Interview: ಡ್ಯಾನ್ಸ್, ನಿರೂಪಣೆ, ಡಬ್ಬಿಂಗ್, ನಟನೆ ; ಮಹಿಳೆಯರ ದಿನದ ಬಗ್ಗೆ ನಟಿ ಹರಿಣಿ ಶ್ರೀಕಾಂತ್ ಏನಂತಾರೆ?
ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಸುಮಾರು 3 ದಶಕಗಳಿಂದ ನಟಿಸುತ್ತಿರುವ ನಟಿ ಹರಿಣಿ ಶ್ರೀಕಾಂತ್. 90 ದಶಕದವರಿಗೆ ಇವರನ್ನು ವಿಶೇಷವಾಗಿ ಪರಿಚಯಿಸಬೇಕಿಲ್ಲ. ಇಂದಿನ ಪೀಳಿಗೆಗಂತೂ ಇವರು ನಟಿಸಿದ ಧಾರಾವಾಹಿಗಳು ಬಾಯಲ್ಲೇ ಇವೆ. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಗೌರಿ ಶಂಕರ' ಧಾರಾವಾಹಿಯಲ್ಲಿ ಬೈರಾದೇವಿ ಎನ್ನುವ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹರಿಣಿ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಕನ್ಯಾದಾನ', 'ಚಿಕ್ಕಮ್ಮ', 'ಸಂಬಂಧ', 'ಮೌನರಾಗ', 'ಮಿಂಚು', 'ಪುಟ್ಟಗೌರಿ ಮದುವೆ', 'ಖುಷಿ' ಅಂತಹ ಧಾರಾವಾಹಿಗಳು, 'ಭಜರಂಗಿ', 'ಸಂಜು ವೆಡ್ಸ್ ಗೀತಾ', 'ಜೈ ಮಾರುತಿ 800', 'ಅಂಜನಿಪುತ್ರ', 'ಪತಿಬೇಕು, ಕಾಮ್' ಸೇರಿದಂತ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹರಿಣಿ ಶ್ರೀಕಾಂತ್ ಮಲ್ಟಿಟ್ಯಾಲೆಂಟೆಡ್ ಮಹಿಳೆ. ಮೊದಲು ಇವರು ಡ್ಯಾನ್ಸರ್. ಭರತನಾಟ್ಯದಲ್ಲಿ ಪ್ರವೀಣೆ. ನಂತರ ನಿರೂಪಣೆ, ಡಬ್ಬಿಂಗ್ ಹಾಗೆ ನಟನೆ ಕಡೆ ವಾಲಿದ್ದರು. ಇಂದಿಗೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಪತ್ನಿಯಾಗಿ, ಅಮ್ಮನಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಮಹಿಳೆಯರ ಈ ವಿಶೇಷ ದಿನದಂದು ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಹಿಳೆಯ ದಿನ.. ಇಲ್ಲಿ ನಿಮ್ಮ ಸ್ಥಾನ ಏನು?
"ಮಹಿಳೆಯರ ದಿನ ಅಂದರೆ, ಹಬ್ಬವನ್ನು ಹೇಗೆ ನೆನಪಿಸಿಕೊಳ್ಳುತ್ತೇವೋ ಹಾಗೆ ಆಗಬಾರದು. ಪ್ರತಿಯೊಂದು ಜಾಗದಲ್ಲೂ ಮಹಿಳೆಯ ಸ್ಥಾನ ಏನಿದೆ ಅದು ಇದ್ದೇ ಇರುತ್ತೆ. ನನ್ನ ಪ್ರಕಾರ ಒಬ್ಬ ಮಹಿಳೆಯಲ್ಲಿ ಪುರುಷನೂ ಇರುತ್ತಾನೆ. ಒಬ್ಬ ಪುರುಷನಲ್ಲಿ ಮಹಿಳೆಯೂ ಇರುತ್ತಾಳೆ ಅನ್ನೋದು ನನ್ನ ನಂಬಿಕೆ. ನಮ್ಮ ಮನೆಯಲ್ಲಿಯೇ ಆಗಿರಬಹುದು ನಮ್ಮ ಅಣ್ಣ, ನಮ್ಮ ಯಜಮಾನ್ರು, ನನ್ನ ಮಗ. ಅವರಲ್ಲೂ ಮದರ್ಲಿ ಫೀಲಿಂಗ್ ಬರುತ್ತೆ. ನಮಗೆ ಮಾತ್ರ ಬರುತ್ತೆ ಅಂತ ಹೇಳುವುದಕ್ಕೆ ಆಗಲ್ಲ."

ಮಹಿಳೆಯರ ಸಬಲೀಕರಣ ಆಗಿದೆಯೇ?
"ನನ್ನ ಪ್ರಕಾರ, ಮಹಿಳೆಯನ್ನು ಇನ್ನೂ ಸೆಲೆಬ್ರೆಟ್ ಮಾಡಬೇಕು ಅಂತ ಅನಿಸುತ್ತೆ. ಮುಂಚೆ ನೋಡಿದರೆ, ಕಾದಂಬರಿ ಆಧಾರಿತ ಸಿನಿಮಾಗಳಾಗಿರುಬಹುದು, ಸ್ಟೋರಿಗಳಾಗಿರಬಹುದು ಎಲ್ಲವನ್ನೂ ಮಹಿಳೆಯರಿಗೆ ಅಂತಾನೇ ಒಂದು ಸಬ್ಜೆಕ್ಟ್ ಮಾಡೋರು. ಜನರು ಅದನ್ನು ನೋಡುತ್ತಿದ್ದರು. ಆ ಸೆಲೆಬ್ರೆಷನ್ ಈಗ ಕಾಣೆಯಾಗುತ್ತಿದೆ ಅಂತ ಅನಿಸುತ್ತಿದೆ. ಅದು ವಾಪಾಸ್ ಬರಬೇಕು ಅನ್ನೋದು ನಟಿಯಾಗಿ ನನಗೆ ಅನಿಸುತ್ತೆ."
ನಿಮ್ಮ ಮನೆಯಲ್ಲಿ ಸಪೋರ್ಟ್ ಹೇಗಿತ್ತು?
"ಒಬ್ಬೊಬ್ಬರ ಮನೆ ಸಂಪ್ರದಾಯ ಒಂದೊಂದು ರೀತಿ ಇರುತ್ತೆ. ಅದನ್ನು ತಪ್ಪು ಅಂತ ಹೇಳುವುದಕ್ಕೆ ಆಗುವುದಿಲ್ಲ. ನಮ್ಮ ಮನೆಯಲ್ಲಿ ಒಂದು ಚೌಕಟ್ಟು ಇತ್ತು. ನಮ್ಮ ಮನೆಯಲ್ಲಿ ನಮ್ಮ ತಂದೆ, ನಮ್ಮ ಅಜ್ಜಿ, ನಮ್ಮ ಅಣ್ಣ ಎಲ್ಲರೂ ಕೂಡ ಕ್ಲಾಸಿಕಲ್ ಹಿನ್ನೆಲೆಯುಳ್ಳವರು. ಅವರು ಎಲ್ಲರೂ ಮ್ಯೂಸಿಷಿಯನ್ಸ್. ನಾನು ಭರತನಾಟ್ಯ ಡ್ಯಾನ್ಸ್ ತಗೊಂಡೆ. ಹಾಗೇ ನಿರೂಪಣೆಗೆ ಆಫರ್ ಬಂತು. ಹಾಗೇ ಮಾಡ್ತಾ ಮಾಡ್ತಾ ಇಲ್ಲಿವರೆಗೂ ಬಂತು ಅಂತ ಹೇಳಬಹುದು. ಹಾಗಂತ ನಮ್ಮ ಮನೆಯಲ್ಲಿ ಸ್ಟ್ರಿಕ್ಟ್ ಆಗಿದ್ದರು ಅಂತಲ್ಲ. ಕಲೆಯ ಬಗ್ಗೆ ನಮ್ಮ ಮನೆಯಲ್ಲಿ ಬ್ರಾಡ್ ಮೈಂಡ್‌ನೆಸ್ ಇತ್ತು"

ನಿಮ್ಮ ಜರ್ನಿ ಶುರುವಾಗಿದ್ದೇಗೆ?
"ನಾನು 1994ರಲ್ಲಿ ನಿರೂಪಣೆ ಮೂಲಕ ಶುರು ಮಾಡಿದೆ. ನಿರೂಪಣೆ ಮಾಡುತ್ತಲೇ ಡಬ್ಬಿಂಗ್ ಮಾಡುವುದಕ್ಕೆ ಶುರು ಮಾಡಿದೆ. ಡಬ್ಬಿಂಗ್ ಮಾಡ್ತಾ ಆಕ್ಟಿಂಗ್ ಮಾಡಬಹುದು ಅಂತ ಅನಿಸಿತ್ತು. ಆಮೇಲೆ ಆಫರ್ ಕೂಡ ಬಂತು. ಮೊದಲ ಸೀರಿಯಲ್ ಮಾಡಿದೆ. ಅದು ನನಗೆ ಇಷ್ಟ ಆಗಿರಲಿಲ್ಲ. ಅದಕ್ಕೆ ಮತ್ತೆ ನಿರೂಪಣೆಗೆ ಹೋದೆ. ಮತ್ತೆ ಇನ್ನೊಂದು ಸೀರಿಯಲ್ ಸಿಕ್ತು. ಅಲ್ಲಿ ಸೀನಿಯರ್ ನಿರ್ದೇಶಕರು ಎಲ್ಲಾ ಹೇಳಿಕೊಟ್ಟರು. ಅಲ್ಲಿಂದ ಎಲ್ಲಾ ಚೆನ್ನಾಗಿ ನಡೆಯುತ್ತಿದೆ."
ಚಿತ್ರರಂಗದಲ್ಲಿ ನಿಮ್ಮ ಹಂಬಲವೇನು?
"ನನಗೆ ವುಮನ್‌ಹುಡ್ ಅನ್ನು ಸೆಲೆಬ್ರೆಟ್ ಮಾಡಬೇಕು. ಮಹಿಳೆಯರಿಗಾಗಿ ಪ್ರತ್ಯೇಕವಾದ ಸ್ಟೋರಿ ಮಾಡಬಹುದು. ಆದರೆ, ಆ ಚಾಲೆಂಜ್ ಮೇಕರ್ಸ್ ರಿಸ್ಕ್ ಅಂತ ಅನಿಸುತ್ತಿದೆಯಾ? ಅಂತ ಗೊತ್ತಿಲ್ಲ. ನನಗೆ ಇನ್ನೂ ವುಮನ್ ಓರಿಯೆಂಟೆಡ್ ಸಬ್ಜೆಕ್ಟ್ ಇನ್ನೂ ಹೆಚ್ಚಾಗಿ ಬರಬೇಕು. ನನಗೆ ಅದರಲ್ಲಿ ನಟಿಸಬೇಕು ಅನ್ನೋ ಹಂಬಲ ತುಂಬಾನೇ ಇದೆ."
ಇದೂವರೆಗೂ ನೀವು ಇಷ್ಟಪಟ್ಟ ಧಾರಾವಾಹಿ?
"ನನಗೆ ಮಿಂಚು ಧಾರಾವಾಹಿ, ಪುಟ್ಟಗೌರಿ ಮದುವೆ, ಮಿಥುನ ರಾಶಿ, ಮರಳಿ ಮನಸಾಗಿದೆ ಈ ಎಲ್ಲಾ ಧಾರಾವಾಹಿಗಳ ಪಾತ್ರಗಳು ನನ್ನ ಮೆಚ್ಚಿನ ಪಾತ್ರಗಳು ಅಂತ ಹೇಳಬಹುದು. ಸಿನಿಮಾದಲ್ಲಿ ಭಜರಂಗಿ, ಶಾಕಾಹಾರಿ, ಕೆರೆಬೇಟೆ ಇದೆಲ್ಲವೂ ಸಿನಿಮಾದಲ್ಲಿ ವ್ಯಾಲ್ಯೂ ಹೆಚ್ಚು ಮಾಡುವಂತಹ ಪಾತ್ರಗಳು"
ಹಿಂದಿನ ಧಾರಾವಾಹಿಗಳ ಬಗ್ಗೆ ಏನಂತೀರಾ?
"ಟಿಎನ್ ಸೀತಾರಾಂ ಸೀರಿಯಲ್ ಅಂತ ತೆಗೆದುಕೊಂಡರೆ, ಮೂರು ಟ್ರ್ಯಾಕ್ ಇರೋದು. ಮಹಿಳೆಯರೇ ಪ್ರಮುಖವಾಗಿದ್ದರು. ಅದರ ಜೊತೆಗೆ ಬೇರೆ ಪಾತ್ರಗಳು ಕೂಡ ಅಷ್ಟೇ ಸ್ಟ್ರಾಂಗ್ ಆಗಿರುತ್ತಿದ್ದವು. ಅವರು ಪಾತ್ರಗಳನ್ನು ಹೇಗೆ ಬರೆಯುತ್ತಿದ್ದರು ಅಂದರೆ, ಅದಕ್ಕೊಂದು ವೃತ್ತಿ ಅಂತ ಇರೋದು, ಆ ಕೆಲಸ ಬಗ್ಗೆ ಮಾಹಿತಿ ಕೊಡುತ್ತಾ ಹೋಗೋರು. ಇದನ್ನು ನೋಡುವ ಮಹಿಳೆಯರಿಗೆ ನಾನು ಇದನ್ನು ಮಾಡಬಹುದಲ್ಲ ಅಂತ ಅನಿಸುತ್ತಿತ್ತು. ಇಂತಹ ಪಾತ್ರಗಳಿಂದ ಪ್ರೇರಿತರಾಗುತ್ತಿದ್ದರು. ಅದು ಸಮಾಜಕ್ಕೆ ದೊಡ್ಡ ಕೊಡುಗೆ ಅಂತ ಹೇಳಬಹುದು."
ಗೌರಿ ಶಂಕರ ಪಾತ್ರವನ್ನು ಯಾಕೆ ಮೆಚ್ಚಿದ್ರಿ?
"ನಾನು ಮಾಡುವ ಪಾತ್ರಗಳು ಸ್ಟ್ರಾಂಗ್ ಆಗಿ ಇರುತ್ತಿತ್ತು. ಆದರೆ ನೋಡುವುದಕ್ಕೆ ಗಟ್ಟಿಯಾಗಿ ಇರಲಿಲ್ಲ. ಈ ಪಾತ್ರ ನೋಡುವುದಕ್ಕೂ ಡಿಫ್ರೆಂಟ್ ಆಗಿದೆ. ಪಾತ್ರ ಕೂಡ ಅಷ್ಟೇ ಸ್ಟ್ರಾಂಗ್ ಆಗಿದೆ. ಹಾಗಾಗಿ ನಾನು ಬೇರೆ ರೀತಿಯಲ್ಲಿ ಕಾಣಿಸುತ್ತೇನೆ. ಹಳ್ಳಿ ಸೊಗಡಿನ ಭಾಷೆ ಇರುತ್ತೆ. ಇಲ್ಲಿ ಏನೋ ಹೊಸದಿತ್ತು. ಪಾತ್ರವನ್ನು ಅನ್ವೇಷಣೆ ಮಾಡುವುದಕ್ಕೆ ಅವಕಾಶವಿತ್ತು."
ಬೈರಾದೇವಿಯ ಮುಂದಿನ ಹಾದಿ ಏನು?
"ಬೈರಾದೇವಿ ಮುಂದೆ ಹೇಗೆ ಕಾಣಿಸುತ್ತಾಳೆ ಅನ್ನೋದು ಗೊತ್ತಿಲ್ಲ. ಮುಂದೆ ಯಾವ ಶೇಪ್ ತೆಗೆದುಕೊಳ್ಳುತ್ತೆ ಅಂತನೂ ಗೊತ್ತಿಲ್ಲ. ಸ್ಟೋರಿ ಹೇಗೆ ಮಾಡಿದ್ದಾರೆ ಅನ್ನೋದನ್ನು ಹೇಳುವುದಕ್ಕೆ ಬರೋದಿಲ್ಲ. ಆದರೆ ಬೈರಾದೇವಿ ಸ್ಟ್ರಾಂಗ್ ಆಗಿ ಇರುತ್ತಾಳೆ. ಮನುಷ್ಯ ಅಂದ್ಮೇಲೆ ಒಂದು ಏರಿಳಿತ ಅನ್ನೋದು ಇದ್ದೇ ಇರುತ್ತೆ. ಅದು ಮುಂದೆ ಬರಬಹುದಾ? ಅನ್ನೋದು ಗೊತ್ತಿಲ್ಲ."
ಚಿಕ್ಕ ವಯಸ್ಸಿನಲ್ಲೇ ತಾಯಿ ಪಾತ್ರ ಯಾಕೆ?
"ನಾನು 30 ವರ್ಷ ಇರುವಾಗ ಮೊದಲು ತಾಯಿ ಪಾತ್ರ ಮಾಡಿದ್ದೆ. ನನಗೆ ಏನಂದ್ರೆ, ಅದು ಅವರವರ ಚಾಯ್ಸ್. ಆ ಪಾತ್ರವನ್ನು ಅವರು ಮಾಡುವುದಕ್ಕೆ ಸಾಧ್ಯ ಆದರೆ ಒಪ್ಪಿಕೊಳ್ಳಬಹುದು. ಅದೂ ಕೂಡ ಚಾಲೆಂಜಿಂಗ್ ಅಂತ ಅನಿಸುತ್ತೆ." ಎನ್ನುತ್ತಾರೆ ಹಿರಿಯ ನಟಿ ಹರಿಣಿ ಶ್ರೀಕಾಂತ್.
ಹಿರಿಯ ನಟಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಇವರು ಜನಪ್ರಿಯ ನಟಿ. ಹಾಗಂತ ಕೇವಲ ಸೀರಿಯಲ್ ಅಷ್ಟೇ ಅಲ್ಲ. ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿ ಗಮನ ಸೆಳೆದಿದ್ದಾರೆ. ಹರಿಣಿ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಭರತನ್ಯಾಟಂ ಡ್ಯಾನ್ಸರ್ ಆಗಿ ಬಳಿಕ ನಿರೂಪಕಿಯಾಗಿ ವೃತ್ತಿ ಆರಂಭಿಸಿದ್ದರು. ಆನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಕಿರುತೆರೆಯಲ್ಲಿ ನಟಿಸುತ್ತಲೇ ಡಬ್ಬಿಂಗ್‌ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಇವರ ಧ್ವನಿಗೆ ಇಂದಿಗೂ ಬೇಡಿಕೆ ಇದೆ. ಕಿರುತೆರೆಯ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅನುಭವ ಇವರಿಗಿದೆ. ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ ಅನಿಸಿದರೂ, ಪವರ್‌ಫುಲ್ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.


Click it and Unblock the Notifications











