನೆ. ಮುಂದೆ ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೋದರ ಮೇಲೆ ನಿರ್ಧಾರ ಆಗುತ್ತೆ. ಈಗ ದೇವರು ಮಕ್ಕಳಾಗಿದ್ದಾರೆ. ಮತ್ತೆ ಅವರು ದೇವರಾಗಬೇಕು ಅಂದರೆ, ಅವಳ ಸಮ್ಮತಿ ಇರಬೇಕು. ಅದಕ್ಕೆ ಅವಳು ಸಮ್ಮತಿಸುತ್ತಾಳಾ? ಇಲ್ವಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ."
ಕೊನೆಯಲ್ಲಿ ನಿಮ್ಮ ಜರ್ನಿ ಬಗ್ಗೆ ಏನಂತಿರಾ?
"ಇದೂವರೆಗೂ ವೀಕ್ಷಕರು ವಿಭಿನ್ನ ಪಾತ್ರಗಳಲ್ಲಿಯೇ ನನ್ನನ್ನು ನೋಡಿದ್ದಾರೆ. ಮಧುಬಾಲಾದಿಂದ ಇಲ್ಲಿವರೆಗೂ ವಿಭಿನ್ನ ಪಾತ್ರಗಳನ್ನೇ ನೋಡಿದ್ದಾರೆ. ಯಾವುದೇ ಪಾತ್ರವೂ ರಿಪೀಟ್ ಇಲ್ಲ. ಹೀಗಾಗಿ ಇಲ್ಲಿವರೆಗೂ ಸೀರಿಯಲ್ ಜರ್ನಿ ಚೆನ್ನಾಗಿಯೇ ನಡೆಯುತ್ತಿರೋದಕ್ಕೆ ಖುಷಿಯಿದೆ."


Click it and Unblock the Notifications











