ಮಮ್ಮುಟ್ಟಿ ಸೈಬರ್ ವಿವಾದದ ಬೆನ್ನಲ್ಲೇ ಮೋಹನ್‌ಲಾಲ್ ಬಗ್ಗೆ ಚರ್ಚೆ; ಏನಿದು ಸ್ಟೋರಿ?
ಮಲಯಾಳಂನ ಇಬ್ಬರು ಸೂಪರ್‌ಸ್ಟಾರ್‌ಗಳು ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್ ಇಬ್ಬರೂ ಚರ್ಚೆಯಲ್ಲಿದ್ದಾರೆ. ಅದರಲ್ಲೂ ಇತ್ತೀಚೆಗೆ ಮಾಲಿವುಡ್‌ನ ದಿಗ್ಗಜ ಮಮ್ಮುಟ್ಟಿ ವಿರುದ್ಧ ಸೋಶಿಯಲ್ ಮಿಡಿಯಾದಲ್ಲಿ ತೀವ್ರ ಮಟ್ಟದಲ್ಲಿ ಸೈಬರ್ ದಾಳಿ ನಡೆದಿದೆ. ಇದು ಸದ್ಯ ಕೇರಳದಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇನ್ನೊಂದು ಕಡೆ ಇದೇ ವಿಷಯಕ್ಕೆ ಸಂಬಂಧವೇ ಇಲ್ಲದ ಮತ್ತೊಬ್ಬ ದಿಗ್ಗಜ ಮೋಹನ್‌ಲಾಲ್‌ರನ್ನು ಎಳೆದು ತರಲಾಗಿದೆ.
ಮಲಯಾಳಂನಲ್ಲಿ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ಇಬ್ಬರೂ ಸೂಪರ್‌ಸ್ಟಾರ್‌ಗಳಾಗಿದ್ದರೂ, ಇವರ ನಡುವೆ ಮೈಮನಸ್ಸು ಇಲ್ಲ. ಒಬ್ಬರಿಗೊಬ್ಬರು ಗೌರವ ಕೊಡುತ್ತಾ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ನೆಮ್ಮದಿಯಾಗಿ ಇದ್ದಾರೆ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಬೆಂಬಲ ಸೂಚಿಸುತ್ತಾ ಮುಂದೆ ನೆರವಿಗೆ ಬಂದಿರುವುದನ್ನು ನೋಡಿದ್ದೇವೆ. ಮಮ್ಮುಟ್ಟಿ ಅನಾರೋಗ್ಯದ ಸಮಯದಲ್ಲಿ ಮೋಹನ್‌ಲಾಲ್ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.

ಇತ್ತೀಚೆಗೆ ಮಮ್ಮುಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಮುಂಡಕ್ಕೈ-ಚೂರಲ್‌ಮಲ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಸಿಪಿಎಂ ವಯನಾಡಿನ ಜಿಲ್ಲಾ ಕಾರ್ಯದರ್ಶಿ ಕೆ.ರಫೀಕ್ ಕೂಡ ಮಮ್ಮುಟ್ಟಿ ಜೊತೆ ಹೆಜ್ಜೆ ಹಾಕುತ್ತಿದ್ದರು. ಈ ಕಾರಣಕ್ಕೆ ಮಮ್ಮುಟ್ಟಿ ಅಸಮಾಧಾನದಾನವನ್ನು ಹೊರ ಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಮ್ಮುಟ್ಟಿ ವಿರುದ್ಧ ಕೆಲವರು ದಾಳಿ ಮಾಡುವುದಕ್ಕೆ ಶುರು ಮಾಡಿದ್ದರು.
ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನಂದ್ರೆ, ತನ್ನ ಜೊತೆ ಹೆಜ್ಜೆ ಹಾಕುತ್ತಿದ್ದ ರಫೀಕ್ ವಿರುದ್ಧ ಮಮ್ಮುಟ್ಟಿ ಅಸಮಧಾನ ಹೊರ ಹಾಕಿದ್ದರು. "ನೀವು ಯಾವಾಗಲೂ ನನ್ನ ಜೊತೆ ನಡೆದರೆ ಹೇಗೆ? ನಾನು ನಿಮಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಜನರು ತಪ್ಪಾಗಿ ತಿಳಿಯುವುದಿಲ್ಲವೇ?" ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು. ಆ ವೇಳೆ ಸಿಪಿಎಂ ಮುಖಂಡ ರಫೀಕ್ ಮುಗುಳ್ನಕ್ಕು ಸುಮ್ಮನೆ ನಿಂತರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಮ್ಮುಟ್ಟಿ ಪರ ಹಾಗೂ ವಿರೋಧ ಚರ್ಚೆ ಆಗುವುದಕ್ಕೆ ಶುರುವಾಗಿತ್ತು.
ಕೆಲವರು ಮಮ್ಮುಟ್ಟಿ ನಡೆದುಕೊಂಡಿದ್ದು ಸರಿ ಎಂದು ವಾದಿಸುತ್ತಿದ್ದಾರೆ. "ಕಲಾವಿದನಾಗಿ ಸತ್ಯ ನುಡಿದಾಗ ಇಂತಹ ಸೈಬರ್ ದಾಳಿ ಸಹಜ" ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮತ್ತೆ ಕೆಲವರು ಮಮ್ಮುಟ್ಟಿ ಸಾರ್ವಜನಿಕವಾಗಿ ಅವಮಾನಿಸಿದ್ದನ್ನು ವಿರೋಧಿಸಿದ್ದಾರೆ. ಹೀಗಾಗಿ ಮಮ್ಮುಟ್ಟಿ ಈಗ ಸದ್ಯ ವಿವಾದಾತ್ಮಕ ವ್ಯಕ್ತಿಯಾಗಿ ಬಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಮೋಹನ್‌ಲಾಲ್‌ರನ್ನು ಕರೆದುಕೊಂಡು ಬಂದಿದ್ದಾರೆ.

ಮಲಯಾಳಂನ ಮತ್ತೊಬ್ಬ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಮೋಹನ್‌ಲಾಲ್ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ನೋಯಿಸುವುದಿಲ್ಲ. ಅವರು ನಿಜ ಜೀವನದಲ್ಲೂ ನಟಿಸುತ್ತಾರೆ. ಇದರಿಂದ ಯಾರಿಗೂ ನೋವು ಆಗುವುದಿಲ್ಲ ಎಂದು ಕೆಲವು ಟೀಕೆಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಇದಕ್ಕೆ ಮೋಹನ್‌ಲಾಲ್ ಅಭಿಮಾನಿಗಳು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. "ನೋಯಿಸುವ ಸತ್ಯಗಳಿಗಿಂತ, ನೋಯಿಸದೆ ಮಾಡುವ ನಟನೆ ಉತ್ತಮವಲ್ಲವೇ? ಮೋಹನ್‌ಲಾಲ್ ಅವರದ್ದು ನಟನೆಯಲ್ಲ, ಮಾನವೀಯತೆ." ಎಂದು ತಿರುಗೇಟು ಕೊಟ್ಟಿದ್ದಾರೆ. "ನಿಜ ಜೀವನದಲ್ಲಿ ನಟಿಸುವುದು ಅನಿವಾರ್ಯ. ಏಕೆಂದರೆ ನೇರ ಮಾತು-ವರ್ತನೆಗಳು ತೀವ್ರ ನೋವನ್ನು ಉಂಟು ಮಾಡುತ್ತವೆ. ಹೀಗಾಗಿ ಯಾರಿಗೂ ನೋವುಂಟು ಮಾಡದೇ ಇರುವುದಕ್ಕೆ ನಟಿಸುವುದು ತಪ್ಪಲ್ಲ. ಮೋಹನ್‌ಲಾಲ್ ಜೀವನದಲ್ಲೂ ನಟಿಸುತ್ತಿದ್ದಾರೆ ಎಂದು ಗೇಲಿ ಮಾಡುವವರು ಇದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.


Click it and Unblock the Notifications















