ಕೇರಳದ ಆಭರಣ ವ್ಯಾಪಾರಿ ವಿರುದ್ಧ ನಟಿ ಹನಿ ರೋಸ್ ದೂರು; "ಕಾನೂನಿನ ಮೇಲೆ ನಂಬಿಕೆಯಿದೆ" ಎಂದ ನಟಿ
ಮಲಯಾಳಂನ ಜನಪ್ರಿಯ ನಟಿ ಹನಿ ರೋಸ್ ಕೇರಳದ ಜನಪ್ರಿಯ ಆಭರಣ ವ್ಯಾಪಾರಿ ಬಾಬಿ ಚೆನ್ನಮ್ಮನೂರು ವಿರುದ್ಧ ದೂರ ದಾಖಳಿಸಿದ್ದಾರೆ. ಇಲ್ಲಿನ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಕ್ಕೆ ನಿನ್ನೆ (ಜನವರಿ 7) ಆಭರಣದ ಉದ್ಯಮಿ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ.
ಬಾಬಿ ಚೆಮ್ಮನೂರು ಕೇರಳದಲ್ಲಿ ಜನಪ್ರಿಯ ಆಭರಣ ವ್ಯಾಪಾರಿ. ಕೆಲವು ದಿನಗಳಿಂದ ಮಲಯಾಳಂ ನಟಿ ಹನಿ ರೋಸ್ ವಿರುದ್ಧ ಬಾಬಿ ಚೆಮ್ಮನೂರು ಅನುಚಿತವಾದ ಲೈಂಗಿಕ ಟೀಕೆಗಳನ್ನು ಮಾಡಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಕೇರಳದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಹನಿ ರೋಸ್ ಕೇವಲ ಮಲಯಾಳಂ ಅಷ್ಟೇ ಅಲ್ಲ. ಕನ್ನಡ ಹಾಗೂ ತೆಲುಗು ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಕನ್ನಡದ ತನ್ನ ಆರಂಭದ ದಿನಗಳಲ್ಲಿ ಕನ್ನಡ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ತೆರೆಕಂಡಿದ್ದ 'ಅಜಂತಾ' ಇದು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಇನ್ನೊಂದು 'ನಂಜನಗೂಡು ನಂಜುಂಡ' ಇದರಲ್ಲಿ ಇವರ ಹೆಸರನ್ನು ಹಂಸಿನಿ ಎಂದು ಇಡಲಾಗಿತ್ತು. ಕನ್ನಡ ಹೊರತು ಪಡಿಸಿದರೆ, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಈ ಜನಪ್ರಿಯ ನಟಿ ಹನಿ ರೋಸ್ ದಾಖಲಿಸಿದ ದೂರು ಸಂಚಲನ ಸೃಷ್ಟಿಸಿದೆ.
ಅಷ್ಟಕ್ಕೂ ನಟಿ ಹನಿ ರೋಸ್ ಆಭರಣ ವ್ಯಾಪಾರಿ ವಿರುದ್ಧ ತಿರುಗಿಬಿದ್ದಿದ್ದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಮೂರು ದಿನಗಳ ಹಿಂದೆ ಅಂದರೆ ಜನವರಿ 5ರಂದು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ನಟಿ ಹನಿ ರೋಸ್ ವಿರುದ್ಧ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ದ್ವಂದ್ವಾರ್ಥ ಬರುವಂತಹ ಹೇಳಿಕೆಗಳನ್ನು ನೀಡಿದ್ದಾರೆಂದು ಹನಿ ರೋಸ್ ಆರೋಪ ಮಾಡಿದ್ದಾರೆ.

ಹನಿ ರೋಸ್‌ಗೆ ಆಹ್ವಾನ ನೀಡಿದ ಕಾರ್ಯಕ್ರಮಕ್ಕೆ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ಕೂಡ ಆಗಮಿಸಿದ್ದರು. ಆವೇಳೆ ಸಾರ್ವಜನಿಕವಾಗಿ ನಟಿಯ ಬಗ್ಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದರು. ತನ್ನ ಸ್ತ್ರೀತನವನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡಿದ್ದರು. ಇದರಿಂದ ತನಗೆ ಸಾರ್ವಜನಿಕವಾಗಿ ಅವಮಾನವಾಗಿದೆ. ಈ ಕಾರಣಕ್ಕೆ ಆಭರಣ ವ್ಯಾಪಾರಿಯ ವಿರುದ್ಧ ದೂರನ್ನು ದಾಖಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹನಿ ರೋಸ್ ಪೋಸ್ಟ್ ಅನ್ನು ಕೂಡ ಶೇರ್ ಮಾಡಿದ್ದಾರೆ. " ನನ್ನ ವಿರುದ್ಧ ದ್ವಂದ್ವಾರ್ಥ ಬರುವಂತಹ ಟೀಕೆಗಳನ್ನು ಮಾಡಿದ್ದಕ್ಕಾಗಿ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ಹಾಗೇ ನಿಮ್ಮಂತಹದ್ದೇ ಮನಸ್ಥಿತಿಯನ್ನು ಹೊಂದಿರುವ ನಿಮ್ಮ ಸಹಾಯಕರ ಮೇಲೂ ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ. ನಿಮಗೆ ಹಣದ ಬಲದ ಮೇಲೆ ನಂಬಿಕೆ ಇರಬಹುದು. ಆದರೆ, ನನಗೆ ಕಾನೂನಿನ ಮೇಲೆ ನಂಬಿಕೆಯಿದೆ." ಎಂದು ಹನಿ ರೋಸ್ ತಮ್ಮ ಪೋಸ್ಟ್ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಿಂದನೆಯ ಪೋಸ್ಟ್‌ಗಳು ಹರಿದಾಡಿತ್ತು. ಈ ಕಾರಣಕ್ಕೆ ಹನಿ ರೋಸ್ ಎರ್ನಾಕುಲಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಈಗಾಗಲೇ ಪೊಲೀಸರು ಸುಮಾರು 30ಕ್ಕೂ ಅಧಿಕ ಜನರ ಮೇಲೆ ದೂರನ್ನು ದಾಖಲಿಸಿದ್ದಾರೆ. ಈಗಾಗಲೇ ಶಾಜಿ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಿಂದಿಸಿ ಮಾಡಿ ಕಾಮೆಂಟ್ ಅನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.


Click it and Unblock the Notifications











